ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನನ್ನು ನೋಡುವ ಬಗೆ

Last Updated 19 ಜನವರಿ 2019, 19:45 IST
ಅಕ್ಷರ ಗಾತ್ರ

ರಾಮಾಯಣ ಮೊದಲ ಮಹಾಕಾವ್ಯ. ಮೊದಲ ಮಹಾಕಾವ್ಯದ ಪರಮೋಚ್ಚ ಸನ್ನಿವೇಶದಲ್ಲಿ ರಾಮ- ರಾವಣರು ಪರಸ್ಪರ ಮುಖಾಮುಖಿಯಾಗಿ ನಿಂತಾಗ ರಾಮನಿಂದ ವಾಲ್ಮೀಕಿ ಒಂದು ಮಾತು ಹೇಳಿಸುತ್ತಾರೆ. ಇದು ವಿಶ್ವದ ಎಲ್ಲ ನಾಗರಿಕತೆಗಳಿಗೆ, ಭಾರತದ ನಾಗರಿಕತೆ ಕೊಟ್ಟ ಸಂದೇಶದಂತಿದೆ. ‘ಮಾನವ ಕುಲದ ಮಹಾಶತ್ರು ಯುದ್ಧ’ ಎಂಬುದು ರಾಮ ರಾವಣನಿಗೆ ಹೇಳುವ ಮಾತು. ಈ ಮಾತನ್ನು ಮತ್ತೆ ಮತ್ತೆ ಹೇಳಲು ಬುದ್ಧ, ಮಹಾವೀರ, ಯೇಸು, ಗಾಂಧಿ... ಹೀಗೆ ಹಲವರನ್ನು ಕಾಲಕಾಲಕ್ಕೆ ನಾಗರಿಕತೆಗಳು ಸೃಷ್ಟಿಸುತ್ತಾ ಬಂದಿವೆ.

ಕಾವ್ಯವೊಂದು ಮಾಡಬೇಕಾದದ್ದು ಏನೆಂಬುದನ್ನು ರಾಮಾಯಣ ಹೇಳಿಯಾಗಿದೆ. ಯುದ್ಧವಾಗಲಿ, ಹಿಂಸೆಯಾಗಲಿ ವ್ಯಕ್ತಿಗಳ ನಿಜ ಅಪೇಕ್ಷೆಯಾಗಿ ಬರುವುದು ಬಹಳ ಕಡಿಮೆ. ಅದು ಸನ್ನಿವೇಶಗಳಿಂದ ಹೇರಲ್ಪಡುತ್ತದೆ. ಅಂತಹ ಸನ್ನಿವೇಶಗಳನ್ನೂ ಮೀರುವ ಪ್ರಯತ್ನಗಳನ್ನು ಮಹಾತ್ಮರು ಕಾಲಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ. ಸಾಮಾನ್ಯವಾಗಿ ಕವಿಗಳು, ಸಾಹಿತಿಗಳು ಯುದ್ಧದ ಪರವಾಗಿ ಮಾತನಾಡುವುದಿಲ್ಲ. ಆಡಳಿತಗಾರರು ಕೆಲವೊಮ್ಮೆ ಅನಿವಾರ್ಯವಾಗಿ ಯುದ್ಧ ಮಾಡಬೇಕಾಗುತ್ತದೆ ಎಂಬುದು ಸಾಹಿತಿಗಳಿಗೆ ಗೊತ್ತಿರುತ್ತದೆ. ಆದರೂ ಸಾಹಿತಿಗಳು ಯುದ್ಧದ ಪರ ಮಾತನಾಡಬಾರದೆಂದು ರಾಮಾಯಣ ಸಾಹಿತಿಗಳಿಗೆ ಹೇಳಿದೆ.

ರಾಮಾಯಣ ಹುಟ್ಟುವುದು ಒಂದು ಅಕಾರಣ ಕ್ರೌರ್ಯದ ಸನ್ನಿವೇಶದಲ್ಲಿ. ಕವಿ ಅಡಿಗರು ವಾಲ್ಮೀಕಿಯ ಬಗ್ಗೆ ‘ಹುತ್ತಗಟ್ಟದೆ ಚಿತ್ತ ಕೆತ್ತೀತೇನೊ ಆ ಅಂಥ ಪುರುಷೋತ್ತಮನ ರೂಪುರೇಖೆ’ ಎಂದಿದ್ದಾರೆ. ರಾಮ ಪುರುಷೋತ್ತಮ. ಆ ಪುರುಷೋತ್ತಮನನ್ನು ಕಾಣಿಸಿದ್ದು ವಾಲ್ಮೀಕಿ. ವಾಲ್ಮೀಕಿಯ ಚಿತ್ತ ಹುತ್ತಗಟ್ಟಿ ಧ್ಯಾನಸ್ಥವಾದದ್ದರ ಫಲವಾಗಿ ರಾಮನೆಂಬ ಪುರುಷೋತ್ತಮನನ್ನು ಕಾಣಿಸಲು ಸಾಧ್ಯವಾಯಿತು. ಹುತ್ತದ ಮಣ್ಣು ಬಹಳ ನುಣುಪು. ವಾಲ್ಮೀಕಿಯ ಮನಸೂ ಅಷ್ಟೇ ಕೋಮಲ. ವಾಲ್ಮೀಕಿಯ ಕಾವ್ಯವೂ ಅಷ್ಟೇ ಕೋಮಲ.

ವಾಲ್ಮೀಕಿಯ ನಂತರ ಸಾವಿರಾರು ರಾಮಾಯಣಗಳು ಬರೆಯಲ್ಪಟ್ಟಿವೆ. ಅವೆಲ್ಲವೂ ಹೊಸ ಕಾಲದ ಹೊಸ ಅವಶ್ಯಕತೆಗಳನ್ನು ಒಳಗೊಂಡು ಭಾರತದ ಸಂಸ್ಕೃತಿಗಳನ್ನು ಬೆಳೆಸಿದವು.

ರಾಮನು ವಿಷ್ಣುವಿನ ಅವತಾರ ಎಂಬ ಕಲ್ಪನೆಯನ್ನು ಬಿಟ್ಟು, ಒಬ್ಬ ಮನುಷ್ಯನಾದ ರಾಮನು ತನ್ನ ಬದುಕಿನ ಕ್ರಮದಿಂದಾಗಿ ದೈವತ್ವ ಪಡೆದವನೆಂದು ಯೋಚಿಸಿ ನೋಡಿದರೆ ನಮ್ಮೊಳಗಿನ ರಾಮನೂ ಎಚ್ಚೆತ್ತುಕೊಳ್ಳಬಲ್ಲ.

ರಾಮ, ಸೀತೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ಅದು ಚೂಡಾಮಣಿ ಪ್ರಸಂಗ, ಕಾಕಾಸುರ ಪ್ರಕರಣ, ಬಂಗಾರದ ಜಿಂಕೆಯನ್ನು ಬೆನ್ನಟ್ಟುವುದರಲ್ಲೆಲ್ಲ ಗೊತ್ತಾಗುತ್ತದೆ. ಸೀತೆಯನ್ನು ಕಂಡಿದ್ದಕ್ಕೆ ಸಾಕ್ಷಿಯಾಗಿ ಹನುಮಂತನಿಗೆ ಸೀತೆ ಚೂಡಾಮಣಿ ಕೊಟ್ಟು ಯಾವ ಸಂದರ್ಭದಲ್ಲಿ ಅದನ್ನು ಕೊಡಲಾಯಿತೆಂದು ಅವನಿಗೆ ವಿವರಿಸುತ್ತಾಳೆ. ಪ್ರತಿ ಗಂಡ-ಹೆಂಡತಿಯ ಬಳಿಯೂ ಬೇರೆಯವರಿಗೆ ಗೊತ್ತಿಲ್ಲದ ಹಲವು ಸಂಗತಿಗಳಿರುತ್ತವೆ. ಇಬ್ಬರಲ್ಲಿ ಒಬ್ಬರು ಹೇಳಿದಾಗ ಮಾತ್ರ ಅದು ಬೇರೆಯವರಿಗೆ ಗೊತ್ತಾಗಬೇಕು. ಈ ದಾಂಪತ್ಯದ ಸ್ವರೂಪ ರಾಮ-ಸೀತೆಯರಲ್ಲೂ ಕಾಣಿಸುತ್ತದೆ. ಸೀತೆಯ ಕುರಿತಾದ ಅಪಾರ ಶೋಕವನ್ನು ‘ದಶಾವತಾರ’ ಸಿನಿಮಾದಲ್ಲಿ ರಾಜಾಶಂಕರ್ ‘ವೈದೇಹಿ ಏನಾದಳೂ’ ಎಂಬ ಗೀತೆಗೆ ಮನೋಜ್ಞವಾಗಿ ಅಭಿನಯಿಸಿ ತೋರಿಸಿದ್ದಾರೆ.

***

ಸುಗ್ರೀವ ರಾಜ್ಯಭ್ರಷ್ಟನಾಗಿ ಹೆಂಡತಿಯನ್ನು ಕಳೆದುಕೊಂಡವನು. ರಾಮನಿಗೆ ಸುಗ್ರೀವ ಬೇಕು. ಸುಗ್ರೀವನಿಗೆ ರಾಮ ಬೇಕು. ಆ ಕ್ಷಣದಲ್ಲಿ ರಾಮನೂ ಮಾನವ ಸಹಜವಾಗಿ ವರ್ತಿಸುವುದೇ ವಾಲಿವಧೆ. ಆದರೆ ರಾಮ ಮತ್ತೆ ಸಂಯಮ ಸಾಧಿಸುತ್ತಾನೆ. ರಾಜ್ಯ ಮತ್ತು ಹೆಂಡತಿಯನ್ನು ಪಡೆದ ಸುಗ್ರೀವ ಮಳೆಗಾಲ ಕಳೆದರೂ ಸೀತೆಯ ಹುಡುಕಾಟಕ್ಕೆ ಹೊರಡುವುದಿಲ್ಲ. ಅದರಿಂದ ರಾಮ ಸಿಟ್ಟುಗೊಳ್ಳುವುದು ಮಾನವ ಸಹಜ ಪ್ರವೃತ್ತಿ. ಆದರೆ ಆಗ ಸಂಯಮ ವಹಿಸುವ ರಾಮ, ಸುಗ್ರೀವನನ್ನು ಎಚ್ಚರಿಸಲು ಲಕ್ಷ್ಮಣನನ್ನು ಕಳಿಸುತ್ತಾನೆ. ಸುಗ್ರೀವನ ಗುಹೆಯ ಮುಂದೆ ಆರ್ಭಟಿಸುವ ಲಕ್ಷ್ಮಣನನ್ನು ಎದುರ‍್ಗೊಳ್ಳಲು ಸುಗ್ರೀವ ತಾನು ಹೋಗದೆ ‘ತಾರೆ’ಯನ್ನು ಕಳಿಸುವುದು ಸಿಟ್ಟಿಗೆದ್ದ ಪುರುಷನನ್ನು ಎದುರುಗೊಳ್ಳಲು ಹೆಣ್ಣು ಹೋದರೆ ಆತ ಕೊಂಚ ಶಾಂತನಾಗುತ್ತಾನೆ ಎಂಬ ಮಾನವ ಸಹಜ ಸ್ವಭಾವದ ಆಧಾರದಲ್ಲೆ ಇದೆ. ಈ ಸನ್ನಿವೇಶದಲ್ಲಿ ಸಂಯಮ ವಹಿಸುವ ರಾಮ, ಸಮುದ್ರರಾಜ ದಾರಿ ಬಿಡದೆ ಇದ್ದಾಗ ಮತ್ತೆ ಸಿಟ್ಟಿಗೆದ್ದು ‘ಇಡೀ ಸಮುದ್ರವನ್ನೆ ಬರಿದು ಮಾಡುತ್ತೇನೆ’ ಎಂದು ನಿಂತುಬಿಡುತ್ತಾನೆ! ಹೀಗೆ ಮಾನವ ಸಹಜ ಪ್ರವೃತ್ತಿಗಳೊಂದಿಗೇ ಬೆಳೆಯುತ್ತಾ ದೈವತ್ವಕ್ಕೇರುವ ರಾಮ, ವಾಲ್ಮೀಕಿಯ ಸಾರ್ಥಕ ಅನುಸಂಧಾನದ ಫಲವಾಗಿ ಮನುಷ್ಯರಿಗೆ ಹತ್ತಿರವಾಗುತ್ತಾನೆ.

***

ರಾಮಾಯಣ ಮತ್ತು ಮಹಾಭಾರತ ಮೌಲ್ಯಗಳ ಅನ್ವೇಷಣೆ ಮಾಡುವ ಪ್ರಕ್ರಿಯೆಯೇ ಅದ್ಭುತ. ಮಹಾಭಾರತ ವೈಚಾರಿಕ ಮೌಲ್ಯಗಳ ಅನುಸಂಧಾನ ಮಾಡಿ
ದರೆ ರಾಮಾಯಣ ಭಾವನಾತ್ಮಕ ಮೌಲ್ಯಗಳ ಅನ್ವೇಷಣೆ ಮಾಡುತ್ತದೆ. ರಾಮಾಯಣ
ವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಇಡೀ ದೇಶ ಸುಸಂಸ್ಕೃತವಾಗಲು ಸಾಕು. ರಾಮ, ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಯ ಪ್ರತಿನಿಧಿ. ಕುಟುಂಬಕ್ಕೆ ಆದ್ಯತೆ ಕೊಟ್ಟು ತಂದೆಯ ಮಾತಿಗಾಗಿ ಅವನು ಕಾಡಿಗೆ ಹೋದ. ತಾನು ಜನರ ಮಾತಿಗೆ ಬೆಲೆ ಕೊಡಬೇಕಾಗಿತ್ತೆಂದು ಅವನಿಗೆ ನಂತರ ಅರ್ಥವಾಯಿತು.

ಎರಡನೆಯ ಬಾರಿ ಆಯ್ಕೆ ಎದುರಾದಾಗ, ಕುಟುಂಬದವನಾಗಿ ನಿರ್ಧಾರ ತೆಗೆದು
ಕೊಳ್ಳಬೇಕಾದವನು ಜನರ ಮಾತಿಗೆ ಬೆಲೆ ಕೊಟ್ಟು ಸೀತಾಪರಿತ್ಯಾಗ ಮಾಡಿದ. ರಾಮ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಸೀತೆ ಭೂಗರ್ಭ ಸೇರಲು ಹೊರಟಾಗ ಗಂಡನಾಗಿಯೂ, ರಾಜನಾಗಿಯೂ ಸೀತೆಯನ್ನು ತಡೆದು ನಿಲ್ಲಿಸಬಹುದಿತ್ತು. ಆದರೆ ‘ಹಾ ಸೀತೆ’ ಎಂದು ಶೋಕಿಸುತ್ತಾನೆಯೇ ಹೊರತು ತಡೆಯುವುದಿಲ್ಲ. ತಾನು ಹೆಂಡತಿಯ ಮೇಲೆ ಅಧಿಕಾರ ಚಲಾಯಿಸಿದ್ದು ತಪ್ಪಾಗಿದೆ; ಇನ್ನು ಅಧಿಕಾರ ಚಲಾಯಿಸಬಾರದು ಎಂಬ ಅರಿವಿಗೆ ಅವನು ನಿಷ್ಠನಾದ ಸಂದರ್ಭವಿದು.

ನಾವು ವೈಯಕ್ತಿಕವಾಗಿ ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಗಾಂಧೀಜಿಯವರು ಹೇಳಿದ್ದು ವಾಲ್ಮೀಕಿ ಕಟ್ಟಿಕೊಟ್ಟ ಮೌಲ್ಯದಿಂದಲೇ. ನಾವು ರಾಮನ ಹೆಸರು ಹೇಳುತ್ತೇವೆ ಎಂದರೆ ಆತ್ಮಸಾಕ್ಷಿಗೆ ನಿಷ್ಠರಾಗುವ ಪ್ರಯತ್ನವನ್ನಾದರೂ ಮಾಡಬೇಕು. ಆತ್ಮಸಾಕ್ಷಿಯ ಕಡೆಗೂ ಹೊರಳದವನು ತಾನು ರಾಮಭಕ್ತ ಎಂದರೆ ದೆವ್ವದ ಬಾಯಿಯಲ್ಲಿ ಭಗವದ್ಗೀತೆ ಬಂದಂತಾಗುತ್ತದೆ.

***

ಉದಾತ್ತ ಗುಣ ಅಂದರೆ ಏನು ಎನ್ನುವುದು ರಾವಣನ ಹತ್ಯೆಯಾದಾಗ ಗೊತ್ತಾಗುತ್ತದೆ. ರಾವಣನ ಮೃತದೇಹಕ್ಕೆ ರಾಮ ನಮಸ್ಕರಿಸುತ್ತಾನೆ. ಲಂಕೆಯ ರಾಜನಿಗೆ ಸಲ್ಲಬೇಕಾದ ಎಲ್ಲ ಗೌರವಗಳಿಂದ ರಾವಣನ ಅಂತ್ಯಸಂಸ್ಕಾರ ಆಗಬೇಕು ಎನ್ನುತ್ತಾನೆ. ರಾವಣನ ಮಂತ್ರಿ ಮಾಲ್ಯವಂತ ಕಿರೀಟವನ್ನು ರಾಮನಿಗರ್ಪಿಸಿ ‘ಇನ್ನು ಮುಂದೆ ಅಯೋಧ್ಯೆಯ ಶಾಸನವನ್ನು ಲಂಕೆ ಪಾಲಿಸುತ್ತದೆ’ ಎಂದಾಗ ‘ಲಂಕೆ ಎಂದೆಂದಿಗೂ ಸ್ವತಂತ್ರವೇ. ಅಯೋಧ್ಯೆ ಲಂಕೆಯ ಮೇಲೆ ಶಾಸನ ಮಾಡುವುದಿಲ್ಲ’ ಎಂದು, ತಾನು ಗೆದ್ದ ರಾಜ್ಯವನ್ನು ವಿಭೀಷಣನಿಗೆ ಬಿಟ್ಟುಬಿಡುತ್ತಾನೆ. ನಮ್ಮದಲ್ಲದ್ದನ್ನು ಬಯಸುವ ನಾವು, ಗೆದ್ದುಕೊಂಡದ್ದನ್ನೂ ತ್ಯಜಿಸುವುದನ್ನು ರಾಮಾಯಣದಿಂದ ಕಲಿಯಬೇಕು.

ಮೌಲ್ಯಗಳ ಸೂಕ್ಷ್ಮತೆಯನ್ನು ರಾಮಾಯಣದಲ್ಲಿ ನೋಡಬಹುದು. ರಾಮ, ರಾವಣನನ್ನು ಕೊಲ್ಲಲು ಬ್ರಹ್ಮಾಸ್ತ್ರ ತೆಗೆಯುತ್ತಾನೆ. ಮಂತ್ರ ಶಕ್ತಿಯಿಂದ ಚಲಿಸುವ ಅಸ್ತ್ರ ಕೆಲಸ ಮಾಡಬೇಕಾದರೆ ಅಸ್ತ್ರಕ್ಕೆ ತನ್ನ ಪರಿಚಯವನ್ನು ಹೇಳಿ ಉದ್ದೇಶವನ್ನು ತಿಳಿಸಬೇಕು. ರಾಮನು ‘ದಶರಥ ಪುತ್ರನಾದ ನಾನು’ ಎಂದು ಪರಿಚಯಿಸಿದಾಗ ಬ್ರಹ್ಮಾಸ್ತ್ರ ರಾವಣನ ಬಳಿ ಹೋಗಿ ನಿಲ್ಲುತ್ತದೆ. ರಾಮ ಪುತ್ರಕಾಮೇಷ್ಟಿ ಯಾಗದಲ್ಲಿ ಹುಟ್ಟಿದವನು. ದಶರಥ ರಾಮನ ಪೋಷಕ ತಂದೆ ಹೌದು; ಆದರೆ ಜೈವಿಕ ತಂದೆಯಾಗುತ್ತಾನೆಯೇ ಎಂದು ಬ್ರಹ್ಮಾಸ್ತ್ರಕ್ಕೆ ಸಂಶಯ. ಆಗ ರಾಮ, ‘ಕೌಸಲ್ಯಾ ಪುತ್ರನಾದ ನಾನು’ ಎಂದು ಪರಿಚಯಿಸುತ್ತಾನೆ. ಆಗ ಬ್ರಹ್ಮಾಸ್ತ್ರ ಕೆಲಸ ಮಾಡುತ್ತದೆ. ನಮ್ಮ ಯೋಚನೆ ಮತ್ತು ಮಾತು ಎಲ್ಲ ಅರ್ಥಗಳಲ್ಲೂ ಸಮಂಜಸವೇ ಆಗಿರಬೇಕು ಎನ್ನುವುದನ್ನು ಇದರಿಂದ ಕಲಿತುಕೊಳ್ಳಬೇಕು.

***

ಒಂದನ್ನು ನಂಬಿದರೆ ಸಂಪೂರ್ಣ ನಿಷ್ಠೆ ಇರಬೇಕು ಎಂಬುದನ್ನು ಮಹಾಭಾರತ ‘ಸಂಶಯಾತ್ಮಾ ವಿನಶ್ಯತಿಃ’ ಎಂದು ಹೇಳಿದರೆ ರಾಮಾಯಣ ಅದನ್ನು ಹನುಮಂತನ ಮೂಲಕ ಹೇಳುತ್ತದೆ. ಅಲ್ಲಿ ರಾಮಾಂಜನೇಯ ಯುದ್ಧದ ಪ್ರಸಂಗವಿದೆ. ರಾಮ ಹನುಮಂತನನ್ನು ಹಿಡಿದು ತಳ್ಳುತ್ತಾನೆ. ಆದರೆ ಹಿಂದಕ್ಕೆ ಬಂದು ಬೀಳುವುದು ರಾಮನೇ. ‘ನನ್ನ ಹೃದಯದಲ್ಲಿ ನೀನೇ ಇರುವಾಗ ನಿನ್ನನ್ನು ನೀನೇ ತಳ್ಳಿದರೆ ನೀನಲ್ಲದೆ ಬೇರಾರು ಬೀಳುತ್ತಾರೆ ರಾಮ’ ಎಂದು ಹನುಮಂತ ಕೇಳುತ್ತಾನೆ. ಸೀತೆ ಹನುಮಂತನಿಗೆ ಕೊಟ್ಟ ವರದಿಂದಾಗಿ ರಾಮ ಬಿಟ್ಟ ಎಲ್ಲ ಬಾಣಗಳೂ ಹನುಮನಿಗೆ ಹೂಮಾಲೆಯಾಗುತ್ತವೆ. ಗೆಲುವು ಹನುಮಂತನದೇ. ಗೆಲ್ಲಲು ಬಯಸುವವನಿಗೆ ತಾಳ್ಮೆ ಇರಬೇಕು. ಅಚಲವಾದ ನಿಷ್ಠೆ ಇರಬೇಕು.

***

ನಿಜವಾಗಿ ರಾಮ, ರಾವಣ, ಇಂದ್ರಜಿತು, ಹನುಮ, ಸುಗ್ರೀವ, ಕೈಕೇಯಿ, ಭರತ, ಸೀತೆ, ಲಕ್ಷ್ಮಣ, ಮಂಥರೆ, ಊರ್ಮಿಳೆಯರೆಲ್ಲ ರಾಮಾಯಣದ ಒಳಗಿಲ್ಲ. ಎಲ್ಲರೂ ನಮ್ಮೊಳಗೆ ವಿವಿಧ ಸಂದರ್ಭಗಳಲ್ಲಿ ಪ್ರಕಟವಾಗುವ ವಿವಿಧ ಸ್ವಭಾವಗಳಾಗಿ ಇದ್ದಾರೆ. ಆದ್ದರಿಂದಲೇ ಸಾವಿರಾರು ವರ್ಷಗಳ ಮಹಾಯಾನದ ನಂತರವೂ ರಾಮಾಯಣ ಈ ಕಾಲಕ್ಕೂ ಪ್ರಸ್ತುತವೇ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT