ಖಲೀಲ್ ಗಿಬ್ರಾನ್ ಅವರ ಕವಿತೆ: 'ಮದುವೆಯೆಂದರೆ…'

ಖಲೀಲ್ ಗಿಬ್ರಾನ್ ಅವರ 'ಮದುವೆಯೆಂದರೆ…' ಕನ್ನಡಕ್ಕೆ - ಡಾ. ಸುದರ್ಶನ್ ಸಿ. ವೈ
***
ಒಮ್ಮೆ ಯುವ ಜೋಡಿಯೊಂದು
ನನ್ನ ಕೇಳಿತು ಮದುವೆ ಎಂದರೇನು?
ನಾನುತ್ತರಿಸಿದೆ
ನೀವಿಬ್ಬರೂ ಜೊತೆಗೆ ಜನಿಸಿದಿರಿ
ನೀವಿಬ್ಬರೂ ಬಹುಕಾಲ ಒಟ್ಟಿಗಿರುವಿರಿ
ಯಾವ ಶಕ್ತಿಯೂ ನಿಮ್ಮನ್ನು ಅಗಲಿಸಲಾರದು
ಭಗವಂತನ ಮೌನ ನೆನಪಿನಲ್ಲೂ
ನೀವಿಬ್ಬರು ಒಂದಾಗಿರುವಿರಿ
ನೀವಿಬ್ಬರೂ ಒಟ್ಟಿಗಿರುವಾಗ
ನಡುವೆ ಸ್ವಲ್ಪ ಸ್ವಾತಂತ್ರ್ಯವಿರಲಿ
ನಿಮ್ಮಿಬ್ಬರ ನಡುವೆ
ಸ್ವರ್ಗದ ಸುಳಿಗಾಳಿ ನರ್ತಿಸಲಿ
ಒಬ್ಬರನ್ನೊಬ್ಬರು ಪ್ರೀತಿಸಿ
ಆದರೆ ಅದು ಪ್ರೀತಿಯ ಒಪ್ಪಂದವಾಗಿರದಿರಲಿ
ಮದುವೆ ನಿಮ್ಮಿಬ್ಬರ ಆತ್ಮಗಳ ನಡುವೆ
ಸುಳಿದಾಡುವ ಶಾಂತ ಸಾಗರದ ಅಲೆಗಳಂತಿರಲಿ
ಒಬ್ಬರಿಗೊಬ್ಬರು ಪೂರಕವಾಗಿರಿ
ಆದರೆ, ಅವರದ್ದು ಏನನ್ನೂ ಕಸಿಯಬೇಡಿರಿ
ಜೊತೆಗೂಡಿ ಹಾಡಿ, ನರ್ತಿಸಿ, ಸಂತಸದಿಂದಿರಿ
ಆದರೆ ಸಂಗಾತಿಯ ಏಕಾಂತವನ್ನೂ ಗೌರವಿಸಿ
ವೀಣೆಯ ತಂತಿಗಳ ನಡುವೆ ಅಂತರವಿದ್ದರೂ
ಜೊತೆಗೂಡಿ ಸುನಾದ ಹೊಮ್ಮಿಸುತ್ತವೆ
ನಿಮ್ಮ ಹೃದಯ ಹಂಚಿಕೊಳ್ಳಿ, ಒತ್ತೆಯಾಗಿಡಬೇಡಿ
ಏಕೆಂದರೆ, ಜೀವನವಷ್ಟೇ ಅದ ಹಿಡಿದಿಡಬಹುದು
ಜೊತೆಯಾಗಿರಿ, ಆದರೆ ಅತಿ ಅವಲಂಬಿಸಬೇಡಿ
ಒಟ್ಟಾಗಿ ನಿಂತು ಸೂರು ಎತ್ತಿ ಹಿಡಿದಿರುವ
ದೇವಾಲಯದ ಕಂಬಗಳ ನಡುವೆಯೂ ಅಂತರವಿದೆ
ಮರಗಿಡಗಳು ಮತ್ತೊಂದರ ನೆರಳಿನಲ್ಲಿ ಬೆಳೆಯುವುದಿಲ್ಲ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.