ಬನಶಂಕರಿ ಜಾತ್ರೆಯಲಿ ರಾತ್ರಿಯೂ ಹಗಲೇ

7

ಬನಶಂಕರಿ ಜಾತ್ರೆಯಲಿ ರಾತ್ರಿಯೂ ಹಗಲೇ

Published:
Updated:
Prajavani

ಬನಶಂಕರಿ ಜಾತ್ರಿಗೆ ಹೊಂಟೇನೀ ಬರ್ತೀರೇನು? ಪುಷ್ಕರಣಿ ಒಳಗ ಮುಳುಗೆದ್ದು, ದೇವಿ ದರ್ಶನ ಪಡದು, ರಾತ್ರಿ ನಾಟಕ ನೋಡ್ಕೊಂಡು ಬರೂಣಂತ...

ಬನದ ಹುಣ್ಣಿಮೆಯ ಆಸುಪಾಸು ಉತ್ತರ ಕರ್ನಾಟಕದ ಬಹುತೇಕ ಊರುಗಳಲ್ಲಿ ಕೇಳಿ ಬರುವ ಸಾಮಾನ್ಯ ಮಾತುಗಳಿವು. ಹಿಂಗಾರಿ ಬೆಳೆಯ ರಾಶಿ ಮಾಡಿದ ರೈತರು ಎತ್ತಿನ ಬಂಡಿ ಹೂಡಿಕೊಂಡು, ಇಲ್ಲವೇ ಸವದತ್ತಿ ಯಲ್ಲವ್ವನ ಗುಡ್ಡಕ್ಕ ಹೋಗುವಂಗ ಟ್ರಾಕ್ಟರ್‌ನ ಮೂಲಕ ರಾತ್ರಿ ಹೊರಟು ಬೆಳಗಿನ ಜಾವ ಬನಶಂಕರಿ ತಲುಪುವ ಭಕ್ತರು ಗುಡಿಯ ಪಕ್ಕದಲ್ಲಿ ಇರುವ ಬಯಲು, ಹೊಲಗಳಲ್ಲಿ ಬಿಡಾರ ಹೂಡುತ್ತಾರೆ.

ಗುಡಿಯ ಎದುರಿಗೆ ಇರುವ ಹರಿದ್ರಾತೀರ್ಥವೆಂಬ ಪುಷ್ಕರಣಿಯಲ್ಲಿ ಮುಳುಗೆದ್ದು, ಪಾಳಿ ಹಚ್ಚಿ ಬನಶಂಕರಿಯ ದರ್ಶನ ಪಡೆದರೆಂದರೆ ಒಂದು ಪ್ರಮುಖ ಘಟ್ಟ ಮುಗಿಯಿತೆಂದೇ ಅರ್ಥ.

ಆ ನಂತರದ್ದು ಮನೆಯ ಬಾಳುವೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ರಥಬೀದಿಯ ಇಕ್ಕೆಲಗಳುದ್ದಕ್ಕೂ ಹಾಕಿರುವ ಮಳಿಗೆಗಳತ್ತ ದೌಡಾಯಿಸುವುದು.

ಬನಶಂಕರಿ ದೇವಿಯ ಜಾತ್ರೆ ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಕಂಪನಿಗಳನ್ನು ಪೊರೆದುಕೊಂಡು ಬಂದಿದೆ. ಬನಶಂಕರಿ ತೇರಿಗೆ ಹೋಗುವುದು ಎಂದರೆ ಇಡೀ ರಾತ್ರಿ ನಾಟಕ ನೋಡುವುದು ಎಂಬುದರ ಅನ್ವರ್ಥಕವೂ ಹೌದು.

‘ಈ ಜಾತ್ರ್ಯಾಗ ಅವ್ವ–ಅಪ್ಪನ್ನ ಬಿಟ್ಟು ಎಲ್ಲಾನೂ ಸಿಗ್ತದರಿ’ ಎಂಬ ಆಟೊ ಚಾಲಕ ಗೋವಿಂದನ ಮಾತು ಅಕ್ಷರಶಃ ಸತ್ಯ. ಬಳ್ಳಾರಿ, ಕೊಪ್ಪಳದಂತಹ ಹೈದರಾಬಾದ್‌ ಕರ್ನಾಟಕ ಸೀಮೆಯಿಂದ ಮೊದಲುಗೊಂಡು ಮುಂಬೈ ಕರ್ನಾಟಕ ಸೀಮೆಯ ಭಕ್ತರು ಇಲ್ಲಿ ವಾರಗಟ್ಟಲೇ ಬಿಡಾರ ಹೂಡುತ್ತಾರೆ.

ಹೊಲದಲ್ಲಿ ದುಡಿದು ಹಣ್ಣಾದ ಹಳ್ಳಿಯ ರೈತಾಪಿ ಕುಟುಂಬಗಳಿಗೆ ಬನಶಂಕರಿ ದೇವಿಯ ಜಾತ್ರೆ ದಣಿವಾರಿಸಿಕೊಳ್ಳುವ ಹಾಗೂ ಸಂತಸದ ಹೊನಲನ್ನು ಹರಿಸುವ ಗಳಿಗೆಯೂ ಹೌದು. ದೇವಿ ದರ್ಶನಕ್ಕೆ ಬರುವ ಸಹಸ್ರಾರು ಜನರಿಗೆ ವಾಸ್ತವ್ಯ ಕಲ್ಪಿಸಲು ದೇವಸ್ಥಾನದವರು ಪ್ರಸಾದ ನೀಡುವ ಪ್ರಾಂಗಣವನ್ನು ಬಿಟ್ಟುಕೊಡುತ್ತಾರೆ.

ಜಾತ್ರೆಗೆ ಬಂದವರು ಮನೆಗೆ ಫಳಾರವನ್ನು ಕೊಂಡೊಯ್ಯುವುದು ವಾಡಿಕೆ. ಅದಕ್ಕಾಗಿಯೇ ಅಮೀನಗಡ, ಗೋಕಾಕದ ಪ್ರಸಿದ್ಧ ಕರದಂಟು, ಬೆಂಡು, ಬತ್ತಾಸು, ಬೂಂದಿ ಲಾಡು, ಮಿಕ್ಸರ್‌, ಚುರುಮುರಿಯನ್ನು ಮಾರಾಟ ಮಾಡುವ ಅಂಗಡಿಗಳು ಬನಶಂಕರಿ ಜಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಾಣಿಸುತ್ತವೆ. ಒಂದಷ್ಟು ಅಂಗಡಿಗಳು ಶತಮಾನಗಳಿಂದ ಜಾತ್ರೆಯಲ್ಲಿ ಫಳಾರವನ್ನು ಮಾರಾಟ ಮಾಡುವ ಮೂಲಕ ದಾಖಲೆಯನ್ನೂ ಸೃಷ್ಟಿಸಿವೆ.

ಬೇರೆ ಜಾತ್ರೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ವಿಶಿಷ್ಟ ಸಂಪ್ರದಾಯವೊಂದು ಇಲ್ಲಿದೆ. ಬಾದಾಮಿ ಸುತ್ತಮುತ್ತಲಿನ ಗುಡೂರ, ಢಾಣಕ ಶಿರೂರ, ಪಟ್ಟದಕಲ್ಲು, ಮಹಾಕೂಟ, ಮಂಗಳಗುಡ್ಡ ಸೇರಿದಂತೆ ಹಲವು ಗ್ರಾಮಗಳ ರೈತ ಮಹಿಳೆಯರು ಸಜ್ಜಿ ಮತ್ತು ಜೋಳದ ಕಟಕ್‌ ರೊಟ್ಟಿ, ಪಲ್ಯ, ಮಜ್ಜಿಗೆ, ಮೊಸರು, ತರಕಾರಿಯನ್ನು ಒಂದು ಬಿದಿರಿನ ಬುಟ್ಟಿಯಲ್ಲಿ ಕಟ್ಟಿಕೊಂಡು, ಜಾತ್ರೆಗೆ ಬಂದ ಭಕ್ತರು ಇರುವಲ್ಲಿ ಬಂದು ಮಾರಾಟ ಮಾಡುತ್ತಾರೆ. ಢಾಣಕಶಿರೂರಿನ ಪಂಪವ್ವ ಬೆಳಿಗ್ಗೆ ಎತ್ತಲಾರದ ಬುಟ್ಟಿ ಹೊತ್ತುಕೊಂಡು ಬಂದಳೆಂದರೆ ರಾತ್ರಿ ಹೋಗುವುದು 12 ಗಂಟೆಗೇ. ಇದು ಆ ಅಜ್ಜಿಗೆ ನಿತ್ಯದ ಕಾಯಕ. ಅದೇ ಊರಿನ ಸುಮಾರು 30ಕ್ಕೂ ಅಧಿಕ ಮಹಿಳೆಯರು ಈಗ ಊಟದ ಗಂಟನ್ನು ಹೊತ್ತು ಜನರಿದ್ದಲ್ಲಿಗೇ ಹೋಗಿ ಉಣಬಡಿಸುತ್ತಾರೆ.

ಬಹುತೇಕ ಹಳ್ಳಿಯ ಜನರೇ ದೇವಿಗೆ ನಡೆದುಕೊಳ್ಳುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡೇ ಮನೆಗೆ ಅಳವಡಿಸಲು ಹೊಳೆ ಆಲೂರಿನ ಬಾಗಿಲ ಚೌಕಟ್ಟು, ಬಾಗಿಲು, ಹೂವಿನ ಹಡಗಲಿಯ ಕಂಬಳಿ, ಬಹುತೇಕ ಪಟ್ಟಣದ ಮಹಿಳೆಯರು ಹಾಕಿಕೊಳ್ಳುವುದನ್ನೇ ಮರೆತಂತಿರುವ ಗಾಜಿನ ಬಳೆಗಳು ಇಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳು.

ಜೊತೆಗೆ ಸಾಂಪ್ರದಾಯಿಕವಾಗಿ ತಯಾರಿಸಲಾದ ಕುಂಕುಮ, ವಿಭೂತಿ, ಕರ್ಪೂರಗಳ ಅಂಗಡಿಗಳು ಇಲ್ಲಿ ಸದಾ ಚಟುವಟಿಕೆಯ ಕೇಂದ್ರಗಳು.

ಜಾತ್ರೆ ನಡೆಯುವ ಒಂದು ತಿಂಗಳವರೆಗೆ ಇಲ್ಲಿಗೆ ಬರುವ ಭಕ್ತರ ಹೊಟ್ಟೆ ತಣಿಸಲು ಖಾನಾವಳಿಗಳು, ಹೋಟೆಲುಗಳೂ ಇರುತ್ತವೆ. ಆದರೂ, ಎತ್ತಿನ ಬಂಡಿ ಕಟ್ಟಿಕೊಂಡು ಬಂದವರು ಹೊಲದ ಬಯಲಿನಲ್ಲಿ ಮೂರು ಕಲ್ಲುಗಳನ್ನಿಟ್ಟು ಕಟ್ಟಿಗೆ ಹೊಂದಿಸಿ ಅಡುಗೆ ಮಾಡಿಕೊಂಡು ಉಣ್ಣುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹೋಳಿಗಿ, ಕಟ್ಟಿನ ಸಾರು, ಪುಂಡಿ ಪಲ್ಯ, ಎಣಗಾಯಿ ಪಲ್ಯ, ಅನ್ನವನ್ನು ದೊಡ್ಡ ಬೋಗುಣಿಗಳಲ್ಲಿ ಕುದಿಸಿದರೆ ಸಾರಿನ ವಾಸನೆ ಮೆಲ್ಲಗೆ ಹರಡಿರುತ್ತದೆ.

ದೇವಿಯನ್ನು ವನದುರ್ಗಾಂಬಾ ಎಂದು ಪೂಜಿಸಲಾಗುತ್ತದೆ. ತೇರು ಎಳೆಯುವ ಹಿಂದಿನ ದಿನ ಬನಶಂಕರಿ ಗುಡಿಯ ಅರ್ಚಕರು ಹಲವು ಬಗೆಯ ತರಕಾರಿ ನೈವೇದ್ಯವನ್ನು ದೇವಿಗೆ ನೀಡುತ್ತಾರೆ. ಇತ್ತ ಬಾದಾಮಿ ಸುತ್ತಲಿನ ಊರುಗಳಲ್ಲಿ ‘ವಾರ’ ಮಾಡುವ ಹೆಂಗಳೆಯರು ಪಲ್ಲೇದ ಹಬ್ಬ ಎಂದು ಆಚರಿಸುತ್ತಾರೆ. ಆ ದಿನ ವಿವಿಧ ತರಕಾರಿಗಳಿಂದ ಪಲ್ಯ ತಯಾರಿಸಿ ದೇವಿಗೆ ನೈವೇದ್ಯ ನೀಡಿ ನಂತರ ಊಟ ಮಾಡುತ್ತಾರೆ.

ಭಾರತ ಹುಣ್ಣೆಮೆವರೆಗೆ ಜಾತ್ರೆ ಮುಂದುವರಿಯುತ್ತದೆ. ಹುಣ್ಣಿಮೆಯ ಚಂದಿರನ ಬೆಳಕು ಜಾತ್ರೆಯ ಮೆರುಗನ್ನು ಹೆಚ್ಚಿಸುತ್ತದೆ.

ಹಗಲೂ ರಾತ್ರಿ ನಾಟಕ ಪ್ರದರ್ಶನ...

ಜಾತ್ರೆ ಆರಂಭವಾಗುವುದು ಒಂದು ವಾರ ಇದೆ ಎನ್ನುವಾಗಲೇ ಹಲವು ನಾಟಕ ಕಂಪನಿಗಳು ಇಲ್ಲಿ ಟೆಂಟ್‌ಗಳನ್ನು ಹಾಕಲು ಶುರು ಮಾಡುತ್ತವೆ. ರಂಗಭೂಮಿ ನಾಟಕಗಳ ಕಾಶಿ ಎಂದು ಕರೆಯಲಾಗುವ ಬನಶಂಕರಿ ದೇವಿ ಜಾತ್ರೆ ನಡೆಯುವ ಒಂದು ತಿಂಗಳವರೆಗೆ ಸುಮಾರು 10ರಿಂದ 12 ನಾಟಕ ಕಂಪನಿಗಳು ಇಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತವೆ. ಚಿತ್ತರಗಿ, ಕಮತಗಿ, ಗುಳೇದಗುಡ್ಡ, ಗುಬ್ಬಿ ಕಂಪನಿ, ದಾವಣಗೆರೆಯ ಕೆ.ಬಿ.ಆರ್‌ ಡ್ರಾಮಾ ಕಂಪನಿ, ಘನಮಠೇಶ್ವರ ನಾಟ್ಯ ಸಂಘಗಳು ಸೇರಿದಂತೆ ಹಲವು ವೃತ್ತಿ ನಾಟಕ ಕಂಪನಿಗಳು ಇಲ್ಲಿ ಪ್ರತಿವರ್ಷವೂ ನಾಟಕಗಳನ್ನು ಪ್ರದರ್ಶಿಸುತ್ತವೆ.

ಮೊದಲು ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಇದೀಗ ಸಾಮಾಜಿಕ ನಾಟಕಗಳು ನಡೆಯುತ್ತಿವೆ. ಆದರೆ, ಪೌರಾಣಿಕ ನಾಟಕಗಳನ್ನು ಸಹ ಈಗಲೂ ಜನರು ನೋಡುತ್ತಾರೆ. ಕಳೆದ ವರ್ಷ ರಂಗಾಯಣದ ಕಲಾವಿದರು ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಸಂಗೀತ ನಾಟಕವನ್ನು ಪ್ರದರ್ಶಿಸಿದರು. ಇಡೀ ನಾಟಕ ಥಿಯೇಟರ್ ಹೌಸ್‌ಫುಲ್‌ ಆಗಿತ್ತು. ಈಗಲೂ ಅಂತಹ ನಾಟಕಗಳಿಗೆ ಬೇಡಿಕೆ ಇದೆ ಎಂಬುದು ಊರಿನ ಹಿರಿಯರ ಅಭಿಪ್ರಾಯ. ಕಳೆದ ವರ್ಷ ಟೂರಿಂಗ್‌ ಟಾಕೀಸ್‌ನಲ್ಲಿ ಸಿನಿಮಾ ಪ್ರದರ್ಶನವಿತ್ತು. ಈಗ ನಾಟಕ ಕಂಪನಿಗಳೇ ಇವೆ. ಜಮಾನಕ್ಕೆ ತಕ್ಕಂತೆ ಬದಲಾಗುವ ನಾಟಕ ಕಂಪನಿ ಮಾಲೀಕರು ಈಚೆಗೆ ಕಿರುತೆರೆ ನಟಿಯರನ್ನೂ ಕರೆಸುತ್ತಿದ್ದಾರೆ. ಮಧ್ಯಾಹ್ನ 3.15, ಸಂಜೆ 6.15, ರಾತ್ರಿ 9.15, ತಡರಾತ್ರಿ 1.30ಕ್ಕೆ ನಾಟಕಗಳು ಆರಂಭವಾಗುತ್ತವೆ. ಕತ್ತಲಾಗುತ್ತಾ ಬಂದಂತೆಲ್ಲ ನಾಟಕ ನೋಡುವವರ ಸಂಖ್ಯೆಯೂ ಹೆಚ್ಚುತ್ತಲೇ ಹೋಗುತ್ತದೆ.

ನಾಟಕದ ಹೆಸರುಗಳು ಪ್ರಾಸಬದ್ಧವಾಗಿರುತ್ತದೆ. ಮಂಗ್ಳೂರ ಮಾಣಿ ಹುಬ್ಬಳ್ಳಿ ರಾಣಿ, ತೊದಲ ಗಂಗಿ ಹರದಾಳ ಅಂಗಿ, ಅವ್ವ ಬಂಗಾರಿ ಮಗಳು ಸಿಂಗಾರಿ... ಇವು ನಾಟಕದ ಹೆಸರುಗಳ ಕೆಲ ಸ್ಯಾಂಪಲ್‌ಗಳು.

ಚಿತ್ರಗಳು: ತಾಜುದ್ದೀನ್‌ ಆಜಾದ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !