ಹಾದುಹೋದೆ ಹೀಗೇ ಯಾವುದೋ ಕೆಲಸದ ಮೇಲೆ
ನಗರದ ಕಿಕ್ಕಿರಿದೊಂದು ಓಣಿಯಲ್ಲಿ.
ಬಾರೊಂದರ ಬದಿಯ ಪೆಟ್ಟಿಗೆಯಂಗಡಿಯಲ್ಲಿ ಕೇಳಿದೆ
ಒಂದು ಪ್ಯಾಕ್ ಸಿಗರೇಟಿಗಾಗಿ.
ದುಡ್ಡೇನೊ ಕೊಟ್ಟೆ, ಆದರೆ ಧಾವಂತದಲ್ಲಿ
ಪ್ಯಾಕ್ ಇಸಿದುಕೊಳ್ಳಲು ಮರೆತುಬಿಟ್ಟೆ.
ಅದು ನೆನಪಾದದ್ದು ಮನೆಗೆ ಹಿಂತಿರುಗಿದ ಮೇಲೆ
ಸಂಜೆ ಸಿಗರೇಟಿನ ವೇಳೆಗೆ.
ನನ್ನ ಮರೆಗುಳಿತನಕ್ಕೆ ನನ್ನನ್ನೇ ಹಳಿದುಕೊಂಡೆ.
ಹೋದರೆ ಹೋಯ್ತು, ಸಣ್ಣ ಮೊತ್ತ.
ಹತ್ತಿರದ ಅಂಗಡಿಗೆ ಹೋಗಿ ಸಿಗರೇಟು ಕೊಂಡುತಂದೆ.
ಅದನ್ನು ಬಿಡಲಿಕ್ಕಾಗುತ್ತಾ?
ಮರುದಿನ, ನೋಡೋಣವೆಂದು ಅದೇ ಆ ಓಣಿಯಲ್ಲಿ
ಹಾದುಹೋದೆ, ಕೆಲಸವಿರದಿದ್ದರೂ.
ಅದೇ ಪೆಟ್ಟಿಗೆಯಂಗಡಿಯ ಅದೇ ಗೊತ್ತಿರದ ಹುಡುಗ
ತಾನೇ ಕರೆದ, ‘ಸಾರ್, ಬನ್ನಿ’ ಎಂದು.
‘ಮರೆತುಬಿಟ್ರಾ?’ ನಕ್ಕ, ಪ್ಯಾಕ್ ಎತ್ತಿಕೊಟ್ಟ,
ಉಳಿದ ಚಿಲ್ಲರೆಯ ಜೊತೆಗೆ.
‘ಥ್ಯಾಂಕ್ಸ್’ ಎಂದು ಕೈ ಕುಲುಕಿ ಹಿಂತಿರುಗಿದೆ,
ಅಂದು ಗೆಲುವಾಗಿತ್ತು ಮನಸು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.