ಭಾನುವಾರ, ಸೆಪ್ಟೆಂಬರ್ 19, 2021
28 °C

ಕವಿತೆ: ಅಗೆಯುವುದು ಮತ್ತು ನದಿ ದಾಟುವುದು

ಆರ್. ವಿಜಯರಾಘವನ್ Updated:

ಅಕ್ಷರ ಗಾತ್ರ : | |

Prajavani

ಅಗೆಯುವುದು

(ಸೇಮಸ್‌ ಹೀನಿ ಅವರ ಕವಿತೆ)

ನನ್ನ ಬೆರಳು ಹೆಬ್ಬೆರಳು ನಡುವೆ ಠೊಣಪ ಪೆನ್ನು
ಬಂದೂಕಿನಂತೆ ಅಚ್ಚುಕಟ್ಟಾಗಿ ವಿಶ್ರಮಿಸುತ್ತಿದೆ

ನನ್ನ ಕಿಟಕಿಯ ಕೆಳಗೆ, ಸ್ಪಷ್ಟವಾದ ಗರಗಸ ಕೊಯ್ಯುವಂಥ ಸದ್ದು
ಸಲಿಕೆ ಗೊರಜು ನೆಲಕ್ಕೆ ತಾಕಿದಾಗ ಬರುವ ಹಾಗೆ
ನನ್ನ ತಂದೆ ಅಗೆಯುವುದು. ನಾನು ಕೆಳಗೆ ನೋಡುವುದು

ಅವನ ದಣಿದ ಬೆನ್ನು ಹೂವಿನ ಹಾಸುಗಳ ನಡುವೆ
ಕೆಳಕ್ಕೆ ಬಾಗುತ್ತದೆ, ಮೇಲೆ ಏಳುತ್ತದೆ; ಇಪ್ಪತ್ತು ವರ್ಷಗಳ ಅಂತರದಲ್ಲಿ
ಅದು ನಿಲ್ಲುವುದು ಅವನು ಅಗೆಯುವಲ್ಲಿ; ಬಟಾಟೆ ಅಗೆಯುವ ಲಯದಲ್ಲಿ

ಒರಟಾದ ಬೂಟು ಭಾರದ ಊರುಗಲ್ಲೊಂದರ ಮೇಲೆ
ಮೊಣಕಾಲಿನ ಒಳಭಾಗಕ್ಕೆ ಆಸರೆಯಾಗಿ ದೃಢವಾಗಿ ಆನಿದ ಕಂಬ
ಅವನು ನೆಲದ ಮೇಲಿನ ಎತ್ತರದ ಗಿಡಗಳನ್ನು ಕಿತ್ತುಹಾಕಿ
ಉಜ್ವಲವಾಗಿ ಬೆಳಗಿದ ಸಲಿಕೆಯಂಚನ್ನು
ನೆಲದಲ್ಲಿ ಆಳವಾಗಿ ನೆಟ್ಟು ತೆಗೆದರೆ
ಚದುರಿದಂತೆ ಬಿದ್ದಿದ್ದ ಹೊಸ ಬಟಾಟೆಯನ್ನು
ನಾವು ನಮ್ಮ ಕೈಯಲ್ಲಿ ಆರಿಸಿದೆವು
ಅವುಗಳ ಗಡಸು ತಂಪನ್ನು ಪ್ರೀತಿಸುತ್ತ

ದೇವರ ದಯೆ, ಮುದುಕ ಸನಿಕೆಯನ್ನು ನಿಭಾಯಿಸಬಲ್ಲ
ತನ್ನ ಮುದುಕನಂತೆಯೇ.

ನನ್ನ ಅಜ್ಜ ಒಂದು ದಿನದಲ್ಲಿ ಟೋನರ್‌ನ ಕಂಪೋಸ್ಟ್ ಜಾಗದಲ್ಲಿರುವ
ಇತರ ವ್ಯಕ್ತಿಗಳಿಗಿಂತ ಹೆಚ್ಚು ಹುಲ್ಲು ಕತ್ತರಿಸುತ್ತಾನೆ
ನಾನೊಮ್ಮೆ ಅವನಿಗೆ ಒರಟಾಗಿ ಕಾಗದ ಸುತ್ತಿದ ಬಿರಟೆ
ಹಾಕಿದ ಬಾಟಲಿಯಲ್ಲಿ ಹಾಲು ಕೊಂಡೊಯ್ದೆ
ಅದನ್ನು ಕುಡಿಯಲು ಅವನು ಬೆನ್ನು ನೇರಮಾಡಿದ್ದ
ಕೂಡಲೇ ಬಾಗಿದ್ದ ಅಚ್ಚುಕಟ್ಟಾಗಿ ಚೂರುಚೂರೇ ಕೆತ್ತುತ್ತ
ನೆಲವನಿಷ್ಟಿಷ್ಟೇ ಭುಜದ ಕಸುವಿಂದ ಕಡಿಯುತ್ತ
ಒಳ್ಳೆಯ ಹುಲ್ಲಿಗಾಗಿ ಕೆಳಕೆಳಕ್ಕೆ ಅಗೆಯುತ್ತ ಹೋಗುತ್ತ

ಬಟಾಟೆಯ ಬೂಜು, ಶೀತವಾಸನೆ, ಸನಿಕೆಯ ಸದ್ದು, ಕೊಳೆವ
ತೇವದ ಸಾವಯವ ವಸ್ತು, ಕಚಕ್ಕನೆ ಕತ್ತರಿಸುವ ಒಂದಂಚಿನ
ಸಲಿಕೆ ನನ್ನ ತಲೆಯಲ್ಲಿ ಜೀವಂತ ಬೇರುಗಳ
ಕತ್ತರಿಸುವ ಮೂಲಕ ನನ್ನ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ
ಆದರೆ ಅವರಂತಹ ಪುರುಷರನ್ನು ಅನುಸರಿಸಲು
ನನ್ನಲ್ಲಿ ಯಾವುದೇ ಸಲಿಕೆಯಿಲ್ಲ

ನನ್ನ ಬೆರಳು ಮತ್ತು ಹೆಬ್ಬೆರಳಿನ ನಡುವೆ
ಠೊಣಪ ಲೇಖನಿ ವಿಶ್ರಮಿಸುತ್ತಿದೆ
ನಾನು ಅದರೊಂದಿಗೆ ಅಗೆಯುತ್ತೇನೆ.
***
ನದಿ ದಾಟುವುದು

(ಎಲೀನ್‌ ನಿ ಕುಲಿನಿನ್‌ ಅವರ ಕವಿತೆ)

ಪ್ರತಿವರ್ಷ ಮಾಡುತ್ತಿದ್ದಂತೆಯೆ ನಾನು ಆ ಖ್ಯಾತಿವೆತ್ತ ನದಿಗೆ ವಂದಿಸಿದೆ
ನೇಗಿಲು ಸಾಗಿದಂತೆ ದಕ್ಷಿಣಕ್ಕೆ ತಿರುಗಿ ಒದೆಯುತ್ತ
ಹೊಸ ಕೊರಕಲಿನ ಶುರುವಿನಲ್ಲಿ ಹರಿಯುತ್ತಿತ್ತದು
ನಾನು ನದಿಯ ತೀರದ ನೇರಳೆ ಛಾಯೆಯ ತೋಟದಲ್ಲಿದ್ದ ಪ್ಲಮ್ ಮರಗಳ
ಕೆಳಗೆ ಹಾಕಿದ್ದ ಬೆಂಚಿಗೆ ಬೆನ್ನು ಹಾಕಿ ಕುಳಿತಿದ್ದೆ
ದಂಡೆ ಮತ್ತು ಮರಳ ದಂಡೆ‌ಗಳ ನಡುವೆ ಹಾದಿ ಹುಡುಕುವ ನದಿಯದು

ನಾನು ಉದ್ದವಾದ ಸೇತುವೆಯ ಮೇಲೆ ಸಾಗಲು ಪ್ರಾರಂಭಿಸಿದೆ:
ತಲೆ ಬಾಗಿ ಸ್ಟಿಯರಿಂಗ್ ವೀಲಿನ ಮೇಲಿಂದ ಎರಡೂ ಕೈ
ನಂಬಿಕೆಯ ಕ್ಷಣದಲ್ಲಿ ಮೇಲೆತ್ತಿ. ಬೆಟ್ಟದ ಬದಿಗೆ ಉದ್ದುದ್ದದ ಬಳ್ಳಿಗಳ ಸಾಲುಗಳು
ನಿರ್ಭಾರ ಗರಿಗಳಂತೆ; ಸ್ವಾಲೋ ಹಕ್ಕಿಯು ಹಾರುವುದಕ್ಕಿಂತ ಉದ್ದ
ನನ್ನ ರಸ್ತೆ ಈಗಾಗಲೇ ನನ್ನ ಮುಂದೆ ಹಾಸಿದೆ ಒಂದು ಬಗೆಯ

ಮೂರು ರಾತ್ರಿ ಮೂರು ದಿನಗಳ ನೃತ್ಯಲಾಸ್ಯದ ಹಾದಿ
ಪಕ್ಕದ ಬೆಟ್ಟಗಳು ಮತ್ತು ಕೋಡುಚಂದಿರನ
ಆಕಾರದ ದೀಪಗಳು ಕುರುಡಾಗಿಸುವಂತೆ
(ಒಂದು ಬಾರ್ ಕೌಂಟರ್, ಐಸ್, ಲೋಟ ಮತ್ತೆ ಮಹಡಿಯ
ಮೇಲೊಂದು ಕೋಣೆ ಇದ್ದರೆ ಚೆನ್ನಿತ್ತು
ಆದರೆ ಅದು ನನ್ನ ಹಿಂದೆ ಧಾವಿಸುತ್ತಿತ್ತು
ಬೆಳಿಗ್ಗೆ ಎಷ್ಟು ಮೊದಲು ಪ್ರಾರಂಭಿಸಿದರೂ
ಸರ್ಪ ಹರಿದಂತಹ ಹಾದಿಯಲ್ಲಿನೆಲ್ಲ ಇಕ್ಕಟ್ಟುಗಳು
ಹಾಳಾಗಿದ್ದ ಆ ಕಮಾನಿನವರೆಗೆ ಇಳಿಯುವ ತನಕ)

ನೀರಿನಿಂದ ಮೇಲೆದ್ದು ಬಂದವಳ ಕಣ್ಣುಗಳು ಮರಳ ದಂಡೆಯಂತೆ
ಅವಳ ಹಣೆಯ ಸುಕ್ಕುಗಳು ಮಂಜಿನ ತೆರೆಯ ಬಿಡುವುಗಳಂತೆ
(ಬಹುಶಃ ಉದ್ದದ ದೋಣಿಯಲ್ಲಿ ಮಲಗಿರುವ ಮನುಷ್ಯ,
ಹೊಳೆಯಲ್ಲಿ ಅದ್ದಿದ್ದ ಕೂದಲು, ಮೀನು ಹಿಡಿಯುವ ಗಾಳ, ಗಾಳದ ಕೋಲು)
ಅವಳು ನದೀಮುಖದ ಬಗ್ಗೆ ಹಾಡುತ್ತಿದ್ದಳು, ಸಂತೋಷಪಡುತ್ತಿದ್ದಳು
ಉಪ್ಪುಕಡಲಿನ ಸಂತೃಪ್ತಿಯ ಮುದ. ಕೈಬೀಸಿ ಕರೆಯುವಂತೆ ದೀಪಸ್ತಂಭ;
ಅವಳು ನನಗೆ ಹೇಳಿದಳು:

ಭೂಮಿ ಆ ಮಟ್ಟಕ್ಕೆ ಹೋಗುವುದಿಲ್ಲ. ಅದಕ್ಕೊಂದು ಮಿತಿಯಿದೆ
ನೀವು ಭೂಮಿ ಹೇಗೆ ಅಗಲವಾಗುತ್ತದೆ
ಹೇಗೆ ಪರ್ವತಗಳು ಖಾಲಿಯಾಗಿವೆ ಎಂಬುದನ್ನು ನೋಡುತ್ತೀರಿ
ಇಲ್ಲಿಂದ ರೋಮ್ ನಗರಕ್ಕೆ ಹುಡುಕಿ ಸಾಗುವ ಏರಿಳಿವ ಹಾದಿ
ಸೂರ್ಯನಷ್ಟು ದೊಡ್ಡದಾದ ಗುಮ್ಮಟದವರೆಗೆ ಚಲಿಸುತ್ತದೆ.

ನಿಮ್ಮ ಸಹೋದರಿ ನಿಮಗಿಂತ ಮುಂದೆ ಸಾಗುವುದನ್ನು
ನೀವು ನೋಡುತ್ತೀರಿ. ಅವಳಿಗೆ ವಿಶ್ರಮಿಸುವ ಅಗತ್ಯವಿಲ್ಲ.
ಆದರೆ ನೀವು ನಿಮ್ಮ ಹೊಟೇಲಿನ ಪಸೆಯಿರದ ಗಾಳಿಯಲ್ಲಿ ಮಲಗಬೇಕು
ಅಲ್ಲಿನ ವಾಹನಸಂಚಾರದ ಸದ್ದು ಮುಂಜಾನೆಗೆ ಮೊದಲೇ
ಮಿದುಳನ್ನು ಅರೆಯುತ್ತದೆ; ಉದ್ದದ ಬೆಟ್ಟದ ಬುಡದಲ್ಲಿ
ಬದಲಾಯಿಸುವ ವಾದ್ಯದ ಶ್ರುತಿ

ಕುದುರೆಯ ಮೇಲೆ ಬರುವ ಪ್ರೇಮಿಗಳ ಕಥೆಗಳನ್ನು ಕುರಿತು ಯೋಚಿಸು
ಗಾಜಿನ ಪರ್ವತವನ್ನು ಮೆಟ್ಟಿ ಕುಟ್ಟಿಕೆಡವಲು ಅವರು ತಯಾರಾಗುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು