ಪ್ರೇಮವೆಂಬುದು ಕಾಲದ ಕೆನ್ನೆ ಮೇಲೆ ಉರುಳಿದ ಅಶ್ರುಬಿಂದು

7

ಪ್ರೇಮವೆಂಬುದು ಕಾಲದ ಕೆನ್ನೆ ಮೇಲೆ ಉರುಳಿದ ಅಶ್ರುಬಿಂದು

Published:
Updated:

ಪ್ರೇಮವೇ ಮನುಷ್ಯನ ಆದಿಮ ಗುಣ. ಪ್ರೇಮ ಬದುಕಿನ ಎಲ್ಲಾ ಪುರುಷಾರ್ಥಗಳಲ್ಲಿ ಉನ್ನತವಾದುದು. ಪ್ರೇಮವಿರದ ಬದುಕು ಅರ್ಥಹೀನ. ಹೀಗೆ ಪ್ರೇಮವನ್ನು ಶಬ್ದಗಳ ಬಟ್ಟಲಲ್ಲಿ ತುಂಬಿಸಹೋದಷ್ಟೂ ಕಡಿಮೆಯೆನಿಸುತ್ತದೆ. ಸಾಕೆನ್ನಿಸುವುದು ಪ್ರೇಮವಾಗದು ಅನ್ನುತ್ತಾರೆ.  

ಗ್ರೀಕ್ ಮಹಾಕಾವ್ಯಗಳು, ಪುರಾಣಗಳು ರೋಚಕ ಪ್ರೇಮಕಥೆಗಳಿಂದ ತುಂಬಿಹೋಗಿವೆ. ಜಗತ್ತಿನ ಯಾವುದೇ ಸಂಸೃತಿಯನ್ನು ತೆಗೆದುಕೊಂಡರೂ ಪ್ರೇಮಕಾವ್ಯಕ್ಕೆ ಪ್ರಾಧಾನ್ಯ ಇದ್ದುದು ಕಾಣುತ್ತೇವೆ. ಪ್ರಾಚೀನ ಕಾಳಿದಾಸನ ಮೇಘದೂತ, ಮಾಲವಿಕಾಗ್ನಿಮಿತ್ರ, ಅಭಿಜ್ಞಾನ ಶಾಕುಂತಲವಿರಲಿ ಇಲ್ಲ ಮಧ್ಯಕಾಲೀನ ಭಾರತದ ಮೌಖಿಕ ಪರಂಪರೆಯ ಜನಪದ ಪ್ರೇಮಕಾವ್ಯಗಳೇ ಇರಲಿ ಜೀವ ಪ್ರಣಯದ ಕತೆಗಳು ಕುತೂಹಲ ಹುಟ್ಟಿಸುತ್ತವೆ.

ಸಿಂದ್- ಪಾಕಿಸ್ತಾನ್ ಮತ್ತು ಪಂಜಾಬಿನಲ್ಲಿ ಹರಿಯುವ ಚನಾಬ್, ಜೇಲಂ, ಸಟ್ಲೆಜ್ ನದಿಯ ಸುತ್ತಲಿನಲ್ಲಿ ಹುಟ್ಟಿ ಬೆಳೆದ ನಾಗರಿಕತೆ, ಜನಪದರ ಮೌಖಿಕ ಪರಂಪರೆಯಲ್ಲಿ ಹಾಸುಹೊಕ್ಕಾದ ಹೀರ್– ರಾಂಜಾ, ಸೋಹನಿ– ಮಹಿವಾಲ್, ಮಿರ್ಜಾ– ಸಾಹಿಬಾನ್ , ಶಿರಿ– ಫರಹಾದ್, ಸಸ್ಸಿ– ಪುನ್ನು, ಡೊಲಾ– ಮಾರೂ ಪ್ರೇಮಕಾವ್ಯಗಳಿಗೆ ಮಹತ್ವದ ಸ್ಥಾನವಿದೆ. ಇವೆಲ್ಲ ದುರಂತ ಪ್ರೇಮಕಥೆಗಳು.  ದೀಪದ ಮೋಹಕ ಬೆಳಕಿಗೆ ಆಕರ್ಷಿತವಾಗಿ ಬರುವ ಪತಂಗ ತನ್ನನ್ನು ತಾನೇ ಸುಟ್ಟುಕೊಳ್ಳುವಂತೆ ಈ ಪ್ರೇಮಿಗಳು ಪ್ರೇಮ ಒಡ್ಡುವ ಎಲ್ಲಾ ವಿಧದ ಬಿಕ್ಕಟ್ಟು- ಪರೀಕ್ಷೆಗಳಿಗೊಡ್ಡಿಕೊಂಡು ವಿರಹದಲ್ಲಿಯೇ ಬೆಂದು ಕೊನೆಗೆ ಪ್ರೇಮದಲ್ಲಿ ಕೊನೆಯಾಗುತ್ತಾರೆ. ಪಂಜಾಬಿನ ಜನರು ಅನೇಕ ಸಂದರ್ಭಗಳಲ್ಲಿ ಈ ಪ್ರೇಮಕತೆಗಳನ್ನು ಹಾಡುತ್ತಾರೆ. ಇವನ್ನು ‘ಕಿಸ್ಸಾ’ ಎನ್ನುತ್ತಾರೆ. ಈ ಪರಂಪರೆ ಈಗಲೂ ಉಳಿದಿದೆ.

ಮಧ್ಯಕಾಲೀನ ಭಾರತದ ಸಾಮಾಜಿಕ ಕಾಲಘಟ್ಟವನ್ನು ಸಂಕ್ರಮಣ ಕಾಲವೆನ್ನುತ್ತಾರೆ ಇತಿಹಾಸಜ್ಞರು. ಪ್ರಾಚೀನ ಹಿನ್ನೆಲೆಗೆ ಸರಿದು ಭಿನ್ನ ಭಿನ್ನ ಸಂಸ್ಕೃತಿ ಪರಂಪರೆಗಳು ಮುನ್ನೆಲೆಗೆ ಬಂದ ಕಾಲ. ಮೌಖಿಕ ಪರಂಪರೆಯೊಂದಿಗೆ ಮುಖಾಮುಖಿಯಾದ ಪೃಥ್ವಿರಾಜ– ಸಂಯುಕ್ತಾ, ಶಹಜಹಾನ್– ಮುಮ್ತಾಜ್, ಬಾಜಿರಾವ್– ಮಸ್ತಾನಿ, ರಾಣಿ ರೂಪಮತಿ ಮತ್ತು ಬಾಝ್ ಬಹದೂರ್ ಖಾನ್, ಸಲೀಂ– ಅನಾರ್ಕಲಿ ಅಸಾಧಾರಣ ಪ್ರೇಮ ಕತೆಗಳು ಮಧ್ಯಕಾಲೀನ ಭಾರತದ ಇತಿಹಾಸದ ಸುಂದರ ಪಲಕುಗಳು.

ಹೀರ್– ರಾಂಝಾ ಪ್ರೇಮಕಾವ್ಯವನ್ನು ಸೂಫಿಕವಿ ವಾರಿಸ್ ಷಾ ಬರೆಯುವ ಮೊದಲೇ ಅನೇಕರು ಬರೆದಿದ್ದರು. ಹದಿನೇಳನೆಯ ಶತಮಾನದಲ್ಲಿ ವಾರಿಸ್ ಷಾನಿಂದ ‘ಹೀರ್– ರಾಂಝಾ’ ಕಿಸ್ಸಾ ಎಂದು ಆರಂಭವಾದ ಮೌಖಿಕ ಪರಂಪರೆ ಬಹುತೇಕ ಪ್ರೀತಿ, ಉತ್ಸಾಹ, ದ್ರೋಹ, ತ್ಯಾಗ, ಸಾಮಾಜಿಕ ಮೌಲ್ಯಗಳು ಮತ್ತು ವ್ಯವಸ್ಥೆಯ ವಿರುದ್ಧ ಸಾಮಾನ್ಯ ಮನುಷ್ಯನ ಬಂಡಾಯದ ದನಿಯಾಗಿ ಹೊರಹೊಮ್ಮಿತು. ಕ್ವಿಸ್ಸೆ ಇಸ್ಲಾಮಿಕ್ ಅಥವಾ ಪರ್ಷಿಯನ್ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ಪರಂಪರೆ ಪೂರ್ವ ಪ್ರಾಚ್ಯ ದೇಶಗಳಿಂದ ಭಾರತವನ್ನು ತಲುಪಿದಾಗ ಧರ್ಮದ ಪರಿಧಿಯಿಂದ ಹೊರಬಂದು ಹೆಚ್ಚು ಜಾತ್ಯತೀತ ಸ್ವರೂಪವನ್ನು ಪಡೆಯಿತು. ಹೀಗೆ ಇಸ್ಲಾಮಿಕ್ ಪೂರ್ವದ ‘ಕಿಸ್ಸೆ’ ಗಳು ಪಂಜಾಬಿ ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿದವು. ಗುರು ಗೋಬಿಂದ್ ಸಿಂಗ್ ಮತ್ತು ಬಾಬಾ ಫರಿದ್ ಮುಂತಾದ ಧಾರ್ಮಿಕ ಮುಖಂಡರು ಮತ್ತು ಕ್ರಾಂತಿಕಾರಿಗಳು ತಮ್ಮ ಸಂದೇಶಗಳಲ್ಲಿ ಕಿಸ್ಸೆಗಳನ್ನು ಉಲ್ಲೇಖಿಸಿದ್ದಾರೆ. ಸೂಫಿಗಳಂಥ ಆಧ್ಯಾತ್ಮಿಕ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಅನೇಕ ತಲೆಮಾರುಗಳ ಹದಿಹರೆಯದ ಪ್ರೇಮ ಕಥೆಗಳ ಮೂಲಕ ದೇವರ ಸಂದೇಶವನ್ನು ಸಾರಿದರು. ಪ್ರೇಮದಿಂದಲೇ ಭಗವಂತನ ಪ್ರಾಪ್ತಿಯೆಂದು ಪ್ರೇಮವನ್ನು ಮನ್ನಿಸಿದರು. ಮನುಷ್ಯರಲ್ಲಿ ಪ್ರೇಮವನ್ನೇ ಬಿತ್ತಿದರು. ಮಾಶೂಕಾ, ಮಾಶೂಕ್ ದೈವತ್ವಕ್ಕೆ ಪಾತ್ರರಾದವರೆಂದರು. ಇಶ್ಕ ಹಕೀಕಿ, ಇಷ್ಕ ಮಿಝಾಜಿ(ಲೌಕಿಕ ಮತ್ತು ಅಲೌಕಿಕ ಪ್ರೇಮ) ಪರಿಕಲ್ಪನೆಗಳು ಹೆಚ್ಚು ಪ್ರಚಲಿತಗೊಂಡವು. ಇದು ಪಂಜಾಬ್ ಪ್ರಾಂತ್ಯದಲ್ಲಿ ಸೂಫಿ ಚಳವಳಿ ಎಂದು ಕರೆಯಲ್ಪಟ್ಟಿತು.

ಹೀರ್– ರಾಂಝಾ:  ಪಂಜಾಬಿನ ಸಿಯಾಲ್ ಜಾಟ್ ಉಪಜಾತಿಯ ಸಿರಿವಂತ ಮನೆತನದಲ್ಲಿ ಜನಿಸಿದ ಹೀರ್ ಅಪ್ರತಿಮ ಸುಂದರಿ. ಚನಾಬ್ ನದಿ ದಂಡೆಯ ತಖ್ತ ಹಜರಾ ಹಳ್ಳಿಯಲ್ಲಿ ‘ರಾಂಝಾ’ ಎನ್ನುವ ಉಪಜಾತಿಯಲ್ಲಿ ಜನಿಸಿದ ’ಛೀದೋ’ ರಾಂಝಾ ಕುಟುಂಬದ ನಾಲ್ವರು ಗಂಡುಮಕ್ಕಳಲ್ಲಿ ಚಿಕ್ಕವ. ತಾಯಿ ಇಲ್ಲದ ತಬ್ಬಲಿ ಮತ್ತು ಎಲ್ಲರಿಗಿಂತ ಚಿಕ್ಕವನಾದ್ದರಿಂದ ತಂದೆಯ ಅಕ್ಕರೆ- ಮುದ್ದು- ದುಲಾರ್ ಹೆಚ್ಚಾಗಿತ್ತು ಅವನ ಮೇಲೆ. ಅಣ್ಣಂದಿರು ತಂದೆಯೊಡನೆ ಹೊಲಗಳಲ್ಲಿ ದುಡಿಯುತ್ತಿದ್ದರೆ ಇವನು ಕೊಳಲೂದುತ್ತ ದಿನಗಳೆಯುತ್ತಿದ್ದ. ಕೊನೆಗೊಮ್ಮೆ ಅತ್ತಿಗೆಯರು ಛಿದೋನನ್ನು ಬಿಟ್ಟಿ ಕೂಳು ಹಾಕಲಾರದೇ ಮನೆಯಿಂದ ಹೊರಗಟ್ಟುತ್ಟಾರೆ. ಮನೆಬಿಟ್ಟು ಅಲೆಯುತ್ತ ಅಲೆಯುತ್ತಾ ರಾಂಝಾ ಹೀರಳ ಹಳ್ಳಿ ತಲುಪುತ್ತಾನೆ. ರಾಂಝಾನ ಕೊಳಲ ಗಾನಕ್ಕೆ ಹೀರ್ ಮನಸೋಲುತ್ತಾಳೆ. ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ. ಹೀರ್ ತನ್ನ ತಂದೆಗೆ ಹೇಳಿ ದನಕರುಗಳನ್ನು ಮೇಯಿಸುವ ಕೆಲಸ ಕೊಡಿಸುತ್ತಾಳೆ. ಎಲ್ಲಾ ಪ್ರೇಮಕತೆಗಳಂತೆ ಅವರಿಬ್ಬರ ಪ್ರೇಮದ ಪರಿಮಳ ಮನೆಯವರಿಗೆ ತಲುಪಿ ಹೀರಳನ್ನು ಅವಳಿಚ್ಛೆಯ ವಿರುದ್ದ ಬೇರೊಬ್ಬನೊಡನೆ ಮದುವೆ ಮಾಡಿಬಿಡುತ್ತಾರೆ. 

ಭಗ್ನಹೃದಯಿ ಹತಾಶ ರಾಂಝಾ ಬಾಬಾ ಗೋರಖನಾಥನ ‘ಜೋಗಿ’ಯಾಗಿ ಅಲಖ ನಿರಂಜನ್ ಎಂದು ಹಾಡಿಕೊಳ್ಳುತ್ತ ಊರೂರು ಅಲೆಯತೊಡಗುತ್ತಾನೆ ಹೀರಳನ್ನು ಹುಡುಕುತ್ತ. ಕೊನೆಗೂ ಹೀರಳ ಊರನ್ನು ತಲುಪುತ್ತಾನೆ.  ಹೀರ್ ಗಂಡನನ್ನು ತೊರೆದು ರಾಂಝಾನೊಂದಿಗೆ ತನ್ನೂರಿಗೆ ಬರುತ್ತಾಳೆ. ಹೀರಳ ತಾಯಿ ತಂದೆಯರು ಅವರಿಬ್ಬರಿಗೂ ವಿವಾಹ ಏರ್ಪಡಿಸುತ್ತಾರೆ. ಅದನ್ನು ಸಹಿಸದ ಹೀರಳ ಚಿಕ್ಕಪ್ಪ ಹೀರಳ ಊಟದಲ್ಲಿ ವಿಷ ಬೆರೆಸುತ್ತಾನೆ. ಸುಳಿವು ಸಿಕ್ಕ ರಾಂಝಾ ಅವಳನ್ನುಳಿಸಲು ಬರುವಷ್ಟರಲ್ಲಿ ಹೀರ್ ಸತ್ತುಹೋಗಿರುತ್ತಾಳೆ. ರಾಂಝ್ಹಾ ತಾನೂ ಅದೇ ವಿಷ ಸೇವಿಸಿ ಪ್ರಾಣಬಿಡುತ್ತಾನೆ.  ಈಗಲೂ ಅವರಿಬ್ಬರ ಸಮಾಧಿಗೆ ಲಕ್ಷಾಂತರ ಪ್ರೇಮಿಗಳು ಬರುತ್ತಾರಂತೆ.      

ಸೋಹನಿ– ಮಹಿವಾಲ್: ಕುಂಬಾರನ ಸುರಸುಂದರಿ ಮಗಳು ಸೋಹನಿಯ ಮೇಲೆ ಉಜ್ಬೆಕಿಸ್ತಾನ್‍ದ ಬುಖಾರಾ ಎಂಬಲ್ಲಿನ ಇಜ್ಜತ್ ಬೇಗ್ ಅನ್ನುವ ವ್ಯಾಪಾರಿಗೆ ಮೋಹವುಂಟಾಗುತ್ತದೆ. ಅವಳ ಪ್ರೇಮದಲ್ಲಿ ಆತ ವ್ಯಾಪಾರ ಬಿಟ್ಟು ದನಕಾಯುವ ’ಮಹಿವಾಲ್’ ನಾಗಿ ಅಲ್ಲೇ ಉಳಿದುಬಿಡುತ್ತಾನೆ. ಅವರಿಬ್ಬರ ಪ್ರೇಮವನ್ನು ಒಪ್ಪದ ಮನೆಯವರು ಸೋಹನಿಯನ್ನು ಚನಾಬ್ ನದಿ ದಂಡೆಯಾಚೆಗಿನ ಒಂದು ಹಳ್ಳಿಯ ಬೇರೊಬ್ಬನಿಗೆ ಮದುವೆ ಮಾಡಿಕೊಡುತ್ತಾರೆ.  ಸೋಹನಿ ಮನೆಯವರೆಲ್ಲರ ಕಣ್ಣುತಪ್ಪಿಸಿ ರಾತ್ರಿ ಗಡಿಗೆಯನ್ನು ಬೋರಲಾಗಿಸಿ ನದಿಯನ್ನು ಈಜಿಕೊಂಡು ಬಂದು ತನ್ನ ಪ್ರೇಮಿಯನ್ನು ಸಂಧಿಸುತ್ತಿರುತ್ತಾಳೆ. ಸೋಹನಿಯ ಈ ಗುಟ್ಟನ್ನು ಪತ್ತೆ ಹಚ್ಚಿದ ಅವಳ ನಾದಿನಿ ಸುಟ್ಟ ಗಡಿಗೆಯ ಬದಲಿಗೆ ಹಸಿ ಗಡಿಗೆಯನ್ನಿಡುತ್ತಾಳೆ. ಗೊತ್ತಿಲ್ಲದ ಸೋಹನಿ ತುಂಬಿ ಹರಿವ ಚೆನಾಬ್ ನದಿಯಲ್ಲಿ ಕಚ್ಚಾ ಗಡಿಗೆಯ ಸಹಾಯದಿಂದ ಈಜಲು ಹೋಗಿ ಗಡಿಗೆ ಕರಗಿ ಮುಳುಗಿ ಸಾಯುತ್ತಾಳೆ. ನದಿಯ ಇನ್ನೊಂದು ದಂಡೆಯಲ್ಲಿದ್ದ ಮಹಿವಾಲ್ ತನ್ನ ಕಣ್ಣೆದುರೇ ಮುಳುಗುತ್ತಿದ್ದ ಸೋಹನಿಯನ್ನು ಉಳಿಸಲು ನೀರಿಗೆ ಧುಮುಕಿ ಕೊನೆಗೆ ಇಬ್ಬರೂ ಪ್ರಾಣ ಕಳೆದುಕೊಳ್ಳುತ್ತಾರೆ.

ಇದೇ ರೀತಿ ಸಸ್ಸಿ ಪುನ್ನು– ಮಿರ್ಜಾ- ಸಾಹಿಬಾನ್  ಉತ್ಕಟ ಪ್ರೇಮದ ಕಿಸ್ಸೆಗಳನ್ನು ಪಂಜಾಬಿ ಜನಪದ ಪರಂಪರೆಯಲ್ಲಿ ಭಾರತ ಸಿಂಧ್- ಪಾಕಿಸ್ತಾನ ದೇಶಗಳ ಅನೇಕ ಗಾಯಕರು ಹಾಡಿದ್ದಾರೆ ಮತ್ತು  ಈ ಭೂಮಿಯ ಮೇಲೆ ಪ್ರೇಮ ಇರುವವರೆಗೂ ಈ ಕತೆಗಳ ಮೌಖಿಕ ಪರಂಪರೆ ಜೀವಂತವಾಗಿರುತ್ತವೆ. ಹೀರ್, ಸೋಹನಿ, ಸಸ್ಸಿ, ಸಾಹಿಬಾ ಈ ಎಲ್ಲ ಮಹಿಳೆಯರೂ  ಸಾಂಪ್ರದಾಯಿಕ ಪಿತೃಪ್ರಭುತ್ವವನ್ನು ನಿರಾಕರಿಸಿ ಪ್ರೀತಿ ಮತ್ತು ಸ್ವಾತಂತ್ರ್ಯವನ್ನು ಆಯ್ಕೆ ಮಾಡಿಕೊಂಡ ದಿಟ್ಟೆಯರು. ಸಮಕಾಲೀನ ಸಂದರ್ಭದಲ್ಲಿ ಇಂಥದೇ ದಿಟ್ಟತನವನ್ನು ಅಮೃತಾ ಪ್ರೀತಂ ಬದುಕಿ ತೋರಿದರು. ಇದೇ ಚನಾಬ್ ನದಿ ಅಮೃತಾ ಪ್ರೀತಂ ಮತ್ತು ಸಾಹಿರ್ ಲೂಧಿಯಾನ್ವಿ ಪ್ರೇಮವನ್ನು ಬಚ್ಚಿಟ್ಟುಕೊಂಡಿದೆ.   

ಇನ್ನು ತನ್ನ ಪ್ರಿಯ ಪತ್ನಿ ಮುಮ್ತಾಜ್ ಮಹಲಳಿಗೆ ತನ್ನ ಪ್ರೇಮದ ಪ್ರತೀಕವಾಗಿ ಅದ್ಭುತ ತಾಜಮಹಲನ್ನು ಕಟ್ಟಿಸಿದ ಶಹಜಹಾನ್‍ನನ್ನನ್ನು ನೆನೆಯದೇ ಪ್ರೇಮದ ಆಖ್ಯಾನ ವ್ಯಾಖ್ಯಾನಗಳೂ ಅಪೂರ್ಣವಾಗಬಹುದು.

ಶಕೀಲ್ ಬದಾಯೂನಿ ಶಹಜಹಾನನನ್ನು ಪ್ರೇಮ ಸ್ಮಾರಕವನ್ನು ಕಟ್ಟಿ ಜಗತ್ತಿಗೆ ಪೇಮದ ಪ್ರತೀಕವನ್ನು ಕೊಟ್ಟೆ ಎಂದು ಬಣ್ಣಿಸಿದರೆ ಶಾಶ್ವತ ಪ್ರೇಮ ಸ್ಮಾರಕ ತಾಜಮಹಲ್‍ ‍ಅನ್ನೇ ಸಾಹಿರ್ ಲೂಧಿಯಾನ್ವಿ ನಿರಾಕರಿಸುತ್ತಾರೆ.

 ನಿಮಗೆ ತಾಜ್ ಪ್ರೀತಿಯ ಸ್ಮಾರಕವಾಗಿರಬಹುದು; ನೀನು ಈ ಸುಂದರ ತಾಣವನ್ನು ಆರಾಧಿಸಬಹುದು; ಬಾ ನಲ್ಲೆ, ಬೇರೆಲ್ಲಾದರೂ ಸಿಗೋಣ!  

ಏಕ್ ಬಾದಶಾಹ್ ನೆ ದೌಲತ್ ಕಾ ಸಹಾರಾ ಲೇಕರ್ / ಹಮ್ ಗರೀಬೋಂ ಕಿ ಮೊಹಬ್ಬತ್ ಕಾ ಉಡಾಯಾ ಹೈ ಮಜಾಕ್

ಲೋಕದಲ್ಲಿ ಪ್ರೇಮಿಗಳೆಷ್ಟಿಲ್ಲ? ಒಬ್ಬ ಬಾದಶಾಹ್ ಈ ಸುಂದರ ತಾಜಮಹಲನ್ನು ಕಟ್ಟಿಸಿ ನಮ್ಮಂತಹ ಬಡವರ ಪ್ರೇಮವನ್ನು ತಮಾಷೆಯಾಗಿಸಿಬಿಟ್ಟ, ಬಾ ನಲ್ಲೆ, ಬೇರೆಲ್ಲಾದರೂ ಸೀಗೋಣ ಎನ್ನುವ ಸಾಹಿರ್ ಮಾತುಗಳು ಎಷ್ಟು ಸತ್ಯ!!

ಜಗತ್ತಿನ ಪ್ರೇಮಿಗಳಿಗೆ ತಾಜ್ ಬರೀ ಪ್ರೀತಿಯ ಒಂದು ಸಂಕೇತವಾಗಿರಬಹುದು, ಇನ್ನು ಕೆಲವರಿಗೆ ಆರ್ಥಿಕ ಅಸಮಾನತೆಯ ಸಂಕೇತವಾಗಿರಬಹುದು, ಅಥವಾ ಸಾಮಾಜಿಕ ತರತಮತೆಯ ಚಿಹ್ನೆಯಾಗಿರಬಹುದು.

ಕಾಲಾಂತರದಲ್ಲಿ ಲೌಕಿಕ ಪ್ರೇಮವೂ ಗಟ್ಟಿಗೊಳ್ಳುತ್ತದೆ. ತಾಜಮಹಲ್ ಎಂಬುದು ಕಾಲದ ಶಾಶ್ವತತೆಯ ಕೆನ್ನೆಯ ಮೇಲೆ ಉರುಳಿದ ಅಶ್ರುಬಿಂದು. ಅದೆಷ್ಟು ಮೋಹಕ, ಮತ್ತು ದುಃಖದಾಯಕವಾಗಿದ್ದು ಎಂದಿದ್ದರು ಗುರುದೇವ ರವೀಂದ್ರನಾಥ್ ಟ್ಯಾಗೋರ್.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !