ಕವಿತೆ: ಕಂಬನಿಗಳ ಲೆಕ್ಕವಿಡದಿರು..

ನಾನು ನೀನು ಈ ಬಂಧನದೊಳಗೆ ಸಿಕ್ಕಿದ್ದು
ಒಂದು ಆಕಸ್ಮಿಕ!
ಈ ಮೊದಲು;
ನನಗೆ ನೀನು ಒಂದು ಹೆಣ್ಣು
ನಿನಗೆ ನಾನು ಒಂದು ಗಂಡು
ಜ್ಯೋತಿಷಿಯ ಮೂಹೂರ್ತ, ನೆರೆಹೊರೆಯ ಸಂಭ್ರಮ
ಹೆತ್ತವರ ಸಮಾಧಾನ, ಸಂಬಂಧಗಳ ಹುಟ್ಟು
ಸ್ನೇಹಿತರ ಚೇಷ್ಟೆ, ವಿನೋದಗಳು
ಒಂದುಗೂಡಿಸಬಹುದು ನಮ್ಮನ್ನು ಭೌತಿಕವಾಗಿ ಮಾತ್ರ
ಕಲಿತುಕೊಳ್ಳಬೇಕು ನೀನು ಎಲ್ಲವನ್ನೂ ಬಹುಬೇಗ
ಬದುಕಿನ ಲೆಕ್ಕ ಅಷ್ಟು ಸರಳವಲ್ಲ
ಮನಸ್ಸನ್ನು ಹುರಿಗೊಳಿಸಬೇಕು, ಹರಿತಗೊಳಿಸಬೇಕು
ಈ ವಿಧಿ ಕೊಟ್ಟ ಪರೀಕ್ಷೆಯನ್ನು ಒಟ್ಟಾಗಿಯೇ ಬರೆಯಬೇಕು
ತಪ್ಪಿದರೆ ಆ ಕ್ಷಣವೇ ತಿದ್ದಿಕೊಳ್ಳಬೇಕು
ಬದುಕು ಎಲ್ಲವನ್ನು ನೋಡುತ್ತದೆ, ಕಾಡುತ್ತದೆ
ದಿಕ್ಕು ತಪ್ಪಿಸಲು ಕಾಲ ಹೊಂಚುಹಾಕುತ್ತದೆ
ಉಸಿರೆಳೆದುಕೊಳ್ಳುವ ಗಾಳಿ ವಿಷವಾಗಿ, ಬಿರುಗಾಳಿಯಾಗಿ
ಮನೆಮನವನ್ನು ದಿವಾಳಿ ಎಬ್ಬಿಸಬಹುದು
ನಾನು ನೀನೂ ಇದೆಲ್ಲದರ ಗುರುತ್ವದಿಂದ ತಪ್ಪಿಸಿಕೊಂಡು
ಹೊಸಗೂಡು ಕಟ್ಟಬೇಕಿದೆ
ಸುಲಭದ ಮಾತಲ್ಲವೆಂದರೂ ಸಾಧ್ಯವಿದೆ ಪ್ರೇಮಕ್ಕೆ
ಸಜ್ಜುಗೊಳ್ಳಬೇಕು ಘಟಾನುಘಟಿ ಕಷ್ಟಗಳ ಕತ್ತನ್ನು ಮುರಿಯಲು
ದಣಿವಿಗೆ ಹೆದರದಿರು ದೂರವನ್ನು ಅಳೆಯದಿರು
ಕಂಬನಿಗಳ ಲೆಕ್ಕವಿಡದಿರು
ಬಾ, ನನ್ನ ತೋಳುಗಳಿಗಿಂತ ಮನಸ್ಸು ಗಟ್ಟಿಯಾಗಿದೆ
ನೀನು ಸುಮ್ಮನೆ ಅದರೊಳಗೆ ಹೊಕ್ಕಿಬಿಡು ಸಾಕು..!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.