ಬದುಕಿನ ಶಾಲೆಯಲ್ಲಿ ಹಲವು ಗುರುಗಳು

7

ಬದುಕಿನ ಶಾಲೆಯಲ್ಲಿ ಹಲವು ಗುರುಗಳು

Published:
Updated:
Deccan Herald

ಹುಟ್ಟಿದಾಗ ನಮಗೆ ಏನೂ ಗೊತ್ತಿರುವುದಿಲ್ಲ. ಎಲ್ಲವನ್ನೂ ಇನ್ನೊಬ್ಬರಿಂದ ಕಲಿತುಕೊಂಡಿರುವುದೇ. ಹಾಗಾಗಿ ಎಲ್ಲರ ಋಣವೂ ನಮ್ಮ ಮೇಲೆ ಇದೆ.

ಭೌತವಿಜ್ಞಾನ ಹೇಳಿಕೊಟ್ಟವರೊಬ್ಬರು, ಕನ್ನಡ ಹೇಳಿಕೊಟ್ಟವರೊಬ್ಬರು, ಇಂಗ್ಲಿಷ್ ಹೇಳಿಕೊಟ್ಟವರೊಬ್ಬರು ಹೀಗೆ ಹಲವು ಗುರುಗಳು ನನ್ನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಂದ ಕಲಿತ ಪಾಠ ನನ್ನ ಬದುಕಿನ ಒಂದೊಂದು ಹಂತದಲ್ಲಿ ಸಹಾಯಕವಾಗಿದೆ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಡ್ರಾಯಿಂಗ್ ಸಹಾಯ ಆಯಿತು. ಹೈಸ್ಕೂಲಿನಲ್ಲಿ ಭೌತವಿಜ್ಞಾನ ಸಹಾಯವಾಯ್ತು.

ಹೀಗೆ ಒಂದೊಂದು ವಿಷಯ ಬೇರೆ ಬೇರೆ ಸಮಯದಲ್ಲಿ ಸಹಾಯಕವಾಗಿದೆ. ಆದರೆ ಬದುಕಿನಲ್ಲಿ ನನಗೆ ಯಾವಾಗಲೂ ಸಹಾಯವಾಗಿದ್ದು ಜೀವನ ಮೌಲ್ಯಗಳು. ಆ ಮೌಲ್ಯಗಳನ್ನು ಕಲಿಸಿದ್ದು ನನ್ನ ಅಪ್ಪ– ಅಮ್ಮ. ಈ ನಿಟ್ಟಿನಲ್ಲಿ ಅವರು ನನ್ನ ಬದುಕಿನ ಬಹುದೊಡ್ಡ ಶಿಕ್ಷಕರು.

ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ವಿಶೇಷ: ಅರಿವು ಮೂಡಿಸಿದ ಆ್ಯನ್‌ ವಾರಿಯರ್‌!

ಹಾಗೆಯೇ ನಾನು ಏಳನೇ ತರಗತಿಯಲ್ಲಿದ್ದಾಗ ಮೊದಲು ನಮ್ಮನ್ನು ವೇದಿಕೆಯ ಮೇಲೆ ಹತ್ತಿಸಿ, ನಾಟಕ ಮಾಡಿಸಿದ ರಾಮಕೃಷ್ಣ ಎನ್ನುವ ಕನ್ನಡ ಮೇಷ್ಟ್ರು ಮತ್ತು ಹೈಸ್ಕೂಲು ಸಮಯದಲ್ಲಿ ನನ್ನ ಕೈಗೆ ಮೈಕ್‌ ಕೊಟ್ಟು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ ಕೆ. ಮೀನಾಕ್ಷಿ ಕೂಡ ನಾನು ಯಾವಾಗಲೂ ನೆನಪಿಸಿಕೊಳ್ಳುವ ಶಿಕ್ಷಕರು. ಇಂದು ನಾನು ಏನೆಲ್ಲ ಮಾಡುತ್ತಿದ್ದೇನೆಯೋ ಅದರ ಆರಂಭವಾಗಿದ್ದು ಅವರಿಂದಲೇ.

ಹಾಗೆಯೇ ಸಿನಿಮಾದಲ್ಲಿ ಬಾಲಚಂದರ್ ಮತ್ತು ಕಮಲ ಹಾಸನ್‌ ನನ್ನ ಗುರುಗಳು. ಬಾಲಚಂದರ್ ಅವರು ನನಗೆ ಹೇಳಿಕೊಟ್ಟ ಬಹಳ ಮುಖ್ಯ ಸಂಗತಿ ಏನೆಂದರೆ, ‘ಪ್ರೇಕ್ಷಕರನ್ನು ಒಂದೇ ಒಂದು ಕ್ಷಣವೂ ಬೋರ್ ಹೊಡೆಸಬಾರದು’ ಎಂಬ ಪಾಠ. ಅಂದರೆ, ಪ್ರೇಕ್ಷಕನ ಸಮಯ ತುಂಬ ಅಮೂಲ್ಯವಾದದ್ದು. ಅವರಿಗೆ ತನ್ನ ಸಮಯ ವ್ಯರ್ಥ ಆಯ್ತು ಎಂದು ಒಂದು ಕ್ಷಣವೂ ಅವರಿಗೆ ಅನಿಸದ ಹಾಗೆ ಸಿನಿಮಾ ಮಾಡಬೇಕಾಗಿದ್ದು ನಿರ್ದೇಶಕನಾಗಿ ನಮ್ಮ ಕರ್ತವ್ಯ ಎನ್ನುತ್ತಿದ್ದರು ಅವರು.

ಹಾಗೆಯೇ ಕಮಲ ಹಾಸನ್ ‘ನೋ ಪೇನ್; ನೋ ಗೇನ್’ ಎಂದು ಯಾವಾಗಲೂ ಹೇಳುತ್ತಿದ್ದರು. ಅಂದರೆ ಕಷ್ಟಪಡದೆ ಶಾರ್ಟ್‌ಕಟ್‌ನಲ್ಲಿ ಸುಲಭವಾಗಿ ಏನೂ ಸಿಗುವುದಿಲ್ಲ. ಹಾಗೆ ಅಡ್ಡದಾರಿಯಲ್ಲಿ ಏನನ್ನೂ ಪಡೆದುಕೊಳ್ಳಲಿಕ್ಕೆ ಪ್ರಯತ್ನಿಸಲೂ ಬಾರದು. ಗೆಲುವಿವಾಗಿ ನೋವನ್ನು ಎದುರಿಸಲು ಸಿದ್ಧರಾಗಿರಬೇಕು. ನೋವಿದ್ದರೇನೇ ಗೆಲುವು. ನೋವಿದ್ದರೇನೇ ಕೊನೆಗೆ ಲಾಭ ಸಿಗುವುದು ಎಂಬ ಪಾಠವನ್ನು ಕಮಲ್ ಅವರಿಂದ ಕಲಿತಿದ್ದೇನೆ.

ಇದನ್ನೂ ಓದಿ: ಸಹಸ್ರ ಬುದ್ಧಿ ಹೇಳಿದ ಸಹಸ್ರಬುದ್ದೆ

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !