ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಕವಿತೆ: ಸೆಲೂನಿನಲ್ಲಿ ಎಂಕ

ಅಕ್ಷರ ಗಾತ್ರ

ಮೊನ್ನೆ ನಮ್ಮೂರ ಎಂಕ
ಹೋಗಿ ಸೆಲೂನಿಗೆ
ಕುಳಿತ ನಿರುಮ್ಮಳನಾಗಿ ಯಾವತ್ತಿನಂತೆ
ಕ್ಷೌರಿಕನ ಹಸಿದ ಕತ್ತರಿಗೆ ತಲೆ-
ಕೊಡುವುದಕ್ಕೆ ಸಿದ್ಧನಾಗಿ

ತಕ್ಷಣವೇ ಪ್ರತ್ಯಕ್ಷ
ಭಾವೀ ಎಮ್ಮೆಲ್ಯೆ ಅಭ್ಯರ್ಥಿ
ಸನ್ಮಾನ್ಯ ಶ್ರೀಯುತ ನರಸಿಂಗಪ್ಪನವರು!
ಬಾವಿಯಿಂದೆದ್ದ ನಗುಮುಖದ ಭೂತದಂತೆ
ಅವರವತರಿಸಿದ ಬಗೆ
ಮೂಡಿಸಿತು ಎಂಕ ಮತ್ತು ಕ್ಷೌರಿಕನಲ್ಲಿ
ಚಣವೊತ್ತಿನ ವಿಸ್ಮಯ

ಏನು ವಿನಯ! ಎಂಥಾ ಆತ್ಮೀಯತೆ!
ಆ ನಗುಮುಖ ನೋಡುವಾಗಲೇ ತಿಳಿಯುತ್ತದೆ
ಅವರು ಬಹಳಾಸಭ್ಯರೆಂದು
ಎಂಕನ ಕಾಲುಮುಟ್ಟಿ ನಮಸ್ಕರಿಸಿದವರು
‘ನಿನ್ನ ಸೇವೆ ಮಾಡುವ ಭಾಗ್ಯ ನನ್ನದಾಗಿರಲಿ’
ಎಂದು ಹಿತವಾಗಿ ನುಡಿದು
ಕತ್ತರಿ- ಬಾಚಣಿಗೆ ಹಿಡಿದು
ಎಂಕನ ಹೇರ್ ಕಟ್ಟಿಂಗ್ ಗೆ
ಸಿದ್ಧರಾಗೇಬಿಟ್ಟರು

ತನಗೊಂದಿಷ್ಟು ವಿರಾಮ ಸಿಕ್ಕಿತು
ಎಂದು ಹಿಗ್ಗಿದ ಕ್ಷೌರಿಕ
ಮೂಲೆಯ ಮುರುಕು ಕುರ್ಚಿಯಲ್ಲಿ
ಸುಖಾಸೀನನಾಗಿ
ಇನ್ನೂ ಕೈ ಕೊಡದ ಪ್ರಿಯತಮೆಯನ್ನು
ಕಣ್ಣೊಳಗೆ ತಂದುಕೊಂಡು
ಗೊರಕೆ ಹೊಡೆಯತೊಡಗಿದ

‘ನಿನಗೆ ಅಂಬಾನಿ ಕಟ್ಟಿಂಗ್ ಮಾಡುತ್ತೇನೆ’
ನರಸಿಂಗಪ್ಪನವರ ನಗುಮೊಗದ ಮಾತು ಕೇಳಿ ಎಂಕ
ತಾನು ಅಂಬಾನಿಯೇ ಆದೆ ಎಂದುಕೊಂಡು
ಕೌರವನನ್ನು ಕೊಂದ ವೃಕೋದರನಂತೆ ಉಬ್ಬಿದ
ತನ್ನ ತಲೆಯ ಹೊಣೆಯನ್ನೆಲ್ಲಾ ತನ್ನೆದುರಿಗಿದ್ದ
ಮಹಾದೊರೆಗೆ ಒಪ್ಪಿಸಿ,
ಮೊದಲಿಗಿಂತಲೂ ನಿರಾಳನಾಗಿ ಕುಳಿತುಬಿಟ್ಟ

ನರಸಿಂಗಪ್ಪನವರ ಕೈಯ್ಯ ಕತ್ತರಿ
ಎಂಕನ ತಲೆತುಂಬ ಓಡಾಡಿತು
ರೇಜ಼ರ್ ಕೂಡಾ ಅಷ್ಟೇ ಚುರುಕಾಗಿ ಚಲಿಸಿದ್ದು
ಬಡಪಾಯಿ ಎಂಕನಿಗೆ ತಿಳಿಯಲೇ ಇಲ್ಲ

‘ನೋಡು ನೀನೀಗ ಅಂಬಾನಿಯಾಗಿದ್ದೀಯ’
ಎಂದು ನಗುತ್ತಲೇ ನರಸಿಂಗಪ್ಪ
ಎಂಕನ ಮುಖಕ್ಕೆ ಅಭಿಮುಖವಾಗಿ
ಮಾಯಾ ಕನ್ನಡಿಯೊಂದನ್ನು ಹಿಡಿದರು
ಆಶ್ಚರ್ಯ! ಪರಮಾಶ್ಚರ್ಯ!
ಎಂಕನ ಬೋಳು ತಲೆ
ಆ ಮಾಯಾ ಕನ್ನಡಿಯಲ್ಲಿ
ಅಂಬಾನಿ ಕಟ್ಟಿಂಗ್ ಮಾಡಿಸಿಕೊಂಡು
ಮೊದಲಿಗಿಂತ ಆಕರ್ಷಕವಾಗಿತ್ತು

‘ನಿನ್ನ ನೆನಪಿಗಾಗಿ ಇದನ್ನಾದರೂ ಕೊಡೋ’
ಎಂದು ಎಂಕನ ಕೈ ಬೆರಳನ್ನು
ನೋವೇ ಆಗದಂತೆ ಕತ್ತರಿಸಿ ತೆಗೆದುಕೊಂಡ
ಮಾನ್ಯ ನರಸಿಂಗಪ್ಪನವರು ಹೊರಟೇಬಿಟ್ಟರು
ಹೆಮ್ಮೆಯಿಂದ ಕೈಬೀಸುತ್ತಾ

ಬೆರಳೇ ಇಲ್ಲದ್ದರಿಂದ
ಮುಂಬರುವ ಚುನಾವಣೆಯಲ್ಲಿ
ಮತ ಚಲಾಯಿಸುವ
ಕಷ್ಟವೂ ತಪ್ಪಿಹೋದದ್ದಕ್ಕೆ
ಭಲೇ ಖುಷಿಗೊಂಡ ಎಂಕ
ನಗುನಗುತ್ತಲೇ ಹೊರಟ
ತನ್ನ ಮನೆಯ ಕಡೆಗೆ
ತಲೆ ಬೋಳಾದುದರ
ಅರಿವೇ ಇಲ್ಲದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT