ಬುಧವಾರ, ಸೆಪ್ಟೆಂಬರ್ 23, 2020
20 °C

ರಾಜಕುಮಾರ್ ಹಿರಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್ಸ್‌, ಪಿಕೆ, ಸಂಜು ಈ ಚಿತ್ರಗಳ ಹೆಸರು ಕೇಳಿದರೇ ಸಾಕು ಗೊತ್ತಿಲ್ಲದೆಯೇ ‘ವಾವ್‌’ ಎಂದು ಉದ್ಘರಿಸುವ ದೊಡ್ಡ ಸಮುದಾಯವೇ ಇದೆ. ಹೀಗೆ ತಾವು ನಿರ್ದೇಶಿಸಿದ ಒಂದೊಂದು ಚಿತ್ರಗಳನ್ನೂ ಮೈಲಿಗಲ್ಲಾಗಿಸಿದ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ರಾಜಕುಮಾರ್‌ ಹಿರಾನಿ. 

ಸಾಮಾನ್ಯ ಪ್ರೇಕ್ಷಕರು ಮತ್ತು ಸಿನಿ ವಿಶ್ಲೇಷಕರು ಇಬ್ಬರೂ ಮೆಚ್ಚಿಕೊಳ್ಳುವ ಅಪರೂಪದ ನಿರ್ದೇಶಕರಲ್ಲಿ ರಾಜಕುಮಾರ್‌ ಹಿರಾನಿ ಪ್ರಮುಖರು. 2003ರಲ್ಲಿ ತಮ್ಮ ಮೊದಲ ಸಿನಿಮಾ ನಿರ್ದೇಶಿಸಿದ ಅವರು ಇದುವರೆಗೆ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಐದು. ಆದರೆ ಆ ಐದೂ ಸಿನಿಮಾಗಳು ಅವರ ಹೆಸರನ್ನು ಚಿತ್ರರಂಗದ ಇತಿಹಾಸದಲ್ಲಿ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿ ಅಚ್ಚೊತ್ತಿವೆ. ಅವರ ಎಲ್ಲ ಸಿನಿಮಾಗಳೂ ಬಾಕ್ಸ್‌ ಆಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಜತೆಗೆ ಹಲವು ಪ್ರಶಸ್ತಿಗಳನ್ನೂ ಅವರಿಗೆ ತಂದುಕೊಟ್ಟಿವೆ. ಅವರ ಸಿನಿಮಾಗಳಿಗೆ ಇದುವರೆಗೆ ನಾಲ್ಕು ರಾಷ್ಟ್ರಪ್ರಶಸ್ತಿಗಳು ಬಂದಿದೆ. 

ನಾಗಪುರದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿಬೆಳೆದ ಹಿರಾನಿ ಅವರಿಗೆ ಬಾಲ್ಯದಿಂದಲೇ ರಂಗಭೂಮಿ ಹುಚ್ಚಿತ್ತು. ನಾಟಕಗಳಲ್ಲಿಯೂ ಅವರು ಅಭಿನಯಿಸುತ್ತಿದ್ದರು. ಸಿನಿಮಾ ಗಂಧವನ್ನು ಮೈಮನಗಳಲ್ಲಿ ತುಂಬಿಕೊಂಡೇ ಅವರು ಫಿಲಂ ಆ್ಯಂಡ್ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ ಸೇರಿಕೊಂಡರು. ಅಲ್ಲಿ ಅವರು ಆಯ್ದುಕೊಂಡ ವಿಷಯ ಸಿನಿಮಾ ಸಂಕಲನ.

 ನಂತರ ಸಂಕಲನಕಾರನಾಗಿ ಮತ್ತು ಜಾಹೀರಾತು ಸಿನಿಮಾಗಳ ಕರ್ತೃನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. 2003ರಲ್ಲಿ ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶನದ ಟೋಪಿ ಧರಿಸಿದಾಗ ಅವರಿಗೆ 40 ವರ್ಷ ವಯಸ್ಸು. ತಂದೆಯ ಆಸೆಯಂತೆ ಡಾಕ್ಟರ್‌ ಆಗಲು ಬಯಸುವ ಮುನ್ನಾಭಾಯಿಯ ಕಥೆಯನ್ನು ಹೇಳುವ ಈ ಸಿನಿಮಾ, ‘ನಗುವಿಗಿಂತ ಪರಿಣಾಮಕಾರಿ ಮದ್ದಿಲ್ಲ’ ಎನ್ನುವುದನ್ನು ನಗಿಸುತ್ತಲೇ ಹೇಳುತ್ತದೆ.

ಈ ಚಿತ್ರದ ಕುರಿತು ಬ್ರಿಟಿಷ್ ಮೆಡಿಕಲ್ ಜರ್ನಲ್‌ ಒಂದು ವಿಮರ್ಶೆಯನ್ನೂ ಪ್ರಕಟಿಸಿತ್ತು. ಇದರ ಮುಂದುವರಿದ ಭಾಗ ‘ಲಗೇ ರಹೋ ಮುನ್ನಾಭಾಯಿ’ ಸಿನಿಮಾ ಬಂದಿದ್ದು 2006ರಲ್ಲಿ. ಈ ಚಿತ್ರದಲ್ಲಿ ನಗುವಿನ ಗುಳಿಗೆಯ ಅಡಿಯಲ್ಲಿಯೇ ಗಾಂಧಿತತ್ವದ ಔಷಧವನ್ನು ಇಟ್ಟು ಉಣಿಸಿದ್ದರು ಹಿರಾನಿ. 

ರಾಜಕುಮಾರ್ ಹಿರಾನಿ ಅವರ ನಂತರದ ಸಿನಿಮಾ 3 ಈಡಿಯಟ್ಸ್‌ ಚೇತನ್ ಭಗತ್‌ ಅವರ ಕಾದಂಬರಿ ಆಧರಿಸಿದ್ದು. ಮೂವರು ಕಾಲೇಜು ಹುಡುಗರ ಬದುಕಿನ ಕಥೆಯನ್ನು ಇಟ್ಟುಕೊಂಡು ಹೆಣೆದ ಈ ಸಿನಿಮಾವೂ ಶಿಕ್ಷಣದ ಇನ್ನೊಂದು ಆಯಾಮವನ್ನು ಮನರಂಜನೆಯ ಜತೆಜತೆಗೇ ತೆರೆದಿಟ್ಟಿತ್ತು. 2016ರಲ್ಲಿ ಹಿರಾನಿ ನಿರ್ದೇಶಿಸಿದ ‘ಪಿಕೆ’ ಚಿತ್ರಕ್ಕೆ ಸಂಬಂಧಿಸಿದಂತೆ ವಿವಾದವನ್ನು ಎದುರಿಸಬೇಕಾಗಿತ್ತು. ಆದರೆ ಅದನ್ನು ಮೀರಿ ಜನಮೆಚ್ಚುಗೆಯನ್ನು ಗಳಿಸಿತ್ತು ಪಿಕೆ.

ನಂತರದ ದಿನಗಳಲ್ಲಿ ಹಿರಾನಿ ‘ರಾಜಕುಮಾರ್ ಹಿರಾನಿ ಫಿಲ್ಮ್ಸ್‌’ ಹೆಸರಿನಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯನ್ಣೂ ಆರಂಭಿಸಿದರು. 

ಗಂಭೀರ ಸಾಮಾಜಿಕ ಸಮಸ್ಯೆಗಳನ್ನು, ಸಂಗತಿಗಳನ್ನು ಮನರಂಜನೆಯ ಮೂಲಕವೇ ಹುಡುಕುವ ಸಾಮರ್ಥ್ಯವನ್ನು ಹೊಂದಿರುವ ನಿರ್ದೇಶಕ. ಅವರ ಚಿತ್ರದ ನಾಯಕ ಸದಾ ಸಮಾಜದ ಹಿಪೊಕ್ರಸಿಯನ್ನು, ಸಿದ್ಧಮಾದರಿಗಳನ್ನು ಲೇವಡಿ ಮಾಡುತ್ತಲೇ ಇರುತ್ತಾನೆ. 

ಇತ್ತೀಚೆಗೆ ಅವರು ಸಂಜಯ್ ದತ್‌ ಬದುಕನ್ನು ಆಧರಿಸಿದ ‘ಸಂಜು’ ಚಿತ್ರವೂ ಯಶಸ್ವಿಯಾಗಿದೆ. ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು