ಭಾನುವಾರ, ಮಾರ್ಚ್ 29, 2020
19 °C

ಸ್ವರ್ಗ ಸರೋವರದ ಹಂಸವೇ ಕೇಳಿದಿಯಾ..?!

ಎನ್.ರವಿಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮಂದಗಮನೆಯಂತೆ ಮೀಯುತ್ತಿದ್ದ ಹಾಲ್ಬಿಳುಪಿನ ನೀನು
ನೆತ್ತರುಕ್ಕುವ ರಣಹದ್ದಿನಂತೆ ಹಾರುವುದಾ ಕಂಡೆ!
ಆ ನಿನ್ನ ದರವೇಶಿ ಸೂಫಿಯ ಹಾಡು
ಕಣಿವೆಯ ಚರಮಗೀತೆಯಂತೆ ಕೇಳಿಸಿತು
ಥೂ.., ಎಂಥಾ ಕೆಟ್ಟ ಕನಸು!
ಇರಲಿ ಬಿಡು, ನಿನಗೆ ಇದೆಲ್ಲಾ ಹೊಸತಲ್ಲ

ಸ್ಫಟಿಕದಂತಹ ರಸ್ತೆಗಳಲ್ಲಿ ಇನ್ನೇನು
ಪ್ರಜಾಪ್ರಭುತ್ವದ ಮೆರವಣಿಗೆ ಬರಲಿದೆ
ಬಾಯಿಗೆ ಬಾವುಟ ತುರುಕಿ
ಕಣ್ಣಿಗೆ ಮೇಣ ಮೆತ್ತಿ
ಎಲ್ಲರನ್ನೂ ಮೆರವಣಿಗೆ ನೋಡಲು ಕರೆ ತರುವ
ಫರ್ಮಾನು ಹೊರಟಿದೆ
ಈ ನೆಲದ ಚಿನಾರು ಮರಗಳ, ಕಡವೆಗಳ
ಕೊನೆಯಾಸೆಯನ್ನು ಕೇಳಬೇಡವೇ?
ಸುಂದರಿಯೊಬ್ಬಳ ಸ್ವಗತವೂ ಹೃದಯಕ್ಕಿರಲಿ,
ಕಿವಿಗಳಿಗೂ ಸೋಕಬಾರದು
ನಿಷೇಧಾಜ್ಞೆ ಜಾರಿಯಲ್ಲಿದೆ

ನೆತ್ತಿಯ ಮೇಲೆ ಬಂದೂಕಿನ ಗುರಿ ನೆಟ್ಟಿದೆ
ಕಾಲುಗಳಿಗೆ ಚಿನ್ನದ ಸರಪಳಿ ಬಿಗಿದಿದ್ದು
ನಿನೀಗ ಸರ್ವ ಸ್ವತಂತ್ರ;
ಇನ್ನು ನಿರುಮ್ಮಳವಾಗಿ ಮೀಯಬಹುದು
ದೋಣಿಗನ ಜೊತೆ ಮಾತನಾಡುತ್ತಾ
ಮಿನಾರಿನ ಮೇಲಿನ ಚಂದ್ರನ ತುಂಡು
ಗೋಪುರದ ಕಲಶವೂ ಜಪ್ತಿಗೊಂಡು
ಅರಸೊತ್ತಿಗೆಯಲ್ಲಿ ದೇಶಭಕ್ತಿಯ
ಪರಾಕು ಹಾಡುತ್ತಿವೆ
ನೆತ್ತಿ ಸೀಳಿ ನೆತ್ತರು ಚಿಮ್ಮುವ ಮುಂಚೆ
ಉನ್ಮತ್ತಗೊಂಡು ಹಾಡಿಬಿಡು

ಸ್ವರ್ಗವೀಗ ಸ್ವರ್ಗವಾಗುವ ಕಾಲ
ಅದೆಷ್ಟೋ ದಿನಮಾನಗಳು ಸಿಡಿದ ಮದ್ದು-ಗುಂಡುಗಳ
ಗಂಧಕದ ಘಮಟು- ಅಸಂಖ್ಯಾತ ದೇಶದ್ರೋಹಿ-
ದೇಶಪ್ರೇಮಿಗಳ ಹೆಣದ ವಾಸನೆಯನ್ನೂ
ಮಲೀನಗೊಂಡ ರಾಜಕಾರಣವನ್ನೂ
ಕಸ್ತೂರಿ, ಗಂಧ ಘಮಲಿನಿಂದ,
ಗುಲಾಬಿ ಮಿಂದ ಪವಿತ್ರ ಜಲದಿಂದ ತೊಳೆಯುವ ಕಾಲ
ಸ್ವರ್ಗಕ್ಕೀಗ ದೇವಾನು ದೇವತೆಗಳು ಬರಲಿದ್ದಾರೆ
ಕಣಿವೆಯ ಪಾಳು ಮನೆಯಲ್ಲಿ
ವಿಧವೆಯರೋ, ತಾಯಿಯರೋ
ಕಣ್ಣೀರ ಕಸೂತಿ ನೇಯುವುದು ಮುಗಿದಿಲ್ಲ
ದೇಶಭಕ್ತರ ಹೆಗಲ ಹೊದ್ದು ಸ್ವರ್ಗ ತಿರುಗಲು;
ಹಂಸವೇ ದೇಹದ ಹಾಲ್ಬಿಳುಪಿನ ಗರಿಯೊಂದ
ಅವರ ಮುಡಿಗಿರಿಸಿ ಪವಿತ್ರಳಾಗು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)