ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ–ಜ್ಞಾನಗಳ ಸಂಗಮ: ರಾಮಾನುಜಾಚಾರ್ಯ

Last Updated 3 ಮೇ 2019, 20:01 IST
ಅಕ್ಷರ ಗಾತ್ರ

ಶ್ರೀಮನ್ನಾರಾಯಣನಿಗೆ ಹಾಸಿಗೆಯಾಗಿದ್ದುಕೊಂಡು ಸೇವೆಸಲ್ಲಿಸುವ ಆದಿಶೇಷನೇ ರಾಮಾನುಜರಾಗಿ ಅವತರಿಸಿಬಂದನೆಂದು ಪ್ರತೀತಿ.

ಚೆನ್ನೈಯಿನ ಸಮೀಪದಲ್ಲಿರುವ ಶ್ರೀಪೆರುಂಬೂದೂರ್ ಪಟ್ಟಣದಲ್ಲಿ ಆಸೂರಿ ಕೇಶವಾಚಾರ್ಯ-ಕಾಂತಿಮತಿ ದಂಪತಿಗೆ ಕ್ರಿ.ಶ. 1017ರಲ್ಲಿ ಚೈತ್ರಮಾಸದಲ್ಲಿ, ಆರ್ದ್ರಾನಕ್ಷತ್ರದಿಂದ ಕೂಡಿದ ಶುಭದಿನದಲ್ಲಿ ಜನಿಸಿದರು. ಬಾಲ್ಯದಿಂದಲೇ ಪ್ರಚಂಡ ಬುದ್ಧಿವಂತರಾಗಿದ್ದ ರಾಮನುಜರು ದೈವಭಕ್ತಿ, ಗುರುಹಿರಿಯರಭಕ್ತಿಯಿಂದ ಕೂಡಿದ್ದರು. ಮುಂದೆ ಕಾಂಚೀಪುರಕ್ಕೆ ಬಂದು ನೆಲೆಸಿ, ಯಾದವಪ್ರಕಾಶರೆಂಬ ಪ್ರಸಿದ್ಧ ಅದ್ವೈತಾಚಾರ್ಯರ ಶಿಷ್ಯರಾದರು.

ಶ್ರೀಯಾಮುನಾಚಾರ್ಯರ ಶಿಷ್ಯರಾದ ಅನೇಕ ಆಚಾರ್ಯರಿಂದ ರಾಮಾನುಜರು ವಿವಿಧ ಶಾಸ್ತ್ರ ಪಾಠ ಪ್ರವಚನಗಳನ್ನು ಅಧ್ಯಯನಮಾಡಿ ಪಾರಂಗತರಾದರು. ಗೋಷ್ಠೀಪೂರ್ಣರಿಂದ (ಹದಿನೇಳು ಬಾರಿ ವಿಫಲರಾಗಿ ಕೊನೆಗೆ) ತಾರಕಮಂತ್ರದ ಉಪದೇಶವನ್ನು ಪಡೆದರು. ಇತರರಿಗೆ ತಿಳಿಸಿದ ಪಕ್ಷದಲ್ಲಿ ನರಕಪ್ರಾಪ್ತಿಯೇ ಆಗುವುದೆಂದು ಗುರುಗಳು ಕಟ್ಟಾಜ್ಞೆಯನ್ನು ವಿಧಿಸಿದ್ದರೂ ಭಕ್ತಜನಸಮೂಹಕ್ಕೆ ಆ ಮಹಾಮಂತ್ರವನ್ನು ಧಾರೆಯೆರೆದ ಮಹಾಕರುಣಾಳು ರಾಮನುಜಾಚಾರ್ಯ. ಕೋಪಗೊಂಡ ಗುರುವಿಗೆ ಅವರು ನೀಡಿದ ಉತ್ತರ ಇಷ್ಟೇ: ‘ಇಷ್ಟು ಜನರ ಉದ್ಧಾರವಾಗುವಾಗ ನಾನೊಬ್ಬ ನರಕಕ್ಕೆ ಹೋಗಲು ಸಿದ್ಧ!’ ಕಾಮುಕನಾದ ಧನುರ್ದಾಸನಿಗೆ ಶ್ರೀರಂಗನಾಥನ ದಿವ್ಯನೇತ್ರಗಳ ದರ್ಶನಮಾಡಿಸಿ ತನ್ಮೂಲಕ ಭಗವಂತನ ಬಗ್ಗೆ ಅಪಾರ ಭಕ್ತಿಯನ್ನು ತುಂಬಿ ಶ್ರೇಷ್ಠ ಶಿಷ್ಯನನ್ನಾಗಿಸಿಕೊಂಡರು. ಕರ್ನಾಟಕದ ಮೇಲುಕೋಟೆಗೆ ಆಗಮಿಸಿ, ಹುದುಗಿದ್ದ ತಿರುನಾರಾಯಣನ ಮೂರ್ತಿಯನ್ನು ಪತ್ತೆಮಾಡಿ ಪ್ರತಿಷ್ಠಿಸಿದರು.

ಭಗವದ್ರಾಮಾನುಜರು ಶ್ರೀಭಾಷ್ಯ, ಗೀತಾಭಾಷ್ಯಾದಿ ಒಂಬತ್ತು ಗ್ರಂಥಗಳ ಮೂಲಕ ವಿಶಿಷ್ಟಾದೈತ-ಸಿದ್ಧಾಂತದ ಪ್ರತಿಪಾದನೆಯನ್ನು ಮಾಡಿದರು.ಲಕ್ಷ್ಮೀಸಮೇತನಾದ ನಾರಾಯಣನೊಬ್ಬನೇ ಪರತತ್ತ್ವ ಎಂದು ಸಾರಿದರು. ಆದರೆ ಜೀವ-ಜಗತ್ತು ಸತ್ಯವಾದದ್ದು, ಮಾಯೆಯಲ್ಲ. ಅವೆಲ್ಲವೂ ಅವನ ದೇಹವೇ ಆಗಿವೆ; ಈಶ್ವರನು ಜಗತ್ತು-ಜೀವಗಳ ಆತ್ಮನಾಗಿ ಆವರಿಸಿದ್ದಾನೆ. ಆತನು ಅನಂತ ಕಲ್ಯಾಣಗುಣ ಪರಿಪೂರ್ಣ, ಸೌಂದರ್ಯಸ್ವರೂಪಿ.

ಸಗುಣ-ಸಾಕಾರನೆಂದು ಪ್ರತಿಪಾದಿಸಿದುದರಿಂದ ಈ ಸಿದ್ಧಾಂತವು ’ವಿಶಿಷ್ಟ-ಅದ್ವೈತ’ ಎನಿಸಿಕೊಂಡಿತು. ಅವನೇ ಅಂತಿಮ ಗುರಿ ಮತ್ತು ಗುರಿಯನ್ನು ಹೊಂದಿಸುವ ದಾರಿ. ಮೋಕ್ಷಕ್ಕೆ ಉಪಾಯವೆಂದರೆ ಅವನಲ್ಲಿ ಅನನ್ಯ ಭಕ್ತಿಯಿಂದಿರುವುದು; ಕರ್ಮ-ಜ್ಞಾನಗಳನ್ನು ಭಕ್ತಿಗೆ ಪೂರಕವಾಗಿರಿಸಿಕೊಂಡು ಅವನಲ್ಲೇ ಸಂಪೂರ್ಣ ಶರಣಾಗತರಾಗಿ ಸಮರ್ಪಿಸಿಕೊಂಡು ಭಕ್ತಿಯಿಂದ ಒಲಿಸಿಕೊಂಡರೆ ಶ್ರೀವೈಕುಂಠವನ್ನು ಸೇರಬಹುದು ಎನ್ನುತ್ತದೆ ಈ ಸಿದ್ಧಾಂತ.

ಹೀಗೆ 120 ವರ್ಷಗಳ ಕಾಲ ಪರಿಪೂರ್ಣಜೀವನದಿಂದ ಜಾತಿ-ಮತಭೇದವಿಲ್ಲದೇ ಭಕ್ತಜನರ ಉದ್ಧಾರಕ್ಕಾಗಿಯೇ ಶ್ರಮಿಸಿದವರು ರಾಮಾನುಜಾಚಾರ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT