ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಕುಣಿದು ದಿನವೆಷ್ಟಾಯಿತು

Last Updated 22 ಆಗಸ್ಟ್ 2021, 16:30 IST
ಅಕ್ಷರ ಗಾತ್ರ

ಅಮಾವಾಸ್ಯೆಯ ರಾತ್ರಿ
ಕಪ್ಪು ಮುಗಿಲಿಗೆ ಬೆಂಕಿ ಬಿದ್ದು
ಸುಡು ಬೆಂದು
ಕೀವು ಸೋರುತ್ತಿದೆ;
ಬಿಡುವಿರದೆ ಬೇಯುತ್ತಿದೆ ಊರ ಬೆನ್ನಿಗೇರಿದ ಸ್ಮಶಾನ
ದಶೇರಿ ಮಾವಿನ ಮೆರಗಿಗೆ ಮೂತಿ ಇಟ್ಟರೆ ಗಿಳಿ,
ತುಪನೆ ತುಪನೆ ಉದುರುತ್ತಿವೆ ಅಂಗುಲಂಗುಲ ಹುಳ
ಬಿರಿವ ದಾಳಿಂಬೆ, ನೊರೆಗರೆವ ದ್ರಾಕ್ಷಿ
ತುಂಬಿ ತುಳುಕುತ್ತಿವೆ ಬೋಧಿಸತ್ವನ ರಕ್ತ
ಆಲಿಕಲ್ಲಿಗೆ ಬಿದ್ದ ಎಳೆ ಮಾವಿನಂತೆ
ಹೆಣ ಬಿದ್ದು ತೇಲುತ್ತಿವೆ ಕಡಲ ತುಂಬ

ಗಾಂಧಾರದಿಂದ ಹರಿದು ಬಂದ ನದಿಯೇಕೆ
ಇಷ್ಟೊಂದು ಉಪ್ಪು?
ದಶದಿಕ್ಕುಗಳಿಂದ ಇಳಿದು ಏರುವ ಗಾಳಿಯೊಳಗೆಲ್ಲಿದೆ ತಪ್ಪು?
ಗಾಂಧರ್ವಿಯರ ಅರುಣ ರಾಗದ ಕೆನ್ನೆಗೆ
ಆಸಿಡ್ಡು ಬಿದ್ದು ಯಮ ತೋಡಿದ ಹಳ್ಳ
ಬಾಳು ಕೊಂದವರು ತೋಳವಾಗಿದ್ದಾರೆ
ಹರಿದ ನೆತ್ತರಿಗೆ ಎಲ್ಲಿದೆ ಬಳ್ಳ?

ನದಿಗೆ ರೋದನೆ ಹಿಡಿದು ಎಷ್ಟು ದಿನವಾಯ್ತು ರೂಮಿ?
ಎಷ್ಟೊಂದು ಕೊಳ್ಳಗಳು
ಅದೆಷ್ಟೊ
ದೇವ ಬಳ್ಳಗಳಿಗು
ದಕ್ಕದ ನದಿಗಳಿದ್ದರೂ
ಏಕೆ
ಗಾಂಧಾರ ನದಿಯು
ಸರಯೂಗೆ ಸೇರುತ್ತಿದೆ ರಾಮ?
ನಿನ್ನ ಕಾಳಿಂದಿಯೇಕೆ ಬೆಚ್ಚಿ ಬೋರಲಾಗಿದೆ ಕೃಷ್ಣ?


ಗಾಂಧಾರಿ ಕುಂತಿ ದ್ರೌಪದಿಯರ
ಹೂತ ಕಂಬನಿಯ ಕಡಲು ಉಕ್ಕುಕ್ಕಿ ನುಗ್ಗುತ್ತಿದೆ
ನಷ್ಟದ
ಲೆಕ್ಕ ಬರೆವ ಗುಮಾಸ್ತರೆಲ್ಲಯ್ಯಾ ಯಮನೆ?
ಮುಟ್ಟಿನ ನೆತ್ತರೊರೆಸಿದ ಬಟ್ಟೆಗಳು ಗೂಟ ತೊಟ್ಟು
ಪಹರೆ ನಿಂತಿವೆ ಶಿವನೆ ನದಿಯಗುಂಟ?

ಯಾರ ಬಂಧನವಿಲ್ಲಿ
ಯಾಕೆ ರೋದನೆಯಿಲ್ಲಿ
ಗಿಲನೆ ಗಿಲನೆ ನದಿ ಕುಣಿದು ದಿನವೆಷ್ಟಾಯಿತು?

ರೂಮಿ ನಂಬಿದ ಹಾಡು
ಕಬೀರನ ದೋಹ
ಕುವೆಂಪು ಟಾಗೂರರ ಪದ್ಯ
ಗಾಂಧಿ ಊರುಗೋಲಿನ ಶಬ್ಧ
ಎದೆ ಕಣ್ಣು ಕಿವಿ ಕಳಕೊಂಡ ಹರೆಯದುಂಬಿದ
ಮಕ್ಕಳಿಗೆ ಕೇಳಿಸಲಾರದವ್ವ ತಾಯೆ

ನಾಡ ಗರ್ಭಿಣಿಯರ ಕಾಲಿಡಿದು
ಕೇಳುತ್ತೇನೆ
ಎದೆ ಕರುಣದ ಮಕ್ಕಳ
ಹೆತ್ತು ಕೊಡಿರವ್ವ ತಾಯೆ

ಬೆತ್ತವಿಡಿದ ಮೇಷ್ಟ್ರುಗಳ ಬೇಡುತ್ತೇನೆ
ಬಿಟ್ಟು ಬಿಡಿರಯ್ಯ ಸುಮ್ಮನೆ
ಮಾವು ಮಲ್ಲಿಗೆ ತೋಟಕ್ಕೆ.
ಮಂಜು ಮಾಯವಾಗುವುದನ್ನು
ಹೂವು ಅರಳುವುದನ್ನು
ಕಾಯಿ ಮಾಗುವುದನ್ನು ನೋಡಿ ಬರಲಿ

ಬೆಳದಿಂಗಳು ಗಂಗೆ ಕನ್ನಡಿಯೊಳಗೆ
ಮುಖ ನೋಡಿ ಜಡೆ ಹಾಕಿಕೊಳ್ಳಲಿ
ಬಿಂದಿ ಇಟ್ಟು
ಕೆನ್ನೆ ಕೆಂಪಾಗಲಿ
ಯಾರದೊ ನೆನಪ ಗುಂಗಿನಲ್ಲಿ

–ನೆಲ್ಲುಕುಂಟೆ ವೆಂಕಟೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT