ಮಂಗಳವಾರ, ಡಿಸೆಂಬರ್ 10, 2019
26 °C

ಪ್ರತಿಮಾ ರಾಜಕೀಯ

Published:
Updated:
Deccan Herald

ಪ್ರತಿಮೆಗಳು ತಮ್ಮದೇ ಆದ ಭಾಷೆಯಲ್ಲಿ ಒಂದು ಕಥನವನ್ನು ನಿರೂಪಿಸುತ್ತವೆ. ಅಂದರೆ ಯಾವುದೇ ಪ್ರತಿಮೆಗೆ ತನ್ನದೇ ಆದ ಅರ್ಥವಿರುವುದಿಲ್ಲ. ಆಯಾ ಕಾಲದ ರಾಜಕೀಯ, ಸಂಸ್ಕೃತಿ ಹಾಗೂ ಧರ್ಮಗಳ ಹಿನ್ನೆಲೆಯಲ್ಲಿ ಅವುಗಳಿಗೆ ಒಂದು ವ್ಯಾಖ್ಯಾನ ಅಥವಾ ಅರ್ಥ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ ಬೆಂಗಳೂರಿನ ಉಚ್ಚ ನ್ಯಾಯಾಲಯ ಸಮುಚ್ಚಯದ (ಅದಕ್ಕೆ ಹಿಂದೆ ಅಠಾರಾ ಕಚೇರಿ ಎಂದು ಹೆಸರು) ಪ್ರವೇಶದ್ವಾರದಲ್ಲಿನ ಮಾರ್ಕ್‌ ಕಬ್ಬನ್ ಪ್ರತಿಮೆ ಒಂದು ಕಾಲಕ್ಕೆ ಬ್ರಿಟಿಷ್ ವಸಾಹತುಶಾಹಿಯ ಸಂಕೇತವೂ ಆಗಿತ್ತು.

ಹಾಗೆಯೇ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಯತ್ನಿಸಿದ ಒಬ್ಬ ಜನಪ್ರಿಯ ಅಧಿಕಾರಿಯ ನೆನಪೂ ಆಗಿತ್ತು. ಆದರೆ ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಲಯದ ವಕೀಲರು ಈ ವಸಾಹತುಶಾಹಿ ‘ವಿದೇಶಿ’ ಪ್ರತಿಮೆಯನ್ನು ಅಲ್ಲಿಂದ ತೆಗೆದು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಬೇರೆ ಪ್ರತಿಮೆ ಇಡಬಹುದೆಂದು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದರು. ಅಂದರೆ ಅದೇ ಕಬ್ಬನ್ ಪ್ರತಿಮೆಯು ಈಗ ವಸಾಹತು ವಿರೋಧಿ ಮತ್ತು ಕನ್ನಡ ಉಪರಾಷ್ಟ್ರೀಯತೆಯ ಕಥನಗಳಲ್ಲಿ ಬೇರೆಯ ವ್ಯಾಖ್ಯಾನ ಪಡೆದುಕೊಂಡಿತು. ಕರ್ನಾಟಕ ಉಚ್ಚ ನ್ಯಾಯಾಲದ ಎಲ್ಲಾ ವ್ಯವಹಾರಗಳ ಭಾಷೆ ಕನ್ನಡವಾಗಿದೆಯೇ ಎನ್ನುವುದನ್ನು ಈ ವಕೀಲರು ಹೇಳಲಿಲ್ಲ. ಏಕೆಂದರೆ ಪ್ರತಿಮೆಗಳ ರಾಜಕೀಯದಲ್ಲಿ ಯಾವುವೂ ತರ್ಕಬದ್ಧವಾಗಿರುವುದಿಲ್ಲ.

ಅಂಬೇಡ್ಕರ್ ಹಾಗೂ ನೆಹರೂ ಬಯಸಿದ್ದ ಪ್ರಜಾಪ್ರಭುತ್ವವಾದಿ ಸಂಸ್ಕೃತಿಯು ಈ ದೇಶದಲ್ಲಿ ಬೆಳೆಯದಿದ್ದ ಕಾರಣದಿಂದಾಗಿ ಪ್ರತಿಮೆಗಳ ರಾಜಕೀಯವು ಅತಾರ್ಕಿಕವೂ ಅತಿಯಾಗಿ ಭಾವನಾತ್ಮಕವೂ ಆಗಿಬಿಟ್ಟಿದೆ. ಇದಕ್ಕೆ ಮತ್ತೆ ಮತ್ತೆ ಬಲಿಯಾಗುತ್ತಿರುವವರು ಬಾಬಾ ಸಾಹೇಬ್ ಅವರೇ. ತ್ರಿಪುರಾದ ಚುನಾವಣೆಗಳನ್ನು ಗೆದ್ದ ಪಕ್ಷದವರು ಇತ್ತೀಚೆಗೆ ಮಾರ್ಕ್ಸ್‌ ಮತ್ತು ಲೆನಿನ್ ಪ್ರತಿಮೆಗಳನ್ನು ಬೀಳಿಸಿ ಹಾಳುಗೆಡವಿ ‘ನಮ್ಮ ಮುಂದಿನ ಗುರಿ ಪೆರಿಯಾರ್ ಮತ್ತು ಅಂಬೇಡ್ಕರ್’ ಎಂದು ಘೋಷಿಸಿ ಇತರ ರಾಜ್ಯಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ವಿಕೃತಗೊಳಿಸಿದರು. ಪ್ರತಿಮೆಗಳನ್ನು ನಿಲ್ಲಿಸುವ ಹಾಗೂ ಭಗ್ನಗೊಳಿಸುವ ಕ್ರಿಯೆಗಳು ಭಾವುಕತೆಯ ಒತ್ತಡದಲ್ಲಿ ನಡೆಯುವ ಸಹಜ ಕ್ರಿಯೆಗಳಲ್ಲ. ಅವು ಒಂದು ಪ್ರಬಲ ಕಥನವನ್ನು ಕಟ್ಟುವುದರ ಭಾಗವಾಗಿರುತ್ತವೆ.

ಕಾರ್ಮಿಕ ವರ್ಗ, ದಲಿತರು ಹಾಗೂ ಸಂಪ್ರದಾಯ ವಿರೋಧಿಗಳನ್ನು ಅವಮಾನಿಸಿ, ಬೆದರಿಸಿ ಒಂದು ಧಾರ್ಮಿಕ ಸಮುದಾಯದ ಸರ್ವಾಧಿಕಾರದ ಕಥನದ ಭಾಗವಾಗಿ ಈ ಘಟನೆಗಳು ನಡೆಯುತ್ತವೆ. ಇನ್ನೊಬ್ಬ ವಿದ್ವಾಂಸ ಹೇಳಿರುವಂತೆ ಈ ಕಥನಗಳ ಆಧಾರವಾಗಿರುವುದು ಇಬ್ಬಗೆಯ ಪ್ರಯತ್ನ– ಇತಿಹಾಸದ ಕೆಲವು ನೆನಪುಗಳನ್ನು ಅಳಿಸಿಹಾಕುವುದು; ಇನ್ನು ಕೆಲವನ್ನು ಹುಟ್ಟಿಸಿ, ಕೆಲವನ್ನು ಮಾತ್ರ ಆಯ್ಕೆ ಮಾಡಿಕೊಂಡು ಇತಿಹಾಸವನ್ನು ಪುನರ್ ರಚಿಸುವುದು.

ಜಗತ್ತಿನ ಅತಿ ಎತ್ತರದ ಸರ್ದಾರ್‌ ಪಟೇಲ್‌ ಪ್ರತಿಮೆ ನಿಲ್ಲಿಸಿದ್ದು ಈ ಎರಡೂ ಉದ್ದೇಶಗಳನ್ನು ಪೂರೈಸುತ್ತದೆ. ಸರ್ದಾರ್ ಪಟೇಲರು ನೆಹರೂ ಅವರಿಗಿಂತ ಭಿನ್ನವಾದ ಹಿಂದೂ ಪರ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟಿದ್ದರು ಎನ್ನುವ ಅರ್ಧಸತ್ಯವನ್ನು ತೋರಿಸುವುದು ಮತ್ತು ಪರೋಕ್ಷವಾಗಿ ಗಾಂಧಿ ಹಾಗೂ ನೆಹರೂ ಮಾದರಿಯ ರಾಷ್ಟ್ರವಾದವನ್ನು ಅಂಚಿಗೆ ತಳ್ಳುವುದು. ಅಲ್ಲದೆ ರಾಷ್ಟ್ರದ ಏಕತೆಯನ್ನು ಸಂಕುಚಿತಗೊಳಿಸಿ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ರಾಜ್ಯಗಳನ್ನು, ಸಂಸ್ಥಾನಗಳನ್ನು ಸ್ವತಂತ್ರ ಭಾರತದ ಆಡಳಿತದೊಳಗೆ ತಂದ ಪ್ರಕ್ರಿಯೆಯಾಗಿ ನೋಡುವುದು ಮಾತ್ರ ಈ ಉದ್ದೇಶದ ಭಾಗವಾಗಿದೆ. ಭಾರತದ ಸಾಂಸ್ಕೃತಿಕ ಏಕತೆ, ಧಾರ್ಮಿಕ ಸಾಮರಸ್ಯ, ವಿವಿಧತೆಯಲ್ಲಿ ಏಕತೆ ಇವೆಲ್ಲವುಗಳನ್ನೂ ಆಚೆಗಿಟ್ಟು ಬಲಿಷ್ಠ ರಾಷ್ಟ್ರದ ಕಲ್ಪನೆಯನ್ನು ಸಮರ್ಥಿಸುವುದು ಇದರ ಜೊತೆಗಿದೆ.

ಕೆಲವು ಇತಿಹಾಸಕಾರರ ಪ್ರಕಾರ ಸಾರ್ವಜನಿಕ ಪ್ರತಿಮೆ ರಾಜಕೀಯವು ಬ್ರಿಟಿಷ್ ಆಳ್ವಿಕೆಯ ಮೂಲಕ ಭಾರತ ಪ್ರವೇಶಿಸಿತು. ಪಶ್ಚಿಮದ ಸುದೀರ್ಘವಾದ ವಸಾಹತುಶಾಹಿ ಚರಿತ್ರೆಯಿಂದ ಪ್ರೇರಿತವಾದ ಈ ಆಳ್ವಿಕೆಯು ತನ್ನ ಪ್ರಾಬಲ್ಯ ಹಾಗೂ ಹಿರಿಮೆಯ ಪ್ರದರ್ಶನವಾಗಿ ಸಾರ್ವಜನಿಕವಾಗಿ ಪ್ರತಿಮೆಗಳನ್ನು ನಿಲ್ಲಿಸತೊಡಗಿತು. ಉದಾಹರಣೆಗೆ ಬ್ರಿಟಿಷ್ ದೊರೆಗಳ, ರಾಣಿಯರ ಮೂರ್ತಿಗಳು. ಇದು ಭಾರತದ ಶಿಕ್ಷಿತವರ್ಗ ಸೇರಿದಂತೆ ಕೆಲವು ವರ್ಗಗಳ ಮೇಲೆ ಎರಡು ಭಿನ್ನ ಪರಿಣಾಮಗಳನ್ನು ಉಂಟುಮಾಡಿತು.

ಒಂದು, ಆಗತಾನೇ ಹುಟ್ಟಿಕೊಳ್ಳುತ್ತಿದ್ದ ರಾಷ್ಟ್ರೀಯತೆಯ ಪ್ರಭಾವದಿಂದಾಗಿ ‘ನಮ್ಮ ಸಂಸ್ಕೃತಿಯ’ ಪ್ರತಿಮೆಗಳನ್ನು ನಿಲ್ಲಿಸುವುದು. ಇದಕ್ಕಾಗಿ ಇತಿಹಾಸದಿಂದ ನಾಯಕರನ್ನು ಹುಡುಕಿ, ಅವರ ಬಗ್ಗೆ ಅರ್ಧಸತ್ಯಗಳ ಐತಿಹ್ಯಗಳನ್ನು ಕಟ್ಟಲಾಯಿತು. ಈ ರಾಷ್ಟ್ರೀಯತೆಯ ಒಂದು ಅಂಶವು ಕೋಮುವಾದಿ ಸಿದ್ಧಾಂತವೂ ಆಗಿತ್ತು. ಅದು ಮುಸ್ಲಿಂ ವಿರೋಧಿ ಕಥನಗಳಿಗೆ ಕಾರಣವಾಯಿತು. 17ನೇ ಶತಮಾನದಲ್ಲಿ ಶೂದ್ರಶಕ್ತಿಯ ಸಂಕೇತವಾಗಿ ಜನಸಾಮಾನ್ಯರು ಹಾಗೂ ರೈತರ ಪರವಾಗಿ ದುಡಿದಿದ್ದವರು ಎಂದು ಕೆಲವು ಇತಿಹಾಸಕಾರರು ವರ್ಣಿಸುವ ಶಿವಾಜಿಯು ಹಿಂದೂ ಸಾಮ್ರಾಜ್ಯದ ಸ್ಥಾಪಕನಾಗಿ ಅವರ ವೀರ ಮೂರ್ತಿಗಳ ಸ್ಥಾಪನೆಯಾಯಿತು.

ಇನ್ನೊಂದು ಪರಿಣಾಮವೆಂದರೆ ವಸಾಹತುಶಾಹಿಯ ವಿರೋಧದ ತಂತ್ರವಾಗಿ ಪ್ರತಿಮೆಗಳನ್ನು ಅವಮಾನಿಸುವ ಕ್ರಿಯೆಗಳು ಆರಂಭಗೊಂಡವು. ಬ್ರಿಟಿಷರು ಸ್ಥಾಪಿಸಿದ ಅನೇಕ ಪ್ರತಿಮೆಗಳು ಭಗ್ನಗೊಂಡವು ಅಥವಾ ವಿರೂಪಗೊಂಡವು. ಹೀಗಾಗಿ ಪ್ರತಿಮೆಗಳನ್ನು ನಿಲ್ಲಿಸುವ ಮತ್ತು ವಿರೂಪಗೊಳಿಸುವ ಎರಡೂ ರಾಜಕೀಯಗಳು ವಸಾಹತುಶಾಹಿಯ ಕೊಡುಗೆಗಳೇ, ಆದರೆ ಇವುಗಳು ಅಗಾಧ ಪ್ರಮಾಣದಲ್ಲಿ ಬೆಳೆಯವುದಕ್ಕೆ ಕಾರಣ ನಾಯಕರನ್ನು ಆರಾಧಿಸುವ, ಪ್ರತಿಮೆಗಳನ್ನು ಆರಾಧಿಸುವ ಇಲ್ಲಿಯ ಸಂಸ್ಕೃತಿಯ ಸ್ವಭಾವ. ಇದನ್ನು ಬಾಬಾಸಾಹೇಬರು ವಿವರಿಸಿದ್ದು ಮಾತ್ರವಲ್ಲ ತಮ್ಮ ಕಾಲದ ರಾಜಕೀಯದ ವಿಶ್ಲೇಷಣೆಗೂ ಬಳಸಿಕೊಂಡರು.

ವಿಶೇಷವೆಂದರೆ ಅನೇಕ ಸಂಸ್ಕೃತಿ ಚಿಂತಕರು ಸಾರ್ವಜನಿಕ ವಲಯದಲ್ಲಿ ಪ್ರತಿಮೆಗಳು ಇರಬಾರದು ಎನ್ನುವುದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಈ ಪ್ರತಿಮೆಗಳು ಜನರ ಸ್ಮೃತಿಗಳಲ್ಲಿರುವ ಇತಿಹಾಸವನ್ನು ಕಟ್ಟಿಕೊಡುತ್ತವೆ. ಅಲ್ಲದೆ ಜನಸಮುದಾಯಗಳು ನಂಬುವ ಮೌಲ್ಯಗಳನ್ನು ಮೂರ್ತವಾಗಿ ಸಂಕೇತಿಸುತ್ತವೆ. ದೇವಾಲಯದೊಳಗಿರುವ ಪ್ರತಿಮೆಗಳ ಬಗ್ಗೆ ಈ ಮಾತು ಹೇಗೆ ನಿಜವೋ ರಾಜಕೀಯ ಪ್ರತಿಮೆಗಳ ಬಗ್ಗೆಯೂ ನಿಜ. ಉದಾಹರಣೆಗೆ ಮುಸ್ಲಿಂ ಸಂತನಾಗಿದ್ದ ಶಿರಡಿಯ ಸಾಯಿಬಾಬಾನ ಪ್ರತಿಮೆಗಳು ಎಲ್ಲಾ ಜಾತಿ ಧರ್ಮಗಳನ್ನು ಮೀರಿನಿಂತಂತೆ, ಮೂರ್ತಿ ಪೂಜೆಯ ವಿರೋಧಿಗಳಾಗಿದ್ದ ಗಾಂಧಿಯವರ ಪ್ರತಿಮೆಗಳಿಗೂ ಒಂದು ಸೆಕ್ಯುಲರ್ ಅಸ್ತಿತ್ವವಿದೆ.

ಅತ್ಯಂತ ಭ್ರಷ್ಟವೂ, ಹಿಂಸಾಪರವೂ ಆಗಿರುವ ಇಂದಿನ ರಾಜಕೀಯದ ಭಾಷೆಗೆ ಪರ್ಯಾಯವಾಗಿ ಅಹಿಂಸಾತ್ಮಕ ಪ್ರತಿಭಟನೆಯ ಮೌಲ್ಯವನ್ನು ನಮ್ಮ ಸಮುದಾಯಗಳು ಗಾಂಧಿ ಪ್ರತಿಮೆಗಳ ಮೂಲಕ ಬೆಂಬಲಿಸುತ್ತವೆ. ಹೀಗಾಗಿ ಗಾಂಧಿ ಪ್ರತಿಮೆಗಳನ್ನು ಸಾರಾಸಗಟಾಗಿ ಕೇವಲ ನಮ್ಮ ಸಾಮುದಾಯಿಕ ಗೋಸುಂಬೆತನದ ಸಾಕ್ಷಿಗಳು ಎನ್ನಲಾಗುವುದಿಲ್ಲ. ಜನಸಮುದಾಯಗಳು ತಮಗೆ ಬೇಕಾದ ಸಾಂಸ್ಕೃತಿಕ ನೆನಪುಗಳನ್ನು ತಮ್ಮದೇ ರೀತಿಯಲ್ಲಿ ಉಳಿಸಿಕೊಳ್ಳುತ್ತವೆ. ಉದಾಹರಣೆಗೆ ಇಡೀ ಕರ್ನಾಟಕದ ಉದ್ದಕ್ಕೆ ಇರುವ ಸಂತರ, ಸೂಫಿಗಳ, ತತ್ವಪದಕಾರರ ಗೋರಿಗಳು, ಗದ್ದುಗೆಗಳು, ಅಲ್ಲಲ್ಲಿ ಮೂರ್ತಿಗಳು. ಇವುಗಳನ್ನು ಜನಸಮುದಾಯಗಳೇ ಕಾಪಾಡಿಕೊಂಡು ಬಂದಿವೆ. ಅವುಗಳನ್ನು ಜನ ವಿರೂಪಗೊಳಿಸಿರುವ ಉದಾಹರಣೆಗಳು ಅತ್ಯಂತ ಕಡಿಮೆ.

ಆಧುನಿಕ ಕೋಮುವಾದಿ ರಾಜಕೀಯ ಮುನ್ನೆಲೆಗೆ ಬರುವ ಮೊದಲು ನೂರಾರು ವರ್ಷಗಳವರೆಗೆ ಬಾಬಾಬುಡನ್ ಗಿರಿ– ದತ್ತಾತ್ರೇಯ ತಾಣದಲ್ಲಿ ಯಾರು ಯಾವುದನ್ನೂ ವಿರೂಪಗೊಳಿಸಿದ ಸಾಕ್ಷಿಯಿಲ್ಲ. ಈ ಆಧುನಿಕ ರಾಜಕೀಯದ ಪರಿಣಾಮವೆಂದರೆ ಸಾಂಸ್ಕೃತಿಕ ನೆನಪುಗಳು ಸಂಘಟಿತವಾಗಿರುವ ಜಾತಿಗಳ ಪ್ರತಿಮೆಗಳಾಗುವ ದುರಂತ ನಮ್ಮೆದುರಿಗಿದೆ. ವಾಲ್ಮೀಕಿ, ಕನಕದಾಸ, ಬಸವಣ್ಣ ಇವರೆಲ್ಲ ನಮ್ಮ ಬಹುಮುಖಿ ಸಂಸ್ಕೃತಿಯ ಆರೋಗ್ಯಕರ ನೆನಪುಗಳು. ಅವರು ಅನುಭಾವಿಗಳಾಗಿದ್ದರಿಂದ, ಸಂತರಾಗಿದ್ದರಿಂದ ನಮ್ಮ ಸಮುದಾಯಗಳ ಮನಸ್ಸು ಅವರನ್ನು ಯಾವುದೇ ಜಾತಿಗೆ ಸೇರಿದವರೆಂದು ಪರಿಗಣಿಸಿರಲಿಲ್ಲ. ಆದರೆ ಆಧುನಿಕ ಕರ್ನಾಟಕವು ಸಂಪೂರ್ಣವಾಗಿ ಜಾತಿಸಮಾಜವೇ ಆಗಿಬಿಟ್ಟಿರುವುದರಿಂದ, ಅವರಿಗೆ ಶಾಶ್ವತವಾಗಿ ಜಾತಿಸೆರೆಮನೆಗಳ ಶಿಕ್ಷೆ ನೀಡಲಾಗಿದೆ. ನಮ್ಮ ಜೀವಂತ ಪ್ರಜ್ಞೆಯಾಗಿದ್ದವರನ್ನು ಪ್ರತಿಮೆಗಳನ್ನಾಗಿ ಕುಬ್ಜಗೊಳಿಸಿಬಿಡಲಾಗಿದೆ. ಈ ದುರಂತದ ವ್ಯಂಗ್ಯವೆಂದರೆ ನಮ್ಮ ಅನುಭಾವಿ ಪರಂಪರೆಗಳು, ನಿರ್ಗುಣ, ಭಕ್ತಿ ಸಂಪ್ರದಾಯಗಳು ಪ್ರತಿಮೆಗಳನ್ನು, ಅದರ ಹಿಂದಿರುವ ಮನೋಭಾವನೆಯನ್ನು ಉಗ್ರವಾಗಿ ಟೀಕಿಸಿದ್ದವು. ಈ ಪರಂಪರೆಗಳು ಜಾತ್ಯತೀತ, ವರ್ಣಾಶ್ರಮ ವಿರೋಧಿ ಪರಂಪರೆಗಳಾಗಿದ್ದವು ಮತ್ತು ದುಡಿಯುವ ವರ್ಗಗಳಲ್ಲಿ ಹುಟ್ಟಿದ್ದವು.

ಇದಕ್ಕೆ ವಿರುದ್ಧವಾಗಿ ಪುರಾಣ, ಪ್ರತಿಮೆಗಳು ಹಾಗೂ ದೇವಾಲಯ ಸಂಸ್ಕೃತಿಗಳನ್ನು ನಂಬಿದ್ದ ಪರಂಪರೆಗಳು ಬಹುಬೇಗನೇ ಜಾತಿ-ಪಂಥಗಳ ಪ್ರತಿನಿಧಿಗಳಾಗಿ ಹಿಂಸೆಗಳಿಗೂ ಕಾರಣವಾದವು. ದೇವಾಲಯಗಳ ಮೇಲೆ ಆಕ್ರಮಣ, ಮೂರ್ತಿಭಂಜನೆ ಇಂಥ ಕೆಲಸಗಳಲ್ಲಿ ಭಾಗವಹಿಸಿದ್ದವು. ಇವುಗಳ ಆಧಾರದ ಮೇಲೆ ನನಗನಿಸುವುದೆಂದರೆ ವಸಾಹತುಶಾಹಿಯ ಪ್ರವೇಶದ ಮೊದಲೇ ನಮ್ಮ ಇತಿಹಾಸದಲ್ಲಿ ಪ್ರತಿಮೆಗಳಿಗೆ ಸಂಬಂಧಿಸಿದ ಹಿಂಸಾ ರಾಜಕೀಯದ ಬಹುದೊಡ್ಡ ಬಳುವಳಿಯೇ ಇದೆ. ಈ ಸಾಂಸ್ಕೃತಿಕ – ಧಾರ್ಮಿಕ ರಾಜಕೀಯವು ತನ್ನ ವೈರುಧ್ಯಗಳನ್ನು ಮುಚ್ಚಿಡಲು ಹೋಗಿ ಅನೆಕ ಗೊಂದಲಗಳನ್ನು ಸೃಷ್ಟಿಸುತ್ತದೆ. ಉದಾಹರಣೆಗೆ ಉಡುಪಿಯ ಕೃಷ್ಣ ದೇವಾಲಯ ಮತ್ತು ಕನಕನ ಕಿಂಡಿ. ಇದರ ಒಂದು ವ್ಯಾಖ್ಯಾನಕ್ಕಾಗಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ದ ಒಂದು ಲೇಖನ ನೋಡಬಹುದು.

ಇಂಗ್ಲಿಷ್ ಕವಿ ಶೆಲಿ (P.B. Shelley) ತನ್ನ Ozymandias ಎನ್ನುವ ಕವನದಲ್ಲಿ ಪ್ರತಿಮಾ ರಾಜಕೀಯದ ನಿರರ್ಥಕತೆಯನ್ನು ಹೇಗೆ ಛೇಡಿಸಿದ್ದಾನೆಂದರೆ ಅದನ್ನು ಓದಿದ ಯಾರೂ ತಮ್ಮ ಪ್ರತಿಮೆಯ ಸ್ಥಾಪನೆಗೆ ಒಪ್ಪಬಾರದು. ಒಬ್ಬ ಪ್ರಯಾಣಿಕನು ಕವಿಗೆ ತಾನು ಈಜಿಪ್ಟಿನಲ್ಲಿ ನೋಡಿದ ಪ್ರತಿಮೆಯೊಂದನ್ನು ವರ್ಣಿಸುತ್ತಾನೆ. ಅದು ಪ್ರಸಿದ್ಧ ಚಕ್ರವರ್ತಿ ozymandics ನ ಪ್ರತಿಮೆ. ಪ್ರತಿಮೆಯ ಹಾಸುಗಲ್ಲಿನ ಮೇಲೆ ಆ ಅಹಂಕಾರಿಯು ಹೀಗೆ ಹೇಳಿ ಬರೆಸಿದ್ದಾನೆ. ‘ಎಲ್ಲಾ ಬಲಿಷ್ಠರೆ, ಇಲ್ಲಿ ನೋಡಿ, ನನ್ನ ಸಾಧನೆಗಳನ್ನು ನೋಡಿ, ನಿರಾಸೆಪಡಿ.’ ಆದರೆ ಈಗ ಆ ಕೋಪಿಷ್ಠ ಕ್ರೂರ ಮುಖದ ಪ್ರತಿಮೆಯ ಸುತ್ತ ಯಾವ ಸಾಧನೆಯ ಸಣ್ಣ ಕುರುಹೂ ಇಲ್ಲ. ಕಣ್ಣಿಗೆ ಕಾಣುವಷ್ಟು ದೂರ ಬರೀ ಮರಳುಗಾಡು ಹರಡಿದೆ.

ಆದರೆ ಕಾವ್ಯದಿಂದ ರಾಜಕೀಯವು ಕಲಿತ ಉದಾಹರಣೆಗಳು ಇಲ್ಲ. ಪ್ರತಿಮೆಗಳ ಅಸಂಗತತೆಗೆ ಒಂದು ಸಣ್ಣ ಉದಾಹರಣೆ. ತೀರ್ಥಹಳ್ಳಿಯ ಮುಖ್ಯ ವೃತ್ತದಲ್ಲಿ ಕುವೆಂಪು ಅವರ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಅದರ ಅನಾವರಣಕ್ಕೆ ಏಕೋ ದಿನಾಂಕ ನಿಗದಿಯಾಗದೇ ಅನೇಕ ತಿಂಗಳವರೆಗೆ ಆ ಮೂರ್ತಿಯನ್ನು ಬಟ್ಟೆಯಿಂದ ಕಟ್ಟಿ ರಾತ್ರಿ ಪ್ರಯಾಣಿಕರು ಬೆಚ್ಚಿಬೀಳುವಂತೆ ಮಾಡಲಾಗಿತ್ತು. ಆಮೇಲೆ ಅನಾವರಣವಾದ ಮೇಲೆ ನೋಡಿದರೆ ಅಯ್ಯೋ ದೇವರೇ, ಎತ್ತರದ ನಿಲುವಿನ, ಕರ್ನಾಟಕ ಕಂಡ ಅತ್ಯಂತ ಸುಂದರಪುರುಷರಲ್ಲಿ ಒಬ್ಬರಾದ ಕುವೆಂಪು ಸಣ್ಣದಾಗಿ ಪಿಗ್ಮಿ ಆಕಾರದಲ್ಲಿ ನಿಂತಿದ್ದಾರೆ! ಕೇಳಿದರೆ ಅನಧಿಕೃತವಾದ ವಿವರಣೆ ಹೀಗಿತ್ತು. ‘ದೊಡ್ಡ ಮೂರ್ತಿಗೆ ಬೇಕಾಗುವಷ್ಟು ಹಣ ಸಂಗ್ರಹವಾಗಲಿಲ್ಲವಂತೆ. ಹೀಗಾಗಿ ಶಿಲ್ಪಿಯು ಕುವೆಂಪು ಅವರನ್ನು ‘ಪುಟ್ಟಪ್ಪ’ರನ್ನಾಗಿ ಮಾಡಿದನಂತೆ!’

ಆಗು ನೀ ಅನಿಕೇತನವೆಂದು ಹಂಬಲಿಸಿದ ಆ ಮಹಾನ್ ಚೇತನಕ್ಕೆ ಈ ಪ್ರತಿಮಾ ಶಿಕ್ಷೆಯೆ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು