ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ಮಹಾಂತೇಶ್ ಬಿ. ನಿಟ್ಟೂರ್ ಅವರ 'ನನ್ನ ಕವನ'

Last Updated 8 ಜನವರಿ 2022, 20:15 IST
ಅಕ್ಷರ ಗಾತ್ರ

ಗಡಿಗಳ ಅಳಿಸಿ, ಗುಡಿಗಳ ಗುಡಿಸಿ
ಗೋಡೆಯ ಬೀಳಿಸಿ ಬಾಂಧವ್ಯ ಬೆಸೆಯುವ
ಸಂಗೀತ ಸುಧೆಯ ಕಾವ್ಯ ಲಹರಿ;
ನನ್ನ ಕವನ

ಟೀಕೆ ಟಿಪ್ಪಣಿ, ಅವಮಾನದಲೆಗೆ
ಕದಲದೆ ಹೆದರದೆ ಎದೆಗೊಟ್ಟು
ನಿಂತ ಹೆಬ್ಬಂಡೆಯ ಮಹಾದಂಡು;
ನನ್ನ ಕವನ

ಮುಗ್ಧ ಮಗುವಿನ ಮುಖದಿ
ಅರಳುವ ನಿಷ್ಕಲ್ಮಶ ನಗುವಿನ
ಮಂದಹಾಸದ ಸಿರಿ ಮಲ್ಲಿಗೆ;
ನನ್ನ ಕವನ

ದೀನ ದಲಿತರ ಹಸಿವನು ನೀಗಿ
ನಾಳೆಯ ಬಾಳನು ಅರಳಿಸುವ
ಚಿನ್ನ ಸಮಾನ ಅನ್ನದ ಅಗುಳು;
ನನ್ನ ಕವನ

ವಾತ ಪಿತ್ತದ ವ್ಯತಿರಿಕ್ತ
ವಾತಾವರಣವ ಆದರಿಸಿ
ಆಲಂಗಿಸಿ ಸದಾ ಸಿಹಿಯ
ಉಣಿಸುವ ಕಬ್ಬಿನ ಸೂಲಂಗಿ;
ನನ್ನ ಕವನ

ಅಕ್ಷರ ಲೋಕದ ಅರಸರ ತೋಟದಿ
ಅರಳುವ ಹೂಗಳ ಪರಿಪರಿ ಪರಿಮಳದಿ
ಸೃಜಿಸುವ ದುಂಬಿಗಳ ವಿದ್ಯಾ ಗಾನ;
ನನ್ನ ಕವನ

ಖಗ-ಮೃಗಗಳ ಉದರ ತುಂಬಿಸುವ
ನಿಸ್ವಾರ್ಥ ನಿಶ್ಚಲ ವೃಕ್ಷ ದೇವತೆಯ
ಪಾದದ ಧೂಳಿನ ಕಣಗಳು;
ನನ್ನ ಕವನ

ಪ್ರಾಮಾಣಿಕತೆಯ ಉಂಡು ಮಲಗುವ
ಪ್ರಕೃತಿಯ ನಂಬಿ ಹಗಲಿರುಳು ದುಡಿವ
ಅನ್ನದಾತನ ನೇಗಿಲ ಕುಳ;
ನನ್ನ ಕವನ

ನಿತ್ಯ ಅಕ್ಷರದಾರತಿ ಬೆಳಗುತ
ಜ್ಞಾನಾಂಜಲಿಯ ತಿಲಕವನಿಟ್ಟು
ಸನ್ಮಾರ್ಗ ತೋರಿ ಗುರಿ ತಲುಪಿಸುವ
ಗುರುವಿನ ಕಾರುಣ್ಯದ ಕಿರಣ;
ನನ್ನ ಕವನ

ಬೆಳಗಿನ ಹೊಂಗಿರಣವನು ಹೊದ್ದು
ಸತ್ಯ ಸಂಗತಿಯ ಪ್ರತಿ ಬಿಂಬಿಸುತ
ಶಶಿಗೆ ರಮಿಸಿ ರವಿಗೆ ನಮಿಸಿ
ಕಾಣದೆ ಕರಗುವ ಇಬ್ಬನಿ ಹನಿ;
ನನ್ನ ಕವನ

ಜ್ಞಾನ ವಿಜ್ಞಾನ ತಂತ್ರಜ್ಞಾನದ
ಸುಂದರ ಬನದಿ ಸುತ್ತಿ ಸುಳಿದು
ಘಮಗುಡುತ ಸೂಸುವ ತಂಗಾಳಿ;
ನನ್ನ ಕವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT