ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ವಿ.ತಿರುಮಲೇಶ್ ಬರಹ: ಎನ್.ಎಸ್.ಎಲ್. ಮತ್ತು ಶೇಕ್ಸ್‌ಪಿಯರನ ಸುನೀತಮಾಲೆ

Last Updated 6 ಮಾರ್ಚ್ 2021, 7:30 IST
ಅಕ್ಷರ ಗಾತ್ರ

ಭಾವಗೀತೆಗಳ ಮೂಲಕ ಕನ್ನಡಿಗರ ಮನೆ ಮನೆಗಳಲ್ಲಿ ಅಜರಾಮರವಾಗಿರುವ ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಶೇಕ್ಸ್‌ಪಿಯರ್‌ನ ಸಾನೆಟ್‌ಗಳನ್ನು ಕನ್ನಡಕ್ಕೆ ಅನುವಾದಿಸಿ ಹೊಸ ಹೊಳಹು ನೀಡಿದ್ದರು. ಈ ಅನುವಾದದ ಗುಚ್ಛದಲ್ಲಿ ಡಾ.ಎನ್.ಎಸ್.ಎಲ್ ಅವರ ಭಾಷಾ ಪ್ರೌಢಿಮೆಯ ಕುರಿತು ಕವಿ ಕೆ.ವಿ.ತಿರುಮಲೇಶ್ 2015ರ ಅಕ್ಟೋಬರ್ 18ರ ಪ್ರಜಾವಾಣಿ 'ಮುಕ್ತಛಂದ' ವಿಭಾಗದಲ್ಲಿ ಬರೆದ ಲೇಖನದ ನೆನಪು ಇಲ್ಲಿದೆ.

----

ಶೇಕ್ಸ್‌ಪಿಯರನ ಸಾನೆಟ್‌ಗಳು ಜೀವನಮೌಲ್ಯಗಳಿಂದ ತುಂಬಿವೆ; ಆ ಕಾರಣಕ್ಕಾಗಿಯೇ ಅವು ಶ್ರೇಷ್ಠ ಕವಿತೆಗಳಾಗಿವೆಯೇ ವಿನಾ ಅವುಗಳ ರಚನಾಕೌಶಲ್ಯಗಳಿಗೋಸ್ಕರ ಅಲ್ಲ. ಇಂಥ ವಿಶಿಷ್ಟ ಸಾನೆಟ್‌ಗಳನ್ನು ಕವಿ ಲಕ್ಷ್ಮೀನಾರಾಯಣ ಭಟ್ಟ ಅವರು ಕನ್ನಡಕ್ಕೆ ಅನುವಾದಿಸಿರುವ ಶೈಲಿ ಅಪೂರ್ವವಾಗಿದೆ ಹಾಗೂ ಮೂಲಕವಿಯ ಬಗ್ಗೆ ಕನ್ನಡ ಓದುಗರಿಗೆ ಪ್ರೀತಿ ಉಕ್ಕಿಸುವಂತಿದೆ.

ನೋಡನೋಡುತ್ತಿದ್ದಂತೆ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಸುನೀತ: ಷೇಕ್ಸ್‌ಪಿಯರನ ಸಾನೆಟುಗಳು’ ಎಂಬ ಅನುವಾದಿತ ಕವಿತೆಗಳ ಸಂಕಲನಕ್ಕೆ ಇಪ್ಪತ್ತೈದು ವರ್ಷಗಳ ವಯಸ್ಸು. 1982ರಲ್ಲಿ ಭಟ್ಟರು ಶೇಕ್ಸ್‌ಪಿಯರನ 24 ಸಾನೆಟುಗಳ ಅನುವಾದಗಳನ್ನು ಹೊರತಂದರು; ನಂತರ 1988ರಲ್ಲಿ ಇನ್ನೂ 26 ಸಾನೆಟುಗಳ ಅನುವಾದಗಳನ್ನು ಸೇರಿಸಿ, ಒಟ್ಟು 50 ಸಾನೆಟುಗಳ ಪರಿಷ್ಕೃತ ವಿಸ್ತೃತ ಸಂಕಲನವನ್ನು ಪ್ರಕಟಿಸಿದರು. (ಶೇಕ್ಸ್‌ಪಿಯರನ ಒಟ್ಟು ಸಾನೆಟುಗಳು 154.) ಇಷ್ಟು ವರ್ಷಗಳ ನಂತರವೂ ಭಟ್ಟರ ಈ ಅನುವಾದಗಳನ್ನು ಮೀರಿಸಿದವರಿಲ್ಲ ಎನಿಸುತ್ತದೆ;

ಇದು ಅವರ ಅನುವಾದದ ಸೊಗಸಿಗೆ ಸಾಕ್ಷಿ. ಭಟ್ಟರ ಈ ಅನುವಾದಗಳನ್ನು ನೋಡುತ್ತ ಯಾರಿಗೇ ಆದರೂ ಥಟ್ಟನೆ ಮನಸ್ಸಿಗೆ ಬರುವುದು ಬಿ.ಎಂ.ಶ್ರೀ. ಅವರ ‘ಇಂಗ್ಲಿಷ್ ಗೀತಗಳು’ ಮತ್ತು ಡಿ.ವಿ.ಜಿ. ಅವರ ‘ಉಮರನ ಒಸಗೆ’. ಈ ಎರಡೂ ಅನುವಾದಗಳು ಕನ್ನಡದಲ್ಲಿ ಕ್ಲಾಸಿಕ್ ಎನಿಸಿಕೊಂಡಿವೆ; ಭಟ್ಟರ ‘ಸುನೀತ’ ಅದೇ ಸಾಲಿನಲ್ಲಿ ನಿಲ್ಲುವಂಥದು. ಯಾಕೆಂದರೆ, ಬಿ.ಎಂ.ಶ್ರೀ. ಮತ್ತು ಡಿ.ವಿ.ಜಿ. ಅವರಿಗೆ ಇರುವ ಕನ್ನಡದ ಸುಭಗತೆ ಲಕ್ಷ್ಮೀನಾರಾಯಣ ಭಟ್ಟರಿಗೂ ಇದೆ.

ಕೇವಲ ಕುತೂಹಲಕ್ಕೆ ‘Shall I compare thee to a summer’s day?’ ಎಂಬ ಶೇಕ್ಸ್‌ಪಿಯರನ ಸುಪ್ರಸಿದ್ಧ ಸಾಲನ್ನು ಭಟ್ಟರು ಹೇಗೆ ಕನ್ನಡೀಕರಿಸಿದ್ದಾರೆ ಎಂದು ನೋಡಿದರೆ, ನಮಗೆ ಕಾಣಿಸುವುದು, ‘ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ?’ ಎಂಬ ಸಾಲು. ಸಾಲು ಅದರಷ್ಟಕ್ಕೇ ಚಂದವಾಗಿದೆ. ಆದರೆ ಇದು ಸರಿಯಾದ ಅನುವಾದವೇ ಎಂದು ಕೆಲವರು ಕೇಳಬಹುದು. ಸರಿಯಾದ ಅನುವಾದವೆಂದರೇನು ಎಂದು ಯೋಚಿಸಬೇಕಾಗುತ್ತದೆ.

ಇದು ಸುಲಭದ ವಿಷಯವಲ್ಲ. ಪ್ರಸ್ತುತ ಇಂಗ್ಲೆಂಡ್‌ನ ಹವಾಮಾನದಲ್ಲಿ ‘ಸಮ್ಮರ್’ ಎನ್ನುವುದೊಂದು ದಿವ್ಯವಾದ ಕಾಲ, ಎಲ್ಲರೂ ನಿರೀಕ್ಷಿಸುವಂಥದು, ರಮಣೀಯವಾದುದು, ಆನಂದಿಸುವಂಥದು. ಆದರೆ ಕನ್ನಡಿಗರಿಗೆ ಬೇಸಿಗೆ ಅಷ್ಟೊಂದು ಸುಖಕೊಡುವ ಕಾಲವೇನಲ್ಲ. ಶೇಕ್ಸ್‌ಪಿಯರ್ ಉದ್ದೇಶಿಸುವುದು ವಾಸ್ತವದಲ್ಲಿ ವಸಂತಾಗಮನವನ್ನು; ‘ಮೇ’ ತಿಂಗಳ ಪ್ರಸ್ತಾಪ ಇದೇ ಪದ್ಯದಲ್ಲಿ ಮುಂದೆ ಬರುತ್ತದೆ. ಆದ್ದರಿಂದ ಭಟ್ಟರು ‘ಬೇಸಿಗೆ’ ಎಂದು ಅನುವಾದಿಸದೆ, ‘ಮಧುಮಾಸ’ವೆಂದು ಬಳಸಿದುದು ಯೋಗ್ಯವೇ ಆಗಿದೆ. ಮುಂದಿನ ‘Thou art more lovely and more temperate’ ಎಂಬ ಸಾಲಿನ (‘ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು’) ‘ಟೆಂಪರೇಟ್’ ಪದವನ್ನು ಭಟ್ಟರು ‘ಸೌಮ್ಯತೆ’ ಎಂದು ಮಾಡಿಕೊಂ ಡುದು ಅವರ ಸರಿಯಾದ ಆಯ್ಕೆಗೆ ಇನ್ನೊಂದು ನಿದರ್ಶನ.

‘ಟೆಂಪರೇಟ್’ ಎನ್ನುವ ಪದಕ್ಕೆ ಹವಾಮಾನ ಕ್ಷೇತ್ರದ ‘ಸಮಶೀತೋಷ್ಣ’ ಎಂಬ ಪರ್ಯಾಯವಿದ್ದರೂ, ಅದು ಇಲ್ಲಿ ಒಗ್ಗುವುದಿಲ್ಲ; ಹಾಗೆ ಔಚಿತ್ಯವನ್ನು ಮರೆತು ಅನುವಾದಿಸುವುದರಿಂದ ಆಭಾಸವುಂಟಾಗುತ್ತದೆ. ಅನುವಾದಕರಾಗಿ ಭಟ್ಟರು ತೋರುವ ಸೂಕ್ಷ್ಮಸಂವೇದನೆಗೆ ಈ ಸಂಕಲನದ ಉದ್ದಕ್ಕೂ ಇಂಥ ಅನೇಕ ಉದಾಹರಣೆ ಗಳು ಕಾಣಸಿಗುತ್ತವೆ. ನಿಜವಾಗಿಯೂ, ಶೇಕ್ಸ್‌ಪಿಯರನನ್ನು ಅಥವಾ ಇನ್ನು ಯಾವುದೇ ಕವಿಯನ್ನ ಕನ್ನಡಕ್ಕೆ ಅನುವಾದಿಸುವವರಿಗೆ ಭಟ್ಟರ ‘ಸುನೀತ’ ಒಂದು ಮಾರ್ಗದರ್ಶಿಯಂತಿದೆ. ಆದರೆ ಅನುವಾದದಲ್ಲಿಯೂ, ಮುಖ್ಯವಾಗಿ ಕಾವ್ಯಾನುವಾದದಲ್ಲಿ, ಬೇರೆ ಬೇರೆ ರೀತಿಗಳಿವೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಭಟ್ಟರು ಪದ ಪದವನ್ನಾಗಲಿ, ಸಾಲು ಸಾಲನ್ನಾಗಲಿ ಇದ್ದಂತೆಯೇ ಅನುವಾದಿಸಿಲ್ಲ. ಮೂಲದ ಹದಿನಾಲ್ಕು ಸಾಲುಗಳನ್ನು, ಅವುಗಳ ಆಂತರಿಕ ವ್ಯವಸ್ಥೆಯನ್ನು, ಮತ್ತು ಪ್ರಾಸವಿನ್ಯಾಸವನ್ನು ಶೇಕ್ಸ್‌ಪಿಯರ್ ಮಾದರಿಯಲ್ಲೇ ಇಟ್ಟುಕೊಂಡಿದ್ದಾರೆ. ಅನುವಾದಕನಿಗೆ ಇಂಥ ಅನುಸರಣೆ ಕೂಡ ಒಂದು ಸವಾಲು. ಆದರೆ, ಪ್ರಧಾನವಾಗಿ, ಮೂಲದ ಆಶಯವನ್ನೂ ಭಾವವನ್ನೂ ಸರಿಯಾಗಿ ಗ್ರಹಿಸಿಕೊಂಡಿದ್ದಾರೆ. ಇದ್ದುದನ್ನು ಇದ್ದಹಾಗೇ ಮತ್ತು ಪೂರ್ಣವಾಗಿ ಕನ್ನಡಕ್ಕೆ ತರಬೇಕು ಎನ್ನುವ ಹಟವನ್ನು ಅವರು ಎಲ್ಲೂ ತೋರುವುದಿಲ್ಲ. ಅಂಥ ಹಟ ಬಹುಶಃ ಗೋಜಲಿಗೆ, ಅರ್ಥಸಂದಿಗ್ಧತೆಗೆ ಕಾರಣವಾಗುತ್ತಿತ್ತು.

ಯಾಕೆಂದರೆ ಮೂಲ ಕೆಲವು ಕಡೆ ತೊಡಕಿನದಾಗಿದೆ. ಶೇಕ್ಸ್‌ಪಿಯರ್ ಆಧುನಿಕ ಇಂಗ್ಲಿಷ್‌ನ ಬಾಗಿಲಲ್ಲಿ ಇದ್ದವನು; ಮತ್ತು ಒಂದು ಪರಂಪರೆಯನ್ನು ಅನುಸರಿಸಿ ಕಾವ್ಯರಚನೆ ಮಾಡಿದವನು. ಅವನು ಹೇಗೆ ಆ ಕಾಲದ ಕಾವ್ಯಪದ್ಧತಿಗನುಸಾರವಾಗಿ, ಉಪಮೆ, ರೂಪಕ, ಅರ್ಥಕೌತುಕ ಮುಂತಾದವುಗಳಲ್ಲಿ ಜಾಣತನ ತೋರಿಸುತ್ತಿದ್ದ ಎನ್ನುವುದನ್ನು ಭಟ್ಟರು ವಿವರವಾಗಿ ತಮ್ಮ ಪ್ರಸ್ತಾವನೆಯಲ್ಲಿ ತೋರಿಸಿಕೊಡುತ್ತಾರೆ. ಈ ಅಲಂಕಾರಗಳನ್ನು ಮೀರಿಯೂ ಶೇಕ್ಸ್‌ಪಿಯರನ ಸಾನೆಟುಗಳು ಜೀವನಮೌಲ್ಯಗಳಿಂದ ತುಂಬಿವೆ ಎನ್ನುವುದು ಮುಖ್ಯ; ಆ ಕಾರಣಕ್ಕಾಗಿಯೇ ಅವು ಶ್ರೇಷ್ಠ ಕವಿತೆಗಳಾಗಿವೆಯೇ ವಿನಾ ಅವುಗಳ ರಚನಾಕೌಶಲ್ಯಗಳಿಗೋಸ್ಕರ ಅಲ್ಲ. ಶೈಲಿ ಮತ್ತು ಅರ್ಥವನ್ನು ಪ್ರತ್ಯೇಕಿಸುವುದು ಹಲವು ಸಲ ಕಷ್ಟವಾಗುತ್ತದೆ, ನಿಜ. ಆದರೂ ಮಧ್ಯಕಾಲೀನ ಕಾವ್ಯಶೈಲಿಯಲ್ಲಿ ಅಲ್ಲಲ್ಲಿ ಶೈಲಿಯ ಭಾರ ಹೆಚ್ಚಾಗಿರುತ್ತದೆ;

ತಿರುಚಿದ ವಾಕ್ಯರಚನೆ, ಅಪಾರದರ್ಶಕತ್ವ ಕಾವ್ಯಾಸ್ವಾದನೆಗೆ ತೊಡಕುಂಟುಮಾಡುತ್ತದೆ. ಭಟ್ಟರು ತಮ್ಮ ಅನುವಾದಗಳಲ್ಲಿ ಭಾವಾರ್ಥಕ್ಕೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಅವು ನೇರವಾಗಿ ನಮ್ಮನ್ನು ತಟ್ಟುತ್ತವೆ. ಆದ್ದರಿಂದ ಇಂಗ್ಲಿಷ್ ಗೊತ್ತಿದ್ದು ಶೇಕ್ಸ್‌ಪಿಯರನ ಸಾನೆಟುಗಳನ್ನು ಖುದ್ದು ಓದಬಯಸುವ ಕನ್ನಡಿಗರಿಗೆ ಭಟ್ಟರ ಅನುವಾದಗಳು ಸಹಾಯಕವಾದಾವು (ಪ್ರಕೃತ ಸಂಕಲನದಲ್ಲಿ ಇಂಗ್ಲಿಷ್ ಮೂಲಗಳನ್ನೂ ಕೊಡಲಾಗಿದೆ). ಈ ಅನುವಾದಗಳ ಮೂಲಕ ದ್ವಿಭಾಷೀ ಓದುಗರು ಮೂಲವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯ. ಉದಾಹರಣೆಗೆ, ಶೇಕ್ಸ್‌ಪಿಯರ್‌ನ ಒಂದು ಸಾನೆಟ್ ಮತ್ತು ಭಟ್ಟರ ಸರಳ ಅನುವಾದವನ್ನು ನೋಡಬಹುದು:

ಮೂಲ:
Mine eye hath played the painter and hath stelled
Thy beauty’s form in table of my heart;
My body is the frame wherein ’tis held,
And perspective it is best painter’s art.
For through the painter must you see his skill
To find where your true image pictured lies,
Which in my bosom’s shop is hanging stll
That hath its windows glazed with thine eyes,
Now see what good turns eyes for eyes have done:
Mine eyes have drawn thy shape, and thine for me
Are windows to my breast, where-through the sun
Delights to peep, to gaze therein on thee:
Yet eyes this cunning want to gaze their art,
They draw but what they see, know not the heart.

ಕನ್ನಡ ರೂಪ:
ನನ್ನ ಎದೆಹಲಗೆಯಲಿ ನಿನ್ನ ಪ್ರಿಯಮೂರ್ತಿಯನು
ಚಿತ್ರಿಸಿದೆ ಈ ಕಣ್ಣು ಚಿತ್ರಕಾರನ ಹಾಗೆ;
ನನ್ನ ಮೈ ಚೌಕಟ್ಟು ಬಂಧಿಸಿದೆ ಚಿತ್ರವನು
ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ.
ನಿನ್ನ ನಿಜವ್ಯಕ್ತಿತ್ವ ಚಿತ್ರಗೊಂಡಿರುವ ಬಗೆ
ತಿಳಿಯುವುದು ಚಿತ್ರಕಾರನ ಕಲೆಯ ಹಿರಿಮೆಯೊಳು.
ನನ್ನ ಮನದಂಗಡಿಯ ಗೋಡೆಯಲಿ ಚಿತ್ರವಿದೆ.
ನಿನ್ನ ಕಣ್ಣೋ ಅದಕೆ ತೆರೆದಿರುವ ಕಿಟಿಕಿಗಳು.
ಕಣ್ಣು ಕಣ್ಣಿಗೆ ಕೊಟ್ಟ ಕೊಡುಗೆ ಕಂಡೆಯ ನೀನು?
ನನ್ನ ಕಣ್ಣುಗಳು ಕೊರೆದಿವೆ ನಿನ್ನ ರೂಪವನು
ನಿನ್ನಕ್ಷಿ ನನ್ನೆದೆಗೆ ತೆರೆದಿದೆ ಗವಾಕ್ಷಿಯನು
ನೋಡಿ ಖುಷಿಪಡಲು ರವಿ ಅದರೊಳಗೆ ಹಣಿಕುವನು,
ಕಣ್ಣಿಗೀ ಅರಿವಿಲ್ಲ. ಬಿಂಬಗಳ ಕಾಣುವುವು
ಕಂಡಷ್ಟೆ ಗ್ರಹಿಸಿ ಹೃದಯವ ಕಾಣದಿರುವುವು.

ಶೇಕ್ಸ್‌ಪಿಯರನ ಮೂಲ ಸಾನೆಟನ್ನು ಅರ್ಥಮಾಡಿಕೊಳ್ಳಬೇಕಾದರೆ, ಹಲವು ಸಲ ಓದಬೇಕಾಗುತ್ತದೆ; ಹಾಗೆ ಓದಿದರೂ ಅದು ಸಂಪೂರ್ಣ ಗ್ರಾಹ್ಯವಾಯಿತು ಎನ್ನುವಂತಿಲ್ಲ.‘ ನಿನ್ನ ರೂಪವನ್ನು ನನ್ನ ಕಣ್ಣು ನನ್ನ ಹೃದಯಫಲಕದಲ್ಲಿ ಚಿತ್ರಿಸಿದೆ’ ಎನ್ನುತ್ತಾನೆ ಕವಿ, ತನ್ನ ಪ್ರಿಯಕರನಿಗೆ. ಆ ಚಿತ್ರಕ್ಕೆ ನನ್ನ ಒಡಲೇ ಚೌಕಟ್ಟಾಗಿದೆ ಎನ್ನುತ್ತಾನೆ. ಎಂದರೆ ಅದು ಕವಿಹೃದಯದೊಳಗೇ ಇದೆಯೆಂದು ಅರ್ಥ. ಚಿತ್ರವನ್ನು ಕಲಾವಿದನ ದೃಷ್ಟಿಕೋನದಿಂದ ನೋಡಬೇಕು; ಹಾಗೆ ನೋಡಿದರೆ ಅದೊಂದು ಅದ್ಭುತ ತೈಲಚಿತ್ರವೆನ್ನುವುದು ಗೊತ್ತಾಗುತ್ತದೆ. ಈ ಚಿತ್ರವನ್ನು ಕವಿಯ ಎದೆಯಂಗಡಿಯಲ್ಲಿ ತೂಗಹಾಕಿದೆ. ಅಂಗಡಿಯ ಕಿಟಿಕಿಗಳು ಚಿತ್ರದ ಕಣ್ಣುಗಳು.

ಆ ಕಣ್ಣುಗಳೂ ಅವುಗಳನ್ನು ನೋಡುವ (ಕವಿಯ) ಕಣ್ಣುಗಳೂ ಪರಸ್ಪರ ಪ್ರತಿಫಲಿಸುತ್ತವೆ. ಸೂರ್ಯನು ಕೂಡ ನೋಡಲೆಂದು ಈ ಅಂಗಡಿಯೊಳಗೆ ಹಣಿಕುತ್ತಾನೆ. ಕಣ್ಣುಗಳಿಗೆ ತಮ್ಮ ಕಲೆಯನ್ನು ನೋಡಬೇಕು, ಅದರ ಹಿಂದಿನ ಹೃದಯ (ಫಲಕ) ಕಾಣಿಸದು. ಚಿತ್ರವನ್ನಲ್ಲದೆ ಫಲಕವನ್ನು ಯಾರೂ ನೋಡುವುದಿಲ್ಲವಲ್ಲ! ಈಗ ಭಟ್ಟರ ಅನುವಾದಕ್ಕೆ ಬಂದರೆ ಅವರು ಈ ಸಂಕೀರ್ಣ ಪದ್ಯವನ್ನು ಅದೆಷ್ಟು ಚಂದವಾಗಿ ಕನ್ನಡದಲ್ಲಿ ಮರುಸೃಷ್ಟಿ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ‘ಕಣ್ಣು ಕಣ್ಣಿಗೆ ಕೊಟ್ಟ ಕೊಡುಗೆ ಕಂಡೆಯ ನೀನು?’, ‘ನಿನ್ನಕ್ಷಿ ನನ್ನೆದೆಗೆ ತೆರೆದಿದೆ ಗವಾಕ್ಷಿಯನು’– ಎಂಬಿತ್ಯಾದಿ ಸಾಲುಗಳ ಸೊಬಗು ಥಟ್ಟನೇ ನಮ್ಮನ್ನು ಹಿಡಿಯುವಂಥದು. ಆದರೆ ಇದು ಸಾಧ್ಯವಾಗಲು ಅನುವಾದಕರು ಒಂದು ಮುಖ್ಯವಾದ ಗೊಂದಲವನ್ನು ಹೊರಗಿಟ್ಟಿದ್ದಾರೆ.

ಅದು ‘And perspective it is best painter’s art’ ಎಂಬಲ್ಲಿನ ‘ಪರ್‌ಸ್ಪೆಕ್ಟಿವ್’ ಪದ. ಇದರ ಕುರಿತು ಹಲವಾರು ವ್ಯಾಖ್ಯಾನಗಳಿವೆ: ‘ಪರಿಪ್ರೇಕ್ಷೆಯಲ್ಲಿ’ ಎನ್ನುವುದು ಒಂದು ಅರ್ಥ; ಎಂದರೆ ಒಂದು ವಾರೆನೋಟದಲ್ಲಿ ನೋಡಿದರೆ ಇದು ಅತ್ಯುತ್ತಮವಾದ ಕಲಾಚಿತ್ರ ಎನ್ನುವುದು. ಅನುವಾದಕರು ಇದನ್ನು ‘ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ’ ಎಂದು ಮಾಡಿಕೊಂಡಿದ್ದಾರೆ. ಇದೂ ಮರುಸೃಷ್ಟಿ, ಅನುವಾದವಲ್ಲ. ಇನ್ನು ಈ ‘ಪರ್‌ಸ್ಪೆಕ್ಟಿವ್’ ಪದಕ್ಕೆ ಬೇರೊಂದೇ ಅರ್ಥವೂ ಇದೆ: ಅದು ಮಧ್ಯಕಾಲೀನ ಯುರೋಪಿನಲ್ಲಿ ಮೂಡಿಬಂದ ಒಂದು ಚಿತ್ರಶೈಲಿ. ಈ ಸಾಂಸ್ಕೃತಿಕ ಆಯಾಮವನ್ನು ಅನುವಾದ ಹೊರಗಿಟ್ಟಿದೆ. ಭಾವಾನುವಾದದಲ್ಲಿ ಇದನ್ನೆಲ್ಲ ಒಳಗೊಳ್ಳುವುದು ಸಾಧ್ಯವಿಲ್ಲ.

‘ಸುನೀತ’ದಲ್ಲಿನ ಒಂದೊಂದು ಪದ್ಯವೂ ಭಟ್ಟರ ಅನುವಾದ ನೈಪುಣ್ಯಕ್ಕೆ ಸಾಕ್ಷಿ. ಈ ಕೆಳಗಿನ ಕೆಲವು ನಿದರ್ಶನಗಳನ್ನು ಗಮನಿಸಬಹುದು:

Not marble, nor the gilded monuments
Of princes, shall outlive this powerful rhyme
ಅಮೃತ ಶಿಲೆಯಲಿ ಕಡೆದ ಚಿನ್ನ ಲೇಪನ ತೊಡೆದ
ರಾಜಸ್ಮಾರಕ ಮೀರಿ ಬಾಳುವುದು ಈ ಕವಿತೆ

Like as the waves make towards the pebbled shore
So do our minutes hasten to their end
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ
ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ

Since brass nor stone, nor earth, nor boundless sea,
But sad mortality o’er-sways their power,
ಕಲ್ಲು ಹಿತ್ತಾಳೆ ನೆಲ ಕೊನೆಯಿರದ ಕಡಲ ಜಲ
ಎಲ್ಲದರ ಬಲ ಮೀರಿ ಆಳುತ್ತಿರಲು ಸಾವು

For as the sun is daily new and old,
So is my love still telling what is told
ಸೂರ್ಯ ದಿನ ದಿನ ಹಳಬ ಹೊಸಬ ಎರಡೂ ಹೇಗೆ,
ಹಾಡಿದ್ದೆ ಹಾಡುವುದು ನನ್ನ ಒಲವೂ ಹಾಗೆ

ಭಟ್ಟರ ಪ್ರತಿಯೊಂದು ಅನುವಾದವೂ ಸ್ವಾಯತ್ತವಾಗಿದೆ: ಎಂದರೆ, ಶೇಕ್ಸ್‌ಪಿಯರನ ಸ್ಫೂರ್ತಿಯಿಂದ ಅವರು ಬರೆದಂತೆ, ಶೇಕ್ಸ್‌ಪಿಯರನನ್ನು ನೋಡಿ ಅಲ್ಲ. ಇದೇ ಈ ಅನುವಾದಗಳ ವಿಶೇಷತೆ. ಅರ್ಥಾತ್ ಮೂಲದ ಬಗ್ಗೆ ಏನೂ ಗೊತ್ತಿಲ್ಲದೆ ಇದ್ದರೂ ಇವುಗಳನ್ನು ಆಸ್ವಾದಿಸಬಹುದಾಗಿದೆ. (ಆದರೂ ಬಿ.ಎಂ.ಶ್ರೀ. ತೆಗೆದುಕೊಳ್ಳುವಷ್ಟು ಮರುಸೃಷ್ಟಿಯ ಸ್ವಾತಂತ್ರ್ಯವನ್ನು ಭಟ್ಟರು ತೆಗೆದುಕೊಳ್ಳುವುದಿಲ್ಲ – ಭಟ್ಟರ ಕಾಲ, ಉದ್ದೇಶ ಬೇರೆಯೇ).

ಒಂದನ್ನೊಂದು ಮೀರಿ ನಿಲ್ಲುವುದರಿಂದ ಯಾವುದೇ ಒಂದನ್ನು ಹೆಸರಿಸಿದರೂ ಉಳಿದವು ಅದಕ್ಕಿಂತ ಕಡಿಮೆ ಎಂದು ಅರ್ಥವಲ್ಲ; ಆದರೂ ‘ನನ್ನವಳ ಕಣ್ಣು ರವಿಯಂತೆ ಖಂಡಿತ ಇಲ್ಲ’ (‘My mistress’ eyes are nothing like the sun’) ತುಂಬಾ ಆಪ್ಯಾಯಮಾನವಾಗಿದೆ. ಸ್ಥಳಾವಕಾಶದ ಮಿತಿಯಲ್ಲಿ ಇಲ್ಲಿ ಕೊಡಬಹುದಾದ ಇನ್ನೊಂದು ಪದ್ಯವೆಂದರೆ:

ಅಗೊ, ಬೇಲಿ ಹಾರಿತು ಕೋಳಿ ಹೊರಗೆ, ಮನೆ–
ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ
ಅಲ್ಲೆ ಕೆಳಗಿಳಿಸಿ ಬೆನ್ನಟ್ಟಿದಳು ಸರಸರನೆ
ಜಿಗಿದು ಓಡುವ ಕೋಳಿಯನ್ನು. ‘ಹೋ ಎನುತಳುವ
ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ
ಕೂಗಿ ಕರೆಯುತ್ತ, ಕಣ್ಣೆದುರೆ ನೆಗೆ ನೆಗೆಯುತ್ತ
ಓಡಿರುವ ಕೋಳಿ ತಾಯಿಯ ಗಮನ, ಗುರಿ. ಹಿಂದೆ
ಚೀರುತಿದ್ದರು ಮಗು ಕಿವಿಯಿಲ್ಲ ಅದರತ್ತ.
ಹೊರಟಿರುವೆ ನೀನು ಸಹ ಯಾವುದನೊ ಬೆನ್ನಟ್ಟಿ,
ನಿನ್ನ ಮಗು ನಾ ಓಡಿ ಬರುತಿರುವೆ ದೂರದಲಿ;
ಬಯಕೆ ಫಲಿಸಿತೊ ಮರಳಿ ಹರಿಸು ಈ ಕಡೆ ದಿಟ್ಟಿ,
ಮುದ್ದುಗರೆ, ರಮಿಸು, ತೋರಿಸು ಕರುಣೆ ತಾಯಾಗಿ.
ಹಿಂತಿರುಗಿ ನನ್ನ ಚೀರುಲಿಯ ನಿಲ್ಲಿಸು ನೀನು,
ನಿನ್ನಾಸೆ ಪೂರೈಸಲೆಂದು ಬೇಡುವೆ ನಾನು.

ಇದೊಂದು ಸಾಮಾನ್ಯ ಮನೆವಾರ್ತೆಯ ಸನ್ನಿವೇಶ, ಶೇಕ್ಸ್‌ಪಿಯರನ ಕೈಯಲ್ಲಿ ಅಸಾಮಾನ್ಯವಾಗಿದೆ. ‘ಮಗುವನ್ನು ಕೆಳಗಿಳಿಸಿ ಮನೆಯೊಡತಿ ಕೋಳಿಯ ಹಿಂದೆ ಓಡುವುದು’ ಅಷ್ಟೇ ಸೊಗಸಾಗಿ ಕನ್ನಡದಲ್ಲಿ ಮೂಡಿಬಂದಿದೆ! (ಪುರಂದರದಾಸರ, ಶಿಶುನಾಳ ಷರೀಫರ ಹಾಡುಗಳೂ ಮನಸ್ಸಿಗೆ ಬಂದರೆ ಆಶ್ಚರ್ಯವಿಲ್ಲ). ಇಂಥ ಅನುವಾದಗಳು ನಮಗೆ ಶೇಕ್ಸ್‌ಪಿಯರನಲ್ಲಿ ಮತ್ತೆ ಪ್ರೀತಿ ಹುಟ್ಟುವಂತೆ ಮಾಡುತ್ತವೆ. ‘ಅರೇ, ಆತ ಹೀಗೂ ಬರೆದನೇ’ ಎಂದು ಅಚ್ಚರಿ ಮೂಡಿಸುತ್ತವೆ. ನಮ್ಮ ಭಾಷೆಗೂ ಈ ಪದ್ಯಗಳು ಬಂದುವಲ್ಲ ಎಂದು ಸಂತೋಷವಾಗುತ್ತದೆ. ಅನುವಾದಕನೊಬ್ಬ ಅವಿಸ್ಮರಣೀಯನಾಗುವುದು ಇಂಥ ಭಾವನೆ ಬಂದಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT