ತಿಂಗಳು ಬೆಳಗಿನ ಕಾವ್ಯ ‘ಚಂದ್ರ’

7

ತಿಂಗಳು ಬೆಳಗಿನ ಕಾವ್ಯ ‘ಚಂದ್ರ’

Published:
Updated:
Prajavani

ಜ್ಞಾನ ಮತ್ತು ಖ್ಯಾತಿ ಹೆಚ್ಚಿದಂತೆಲ್ಲ ತನ್ನೊಳಗಿನ ಅಹಮ್ಮಿಕೆಯ ಪೊರೆಯನ್ನು ಕಳಚಿಕೊಳ್ಳುತ್ತ, ವಿನಯತೆಯೇ ಬದುಕಿನ ಅಧ್ಯಾತ್ಮವೆಂದು ನಂಬಿದ್ದ ತೀರಾ ಅಪರೂಪದ ಸಾಹಿತಿ ಡಾ.ಆರ್‌.ಪಿ. ಹೆಗಡೆ ಸುಳಗಾರ.

ಆರ್‌.ಪಿ. ಹೆಗಡೆ (ರಾಮಚಂದ್ರ ಪರಮೇಶ್ವರ ಹೆಗಡೆ) ಎಂದಾಕ್ಷಣ ಅವರ ಒಡನಾಡಿಗಳು, ಶಿಷ್ಯರಿಗೆ ಥಟ್ಟನೆ ನೆನಪಾಗುವುದು ಅತ್ಯಂತ ಸಂಕೋಚದ, ಮೌನವೇ ಮಾತಾಡುವ ಪುಟ್ಟ ಕಾಯ. ಅವರ ವ್ಯಕ್ತಿತ್ವವೇ ಒಂದು ಕಾವ್ಯದಂತೆ. ಮಿತ್ರಸಂಹಿತೆಗೆ ಅನ್ವರ್ಥಕದಂತಿದ್ದ ಅವರಿಗೆ ಎದುರಿನ ವ್ಯಕ್ತಿಯನ್ನು ಮಿತ್ರನನ್ನಾಗಿ ಬದಲಾಯಿಸುವ ಅದ್ಭುತ ಶಕ್ತಿಯಿತ್ತು. ತನ್ನೆದುರಿನ ವ್ಯಕ್ತಿಯನ್ನು ಅರ್ಥೈಸಿಕೊಳ್ಳುವ ರೀತಿ ಕಂಡಾಗ ಸಂವೇದನಾಶೀಲ, ಸೂಕ್ಷ್ಮ ಪ್ರವೃತ್ತಿಯ ಈ ವ್ಯಕ್ತಿ ಮನೋವಿಜ್ಞಾನಿಯಂತೆ ಕಾಣುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಸುಳಗಾರಿನ ಅವಿಭಕ್ತ ಕೃಷಿಕ ಕುಟುಂಬದ ಆರ್.ಪಿ.ಹೆಗಡೆ ನೇಗಿಲ ಯೋಗಿ ಮತ್ತು ಸಾಹಿತ್ಯ ಯೋಗಿ. ಪ್ರೌಢಶಾಲೆ ಶಿಕ್ಷಕರಾಗಿ, ಸಿದ್ದಾಪುರ ಎಂ.ಜಿ.ಸಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಜನಪದ, ಸಂಸ್ಕೃತಿ, ಇತಿಹಾಸ, ಭಾಷಾ ವಿಜ್ಞಾನ, ಶಾಸನ, ಸ್ಥಳನಾಮಗಳನ್ನು ಸಾಹಿತ್ಯದಷ್ಟೇ ಆಸಕ್ತಿಯಿಂದ ಅಭ್ಯಸಿಸಿದವರು. ಮಕ್ಕಳ ಪ್ರಾಸ ಪದ್ಯದಿಂದ ಅನುವಾದದವರೆಗೆ ಸಾಹಿತ್ಯ ಕೃಷಿಯನ್ನು ವಿಸ್ತರಿಸಿಕೊಂಡವರು. ಜನಪದದಿಂದ ಜಾಗತೀಕರಣದವರೆಗೆ ಸಾಹಿತ್ಯದಲ್ಲಿ ಹೆಜ್ಜೆ ಗುರುತನ್ನು ಮೂಡಿಸಿದವರು.

ಸಣ್ಣಕತೆ, ಲೇಖನ, ನಾಟಕ, ನುಡಿಚಿತ್ರ, ಕಾದಂಬರಿ ರಚಿಸಿರುವ ಅವರಿಗೆ ಅನುವಾದ ನೆಚ್ಚಿನ ಕ್ಷೇತ್ರವಾಗಿತ್ತು. ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಹೊತ್ತಿಗೆಗಳು 39ಕ್ಕೂ ಹೆಚ್ಚು. ‘ಪ್ರತಿ–ಶೃತಿ’, ‘ಗೋಡ್ಸೆ@ಗಾಂಧಿ.ಕಾಮ್’ ಪ್ರಕಟಣೆಗೆ ಸಿದ್ಧವಾಗಿವೆ. ‘ಗತಿ’ ಕಾದಂಬರಿ ಅವರ ಕೂಡುಕುಟುಂಬದ ಬಿಂಬ. ಅವಿಭಕ್ತ ಕುಟುಂಬದ ಏರಿಳಿವು, ತಲ್ಲಣಗಳು, ಆಧುನಿಕತೆಯ ಪ್ರವೇಶದಿಂದ ಆದ ಕೌಟುಂಬಿಕ ವಿಪ್ಲವಗಳು ಅಲ್ಲಿ ವ್ಯಕ್ತಗೊಂಡಿವೆ. ಆರು ಸಂಪುಟಗಳಲ್ಲಿ ಬಂದಿರುವ ‘ಚಂದ್ರಕಾಂತಾ ಮತ್ತು ಸಂತತಿ’ ಕನ್ನಡದ ಹ್ಯಾರಿ ಪಾಟರ್ ಎಂದೇ ಕರೆಯಿಸಿಕೊಂಡಿತ್ತು.

ನಾಲ್ಕು ದಶಕಗಳ ಹಿಂದೆಯೇ ಜಪಾನಿ ಪದ್ಧತಿಯಲ್ಲಿ ಭತ್ತ ನಾಟಿ ಮಾಡಿ, ಉತ್ತಮ ಕೃಷಿಕ ಪ್ರಶಸ್ತಿ ಪಡೆದವರು ಅವರು. ಸಾಹಿತ್ಯ ಕೃಷಿಯಲ್ಲಿ ಪಳಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಅನುವಾದ ಪುರಸ್ಕಾರ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಭಾಜರಾದವರು.

ಆರ್‌.ಪಿ.ಹೆಗಡೆ ನಾಲ್ಕನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋದವರು. 7ನೇ ತರಗತಿ, ಎಸ್‌.ಎಸ್‌.ಎಲ್‌.ಸಿ, ಪದವಿ, ಸ್ನಾತಕೋತ್ತರ ಪದವಿಯನ್ನು ಬಾಹ್ಯ ವಿದ್ಯಾರ್ಥಿಯಾಗಿ ಬರೆದವರು. ’ಶಿಶುನಾಳ ಶರೀಫ ಮತ್ತು ಸಂತ ಕಬೀರ– ತೌಲನಿಕ ಅಧ್ಯಯನ’ ಮೇಲೆ ಡಾಕ್ಟರೇಟ್ ಪಡೆದವರು. ಅವರದ್ದು ಒಂದು ರೀತಿಯ ಏಕಲವ್ಯ ಸಾಧನೆ. ಏಕಲವ್ಯನಿಗೆ ಮಾನಸಿಕ ಗುರು ಇದ್ದ. ಆದರೆ, ಇವರಿಗೆ ಅಂತಃಶಕ್ತಿಯೇ ಬಲ ಎಂಬುದನ್ನು ಅವರ ಸ್ನೇಹಿತ, ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ನೆನಪಿಸಿಕೊಳ್ಳುತ್ತಾರೆ.

ಆರ್.ಪಿ. ಹೆಗಡೆಯವರ ಸಮುದಾಯದ ಜತೆಗಿನ ಸಂಬಂಧ ವಿಶ್ಲೇಷಣಾತ್ಮಕವಾಗಿತ್ತು. ಸಾಮಾಜಿಕ ತಲ್ಲಣಗಳಿಗೆ ಅವರು ಕೃತಿಯ ಮೂಲಕ ಪ್ರತಿಭಟಿಸುತ್ತಿದ್ದರು. ಭ್ರಷ್ಟಾಚಾರದಿಂದ ಸಮಾಜ ಕಲುಷಿತಗೊಂಡಾಗ ‘ಮೋಹನದಾಸ’ ಅನುವಾದ ಮಾಡಿದರು. ರೈತರ ಆತ್ಮಹತ್ಯೆ ನಿತ್ಯದ ಸುದ್ದಿಯಾದಾಗ ‘ಕೊನೆಯ ಜಿಗಿತ’ ಪ್ರಕಟಿಸಿದರು. ಜಾಗತೀಕರಣ ಅಭಿವೃದ್ಧಿಯ ಹರಿಕಾರ ಎಂಬ ಭ್ರಮೆಯಲ್ಲಿದ್ದಾಗ, ಭವಿಷ್ಯದ ಅಪಾಯ ತಿಳಿಸುವ ‘ಚಿನ್ನದ ಸೂಜಿ’ ಮುಂದಿಟ್ಟರು. ಗೋಡ್ಸೆ ಆರಾಧನೆ ಕಂಡಾಗ ‘ಗೋಡ್ಸೆ@ಗಾಂಧಿ.ಕಾಮ್’ ಪರಿಚಯಿಸಿದರು. ಹೀಗೆ ಸಮಾಜ ಎದುರಿಸುವ ಪ್ರತಿಸವಾಲಿಗೆ ಅವರು ಸೃಜನಾತ್ಮಕವಾಗಿ ಪ್ರತಿಕ್ರಿಯಿಸುವ ಪರಿ ಗಮನಾರ್ಹವಾದುದು ಎಂಬುದನ್ನು ವೃತ್ತಿ ಒಡನಾಡಿ ಡಾ.ವಿಠ್ಠಲ ಭಂಡಾರಿ ಗುರುತಿಸಿದ್ದರು.

ಹಣಕಾಸಿನ ಮುಗ್ಗಟ್ಟಿನಲ್ಲಿದ್ದ ನೂರಾರು ವಿದ್ಯಾರ್ಥಿಗಳ ಕಾಲೇಜಿನ ಶುಲ್ಕ ಭರಿಸುತ್ತಿದ್ದ ಅವರು, ಎಲ್ಲೂ ಎಂದಿಗೂ ಇದನ್ನು ಬಹಿರಂಗಪಡಿಸಿದವರಲ್ಲ. ಮಕ್ಕಳ ಮನಸ್ಸನ್ನು ಅರಿಯುವ ಅಪರೂಪದ ಗುಣ ಅವರಲ್ಲಿತ್ತು. ಖಿನ್ನ ವಿದ್ಯಾರ್ಥಿಯನ್ನು ಬಳಿಗೆ ಕರೆದು ಸಂತೈಸಿ, ಸಮಸ್ಯೆ ಬಗೆಹರಿಸುತ್ತಿದ್ದುದು, ಅವರ ವೃತ್ತಿ ಒಡನಾಡಿಗಳೇ ಎಷ್ಟೊ ಬಾರಿ ಗೊತ್ತಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಜೊತೆಗೆ ಸ್ನೇಹಪೂರ್ವ ಸಂಬಂಧವಿತ್ತು. ಈ ಸ್ನೇಹವೇ ಗೌರವವಾಗಿ ಮಾರ್ಪಾಟಾಗಿತ್ತು. ಅವರು ಶಿಕ್ಷಕಗಿರಿ ಮಾಡಿದವರಲ್ಲ, ಬದಲಾಗಿ ಸ್ನೇಹಿತನಾಗಿ ಒಡನಾಡಿದವರು.

ನಿವೃತ್ತ ಜೀವನದ ಬಹುಕಾಲವನ್ನು ಸಾಹಿತ್ಯದ ಓದು– ಬರಹಕ್ಕೆ ಮೀಸಲಿಟ್ಟವರು ಆರ್.ಪಿ.ಹೆಗಡೆ. ಇದನ್ನು ಕಪಾಟಿನಲ್ಲಿರುವ ಪುಸ್ತಕಗಳೇ ಹೇಳುತ್ತವೆ. ಅವರ ಮನೆ ಬೋರ್ಡಿಲ್ಲದ ಗ್ರಂಥಾಲಯ. ಅಲ್ಲಿ ಎಂಟು ಸಾವಿರಕ್ಕೂ ಅಧಿಕ ಕೃತಿಗಳಿವೆ. ಸಂಶೋಧನಾ ವಿದ್ಯಾರ್ಥಿಗಳು ಪುಸ್ತಕ ಹುಡುಕಿಕೊಂಡು ಸಿದ್ದಾಪುರದ ‘ಸೃಷ್ಟಿ’ಗೆ ಬರುತ್ತಿದ್ದರು. ಈ ಮನೆಯಲ್ಲೀಗ ‘ಸೃಷ್ಟಿ’ಗಳು ಮಾತ್ರ ಉಳಿದಿವೆ, ಸೃಷ್ಟಿಸುವ ಜೀವ ನಭದೆಡೆಗೆ ಸಾಗಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !