ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಸರ ತರಿಸುವ ಲೇವಡಿ’

Last Updated 28 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

1. ನನಗೆ ಓದು, ಬರಹದ ಜೊತೆಗೆ ವ್ಯಾಸಂಗ ಮಾಡುವುದೆಂದರೆ ತುಂಬಾ ಇಷ್ಟ. ಹೀಗಾಗಿ ನನಗೆ ಬೇರೆಯುವರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಸದಾ ಒಂಟಿಯಾಗಿರುತ್ತೇನೆ. ಈ ಕಾರಣದಿಂದ ಸ್ನೇಹಿತರೆಲ್ಲ ನನ್ನನ್ನು ಲೇವಡಿ ಮಾಡುತ್ತಾರೆ? ಈ ರೀತಿ ಇರುವುದು ತಪ್ಪೇ?

-ಶಿವಕುಮಾರ್, ಶಿವಮೊಗ್ಗ

ನೀವು ನಿಮ್ಮ ಸಮಯವನ್ನು ಓದು ಹಾಗೂ ಜ್ಞಾನರ್ಜನೆಗಾಗಿಯೇ ಮೀಸಲಿರಿಸಿದ್ದೀರಿ; ನಿಮ್ಮೆಲ್ಲಾ ಗಮನವೂ ಅದರ ಮೇಲೆ ಇದೆ ಎನ್ನುವುದು ತಿಳಿದು ಸಂತಸವಾಯ್ತು. ಆದರೆ ಪುಸ್ತಕಜ್ಞಾನದ ಜೊತೆಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ನೀವು ತಿಳಿದುಕೊಳ್ಳುವುದು ಅವಶ್ಯಕ. ನಿಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಸಮಾನ ಮನಸ್ಕ ಸ್ನೇಹಿತರ ಜೊತೆ ಬೆರೆಯಬೇಕಾಗುತ್ತದೆ. ಅದರಿಂದ ನೀವು ಸಾಮಾಜಿಕವಾಗಿಯೂ ಬೆಳೆಯಬಹುದು. ನೀವು ಒಬ್ಬಂಟಿಯಾಗಿರುವುದನ್ನು ಯಾರೂ ಅಪಹಾಸ್ಯ ಮಾಡುವುದಿಲ್ಲ. ಆದರೆ ಅದರಿಂದ ನೀವು ಸಾಮಾಜಿಕ ಜೀವನವನ್ನು ಕಳೆದುಕೊಳ್ಳಬಹುದು.

ಸ್ವಲ್ಪ ಹೊತ್ತಾದರೂ ಸ್ನೇಹಿತರ ಜೊತೆ ಬೆರೆಯಿರಿ. ಪ್ರಸ್ತುತ ಘಟನೆಗಳು, ನಿಮ್ಮ ಓದು, ಸುಖ ಸಂತೋಷ ಬೇಸರ – ಇಂಥ ವಿಷಯಗಳ ಬಗ್ಗೆ ಅವರ ಜೊತೆ ಹಂಚಿಕೊಳ್ಳಿ. ಜೀವನ ಎನ್ನುವುದು ಅನುಭವಗಳ ಸಾರ. ಹಾಗಾಗಿ ಎಲ್ಲ ಸಾಧ್ಯತೆಗಳಿಗೂ ತೆರೆದುಕೊಂಡಿರಬೇಕು.

**

2. ನಾನು ತುಂಬಾ ಸೋಮಾರಿ. ಪ್ರತಿಯೊಂದು ಕೆಲಸವನ್ನು ಮುಂದೂಡುತ್ತೇನೆ. ಈ ಸೋಮಾರಿತನವನ್ನು ಹೋಗಲಾಡಿಸಿ, ಜೀವನದಲ್ಲಿ ಶಿಸ್ತುಕ್ರಮವನ್ನು ಮೂಡಿಸಿಕೊಳ್ಳುವುದು ಹೇಗೆ?

ರಕ್ಷಿತ್, ಮೂಡಿಗೆರೆ

ವಿಳಂಬ ಪ್ರವೃತ್ತಿ ಸೋಮಾರಿತನಕ್ಕಿಂತ ವಿರುದ್ಧವಾದುದು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಇಲ್ಲಿ ಎರಡನ್ನು ಹೇಳಿದ್ದೀರಿ. ನೀವು ಸೋಮಾರಿ ಹಾಗೂ ನಿಮ್ಮಲ್ಲಿ ವಿಳಂಬ ಪ್ರವೃತ್ತಿಯೂ ಇದೆ ಎಂದು. ವಿಳಂಬ ಪ್ರವೃತ್ತಿಯು ಚಟುವಟಿಕೆಯ ಹಂತ. ಆದರೆ ವಿಳಂಬ ಪ್ರವೃತ್ತಿಯ ವ್ಯಕ್ತಿಗಳು ತಮಗೆ ಮುಖ್ಯ ಎನ್ನಿಸಿದ ಕೆಲಸಕ್ಕಿಂತ ಸುಲಭವಾದ ಕೆಲಸವನ್ನು ಮಾಡುವತ್ತ ಗಮನ ನೀಡುತ್ತಾರೆ. ಇಂತಹ ಗುಣವುಳ್ಳವರು ತಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಲು ಮನಸ್ಸು ಮಾಡುವುದಿಲ್ಲ. ಅದರ ಬದಲಾಗಿ ಅವರಿಗೆ ಖುಷಿ ಎನ್ನಿಸುವ ಕೆಲಸವನ್ನಷ್ಟೇ ಮಾಡಲು ಮನಸ್ಸು ಮಾಡುತ್ತಾರೆ.

ತುಂಬಾ ಸಮಯದವರೆಗೂ ವಿಳಂಬ ಪ್ರವೃತ್ತಿಯನ್ನು ಹೊಂದಿದ್ದರೆ ನಮ್ಮ ಕೆಲಸದಿಂದ ನಾವು ಸ್ಫೂರ್ತಿಗೊಳ್ಳುವುದಿಲ್ಲ; ಜೊತೆಗೆ ಭ್ರಮನಿರಸಗೊಳ್ಳುತ್ತೇವೆ. ಇದು ಖಿನ್ನತೆಗೂ ಕಾರಣವಾಗಬಹುದು.

ಆದರೆ ಸೋಮಾರಿತನ ಎನ್ನುವುದು ನಿಷ್ಕ್ರೀಯ ಹಂತ. ಇದರಿಂದ ನಿರಾಸಕ್ತಿ ಮೂಡುತ್ತದೆ. ನೀವು ಸೋಮಾರಿಯಾಗಿದ್ದೀರಾ ಎಂದರೆ ನೀವು ದೈಹಿಕವಾಗಿಯೂ ಮಾನಸಿಕವಾಗಿಯೂ ಸದೃಢರಾಗಿಲ್ಲ ಎಂದು ಅರ್ಥ.ನಿಮ್ಮ ಡಯಟ್ ಕ್ರಮವನ್ನು ಪರಿಶೀಲಿಸಿ. ವ್ಯಾಯಾಮ ಮಾಡುವುದನ್ನು ಆರಂಭಿಸಿ. ಜಿಮ್‌ಗೆ ಸೇರಿ. ಬೇರೆಯವರು ಮಾಡುವ ದೈಹಿಕ ಕಸರತ್ತನ್ನು ನೋಡಿ ನೀವು ಪ್ರೇರಣೆಗೊಳ್ಳಬಹುದು.

ಒಮ್ಮೆ ನೀವು ದೈಹಿಕವಾಗಿ ಸದೃಢರಾದರೆ ನಿಮ್ಮ ಸೋಮಾರಿತನ ನಿಮ್ಮಿಂದ ದೂರ ಸರಿಯುತ್ತದೆ. ಆಗ ನಿಮ್ಮ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸಲು ಉತ್ಸಾಹವೂ ಮೂಡುತ್ತದೆ. ‘ಇದು ನನ್ನಿಂದ ಸಾಧ್ಯ, ಇದನ್ನು ನಾನು ಮಾಡುತ್ತೇನೆ’ ಎಂಬುದನ್ನು ಆಗಾಗ ನಿಮಗೆ ನೀವೇ ಹೇಳಿಕೊಳ್ಳುತ್ತ ಇರಬೇಕು. ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ. ಆಗಾಗ ನಿಮ್ಮ ಟಾಸ್ಕ್‌ಗಳ ಬಗ್ಗೆ ನೆನಪು ಮಾಡಲು ಹಾಗೂ ಕೂಡಲೇ ಅದನ್ನು ಮಾಡುವಂತೆ ನಿಮಗೆ ಎಚ್ಚರಿಸಲು ಹೇಳಿ. ಹೀಗೆ ತೊಡಗಿಕೊಳ್ಳುವುದರಿಂದ ನಿಮ್ಮ ಜೀವನಶೈಲಿಯಲ್ಲಿ ನಿಧಾನವಾಗಿ ಬದಲಾವಣೆಗಳಾಗಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT