ಬುಧವಾರ, ಡಿಸೆಂಬರ್ 2, 2020
25 °C

ಕವಿತೆ: ಕ್ವಾರಂಟೈನ್

ಸುಬ್ರಾಯ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಪಿಳಿ ಪಿಳಿ ಹೊಳೆವ ಕಣ್ಣುಗಳು
ಸದಾ ಮುಚ್ಚಿರುವ ಕಿಟಿಕಿ ಬಾಗಿಲ ಹಿಂದೆ
ಭಣಗುಡುವ ಏಕಾಂತ.ನಡುವೆ
ತೆರೆದ ಅನಾಥ ಪುಸ್ತಕ ಒಳಗೆ
ಇರುವೆ ಮುತ್ತಿದ ತಿಂಡಿ ತಟ್ಟೆ ಹೊರಗೆ.

ಕಿಟಿಕಿ ಗಾಜಿನ ಆಚೆ
ಮಂಜು ಕವಿದಂತಿರುವ
ಮರ ಬೆಟ್ಟ ಕಣಿವೆಗಳ
ಅಸ್ಪಷ್ಟ ಲೋಕ;
ಪುಟ್ಟ ಮಗುವಿನ ಕ್ಷೀಣ ಅಳು, ನಾಯಿಯ ಬೊಗಳು
ಯಾವುದೋ ಹಕ್ಕಿಯ ಕೂಗು,
ಬೀಸುಗಾಳಿಯ ವಿಚಿತ್ರ ಸದ್ದು,
ಇ಼ಳಿದು ಬಂದಂತೆ ಯಾವುದೋ
ಅಪರಿಚಿತ ಲೋಕದಿಂದ.

ಕಿಟಿಕಿಯ ಸಮೀಪ ಬಂದು ಕುಶಲ ಕೇಳುವ ಹಾಗೆ
ಒಳಗಿಣುಕಿ, ಬರಲಾಗದೆ ಒಳಗೆ
ಚಡಪಡಿಸುವ ಹಕ್ಕಿ:
ಹೊರಹೋಗಲಾಗದೆ ಅಲ್ಲೇ ಉಳಿದ ಜೀವ-
ಇಬ್ಬರಲ್ಲೂ ಕೆರಳಿ ನಿಂತ
ಬಾಯಿಲ್ಲದಭಿಲಾಷೆಗಳ ಮೊತ್ತ.

ಕೆರಳಿ ನಿಂತರೂ ವ್ಯರ್ಥ. ಬಾಗಿ, ಗಾಜನು ಕುಕ್ಕಿ
ಅಲ್ಲಿಂದಲೇ ಸಾಂತ್ವನ ಹೇಳುವ ಹಕ್ಕಿ
ಸಾಕಾರವಾಗದ ಕನಸಿನ ನಡುವೆ
ಬಿಸು ಸುಯ್ಯುತಿರುವ ಒ಼ಳಗಿನಾಕೃತಿ
ಆ ನಿರ್ಮಾನುಷ ಲೋಕದಲ್ಲಿ.

ಸಂಜೆ ಇಳಿದಂತೆ
ಬೆಳದಿಂಗಳ ಜತೆಗೆ ಬಂದ ಚಂದ್ರ
ಇಣುಕಿ ನೋಡುತ್ತಾನೆ ಕಿಟಿಕಿಯೆಡೆಯಿಂದಷ್ಟೆ
ಕನಿಕರದಿಂದ, ಒಳಗೂ ಬೆಳಕು ಹಾಯಿಸಲಾಗದ
ಅಸಹಾಯಕತೆಯಲ್ಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು