ಸೋಮವಾರ, ಆಗಸ್ಟ್ 26, 2019
20 °C

ಸಂಸ್ಕೃತ: ದೇವಭಾಷೆ

Published:
Updated:
Prajavani

ಶ್ರಾವಣ ಹುಣ್ಣಿಮೆಯನ್ನು ‘ಸಂಸ್ಕೃತದಿನ’ ಎಂದೂ ಆಚರಿಸಲಾಗುತ್ತದೆ. 

ಪ್ರಾಚೀನ ಭಾರತದ ಸಂಸ್ಕೃತಿಯನ್ನೂ ಪರಂಪರೆಯನ್ನೂ ತಿಳಿದುಕೊಳ್ಳಬೇಕಿದ್ದರೆ ಸಂಸ್ಕೃತಭಾಷೆಯ ಅರಿವು ತುಂಬ ಮುಖ್ಯ. 

‘ಸಂಸ್ಕೃತ’ ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು ಎಂದರ್ಥ. ಈ ದೃಷ್ಟಿಯಿಂದ ನೋಡಿದಾಗ, ಚೆನ್ನಾಗಿ ಆಡಿದ/ಆಡುವ ಎಲ್ಲ ಮಾತುಗಳೂ ಸಂಸ್ಕೃತವೇ ಆಗುತ್ತವೆ. ಶಕ್ತಿಯನ್ನೂ ಸತ್ವವನ್ನೂ ಸೌಂದರ್ಯವನ್ನೂ ತನ್ನದಾಗಿಸಿಕೊಂಡ ಯಾವುದೇ ಭಾಷೆಯೂ ‘ಸಂಸ್ಕೃತ’ ಆಗಬಹುದು. ಆದರೆ ಇಂದು ನಾವು ಒಂದು ನಿರ್ದಿಷ್ಟ ಭಾಷೆಯನ್ನು ಸಂಸ್ಕೃತ ಎಂದು ಕರೆಯುತ್ತಿದ್ದೇವೆ. ಈ ಸಂಸ್ಕೃತಭಾಷೆಯನ್ನು ಅಮರವಾಣೀ, ಗೀರ್ವಾಣವಾಣೀ, ಗೈರ್ವಾಣೀ, ದೇವಭಾಷೆ – ಎಂದೆಲ್ಲ ಕರೆಯುವುದುಂಟು.

ಪ್ರಾಚೀನ ಭಾರತದ ಎಲ್ಲ ಜ್ಞಾನಸಂಪತ್ತು ಅಡಕವಾಗಿರುವುದು ಸಂಸ್ಕೃತಭಾಷೆಯಲ್ಲಿಯೇ. ಹೀಗಾಗಿ ನಮ್ಮ ದೇಶದ ಹೃದಯವೇ ಈ ಭಾಷೆಯಲ್ಲಿದೆ ಎಂದರೆ ತಪ್ಪಾಗದು. ಜಗತ್ತಿನ ಪ್ರಾಚೀನ ಸಾಹಿತ್ಯರಾಶಿ ಎನಿಸಿರುವ ವೇದಗಳಿಂದ ಮೊದಲುಗೊಂಡು ಈ ನೆಲದ ವೈದ್ಯಶಾಸ್ತ್ರವಾದ ಆಯುರ್ವೇದದವರೆಗೂ, ಅಧ್ಯಾತ್ಮವಿದ್ಯೆಯ ಆಕರಗಳೆನಿಸಿರುವ ಉಪನಿಷತ್ತುಗಳಿಂದ ಹಿಡಿದು ದೈಹಿಕಸುಖಮೂಲವಾದ ಕಾಮಶಾಸ್ತ್ರದ ತನಕ, ಗಣಿತಶಾಸ್ತ್ರದ ಆರ್ಯಭಟೀಯಂ–ಲೀಲಾವತಿಗಳಿಂದ ಹಿಡಿದು ಕಲಾಪಠ್ಯಗಳಾದ ನಾಟ್ಯಶಾಸ್ತ್ರ–ಧ್ವನ್ಯಾಲೋಕದ ವರಗೆ, ಆದಿಕಾವ್ಯವೆನಿಸಿರುವ ರಾಮಾಯಣವೂ ಇತಿಹಾಸ ಎನಿಸಿರುವ ಮಹಾಭಾರತವೂ – ಎಲ್ಲವೂ ಸಂಸ್ಕೃತವೇ.

ಸಂಸ್ಕೃತಭಾಷೆಯ ಪದಸಪಂತತ್ತು ತುಂಬ ಅಗಾಧ. ಈ ವಿಷಯವನ್ನು ಕುರಿತು ಎನ್‌. ರಂಗನಾಥಶರ್ಮಾ ಅವರ ಮಾತೊಂದು ಹೀಗಿದೆ: ‘ಸಂಸ್ಕೃತಭಾಷೆಯಲ್ಲಿರುವಷ್ಟು ಶಬ್ದರಾಶಿಗಳು ವಿಶ್ವದ ಯಾವ ಭಾಷೆಯಲ್ಲೂ ಇಲ್ಲ. ಶಬ್ದಕೋಶಗಳಲ್ಲಿ ಹೇಳಿರುವುದು ಉಪಲಕ್ಷಣ ಮಾತ್ರ. ಎಲ್ಲ ಶಬ್ದಗಳನ್ನೂ ಯಾವ ಕೋಶಕಾರನೂ ಬರೆಯಲಾರ. ಮಹಾಭಾಷ್ಯದಲ್ಲಿ ಪತಂಜಲಿ ಹೇಳುತ್ತಾನೆ: ಬೃಹಸ್ಪತಿಯು ದೇವೇಂದ್ರನಿಗೆ ಒಂದೊಂದೇ ಶಬ್ದಸ್ವರೂಪವನ್ನು ತೋರಿಸುತ್ತಹೋದನು. ಒಂದು ಸಾವಿರ ದಿವ್ಯವರ್ಷಗಳು ಕಳೆದರೂ ಈ ಶಬ್ದಪಾರಾಯಣವು ಮುಗಿಯಲಿಲ್ಲ!’

ಸಂಸ್ಕೃತದ ಕಾವ್ಯಪರಂಪರೆಯೂ ತುಂಬ ದೊಡ್ಡದು. ರಾಮಾಯಣ–ಮಹಾಭಾರತ – ಈ ಎರಡು ಮಹಾಕಾವ್ಯಗಳೇ ಅಪೂರ್ವವಾದುದು. ಇದರ ಜೊತೆಗೆ ಕಾಳಿದಾಸ, ಅಶ್ವಘೋಷ, ಭಾಸ, ಭವಭೂತಿ, ಬಾಣ, ಮಾಘ, ವಿಶಾಖದತ್ತ, ಭಾರವಿ, ಜಗನ್ನಾಥ, ಜಯದೇವ, ನೀಲಕಂಠದೀಕ್ಷಿತ, ಬಿಲ್ಹಣ, ವಿಷ್ಣುಶರ್ಮಾ, ಶೂದ್ರಕ, ದಂಡಿ, ಸೋಮದತ್ತ – ಹೀಗೆ ನೂರಾರು ಕವಿಗಳ ಸಾವಿರಾರು ಕೃತಿಗಳಿವೆ. ಕಾವ್ಯ, ನಾಟಕ, ಚಂಪೂ, ಗದ್ಯ – ಹೀಗೆ ನಾಲ್ಕಾರು ರೀತಿಗಳಲ್ಲಿ ಈ ಸಾಹಿತ್ಯವಿದ್ದರೂ ಎಲ್ಲವನ್ನೂ ‘ಕಾವ್ಯ’ ಎಂದೇ ಕರೆಯಬಹುದಾಗಿದೆ.

ಸಂಸ್ಕೃತದ ವ್ಯಾಕರಣ ಪರಂಪರೆಯೂ ತುಂಬ ದೊಡ್ಡದು. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯ, ಭರ್ತೃಹರಿಯ ವಾಕ್ಯಪದೀಯ – ಇವೆಲ್ಲವೂ ಸಾರಸ್ವತ ಜಗತ್ತಿನ ಶ್ರೇಷ್ಠ ರತ್ನಗಳು ಎನಿಸಿವೆ.

ಭಾರತೀಯತೆಯನ್ನು ಅರಿಯಲು ಇರುವ ಹೆಬ್ಬಾಗಿಲು ಸಂಸ್ಕೃತ – ಎಂದು ಹೇಳಿದರೆ ಅದೇನೂ ಉತ್ಪ್ರೇಕ್ಷೆಯಾಗದು.

ಸರಸ್ವತಿಯ ಬಣ್ಣ ಕಪ್ಪು!

ಸಂಸ್ಕೃತದಲ್ಲಿ ಸಾವಿರಾರು ಚಮತ್ಕಾರ ಪದ್ಯಗಳೂ, ಸುಭಾಷಿತಗಳೂ ಇವೆ. ಇವು ಆ ಕಾಲದ ಜನರ ಸ್ವಭಾವಕ್ಕೂ ಹಿಡಿದ ಕನ್ನಡಿಯಂತಿವೆ. ಒಂದು ಪದ್ಯವನ್ನು ಇಲ್ಲಿ ಉಲ್ಲೇಖಿಸಬಹುದು.

ಮಹಾಕವಿ ದಂಡಿ ತನ್ನ ‘ಕಾವ್ಯಾದರ್ಶ’ದಲ್ಲಿ ಸರಸ್ವತಿಯನ್ನು ‘ಸರ್ವಶುಕ್ಲೆ’ – ಎಂದರೆ ಪೂರ್ಣವಾಗಿ ಬೆಳ್ಳಗಿರುವವಳು ಎಂದಿದ್ದಾನೆ. ಇದಕ್ಕೆ ಉತ್ತರವೋ ಎಂಬಂತೆ, ಕರ್ನಾಟಕದಲ್ಲಿ ಸುಮಾರು ಏಳನೆಯ ಶತಮಾನದಲ್ಲಿದ್ದ ಕವಯಿತ್ರಿ ವಿಜ್ಜಿಕೆ ಹೀಗೆಂದಿದ್ದಾಳೆ:

ನೀಲೋತ್ಪಲದಲಶ್ಯಾಮಾಂ ವಿಜ್ಜಿಕಾಂ  ಮಾಮಜಾನತಾ |

ವೃಥೈವ ದಂಡಿನಾ ಪ್ರೋಕ್ತಂ ಸರ್ವಶುಕ್ಲಾ ಸರಸ್ವತೀ ||

(ಕನ್ನೈದಿಲೆಯ ದಳದಂತೆ ಶ್ಯಾಮಲೆ, ಎಂದರೆ ಕಪ್ಪಾಗಿರುವ, ನನ್ನನ್ನು – ವಿಜ್ಜೆಕೆಯನ್ನು – ಅರಿಯದೆಯೇ ‘ಸರಸ್ವತಿಯು ಸರ್ವಶುಕ್ಲೆ’ ಎಂದು ದಂಡಿ ವ್ಯರ್ಥವಾಗಿ ಹೇಳಿದನು!)

Post Comments (+)