ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಮಂಗಲ ಮಹಾದೇವ ಬರೆದ ಕವಿತೆ: ಒಡೆಯನಿಗೊಂದು ಉಯಿಲು

Last Updated 29 ಜನವರಿ 2022, 19:30 IST
ಅಕ್ಷರ ಗಾತ್ರ

ದೂರುಗಳಿಲ್ಲ ಒಡೆಯ
ಮೈಮುರಿದು ಮಣ್ಣಲ್ಲೆ ಉಳಿದು
ಉಪ್ಪುಂಡ ದೇಹ ಜೀಯ
ಒಡೆತನ ದೂರದ ಮಾತು
ಗಾಳಿಯ ನೇಣು ಹಾಕಿರುವ ಕೊಲೆಪಾತಕರಿಗೆ
ಸದ್ಗತಿ ಕೊಡು

ದಯೆಯ ಮೂಲ ಹುಡುಕಿದೆ ಒಡೆಯ
ಜಗದ ಕೋಟಿ ಹೃದಯಗಳು
ಬೋರ್ಡ್ ಹಾಕಿಕೊಂಡಿವೆ ಅಲ್ಲಿ
ದಯೆಯ ಸುಳಿವಿರಲಿಲ್ಲ
ಬಡವನ ಅನ್ನದ ತಟ್ಟೆಯಲ್ಲಿ ಅದು
ಪ್ರಶಾಂತವಾಗಿ ನಗುತಿತ್ತು

ಏನ ಹೇಳಲಿ ಒಡೆಯ
ಈ ಒಡೆದ ಹೃದಯಗಳ ರೋಧನ
ಬೇಕುಗಳ ಅಗಾಧ ಮಾಯೆಯೊಳಗೆ
ಮಕ್ಕಳಂತೆ ಕಿತ್ತಾಡುವ ದೊಡ್ಡವರ ಸಣ್ಣತನ
ಉದಾರತೆಯ ಮೂಲವೆಂದು ಹೇಳುತ್ತಾರೆ
ತಾಯಿಯ ಹೃದಯ ಬಿಟ್ಟು ಅದು ಎಲ್ಲೂ ಕಾಣಲಿಲ್ಲ

ನಾನು ನಾನು ಎಂದು ಮೆರೆಯುತ್ತಾರೆ ಒಡೆಯ
ನೀನು ಕೊಟ್ಟ ಪ್ರಾಣ, ತನು, ಮನ
ಈ ಇಳೆ, ಈ ಫಲ, ಈ ಜಲ, ಗಾಳಿ ಮಣ್ಣು
ಯಾರು ಹೊತ್ತುತಂದಿದ್ದಾರೆ
ನನ್ನದೂ ನನ್ನದೆಂದು ಎಲ್ಲಾ ಬಿಟ್ಟು ಹೊರಡುತ್ತಾರೆ
ಕೊಡುವ ಕೈಗಳಲ್ಲಿ, ಹರಸುವ ಹೃದಯದಲ್ಲಿ
ಮಮತೆಯ ಕಂಗಳಲ್ಲಿ ನೀನಿರುವುದ ಕಂಡೆ

ಒಡೆಯ ದೂರುಗಳಿಲ್ಲ, ದುಮ್ಮಾನವಿಲ್ಲ
ದುಃಖವೂ ಇಲ್ಲ
ನೀ ಇರುವ ಜಾಗ ತಿಳಿಸಿದ ನಿನಗೆ
ಕೈಮುಗಿಯುವುದಿಲ್ಲ ಕ್ಷಮಿಸು
ನೀನಿರುವ ಜಾಗಗಳನ್ನು ವಿಸ್ತರಿಸುವ
ಶಕ್ತಿ ನೀಡು ಎಂದು ಬೇಡುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT