ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷತಾ ಕೃಷ್ಣಮೂರ್ತಿ ಬರೆದ ಕವನ: ನಿನ್ನನ್ನು ಸಮುದ್ರ ಎನ್ನಲಾರೆ

Last Updated 6 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನೀ
ನನ್ನ ಸಮುದ್ರ ಎನ್ನಲಾರೆ

ಎಲ್ಲ ನದಿಗಳು ಬಂದು ನಿನ್ನ
ಸೇರುವುದು ಇಷ್ಟವಾಗದು ನನಗೆ
ಎಲ್ಲದಕ್ಕೂ ಜಾಗ ಕೊಟ್ಟು
ಹೃದಯ ಖಾಲಿ ಎಂದು
ಕಂಡ ಕಂಡ ಪಾದಗಳಿಗೆ
ಮುತ್ತಿಕ್ಕಿ ಒದ್ದೆ
ಮಾಡುವ ನಿನ್ನ ಖಯಾಲಿ
ಬೇಷರತ್ತಾಗಿ ಒಪ್ಪಲಾರೆ

ಆಗಾಗ ಚಂಡಮಾರುತ
ಸುನಾಮಿಯ ಹೆಸರಲ್ಲಿ ನೀ
ಇದ್ದಕ್ಕಿದ್ದಲ್ಲೆ ಉಕ್ಕೇರುವುದು
ಚೂರು ಸಹಿಸೆ ನಾ

ಅಕಾಲದಲ್ಲಿ ಮಳೆ ತಂದು
ಗಿರಿಗಿಟ್ಲೆಯಂತೆ ಇದ್ದ ಗಿಡಗಳನ್ನೆಲ್ಲ
ತಿರುಗಿಸಿ ಎಸೆದು ಮಜಾಭಾರತ
ಸೃಷ್ಟಿಸುವ ನಿನ್ನ ಉಮೇದಿಯ ನಾ ಒಪ್ಪೆ

ಕಲ್ಲಂಗಡಿ‌ ಗದ್ದೆಯಲ್ಲೆಲ್ಲ
ಕರಿನೀರ ತುಂಬಿ
ಕಣ್ಣೀರ ಇಡಿಸಿ
ಉಪಟಳ ಕೊಟ್ಟವನ
ನಂಬುವುದಾದರೂ ಹೇಗೆ

ಎತ್ತಿನ ಗಾಡಿಯಲಿ ಗೊಬ್ಬರ ತುಂಬಿ
ತೀರ ಗುಂಟ ಗಾಡಿ ಹೊಡೆದು
ಗದ್ದೆಗೆ ಮುಟ್ಟಿಸುವ ತಮ್ಮಾಣಿ
ಕಣ್ಣರೆಪ್ಪೆ ಮಿಟುಕಿಸುವುದರೊಳಗೆ
ಗಾಡಿ ಚಕ್ರದ ಸುತ್ತೆಲ್ಲ ದೊಡ್ಡ ಅಲೆ
ತುಂಬಿಸಿ
ತೆರೆ ಹಾಯ್ದು ಇಂವ ನಡುಗಿ
ಗೊಬ್ಬರ ನೀರಿಗೆಸೆದು
ಎತ್ತಿನ ಜೋಡಿ ಗುಡ್ಡಕ್ಕೆ ಹೊಡೆದು
ಪ್ರಾಣ ಉಳಿಸಿಕೊಂಡಿದ್ದು
ದೊಡ್ಡ ಕತೆ

ಮರೆತಿಲ್ಲ ನಾ

ತೀರಕೆ ತಂದಿಟ್ಟ ದೋಣಿ ಪಾದಕ್ಕೂ
ನಿನ್ನಿರುವ ತೋರಿಸಿ
ಸೆಳೆತಕೆ ಎಳೆದೊಯ್ಯವ ಭೀತಿ ಹರಿಸಿ
ಸುರಿವ ಮಳೆಯಲ್ಲೆ
ನಿನ್ನಾಟವ ಅರಿತು ಲಗುಬಗೆಯಲಿ
ದೋಣಿಯನ್ನೆತ್ತಿ ಎತ್ತರದ
ಜಾಗದಲಿ ಕಟ್ಟಿ
ದೋಣಿ ಮುಳುಗುವುದನು
ತಪ್ಪಿಸಿಕೊಂಡ ಕಾರ್ವಿಗಳು
ಕಣ್ಣೆದುರಿರುವಾಗ
ಮಳ್ಳನಂತೆ ಬಿದ್ದುಕೊಂಡ
ನಿನ್ನ ನಂಬೆ ನಾ

ನನ್ನವರನ್ನೆಲ್ಲ ಕಳೆದುಕೊಂಡು
ಬಳಗ ಬಿಟ್ಟು ಬೆಳೆಯಲಾರೆ
ಹಾಗಾಗಿ ಪ್ರೀತಿಸಲಾರೆ
ನಿನ್ನ ಬೇನೆ ಬೇಸರಿಕೆಗೆ
ಮದ್ದಾಗಲಾರೆ

ಒಮ್ಮೊಮ್ಮೆ ತಣ್ಣನೆ ಹರಿದು
ಮನ ಸೆಳೆದು ನೋಡಿದಷ್ಟು
ತೀರದ ಬಯಕೆ ಹುಟ್ಟಿಸುವ ನೀನು
ಮಗುದೊಮ್ಮೆ ಉಕ್ಕೇರಿ
ದಂಡೆ ನುಂಗಿ
ತೀರದ ಮನೆ ನಿನ್ನ ಆಸ್ತಿ ಎಂಬಂತೆ‌
ಎಲ್ಲ ಬಳಿದು ಬಿಡುವ ನಿನ್ನ
ದೊಡ್ಡಸ್ತನ ಸಹಿಸೆ

ಮಾತಿನ ಮಹಾನದಿಗಳನ್ನೆಲ್ಲ
ನುಂಗುವ ನೀನು
ಮರೆತೆ ಹೋಗದ ಕತೆ
ಹಂಬಲವುಂಟು
ಅದಕೆ ನಿನ್ನ ಮೊರೆತ ಕೇಳುವಷ್ಟು
ಹತ್ತಿರವಿದ್ದರೂ
ಬಳಿ ಹೋಗೆ ನಾ

ಅಪ್ಪಂತವನಂತೆ
ಕಂಡರೂ ಎಂದೆಂದೂ
ನೀ ನನಗೆ
ಕರೆಕರೆಯ ಕಡಲೇ ಆಗಿರುವೆ

ತಿಳಿಯಿತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT