ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂದ್ ಪಾಷ ಎನ್.ಎಸ್ ಅವರ ಕವಿತೆ | ಅವಳೆಂದರೆ ವಿಪರೀತ ಚಳಿಗಾಲ!

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ಕಂಬಳಿಯ ಹೊದ್ದು ಮಲಗಿದ ನಕ್ಷತ್ರಗಳಿಗೂ ನೆಗಡಿಯಾಗಿದೆ,
ನಡು ರಾತ್ರಿಯಲಿ ಸೂರ್ಯ ಉದಯಿಸಿದ ಕನಸು ಬಿದ್ದಿದೆಯಂತೆ ಚಂದ್ರನಿಗೆ,
ಆಕಾಶದ ತುಂಬಾ ಮಂಜಿನ ಹನಿಗಳು ಮೌನರಾಗ ಹಾಡುವಾಗ,
ಅಪ್ಪುಗೆಯ ಅವಸರದಲಿ ತೋಳುಗಳು ತೆರೆದುಕೊಂಡಾಗ, ತಂಗಾಳಿ ಬಂದಿತು.
ಅವಳೆಂದರೆ ವಿಪರೀತ ಚಳಿಗಾಲ

ಹೊದಿಕೆ ಹೊದ್ದ ಹೂವಿಗೂ ಮೈ ನಡುಗುವ ಚಳಿ
ಘಮಲಿಗೂ ಸ್ವೆಟರ್ ಬೇಕಿತ್ತು.
ಕೆಂಡದ ಕುಲುಮೆಯಂತ ತುಟಿಯೂ ಕೂಡ ತಣ್ಣೀರಿನ ಕೊಳವಾಗಿದೆ.
ತಿಳಿ ಮುಗಿಲ ತುಂಬಾ ತಿಳಿಗೇಡಿ ಮಳೆಹನಿ,
ಚಳಿ ಹೆರುವ ಕಾರ್ಖಾನೆಯಾಯಿತೇ ಭೂಮಿ!
ಆ ಭೂಮಿ ತೂಕದ ಕನಸ ಹೊತ್ತ,
ಅವಳೆಂದರೆ ವಿಪರೀತ ಚಳಿಗಾಲ!

ನಡುಗುವ ನಡುರಾತ್ರಿಗಳೆಲ್ಲ ಬಿಸಿಲೂರಲಿ ಬೀಡು ಬಿಟ್ಟಿರುವಾಗ,
ಕಣ್ಣ ಕಂದಿಲ್ಲಿಂದ ಸಣ್ಣ ಕಿಡಿಯಾದರೂ ಹಾರಿಸು,
ಉಜ್ಜಿದ ಕೈಗಳಿಂದ ಬಿಸಿ ಶಾಖದ ಶಾಖೆಯೊಂದು ಹುಟ್ಟಿ,
ಕಿಡಿಗೇಡಿಗಳ ಮೈಯೊಳಗೆ ಜ್ವಾಲೆಯೊಂದು ಜೀವಿಸಲಿ
ಬೆಂಕಿ ಹೊತ್ತು ಸನಿಹ ಬಂದರೂ ಕೂಡ,
ನೀರ ಮೈಯವಳಾದ,
ಅವಳೆಂದರೆ ವಿಪರೀತ ಚಳಿಗಾಲ!

ಕಾದ ಕನ್ನಡಿಯ ತುಂಬಾ ಬಿಸಿ ಬೇನೆಗಳ ಬಿಂಬ
ತುಸು ಬಂದು ಮುಖ ತೋರಿಸಿ ಹೋಗು,
ಚಂದ್ರನೆದೆಯ ಕಾದ ಕಾವಲಿಯ ಮೇಲೆ ಅಮಲೇರುವ ಅಮವಾಸ್ಯೆಯ ಚೆಲ್ಲಿ ಹೋಗು.
ಇರುಳುಗಳ ಇತಿಹಾಸ ತೀರಾ ತ್ರಾಸದಾಯ ನಿನ್ನ ಹೊರತು,
ಮೈ ಮರೆತಾದರೆ ಮುತ್ತಿಟ್ಟು ಬಿಡು ಚಳಿಯು ಚದುರಿ ಹೋಗುವ ಹಾಗೆ,
ಆದರೂ, ಅವಳೆಂದರೆ ವಿಪರೀತ ಚಳಿಗಾಲ!

ಸಿಗುವ ಮೊದಲು ಚಳಿಗಿಷ್ಟು ಚರಿತ್ರೆ ಇರಲಿಲ್ಲ
ಪುಟಗಳ ತುಂಬಾ ನಡುಗುವ ಅಕ್ಷರಕ್ಕೆ ಚೂರು ಬಿಸಿ ತಾಕಿಸು,
ಹೊದಿಕೆ ಹೊದ್ದು ಮಲಗಿದ ಯೌವ್ವನಕ್ಕೆ ಒಂದಿಷ್ಟು ತುಟಿ ಸೋಕಿಸು.
ಕಿಡಿಕಾರದ ಕಿಡಿಗೇಡಿ ನೀನು, ಮಂಜು ಹೊತ್ತು ಬಂದ ಹಿಮಗಿರಿಯ ಹಿರಿಮಗಳು.
ಅವಳೆಂದರೆ ವಿಪರೀತ ಚಳಿಗಾಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT