ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಕವಿತೆ: ಆಗಿ ಹೋಗುವುದು

ವಸುಂಧರಾ ಕದಲೂರು Updated:

ಅಕ್ಷರ ಗಾತ್ರ : | |

Prajavani

ಈ ಲೋಕಕ್ಕೆ ಬಂದು
ಹೋಗುವುದೆಂದರೆ...

ಒಲೆ ಉರಿ ತಾಗಿ ಕಾದ ಬಿಸಿ
ಮಡಕೆಯೊಳಗಿನ ಕುದಿ
ನೀರಿಗೆ ಬಿದ್ದ ಅಕ್ಕಿ ಕಾಳಂತೆ
ಬೆಂದು ಮೆತ್ತಗಾಗುವುದು
ಹಸಿದವರ ಹೊಟ್ಟೆಯ
ತುತ್ತಾಗುವುದು ಕೆಲವೊಮ್ಮೆ
ವ್ಯಂಜನವೆಂದು ಮೆಲುಕಾಡುವವರ
ಬಾಯಿಗೆ ಸಿಕ್ಕಿ ನುಜ್ಜಾಗುವುದು

ಈ ಲೋಕಕ್ಕೆ ಬಂದೂ
ಸುಮ್ಮಗುಳಿಯುವುದೆಂದರೆ..

ಗಂಧದ ಕೊರಡು ತೇದಂತೆ
ನವೆದು ಘಮಲು ಬಿಡುವುದು
ಕಾಡುಮಲ್ಲಿಗೆ ಉದುರಿ ಹೋದಂತೆ
ಒಣಗುವುದು ಕಡು ಕಂಪಿನ ಸಂಪಿಗೆ
ಯಾಗಿ ಸುಖ ಕೊಡುವುದು ಇಲ್ಲವೇ
ತಾಳೆ ಹೂವಾಗಿ ವಿಷದ ಹಾವಿನ
ಹೆಡೆಯ ಆಶ್ರಯದಲಿ ಉಳಿಯುವುದು

ಈ ಲೋಕಕ್ಕೆ ಬಂದೂ
ನಮ್ಮಂತೆ ಆಗಿ ಹೋಗುವುದೆಂದರೆ...

ಸದಾ ಪೂರ್ವನೆಲೆಯ ಕೆಂಪಿಗನಂತೆ
ಹಾದಿ ತಪ್ಪದ ನಡೆಯಾಗಿ, ಶಶಿಯುದರದ
ಬೆಳಕಾಗಿ, ತಿರುವುತ್ತಾ ತಿರುವುತ್ತಾ
ಬೆಟ್ಟಗುಡ್ಡ ಉದುರಿಸದೇ ಕಡಲ ನೀರು
ತುಳುಕಿಸದೇ ದುಂಡಾಗಿ ಬದುಕುಳಿವ
ಭುವಿಯ ಪಾಲಿನ ಭಾರವಾಗಿ ಕೊನೆಗೊಮ್ಮೆ
ಬೂದಿಯೋ ಮಣ್ಣೋ ಅಂತೆ ಹಗುರಾಗಿ
ಒಂದಾಗಿ ಆಗಿಹೋಗುವುದು..

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು