ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಸಂಕ್ರಾಂತಿ –2023 | ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರ ಕವನ: ‘ರಂಗ’ಸ್ಥಳ

Last Updated 1 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ನಾನೀಗ ಕೂತಿರುವ ಸ್ಥಳ, ಅಂಗಳ
ಕಣ್ಣೆದುರೇ ಚಂದ ಹೊಳೆವ ʼರಂಗಸ್ಥಳʼ

ಕಿಕ್ಕಿರಿದಿದೆ ಸಭೆ
ಸವಿಯಲು ಯಕ್ಷಸುಧೆ
ನಡೆಯಲಿದೆ ʼಕಂಸವಧೆʼ

ಓ ಅಂವ, ಈ ಇಂವ, ಎಲ್ಲರೂ ಕಾಣುವರು
ಮೈಮೇಲೆ ಚೆಲ್ಲಿದ ಹಾಲು ಬೆಳದಿಂಗಳು.

ಅಂಗಳಪೂರ್ತಿ ಬೆಳಕು, ಚೆಲುವ ಸವಿವ ಕಂಗಳು
ಅಮಾವಾಸ್ಯೆಯಿರುಳು ಹೊದ್ದಿರುವ ಹಾಗೆ ʼರಂಗಸ್ಥಳʼ ಕತ್ತಲು!

ಅತ್ತಿತ್ತ ಮಾತು, ಲಾಟೀನಿನ ಹೊಗೆ; ಆಟ ಯಾವಾಗ ಶುರು?
ಒಮ್ಮೆಲೇ ಚಂಡೆ ಬಡಿತ, ಮದ್ದಳೆ, ಭಾಗವತರ ಕೂಟ

ಮೈಯ್ಯೆಲ್ಲ ಕಣ್ಣು, ಪಾತ್ರಪ್ರವೇಶ….
ಶಬ್ದ ಗ್ರಹಿಸಿದ ಕಿವಿ ಚುರುಕು, ಕಾಂಬ ಕಣ್ಣಿಲ್ಲ.

ʼರಂಗಸ್ಥಳʼ ಕತ್ತಲು; ಇರುಳ ಹೊದ್ದಿರುವ ಕರೀ ಇದ್ದಿಲು
ಪ್ರೇಕ್ಷಕನ ಮೇಲೆ ಅಪಾರ ಚೆಲ್ಲಿದ ಬೆಳಕು!

ಆಟ ಸಾಗುತ್ತಿದೆ; ಶಬ್ದ ಕೇಳುತ್ತಿದೆ, ಕೃಷ್ಣ ಬಂದನೇ?
ʼರಂಗಸ್ಥಳʼ ಕತ್ತಲು; ಕಂಸನ ಕೊಂದನೇ?

ಪ್ರಾಂಗಣದಲ್ಲಿ ಚೆಲ್ಲಿದ ಬೆಳಕು ರಂಗದಲ್ಲಿ ಬಿದ್ದರೆ ʼರಂಗʼ ಕಂಡಾನೇ?
ತಹತಹ, ಹಪಹಪಿ, ರಂಗ ಕಾಣಬೇಕು, ರಂಗನನ್ನು ಕಾಣಬೇಕು.

ಉನ್ಮಾದ; ʼರಂಗʼ ಕಾಣಬೇಕು, ʼರಂಗನನ್ನುʼ ಕಾಣಬೇಕು.
ಸಹೃದಯನೊಬ್ಬನ ಮೇಲೆ ಅಪಾರ ಚೆಲ್ಲಿದ ಬೆಳಕು ಒಮ್ಮೆಲೇ ಆರಿಹೋಯಿತು

ಅವನಂತರಂಗದ ಒಳಬೆಳಕು ಝಗ್ಗನೆದ್ದು ಹೊರಟು ʼರಂಗಸ್ಥಳʼ ಬೆಳಗಿತು
ಛಕ್ಕನೆ ಹೊಳೆದ ಕಣ್ಣು; ʼರಂಗʼ ಕಂಡಿತು, ʼರಂಗನನ್ನುʼ ಕಂಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT