ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ಆ ಊರಿನಲ್ಲಿ…

Last Updated 29 ಆಗಸ್ಟ್ 2021, 1:37 IST
ಅಕ್ಷರ ಗಾತ್ರ

ಆ ಊರಿನಲ್ಲಿ…

ನನ್ನಂತಹ ಹೆಂಗಸರು
ಮಾತಾಡುವಂತಿಲ್ಲವಂತೆ!
ಮುಖ ತೋರುವಂತಿಲ್ಲವಂತೆ!!
ಹುಟ್ಟಿದ ತಾಜಾ ಹೆಣ್ಣು ಕೂಸುಗಳು
ದನಿಯೆತ್ತಿ ರೋದಿಸುವಂತಿಲ್ಲವಂತೆ!!!

ಹೇಗೆ ಬಾಳುವುದಲ್ಲಿ ಅವುಡುಗಚ್ಚಿ
ಜೀವಿತ ಪೂರ್ತಿ! ಒಂದು ಸಣ್ಣ ಮೈ
ಗಾಯ ಕಲೆಯಾಗಿ ನೆಪ ಮಾಡಿಕೊಂಡು
ನೋವುಗಳ ನೆನಪು ತೂರಿ ಕಾಡುವಾಗ;
ಬಿಕ್ಕಿ ಬಿಕ್ಕಿ ದುಕ್ಕಡಿಸಿ ಅಳುವ ನನ್ನಂತಹ ಹೆಂಗಸರು… ಅಲ್ಲಿ ಆ ನೆಲದಲ್ಲಿ
ಮೌನವಾಗುಳಿದು ಸಾಧಿಸುವುದೇನು?!

ಚಿಟ್ಟೆ ಹಾರಾಟಕೆ ಹಕ್ಕಿಯುಲಿಗೆ
ಹೂ ಗಂಧಕೆ ಹರಿವ ತೊರೆ ಚೆಂದಕೆ
ಮುದ್ದು ತೊದಲಿಗೆ ಪಿಸು ಒಲವ
ಉಲಿಗೆ- ಎದ್ದೆದ್ದು ಆಗಸದೆತ್ತರ
ಉಬ್ಬಿ ಬೊಬ್ಬೆಯಿಟ್ಟು ಗಹಗಹಿಸುವ
ನನ್ನಂತಹ ಹೆಂಗಸರು ಅಲ್ಲಿನಾ ಮೌನದಲಿ
ಕಾಲ ಕಳೆಯುವುದಿತ್ತು ಹೇಗೆ?

ಹೊತ್ತಗೆ ಮುಟ್ಟುವಂತಿಲ್ಲ! ಹೊತ್ತು
ಹೊತ್ತಿಗೆ ಉಂಡು, ಹೊದ್ದು ಮಲಗಿ
ಎದ್ದು ಪುನಃ ಅದನ್ನೇ ಮಾಡಿಕೊಂಡು
ಅಬ್ಬಬ್ಬಾ..!! ಸಾಕೆನಿಸುವುದಿಲ್ಲವೇ
ಬದುಕು ಎರಡು ದಿನಕೇ..

ಗಂಟಲೊಳಗೇ ಬುಲೆಟ್ಟು ತುರುಕಿ
ಸದ್ದಡಗಿಸಿ, ಯಮನ ಬಾಯೊಳಗೆ
ಬಂಧಿಸಿಬಿಟ್ಟರೆ; ಪರಿಶುದ್ಧ ಚರಿತನ
ಸ್ತುತಿ ಪದಗಳನು ಪಠಿಸುತ್ತಾ ನಮ್ಮಾತ್ಮ
ನಿಲ್ಲುತ್ತಿತ್ತೇ ಸುಮ್ಮಗೇ.. …

ಅಲ್ಲಿ ನಾವು ತಪ್ಪಿ ಹುಟ್ಟಿದ್ದರೆ,
ಸೈತಾನನಿಗೇ ಏನು; ನಿಡುಗಾಲ
ದೈವಕ್ಕೇ ಶಪಿಸುತ್ತಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT