ಸೋಮವಾರ, ಆಗಸ್ಟ್ 15, 2022
23 °C

ಅನಿತಾ ಪಿ.ತಾಕೊಡೆ ಬರೆದ ಕವಿತೆ: ಕಲ್ಲಾದವರು

ಅನಿತಾ ಪಿ. ತಾಕೊಡೆ Updated:

ಅಕ್ಷರ ಗಾತ್ರ : | |

ಋತುಮಾನದ ಅದಲು ಬದಲಿಗೂ
ಸುಳಿ ಸುಳಿದು ಹರಿವ ನೀರಿನ ಸೆಲೆಗೂ
ಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂ
ಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು ಕಂಡಾಗಲೆಲ್ಲ
ಕೆಲವೊಮ್ಮೆ ಹೀಗೂ ಅನಿಸಿದ್ದುಂಟು
ಇಲ್ಲೂ ಇರಬಹುದೇ...? ಅಹಲ್ಯೆಯಂತೆ ಇನ್ಯಾರೋ!

ಅದೇ ಚಿಂತನೆಯಲೆಗಳು ಭಾರವಾದಾಗಲೆಲ್ಲ
ಕಲ್ಲಿನ ದೊರಗು ಮೈಯಿಂದ ಸರಿದು
ಸವೆದು ನುಣ್ಣಗಾಗಿರುವಲ್ಲಿ ಕೂತು
ಒಂದೊಂದು ಕಲ್ಲಿನ ಬಿರುಕಿನಲಿರುವ
ನೋವಿನ ತೀವ್ರತೆಯ ಆಳವನ್ನು ಅರಿಯುತಿದ್ದೆ

ಅಲ್ಲಿ ಕ್ಷೀಣದನಿಯಲ್ಲಿ ಕೇಳಿ ಬರುವ
ನಿಟ್ಟುಸಿರಿನ ಬಿಸುಪಿನ ಏರಿಳಿತವನು ಆಲಿಸಿದಾಗ
ಇಲ್ಲ, ಇಲ್ಲಿ ಕಲ್ಲಾದವರ ಪಾಡು ಅಹಲ್ಯೆಯಂತಿಲ್ಲ
ಇರಬಹುದು ಅವಳಂತೆಯೇ ಇನ್ಯಾರೋ ನೊಂದವರು

ಹಾಗೆ ನೋಡಿದರೆ
ಯಾವ ಕಲ್ಲೂ ಖಾಲಿಯಾಗಿಲ್ಲ ಇಲ್ಲಿ
ಪ್ರೇಮ ಬರಹದ ಕೈಗೆ ಸಿಲುಕಿ ಗೀಚಿಸಿಕೊಂಡವುಗಳು
ವಿರಹದ ಬೇಗೆಯಿಂದ ನಲುಗಿದವುಗಳು
ನೆತ್ತರಿನ ಹನಿಗಳನ್ನು ತನ್ನ ಬಣ್ಣಕ್ಕೆ ಹೊಂದಿಸಿಕೊಂಡವುಗಳು
ಯಾರದೋ ಆತ್ಮಾಹುತಿಗೆ ಪಾದವೂರಲು
ಕೊಟ್ಟ ಅವಕಾಶದ ಸಲುವಾಗಿ ಪರಿತಪಿಸುತಿರುವ ಕೆಲವೊಂದು

ಇಲ್ಲಿ  ಇರುವುದೆಲ್ಲವೂ ಹೀಗೆಯೇ     
ಯಾರ ವ್ಯಾಮೋಹಕೋ  ಕಡು ನಿಂದನೆಗೋ
ಒಳಗಾಗಿರಬೇಕು
ಮೋಸದ ಅಂತರಂಗವನ್ನು ಅರಿಯಲಾಗದೆ
ಅಹಲ್ಯೆಯಂತೆ ಕಳೆದು ಹೋಗಿರಬೇಕು
ಕಲ್ಲಾಗಿಸುವವರ ಮುಂದೆ
ರಾಮನಂಥವರ ಸೌಮ್ಯಭಾವ ಸ್ಪರ್ಶವಿಲ್ಲದೆ
ಮತ್ತೆದ್ದು ಬಾರದಂತೆ ಕಲ್ಲಾಗಿರಬೇಕು 

ಕಲ್ಲಾಗಿದ್ದು ಅಹಲ್ಯೆಯೋ ಅವಳ ಮನಸ್ಸೋ...!
ನಾನೂ ಬರುತ್ತೇನೆ ಎಂದಿನಂತೆ
ಬಂದು ಖಾಲಿ ಕಲ್ಲುಗಳ ಹುಡುಕುತ್ತೇನೆ
ಕಲ್ಲಾಗುವುದಕ್ಕಲ್ಲ...!
ಎಲ್ಲಿಗೂ ಸಲ್ಲದ ಮನಸ್ಸಿಗೆ ಒಲ್ಲದವುಗಳನು
ಮತ್ತೆ ಕಾಣಿಸದಂತೆ
ಹಗಲು ಮುಗಿಯುವ ಮೊದಲು ಅಳಿಸಿಬಿಡಲು

ಸಾವಿರಾರು ವರ್ಷ ಕಲ್ಲಾಗಿ ಕಾದಿರುವ ಅಹಲ್ಯೆಯಂತೆ
ಕಲ್ಲಾಗಬಾರದು ಎಂದೂ
ಹೊರಗಿನ ಊನವನು ಗೆದ್ದುಕೊಂಡು
ನೋವು ನಲಿವುಗಳ ಹಾದಿಯನು ಇದ್ದಂತೆ ಒಪ್ಪಿಕೊಂಡು
ಪ್ರೀತಿಯ ಜೋಕಾಲಿಯನು ಜೀಕಬೇಕು
ಒಳಗಿನ ಕಶ್ಮಲಗಳನು ಅಂದಂದಿಗೆ ತೊಳೆದು
ನಿತ್ಯ ನಿರ್ಮಲವಾಗಬೇಕು ಹರಿವ ತೊರೆಯಂತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು