ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪು.ಸೂ.ಲಕ್ಷ್ಮೀನಾರಾಯಣ ರಾವ್ ಬರೆದ ಕವಿತೆ: ಬುದ್ಧಗುರುವೆ

Last Updated 30 ಜುಲೈ 2022, 19:30 IST
ಅಕ್ಷರ ಗಾತ್ರ

ನಿನ್ನ ನೆನೆದರೆ, ನಾನು ಒರಟು ಶಿಲೆಯೆನಿಸುತ್ತದೆ
ಒಳಗೊಳಗೆ ಅಳುಕು ಅಲುಗಾಡಿ ನಾಚುತ್ತೇನೆ
ಹೇಗೆ ಸಾಧ್ಯವಾಯಿತು ನಿನಗೆ ಆ ಪ್ರೀತಿ, ಆ ಶಾಂತಿ?
ಹೀಗೆ ಈಗಿನ ಹಾಗೆ ಇರಲಿಲ್ಲವೆ ಆ ನಿನ್ನ ಕಾಲ?
ಇಲ್ಲ ಇದ್ದಿರಲಾರದು ಈ ಹೊಗೆ, ಈ ಹಗೆ, ಈ ದಗೆ
ನಂಬಿಸಿ ಕರುಳ ಕೊರಳ ಕೊಯ್ವ ಸ್ವಾರ್ಥದ ಈ ಬಗೆ
ಪುರುಷೋತ್ತಮ ರಾಮನೂ ದಾಳವಾಗುತ್ತಾನೆ ಇಲ್ಲಿ
ಶಕುನಿ ಸತ್ಯ ಹರಿಶ್ಚಂದ್ರನ ಅಪರಾವತಾರವಾಗುತ್ತಾನೆ
ಬೀದಿ ಬೀದಿಗಳಲ್ಲಿ, ಸಂದುಗೊಂದುಗಳಲ್ಲಿ ಅವನದೆ ಭಜನೆ
ಚಪ್ಪಾಳೆ, ಕೇಕೆ, ಜ್ಯೋತಿ, ಜಾಗಟೆ, ಶಂಖ, ಪಂಡಿತರ ಪರಾಕು!
ಕೆಸರ ಕಾಸಾರ, ಕಣ್ಣು ಕುರುಡಾಗಿಸುವ ಜವುಗು ಜೊಂಡು

ಬುದ್ಧ ನಿನ್ನ ನೆನೆದಾಗಲೆಲ್ಲ ಮಾತಿಲ್ಲದಾಗುತ್ತೇನೆ
ಬೆಕ್ಕಸ ಬೆರಗಾಗಿ ಮರುಳನಂತೆ ಬೆದಕಾಡುತ್ತೇನೆ
ಅದು ಹೇಗೆ ಅರಳಿತು ನಿನ್ನಲ್ಲಿ ಆ ಸಹನೆ, ಆ ದಯೆ?
ತುಂಬಿ ತುಳುಕಾಡುತ್ತಿದೆ ಇಲ್ಲಿ ಈಗಲೂ ದುಃಖ ದುಮ್ಮಾನ
ಬೆವರಿಗೆ ಬೆಲೆಯಿಲ್ಲ, ಧರ್ಮಾಂಧತೆಗೆ ಎಣೆಯಿಲ್ಲ,
ಬೂಟಾಟಿಕೆಯ ದೇಶಭಕ್ತಿ, ಮನೆಮನೆಯಲೂ ಧ್ವಜಾರೋಹಣ
ನೀ ತಡೆದ ಯಜ್ಞ ಯಾಗಗಳು ವಿಜೃಂಭಿಸುತ್ತಿವೆ
ನಿನ್ನ ಅಹಿಂಸೆ ಧ್ವನಿವರ್ಧಕಗಳಲಿ ಅನುರಣಿಸುತ್ತಿದೆ!
ಭಾರತದ ಪರಂಪರೆಯ ಶಂಖವಾದ್ಯ ಮೊಳಗುತ್ತಿದೆ
ಮಾನವತೆಯ ಮಳೆ ಬಾರದುದಾಗಿದೆ ಈ ಭರತ ಭೂಮಿಗೆ
ಸಹೃದಯತೆಯ ಆ ನಿನ್ನ ಮಂದಹಾಸ ಮೊಳೆದೀತು ಹೇಗೆ!
‘ತನ್ನಂತೆ ಪರರ ಬಗೆದು’ ಸಿದ್ಧಾರ್ಥ ನೀನಾದೆ ಬುದ್ಧ
ಬೋಧಿ ಬಿಂದುವಿನಿಂದ ಜಗಕೆಲ್ಲ ಹರಡಿತು ಪ್ರೇಮ ಸುಗಂಧ!
ಅಂದು, ಈ ಸೃಷ್ಟಿ ಆರಂಭದಂದು
ದೇವರುಗಳೆಲ್ಲ ಸೇರಿ ಮಾಡಿದರಂತೆ ಮಹದ್ಯಜ್ಞ
‘ಪುರುಷ’ಪಶುವನ್ನೆ ಕಟ್ಟಿದರಂತೆ ಬಲಿಗಂಬಕ್ಕೆ
ಹೋಮಿಸಿದರು ವಸಂತ, ಗ್ರೀಷ್ಮ, ಶರದೃತುಗಳನ್ನೆ
ಸೃಷ್ಟಿಯಾಯಿತಂತೆ ಆಗ ಈ ವಿಸ್ಮಯದ ಬ್ರಹ್ಮಾಂಡ
‘ಪುರುಷ ಸೂಕ್ತ’ ಹಾಡುತ್ತದೆ ಹಾಗೆಂದು
ಬಲಿಷ್ಠರುಗಳು ಸೇರಿ ಹೂಡಿದ್ದಾರೆ ಇಂದು ರಹಸ್ಯ ಯಜ್ಞ
ಬಿಗಿಯಲಾಗಿದೆ ಯೂಪಸ್ತಂಭಕ್ಕೆ ಮನುಷ್ಯತ್ವವನ್ನೆ
ಹೋಮಿಸುತ್ತಿದ್ದಾರೆ ಸಹಿಷ್ಣುತೆ, ಸತ್ಯ, ಪ್ರೇಮ, ಅಹಿಂಸೆಗಳನ್ನೆ
ಹೇಳು, ಬುದ್ಧದೇವ ಇದು ಲಯದ ಪೀಠಿಕೆಯೆ?
ಬರಲೇಬೇಕು ನೀನೀಗ ಎಂದು ಹಂಬಲಿಸುತ್ತಿದೆ ಮನ

ಆದರೆ ...
ಮರಳಿ ಬಾರದಿರು ತಂದೆ ಈ ಕಡೆಗೆ
ಹೇಗೋ ಬದುಕಿ ಸಾಯುತ್ತೇವೆ ನಾವು ಹೀಗೆಯೇ ಇಲ್ಲಿ
ಹಾದಿ ತಪ್ಪಿ ಬಂದೆಯಾದರೆ ನೀನು ನಮ್ಮೀ ಮನೆಗೆ
‘ದೇಶದ್ರೋಹಿ’, ಎಂದು ತಳ್ಳುವರು ನಿನ್ನನೂ ಒಳಗೆ !

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT