ಮಳೆಯಲಿ ನೆನೆಯುವ ಸುಖ

7

ಮಳೆಯಲಿ ನೆನೆಯುವ ಸುಖ

Published:
Updated:

ಎಲ್ಲ ಮುಗಿಯುವ ವೇಳೆ
ಮಳೆ ಬಂತು
ನಾವಿಬ್ಬರು ನೆನೆಯಲು ಆಗಲಿಲ್ಲ
ನಾನು ಮತ್ತು ಬೀದಿ ನಾಯಿ
ಸಂಪೂರ್ಣ ಒದ್ದೆಯಾದೆವು

ನಿನ್ನ ಕೈಯಲಿ
ಅದೇ ನೀಲಿ ಕೊಡೆ
ಸಂತಾಪ ಸೂಚಿಸುವಂತೆ
ಬೆಂಕಿಯಲಿ ಅದ್ದಿದ ಕಣ್ಣುಗಳು
ಬೀಸುವ ಒದ್ದೆ ಗಾಳಿ

ಮಳೆ ಹನಿಗಿಂತ ವೇಗವಾಗಿ 
ವಿದಾಯದ ಭಾಷಣ 
ಹೇಳಿ ಹೊರಟೆ ನೀನು
ನನಗೆ ಮಾತೇ ಬರಲಿಲ್ಲ
ಸುತ್ತೆಲ್ಲಾ ನೋಡುತ್ತಾ ನಿಂತೆ
ಮಳೆಯನ್ನು ಬಿಟ್ಟು ಹೋಗಲಾಗಲಿಲ್ಲ

ಊರು ತೊರೆದು
ಹೋಗುತ್ತಿರುವ ಬಸ್ಸುಗಳು
ದೂರದ ತಿರುವಿನಲಿ
ಭುಗಿಲೇಳುವ ಸಣ್ಣ ಗುಡುಗು
ಮಳೆಯ ಹೊಡೆತ ತಪ್ಪಿಸಿಕೊಳ್ಳಲು
ಸಂಚಾರಿ ಜನರ ಪರದಾಟ, ಆಹ್!...

ಎಂದಾದರೂ ನೀ ಒಮ್ಮೆ
ಕೊಡೆ ಮರೆತು ಬರಬಾರದೇ
ಮಳೆಗೆ ಎಲ್ಲಾ ನೆನೆಪಿಸುವ
ತಾಳ್ಮೆಯಿದೆ 
ಹಾಗೆ ಮರೆಸುವ ಜಾಣ್ಮೆಯೂ

ಶಶಿ ತರೀಕೆರೆ

***

ಬೇರೆ ದಾರಿಗಳಿಲ್ಲ

ಪ್ರೀತಿಯ ಮೈಖಾನೆಯಲಿ ಅಪರಿಚಿತರು ಇರುವುದಿಲ್ಲ
ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ

ತುಟಿಯಿಂದ ತುಟಿಗೆ ಜಾರುವ ಮಧುಬಟ್ಟಲುಗಳಿರುವುದಿಲ್ಲಿ
ಅಮೃತ ಕುಡಿದು ವಿಷಕಾರುವ ಶರಾಬುಗಳು ಇರುವುದಿಲ್ಲ

ಪ್ರೀತಿ ಚೆಲ್ಲಿ ವೈರಾಗ್ಯ ಅಳಿಸುವ ಸಾಕಿಗಳು ಇರುವರಿಲ್ಲಿ
ವಿಶ್ವಾಸಗಳಿಗೆ ಬೆಲೆಕಟ್ಟುವ ವ್ಯಾಪಾರಿಗಳು ಇರುವುದಿಲ್ಲ

ಪೂರ್ತಿ ಮೈಖಾನೆಯನು ನೀ ಕುಡಿದರು ಚಿಂತೆಯಿಲ್ಲ ಅವಿವೇಕಿ
ಇಲ್ಲಿ ರಸೀದಿಗಳು ಹರಿಯುವ ರಿವಾಜುಗಳು ಇರುವುದಿಲ್ಲ

ದ್ವೇಷ ಕಾರುವ ಬೀಗದ ಕೈಗಳು ಕಳೆದು ಹೋಗಿವೆ ಇಲ್ಲಿ
ಇಲ್ಲಿ ಯಾರಿಂದಲೂ ಸೇಡಿನ ಬಂಧನಗಳು ಇರುವುದಿಲ್ಲ

ಎಲ್ಲವನೂ ಬಿಟ್ಟು ಬಾ ಒಮ್ಮೆ ಮಧುಶಾಲೆಗೆ ಇಲ್ಲಿ
ಮನುಷ್ಯರನು ವರ್ಗಿಸುವ ಜಾತಿಧರ್ಮಗಳು ಇರುವುದಿಲ್ಲ

ಮಾನವೀಯ ಹೂಗಳಿಂದ ಶೃಂಗಾರಗೊಂಡಿವೆ ಗೋಡೆಗಳಿಲ್ಲಿ
ಇವುಗಳನು ಉರುಳಿಸುವ ಜಗದಲಿ ಬಂದೂಕುಗಳು ಇರುವುದಿಲ್ಲ.

ಮಧುಬಟ್ಟಲು ಎತ್ತಿದ ಶರಾಬಿಯ ತಪ್ಪೇನಿದೆ ಸಾಕಿ ಇಲ್ಲಿ
ನಶೆ ಘರ್ಜಿಸುವ ಧ್ವನಿಗೆ ಯಾರ ಶಿಕಾಯತ್ತುಗಳು ಇರುವುದಿಲ್ಲ

ಮುಳ್ಳಿನ ಹಾಸಿಗೆಗೆ ಅಂಟಿದ ಹೂಗಳಿವೆ ಇಲ್ಲಿ ‘ಉಮರ್’
ಜಿಗಿದು ಬರಲು ಇಲ್ಲಿ ಬೇರೆ ದಾರಿಗಳು ಇರುವುದಿಲ್ಲ

ಉಮರ್ ದೇವರಮನಿ ಮಾನ್ವಿ

ಮಯೂರ: ಜೂನ್, 2018ರ ಸಂಚಿಕೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !