ಬುಧವಾರ, ಜೂನ್ 23, 2021
30 °C

ಕರಡಿಗೆ ಗಾಯವಾದರೆ ನರಿಗೆ ರಕ್ತ

ಘನಶ್ಯಾಮ ಡಿ.ಎಂ. Updated:

ಅಕ್ಷರ ಗಾತ್ರ : | |

Prajavani

‘ಭಾರತದೊಂದಿಗೆ ನಾವು ಸಾವಿರ ವರ್ಷಗಳ ಯುದ್ಧ ಮಾಡುತ್ತೇವೆ. ದೊಡ್ಡಕರಡಿಯನ್ನು ನೇರ ಯುದ್ಧದಲ್ಲಿ ಮಣಿಸಲು ಆಗದು. ಆದರೆ ಅದರ ಮೈಮೇಲೆ ಸಾವಿರ ಗಾಯಗಳನ್ನು ಮಾಡಿ ನೆತ್ತರು ಸೋರುವಂತೆ ಮಾಡಿದರೆ ಅದು ಬಲಹೀನವಾಗುತ್ತದೆ. ಆಮೇಲೆ ಅದನ್ನು ಸೋಲಿಸುವುದು ಎಷ್ಟು ಹೊತ್ತಿನ ಕೆಲಸ…?’

ಪಾಕ್‌ ಸೇನೆ ಮತ್ತು ಅದರ ಮರ್ಜಿಯಲ್ಲಿಯೇ ನಡೆಯುವ ಅಲ್ಲಿನ ಸರ್ಕಾರ ಅನೇಕ ವರ್ಷಗಳಿಂದ ಭಾರತದ ವಿರುದ್ಧ ಸಾಧಿಸಿಕೊಂಡು, ಜೀವಂತ ಇರಿಸಿಕೊಂಡು ಬಂದಿರುವ ಯುದ್ಧೋನ್ಮಾದದ ಆಧಾರಸೂತ್ರದಂತಿರುವ ಮಾತುಗಳಿವು. ವಿಶ್ವಸಂಸ್ಥೆಯಲ್ಲಿ (1965) ಭಾಷಣ ಮಾಡಿದ ಝುಲ್ಫಿಕರ್ ಅಲಿ ಭುಟ್ಟೊ ‘ಭಾರತದ ವಿರುದ್ಧ ಸಾವಿರ ವರ್ಷಗಳ ಯುದ್ಧ’ ಘೋಷಿಸಿದ್ದರು. ಈ ಮಾತಿಗೆ ಪೂರಕವಾಗಿ ಅಂದಿನ ಪಾಕ್ ಸೇನೆಯ ಜನರಲ್ ಆಗಿದ್ದ ಝಿಯಾ ಉಲ್ ಹಕ್ ‘ಕರಡಿಗೆ ಸಾವಿರ ಗಾಯ ಮಾಡಿ ರಕ್ತ ಬಸಿಯುತ್ತೇವೆ’ ಎಂದು ಶಪಥ ಮಾಡಿದ್ದರು.

ಸರಿಸುಮಾರು 54 ವರ್ಷಗಳ ಹಿಂದಿನ ಈ ಪಾಕ್ ರಣೋತ್ಸಾಹ ಈಗ ನೆನಪಾಗಲು ಕಾರಣವಿದೆ. ಕಾಶ್ಮೀರದ ಪುಲ್ವಾಮಾದಲ್ಲಿ ‘ಸಿಆರ್‌ಪಿಎಫ್’ ಬಸ್‌ ಮೇಲೆ ನಡೆದ ದಾಳಿ, 40 ಯೋಧರ ಬಲಿದಾನ, ಇದಕ್ಕೆ ಸೇಡು ತೀರಿಸಿಕೊಳ್ಳಲೆಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಫೆ. 26ರಂದು ಬಾಲಾಕೋಟ್‌ನಲ್ಲಿದ್ದ ಜೈಷ್-ಎ-ಮೊಹಮದ್ ಉಗ್ರಗಾಮಿ ಸಂಘಟನೆಯ ತರಬೇತಿ ಕೇಂದ್ರದ ಮೇಲೆ ಬಾಂಬ್ ಸುರಿಸಿದ್ದು ಈಗ ಇತಿಹಾಸ. ಕಾರ್ಯಾಚರಣೆಯ ನಂತರ ಬೆಳವಣಿಗೆಗಳಲ್ಲಿ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಪಾಕ್‌ಗೆ ಸೆರೆ ಸಿಕ್ಕಿದ್ದು, ನಂತರ ಬಿಡುಗಡೆಯಾಗಿದ್ದು ವಿಶ್ವದ ಗಮನ ಸೆಳೆದ ಪ್ರಮುಖ ಸಂಗತಿ.

‘ಭಾರತದ ವಿಮಾನಗಳು ಕಾಡಿನಲ್ಲಿ ಬಾಂಬ್ ಹಾಕಿ ಓಡಿಹೋದವು’ ಎಂದು ಪಾಕಿಸ್ತಾನ ಆರೋಪಿಸಿದ್ದು, ‘ನಾವು ಕಾಡಿನ ಮೇಲೆ ಬಾಂಬ್ ಹಾಕಿದ್ದರೆ ನೀವೇಕೆ ವ್ಯೂಹ ರಚಿಸಿಕೊಂಡು ನಮ್ಮ ಮೇಲೆ ದಾಳಿಗೆ ಬರುತ್ತಿದ್ದೀರಿ’ ಎಂದು ಭಾರತ ಆತ್ಮವಿಶ್ವಾಸದಿಂದ ತಿರುಗೇಟು ನೀಡಿದ್ದನ್ನು ಜಗತ್ತು ಬೆರಗಾಗಿ ಗಮನಿಸಿತು. ಇದೀಗ ಸೇನಾ ಕಾರ್ಯಾಚರಣೆಯನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿ ಯತ್ನದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಚುನಾವಣಾ ಆಯೋಗವು ಖಡಕ್ ಎಚ್ಚರಿಕೆ ರವಾನಿಸಿ, ‘ಸಶಸ್ತ್ರ ಪಡೆಗಳನ್ನು ರಾಜಕೀಯಕ್ಕೆ ಬಳಸಬೇಡಿ’ ಎಂದು ಸೂಚಿಸಿದೆ.

ಇಷ್ಟೆಲ್ಲದರ ನಡುವೆ ಪಾಕಿಸ್ತಾನ 1965ರಲ್ಲಿ ಮಾಡಿದ್ದ ‘ಸಾವಿರ ವರ್ಷಗಳ ಯುದ್ಧ’ದ ಘೋಷಣೆ, ಅಲ್ಲಿನ ಸೇನಾ ನಾಯಕರು ರೂಪಿಸಿದ್ದ ‘ದೊಡ್ಡ ಕರಡಿಗೆ ಸಾವಿರ ಗಾಯಗಳ ಪ್ರತಿಜ್ಞೆ’ ಹಲವರಿಗೆ ನೆನಪಾಗುತ್ತಿದೆ. ಸಾವಿರ ಗಾಯ ಮಾಡಲು ಬಂದ ನರಿಯಿಂದ ದೊಡ್ಡ ಕರಡಿಯನ್ನು ಕಾಪಾಡಲು ಸದ್ದಿಲ್ಲದೆ ಬಲಿದಾನ ಮಾಡುವ, ಹುತಾತ್ಮರ ಗೌರವವನ್ನೂ ಅಪೇಕ್ಷಿಸದ ಸಾವಿರಾರು ಮಂದಿ ಇರುವ ಸಂಸ್ಥೆಯನ್ನು, ಆ ಸಂಸ್ಥೆಯ ಸಾವಿರಾರು ಅನಾಮಿಕ ಹುತಾತ್ಮರನ್ನು ಇಂದು ನಾವು ನೆನಪಿಸಿಕೊಳ್ಳಲೇಬೇಕಿದೆ.

ಅದು ‘ರೀಸರ್ಚ್ ಅಂಡ್ ಅನಾಲಿಟಿಕಲ್ ವಿಂಗ್’ ಎನ್ನುವ ಇಷ್ಟುದ್ದದ ಹೆಸರು ಹೊತ್ತು, ‘ರಾ’ ಎಂದೇ ಜನಜನಿತವಾಗಿರುವ ಪ್ರತಿಷ್ಠಿತ ಸಂಸ್ಥೆ. ಬಾಲಾಕೋಟ್‌ನ ಯಶಸ್ವಿ ದಾಳಿಯ ಚಾಲಕ ಶಕ್ತಿ ‘ರಾ’. ಈ ಸಂಸ್ಥೆಯ ಬಗ್ಗೆ ನಾವು ತಿಳಿಯಬೇಕಾದ್ದು ಇನ್ನಷ್ಟು ಇದೆ.

‘ನಮ್ಮ ಶಾಂತಿ ಕದಡಿ ನೀವು ನೆಮ್ಮದಿಯಾಗಿರಲು ಆಗದು.’

‘ಸಾವಿರ ಗಾಯಗಳ’ ಪ್ರತಿಜ್ಞೆಯ ಭಾಗವಾಗಿ ಪಾಕಿಸ್ತಾನ ಪಂಜಾಬ್, ಕಾಶ್ಮೀರಗಳಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾಗ ಇದಕ್ಕೆ ಪ್ರತಿಯಾಗಿ ಏನಾದರೂ ಮಾಡಲೇಬೇಕು. ‘ನಮ್ಮ ಮನೆಗೆ ಬೆಂಕಿ ಹಚ್ಚಿದರೆ, ನಿಮ್ಮ ಮನೆಯಲ್ಲಿಯೂ ರಕ್ತ ಸುರಿಯುತ್ತೆ’ ಎನ್ನುವ ಎಚ್ಚರಿಕೆ ಕೊಡಬೇಕು ಎಂದು ರಣಪಂಡಿತರು ಆಲೋಚಿಸಿದ್ದರು. ಆಗ ಭಾರತದಲ್ಲಿ ಇದ್ದುದು ಇಂದಿರಾಗಾಂಧಿ ಆಡಳಿತ. ಭದ್ರತಾಪಡೆಗಳ ಮಾತಿಗೆ ಕಿವಿಗೊಟ್ಟ ಆಕೆಯಿಂದ ಹಸಿರು ನಿಶಾನೆ ಸಿಕ್ಕ ನಂತರ ರೂಪುಗೊಂಡಿದ್ದು ‘ಸಿಐಟಿ’ (ಕೌಂಟರ್ ಇಂಟೆಲಿಜೆನ್ಸ್ ಟೀಮ್) ತಂಡಗಳು.

ಭಾರತದ ನೆಲದಲ್ಲಿ ಪಾಕ್ ಕುಮ್ಮಕ್ಕಿನಿಂದ ಆಗುತ್ತಿದ್ದ ಪ್ರತಿ ಬಾಂಬ್ ಸ್ಫೋಟ, ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿಯೂ ಆಂಥದ್ದೇ ವಿದ್ಯಮಾನಗಳು ಸಂಭವಿಸುತ್ತಿದ್ದವು. ಕರಡಿಗೆ ಗಾಯ ಮಾಡಲು ಬಂದಿದ್ದ ಬೇಟೆಗಾರ ನರಿಗೆ ತನ್ನದೇ ಮನೆಯ ಹೆಂಡಿರು, ಮಕ್ಕಳಿಗೆ ಬ್ಯಾಂಡೇಜ್ ಹಾಕಬೇಕಾದ ಅನಿವಾರ್ಯತೆ! ಹೊತ್ತಿ ಉರಿಯುತ್ತಿದ್ದ ಪಂಜಾಬ್ ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತಹಬಂದಿಗೆ ಬಂತು.

‘ಶಾಂತಿ ಮಂತ್ರ ಪಠಿಸುವ ಭಾರತವೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದು ಸರಿಯಲ್ಲ. ಇದರಿಂದ ಜಾಗತಿಕವಾಗಿ ಭಾರತದ ಬೆಲೆ ಕಡಿಮೆಯಾಗುತ್ತೆ’ ಎಂದುಕೊಂಡ ಭಾರತ (ಪ್ರಧಾನಿ ಐ.ಕೆ. ಗುಜ್ರಾಲ್) 1997ರಲ್ಲಿ ಇಂಥ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಆದೇಶಿಸಿದರು. ಸಿಐಟಿ ತಂಡಗಳು ಬರ್ಖಾಸ್ತುಗೊಂಡವು. ಅಂದು ಅವರು ತೆಗೆದುಕೊಂಡ ನಿರ್ಧಾರ ಸರಿ ಅಥವಾ ತಪ್ಪು ಎನ್ನುವ ಬಗ್ಗೆ ಸಾವಿರಾರು ಪುಟಗಳ ವಿಶ್ಲೇಷಣೆ ಇದೆ. ಆದರೆ ಒಟ್ಟಾರೆ ಭಾರತಕ್ಕೆ ಇದ್ದ ಪ್ರತಿಘಾತಕ ಶಕ್ತಿ ಕಡಿಮೆಯಾಯಿತು ಎನ್ನುವ ಅಸಮಾಧಾನ ಮಾತ್ರ ಉಳಿದುಹೋಗಿದೆ.

ಆಪರೇಷನ್ ‘ಕಹುತಾ’

ಇದು ಗೆಲುವಿನ ಹೊಸಿಲಲ್ಲಿದ್ದ ‘ರಾ’ ಸೋತ ಕಥೆ. ಆಯಕಟ್ಟಿನ ಸ್ಥಾನದಲ್ಲಿರುವವರು ಕೆಲವೊಮ್ಮೆ ಅತಿಆತ್ಮವಿಶ್ವಾಸದಲ್ಲಿ ಬಾಯಿತಪ್ಪಿ ಆಡುವ ಮಾತುಗಳು ಹೇಗೆ ದೇಶದ ಹಿತಾಸಕ್ತಿಯನ್ನು ಅನೇಕ ವರ್ಷಗಳ ಕಾಲ ಬಾಧಿಸಬಹುದು ಎನ್ನುವುದಕ್ಕೂ ಇದೊಂದ ಪಾಠ. ಅಂದು (1977-78) ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ತಮ್ಮ ಪಾಕ್ ಸಹವರ್ತಿ ಝಿಯಾ ಉಲ್ ಹಕ್ ಅವರ ಜೊತೆಗೆ ಬಾಯ್ತಪ್ಪಿ ಆಡಿದ ಮಾತು ನೂರಾರು ‘ರಾ’ ಏಜೆಂಟರ ಜೀವಕ್ಕೆ ಕುತ್ತು ತಂದಿದ್ದು ಮಾತ್ರವಲ್ಲ, ಪಾಕಿಸ್ತಾನದ ಅಣ್ವಸ್ತ್ರ ಪ್ರಯೋಗ ಸಾಹಸದ ಬಗ್ಗೆ ಭಾರತಕ್ಕೆ ಈವರೆಗೆ ಯಾವುದೇ ಸುಳಿವು ಸಿಗದಂತೆ ಆಗಲು ಕಾರಣವಾಯಿತು.

ಪಾಕ್ ಸೇನಾ ಪ್ರಧಾನ ಕಚೇರಿ ಇರುವ ರಾವಲ್‌ಪಿಂಡಿ ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ ಕಹುತಾ. ಇಲ್ಲಿರುವ ಖಾನ್ ರೀಸರ್ಚ್ ಲ್ಯಾಬೊರೇಟರಿಸ್ (ಕೆಆರ್‌ಎಲ್) ಅಣುಶಕ್ತಿಯ ಪ್ರಯೋಗಗಳು ನಡೆಯುವ ಪ್ರಯೋಗಶಾಲೆ. ಕೇವಲ ಇಷ್ಟಕ್ಕೇ ಇದರ ಕಾರ್ಯಗಳು ಸೀಮಿತವಾಗಿರಲಿಲ್ಲ. ಭಾರತದ ಬಹುತೇಕ ನಗರಗಳನ್ನು ತಲುಪುವ ಸಾಮರ್ಥ್ಯವನ್ನೇ ದೃಷ್ಟಿಯಲ್ಲಿರಿಸಿಕೊಂಡು ರೂಪಿಸುತ್ತಿದ್ದ ಕ್ಷಿಪಣಿ ತಂತ್ರಜ್ಞಾನದ ಪ್ರಯೋಗಗಳಿಗೂ ಇದು ವೇದಿಕೆಯಾಗಿತ್ತು. ಭಾರತದ ರಕ್ಷಣೆಗೆ ತೀವ್ರ ಸ್ವರೂಪದ ಕಂಟಕ ತಂದೊಡ್ಡುವ ಈ ಬೆಳವಣಿಗೆಗಳನ್ನು ಗಮನಿಸಿದ್ದ ‘ರಾ’ 70ರ ದಶಕದಲ್ಲಿ ‘ಆಪರೇಷನ್ ಕಹುತಾ’ ಆರಂಭಿಸಿತ್ತು.

ಸ್ಥಳೀಯರೊಂದಿಗೆ ಬೆರೆತಿದ್ದ ‘ರಾ’ ಏಜೆಂಟರು ಕಹುತಾದ ಕ್ಷೌರಿಕರ ವಿಶ್ವಾಸ ಗಳಿಸಿದ್ದರು. ಕಟಿಂಗ್‌ಶಾಪ್‌ಗಳಿಂದ ರಹಸ್ಯವಾಗಿ ಕೂದಲ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಿದರು. ಪಾಕಿಸ್ತಾನವು ಯುರೇನಿಯಂ ಅದಿರನ್ನು ಅಣ್ವಸ್ತ್ರವಾಗಿ ಬಳಸಲು ಬೇಕಾದ ಮಟ್ಟಕ್ಕೆ ಎನ್‌ರಿಚ್ ಮಾಡುವ ತಂತ್ರ ಕಂಡುಕೊಂಡಿರುವುದು ಈ ವೇಳೆ ಬೆಳಕಿಗೆ ಬಂತು. ಇನ್ನೊಂದೆಡೆ ಕಹುತಾದ ಅಣ್ವಸ್ತ್ರ ಸಂಶೋಧನಾ ಕೇಂದ್ರಗಳಲ್ಲಿ ನೌಕರರಾಗಿ ಸೇರಲು ‘ರಾ’ ಏಜೆಂಟರು ಯತ್ನಿಸುತ್ತಿದ್ದರು.

ಲೋಕಾಭಿರಾಮ ಮಾತನಾಡುವಾದ ಅಂದಿನ ನಮ್ಮ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಪಾಕ್ ಸರ್ವಾಧಿಕಾರಿ ಝಿಯಾ ಉಲ್ ಹಕ್ ಜೊತೆಗೆ ಅಚಾನಕ್ ಆಗಿ ‘ಕಹುತಾದ ನಿಮ್ಮ ಪ್ರಯತ್ನಗಳ ಬಗ್ಗೆ ನಮಗೆ ಅರಿವಿದೆ’ ಎಂದುಬಿಟ್ಟರು. ತಕ್ಷಣ ಎಚ್ಚೆತ್ತುಕೊಂಡ ಪಾಕ್ ಸರ್ಕಾರ ಮತ್ತು ಸೇನೆ ಕಹುತಾ ಪಟ್ಟಣ ಮತ್ತು ಸುತ್ತಮುತ್ತಲಿದ್ದ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿ ‘ರಾ’ ಏಜೆಂಟರು ಮತ್ತು ಮಾಹಿತಿದಾರರನ್ನು ಗುರುತಿಸಿ ಹೊಸಕಿಹಾಕಿತು. ಅಂದಿನಿಂದ ಇಂದಿನವರೆಗೆ ಭಾರತಕ್ಕೆ ಪಾಕಿಸ್ತಾನದ ಅಣ್ವಸ್ತ್ರ ಬೆಳವಣಿಗೆಗಳ ಮಾಹಿತಿ ಸಿಗುತ್ತಿಲ್ಲ.

ಆಪರೇಷನ್ ಅಫ್ಗನ್‌: ಪಾಕ್‌ಗೆ ಆಘಾತ

ಅಫ್ಗಾನಿಸ್ತಾನದ ಪ್ರಜೆಗಳಲ್ಲಿ ತಾವು ಪಠಾಣರೆಂಬ ಅಸ್ಮಿತೆಯನ್ನು ಜಾಗೃತಗೊಳಿಸುವ, ಅಫ್ಗಾನಿಸ್ತಾನದ ದೈನಂದಿನ ವಿದ್ಯಮಾನಗಳಲ್ಲಿ ಪಾಕಿಸ್ತಾನವನ್ನು ದೂರವಿಡುವ ‘ರಾ’ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದ್ದರೆ ಇಂದು ಭಾರತಕ್ಕೆ ಮತ್ತೊಂದು ಪ್ರಬಲ ಮಿತ್ರರಾಷ್ಟ್ರ ಪಾಕಿಸ್ತಾನದ ನೆರೆಯಲ್ಲಿಯೇ ಇರುತ್ತಿತ್ತು. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಅಪಹರಣವೂ ಆಗುತ್ತಿರಲಿಲ್ಲ, ಮಜೂದ್‌ ಅಜರ್‌ನಂಥ ದೈತ್ಯ ಉಗ್ರನನ್ನು ಬಿಡುಗಡೆ ಮಾಡಬೇಕಾದ ಸಂದರ್ಭವೂ ಒದಗುತ್ತಿರಲಿಲ್ಲ. ಅಫ್ಗನ್ ನೆಲದಲ್ಲಿ ‘ರಾ’ ನಡೆಸಿದ ಈ ಕಾರ್ಯಾಚರಣೆ ದೇಶದ ಆರ್ಥಿಕ ಶಕ್ತಿ ಮತ್ತು ರಕ್ಷಣಾ ವಿದ್ಯಮಾನಗಳಿಗೆ ಇರುವ ಸಂಬಂಧಗಳನ್ನು ಸಾರಿ ಹೇಳುತ್ತದೆ.

ಅಫ್ಗಾನಿಸ್ತಾನವು ರಷ್ಯದ ಅಧೀನದಲ್ಲಿದ್ದಾಗ (1980ರ ದಶಕ) ಭಾರತ ಅತ್ತ ಹೆಚ್ಚು ಗಮನ ಕೊಟ್ಟಿರಲಿಲ್ಲ. ಯಾವಾಗ ರಷ್ಯಾ ಅಫ್ಗನ್‌ನಿಂದ ಕಾಲ್ತೆಗೆಯುವುದು ಅನಿವಾರ್ಯ ಎಂದಾಯಿತೋ, ಆಗ ಅಮೆರಿಕದ ಬೆಂಬಲದೊಂದಿಗೆ ಅಫ್ಗನ್‌ನಲ್ಲಿ ಪ್ರಭಾವ ವಿಸ್ತರಿಸಿಕೊಳ್ಳಲು ಪಾಕ್ ಹವಣಿಕೆಯೂ ಆರಂಭವಾಯಿತು. ಈ ಹಂತದಲ್ಲಿ ಭಾರತ ಹೆಣೆದಿದ್ದು ಬೌದ್ಧಿಕ ಸಮರದ ಕಾರ್ಯತಂತ್ರ.

ಅಫ್ಗನ್ ಪಠಾಣರ ಸಾಂಸ್ಕೃತಿಕ ಇತಿಹಾಸ, ಶೌರ್ಯ, ಆಗ್ಲೋ–ಅಫ್ಗನ್ ಯುದ್ಧಗಳು, ಅಫ್ಗಾನಿಸ್ತಾನದಲ್ಲಿ ಸರ್ ಔರೆಲ್ ಸ್ಟೀನ್‌ ನಡೆಸಿದ ಪುರಾತತ್ವ ಸಂಶೋಧನೆಗಳ ಬಗೆಗಿನ ಪುಸ್ತಕಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮುದ್ರಿಸಿದ ‘ರಾ’ ಅಫ್ಗಾನಿಸ್ತಾನದ ಮನೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಅಫ್ಗನ್ ಮಾಧ್ಯಮಗಳಲ್ಲಿ ಲೇಖನಗಳು ಪ್ರಕಟವಾದವು. ಯೂರೋಪ್, ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳ ರಾಜತಾಂತ್ರಿಕ ಕಚೇರಿಗಳು ಮತ್ತು ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಮಾವೇಶಗಳಲ್ಲಿ ಈ ಪುಸ್ತಕಗಳು ಸಿಗುವಂತೆ ಮತ್ತು ಅದರ ಬಗ್ಗೆ ಚರ್ಚೆಯಾಗುವಂತೆ ತಂತ್ರ ಹೆಣೆಯಲಾಯಿತು.

ಪ್ರಸ್ತುತ ಪಾಕಿಸ್ತಾನದ ಭಾಗವೇ ಆಗಿರುವ ಗಡಿನಾಡು ಪ್ರಾಂತ್ಯಗಳನ್ನು (ನಾರ್ತ್‌ವೆಸ್ಟ್‌ ಫ್ರಾಂಟಿಯರ್) ಅಫ್ಗನ್ ದೊರೆಗಳು ಭಾರತದಲ್ಲಿದ್ದ ಬ್ರಿಟಿಷ್ ಆಡಳಿತಕ್ಕೆ 100 ವರ್ಷಗಳ ಭೋಗ್ಯಕ್ಕೆ ಕೊಟ್ಟಿದ್ದರು. ಈ ಪ್ರಾಂತ್ಯಗಳ ಮೇಲೆ ಅಫ್ಗನ್ ಸರ್ಕಾರಕ್ಕೆ ಇದೀಗ ಕಾನೂನಾತ್ಮಕ ಮತ್ತು ನ್ಯಾಯಯುತ ಅಧಿಕಾರವಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಅವ್ಯಾಹತ ನಡೆಯಿತು. ಈ ಬೌದ್ಧಿಕ ದಾಳಿ ಪಾಕಿಸ್ತಾನವನ್ನು ಕಂಗಾಲಾಗುವಂತೆ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗುವ ಮೊದಲೇ ಭಾರತಕ್ಕೆ ಆರ್ಥಿಕ ಬಿಕ್ಕಟ್ಟು (1990) ಎದುರಾಯಿತು. ಪಾಕ್ ವಿರುದ್ಧದ ಬೌದ್ಧಿಕ ಹೋರಾಟದಲ್ಲಿ ಮುನ್ನಡೆ  ಕಾಯ್ದುಕೊಳ್ಳಲು ಬೇಕಿದ್ದಷ್ಟು ಹಣಕಾಸು ಒದಗಿಸಲು ಭಾರತ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅಂದು ಅಫ್ಗನ್‌ನಲ್ಲಿ ಅಧಿಕಾರದಲ್ಲಿದ್ದ ಭಾರತ ಸ್ನೇಹಿ ನಜಿಬುಲ್ಲಾ ಸರ್ಕಾರವನ್ನು ತಾಲಿಬಾನಿಗಳ ನೆರವಿನಿಂದ ಕಿತ್ತುಹಾಕಿದ ಪಾಕಿಸ್ತಾನ, ನಜಿಬುಲ್ಲಾ ಅವರನ್ನು ನಡುಬೀದಿಯಲ್ಲಿ ನೇಣು ಹಾಕಿಸಿತು. ಇದನ್ನು ತಡೆಯಲು ‘ರಾ’ಗೆ ಸಾಧ್ಯವಾಗಲಿಲ್ಲ.

ಇದೀಗ ಬಾಲಾಕೋಟ್ ನಿಖರ ದಾಳಿಯ ನಂತರ ಜಗತ್ತು ಮತ್ತೆ ‘ರಾ’ ಬಗ್ಗೆ ಮಾತನಾಡುತ್ತಿದೆ. ಈ ಮಾತುಕತೆಗಳಲ್ಲಿ ಚರ್ಚೆಯಾಗುವ ‘ರಾ’ ಏಜೆಂಟರ ಹಿಂದಿನ ಸಫಲ ಮತ್ತು ವಿಫಲ ಕಾರ್ಯಾಚರಣೆಗಳಲ್ಲಿ ಆರ್ಥಿಕ ಭದ್ರತೆ, ರಾಜಕೀಯ ಇಚ್ಛಾಶಕ್ತಿ ಕುರಿತ ಸಾಕಷ್ಟು ಪಾಠಗಳೂ ಇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು