ಮಂಗಳವಾರ, ಮಾರ್ಚ್ 21, 2023
29 °C

ಕವಿತೆ: ಅಲೆಮಾರಿಯ ಸ್ವಗತ

ಡಿ.ಎಸ್.ಚೌಗಲೆ Updated:

ಅಕ್ಷರ ಗಾತ್ರ : | |

Prajavani

ಓಹ್ ಮಣ್ಣು ಒಡಲುಗಳು ಪಾತ್ರೆಗಳೇ ನಿಚ್ಚಳ,
ಮೋಹ ಪಡದಿರು
ಹೌದಲ್ಲ! ಮತ್ತೇಕೆ?
ಹತ್ತಿರ ಸುಳಿಯದಿರು ಎಂಬೋ ಅವಳ ಅಮಾನುಷ ಹೇಳಿಕೆ!
ಎಷ್ಟು ಸರಿ ನಂಬಿಕೆ?
ಅಪ್ರಾಕೃತಿಕ ಪರಿಧಿಯ ವ್ಯಾಪ್ತಿಯೇ
ಸಮಾಪ್ತಿಗೊಂಡಿದೆ

ಕರುಳು ಹಿಂಡುವ ಕಡು ದುಃಖಕೆ
ಜಿನುಗಿದ ಕಂಬನಿ ಹನಿ ಮತ್ತು ವಿಸ್ಕಿಯ ಬೆರಕೆಯ ನಶೆ
ಬಾಯಲಿ ಹೊಮ್ಮಿದ ವಿಸ್ಕಿ ಹಬೆಯ ಘಮಟು
ಧಮನಿಗಳಲಿ ಹರಿದಾಡೋ
ದ್ರಾಕ್ಷಿ ಹುಳಿ
ಕುದಿಕುದಿದು ಹೊಮ್ಮಿದ ಅಮಲಿನ ಧೂಮ ಕರಗಿತು
ಕಾಮದಲಿ
ಮಾಸಿದ ಗೆರೆಗಳು ಬಣ್ಣ ತುಂಬಲು
ಹವಣಿಸಿ ಕಾದಿವೆ
ಕಲಾವಿದ ಮಾತ್ರ ನಾಪತ್ತೆ!

ಎದೆಯಲಿ ಕೊಳೆತ ಅವಳ ಒಲವ ಹುಳಿ ದ್ರಾಕ್ಷಿಯ ವೈನ್
ಬಟ್ಟಲು ಭರ್ತಿ ತುಂಬಾ ಕಮಟು ಸವಿಯು
ಹೇಗೆ ಕುಡಿಯಲಿ?
ಅನಾಥ ನಾನು. ಮೂಗನೂ ನಿಜ
ನಾಲುಗೆ ಕತ್ತರಿಸಲಾಗಿದೆ

ಹಕ್ಕಿಯ ಸೆರೆ ಹಿಡಿಯಲು
ಕಾಳು ಹಾಕುವ ಶಿಕಾರಿ, ಜಾಗ್ರತೆ!
ಬೀಸಿರುವನು ಬಹುದೊಡ್ಡ ಬಲೆಯ ಜಾಲವ

ಎದೆಯಲಿ ಒಲವ ಗೂಡನು ಹೆಣೆದ ಹೆಣ್ಣು ಹಕ್ಕಿ ನಿರಾಳವಲ್ಲ
ಅನ್ನ-ದಾಹ ಅರಸಿ ಹೋದ ಗಂಡು ಹಕ್ಕಿಗಾಗಿ ತಾಳ್ಮೆಯೂ ಇಲ್ಲ

ಓಹ್ ದೇವರೆ...
ಗೊರಲು ಕಟ್ಟಿದ ಮಣ್ಣಿನ ಹುತ್ತಕೆ ಹಾವು ಹೊಂಚು ಹಾಕಿ
ಕುಳಿತಿದೆ ಏಣಿಯಾಟಕೆ
ಕಾಲ ಮತ್ತು ಅವಕಾಶಗಳ ಕಲ್ಲೆದೆಯ ಭಾರ ಹೊತ್ತು ಅಲೆವ ಅಲೆಮಾರಿ ಭಿಕ್ಷುಕ ನಾನು

ಕಂಬನಿ ಹನಿಯ ಉಪ್ಪು ರುಚಿ ಕರಗಿ ಆವಿಯಾಯಿತು
ವಿಸ್ಕಿಯ ಒಗರು ಕಹಿ ಕಳೆದು
ಅಮಲಿಳಿಯಿತು

ಅವಳ ಗದರು ನುಡಿ ಮಾತ್ರ ಇನ್ನೂ ಹಾಗೆಯೇ ಇದೆ
ಹತ್ತಿರ ಶುಳಿಯಬೇಡ ಎಂಬೋ
ಅಮಾನುಷ ಹೇಳಿಕೆ!
ಇರುವೆ ದೂರ
ನಾನೊಬ್ಬ ಅಲೆಮಾರಿ ಅನಾಥ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು