ಶುಕ್ರವಾರ, ಜುಲೈ 1, 2022
28 °C

ಕವಿತೆ: ಜ್ಞಾನೋದಯದ ಹಾದಿ

ನಾ ದಿವಾಕರ Updated:

ಅಕ್ಷರ ಗಾತ್ರ : | |

Prajavani

ದಶದಿಕ್ಕಿನ ಮಳೆ ತೊಪ್ಪೆಯಾದ
ಸೂರ್ಯ ಅಮಾಸೆಯ
ಬಿಂಬವಾಗಿಬಿಟ್ಟ,,,ನೆಲದೊಡಲ
ಶಾಖ ಬಾನಗಲದ ತಂಪು
ಕಗ್ಗತ್ತಲ ಏಕಾಂತದಲೂ ಆ
ಕಂಗಳಲಿ ಕೆಂಡ
ಸುಡುವಾಸ್ತವಗಳ ಬೂದಿಯಲಿ
ಸಿಡಿಸಿಡಿವ ನಿಟ್ಟುಸಿರು
ಎತ್ತ ಸಾಗಿರುವೆ ಬಲ್ಲೆಯಾ ?

ಅಲ್ಲೊಂದು ಸದ್ದು ಇತ್ತ
ಕಿವಿಗಡಚಿಕ್ಕುವ ಅಬ್ಬರ ಎತ್ತಣದೋ ಮೇಳ
ಮೆರವಣಿಗೆ ಮುಷ್ಕರ ಧಿಕ್ಕಾರಗಳ
ಸಾಗರ ಬರಿಗಾಲಿನ ಬೊಬ್ಬೆಗಳಿಗೆ
ಬೂಟುಕಾಲಿನ ಸಪ್ಪಳ
ಮನ ಸುಟ್ಟ ಹಪ್ಪಳ; ಚಾವಣಿಯಲಿ
ಹರವಿದ ಉಡುಪು ಮುಂಜಾವಿಗೆ
ನೆಲವಸ್ತ್ರ,,, ಹಸಿದ ಕಂಗಳ
ನೋಟ ಹಕ್ಕಿ ಗೂಡಿನಲಿ
ಲೀನ ಹಸಿದ ಕಂದನ ಕೂಗಿಗೆ
ಬೆನ್ನು ತಿರುಗಿಸಿದ ಲೋಕ
ಎತ್ತ ಸಾಗಿರುವೆ ಬಲ್ಲೆಯಾ ?

ಹಟ್ಟಿಯೊಳಗಿನ ರೊಟ್ಟಿ ಪುಟ್ಟ ಗೂಡಿನ
ತಡಿಕೆ ಎರಡೂ ಒಟ್ಟಿಗೇ,,,,
ಕಮಟು ತೊಗಲಿನದೋ ತಟ್ಟಿದ
ಹಿಟ್ಟಿನದೋ ತಾಯಿ ಮೂಕಳಾಗಿದ್ದಾಳೆ
ತೋರಣವಾಗಿದೆ ಸುಟ್ಟೆಲುಬು
ನೆಲಹಾಸಿನ ತುಂಬ ರಟ್ಟೆಗಳ ತುಣುಕು ;
ಕೇಕೆಯ ಸದ್ದಿಲ್ಲ ಎಳೆಗಂದನ ಸುಳಿವಿಲ್ಲ
ಸರಹದ್ದಿನಾಚೆ ಕೇಕುಗಳ ಚಾರಣ
ಅಜಾನು ಭಜನೆ ಸುಪ್ರಭಾತಗಳ
ಹರಿವಿನಲಿ ಸದ್ದು ಮಾಡದ ದೈವ
ಎತ್ತ ಸಾಗಿರುವೆ ಬಲ್ಲೆಯಾ?

ಮಡಿಲಿಗೊಮ್ಮೆ ಕಿವಿಯಾನಿಸು
ಅಮ್ಮನಿರಬಹುದು ಹೆತ್ತವಳಲ್ಲದಿರೇನು
ಹೊತ್ತವಳಾಗಿರಬಹುದು,,,,ಧಗಧಗಿಸುವ
ಒಡಲ ಚೂರುಗಳ ಹೆಕ್ಕಲಾರಂಭಿಸು
ಎಡತಾಕಬಹುದು ಕಳೆದುದೆಲ್ಲವೂ ;
ಬೆಸೆದುದನೆಸೆದು ಕಸಿಯಾಗುವುದೇಕೆ
ವಿಷದೊಡನೆ,,, ಒಳಲೆಯಲುಣಿಸಿದ್ದು
ಹಾಲಲ್ಲವೇ ಅಮ್ಮ? ಅದೋ
ಧಾವಿಸುತಿಹರು ಹಾಲಾಹಲದೊಡೆಯರು
ದಹಿಸುವುದನೊಮ್ಮೆ ಕೆದಕಿಬಿಡು
ಕರುಳ ಬಳ್ಳಿಗಳ ಸಿಕ್ಕುಗಳಲಿ
ಸವೆದ ಹೆಜ್ಜೆಗಳಿರಬಹುದು
ಎತ್ತ ಸಾಗಿರುವೆ ಬಲ್ಲೆಯಾ?

ಬಲ್ಲೆಯಾದರೆ ಹಿಂದಿರುಗಿಬಿಡು
ಅಲ್ಲೊಂದು ಲೋಕ
ಮೌನ ವೃಕ್ಷದಡಿ ಸಸ್ಯಗಳಿವೆ
ಉಸಿರ ಹಂಚಲಿವೆ ಹಸಿರೊಡಲ
ಪೊರೆಯಲು
ಮನುಜ ಮನ ತೆರೆಯಲು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು