ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಬಾರದ ಬೆಳೆ ವಿಮಾ ಮೊತ್ತ

ಮೆಣಸಿನಕಾಯಿ, ಹತ್ತಿ ಬೆಳೆಗಾರರ ₹ 48.96 ಕೋಟಿ ಬಾಕಿ
Last Updated 12 ಜೂನ್ 2018, 4:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ಸಾಲಿನ ವಿಮಾ ಕಂತು ತುಂಬುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, 2016ರ ಮುಂಗಾರಿನಲ್ಲಿ ಮಾಡಿಸಿದ್ದ ವಿಮಾ ಪರಿಹಾರ ಮೊತ್ತ ₹ 48.96 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ.

2016ರ ಮುಂಗಾರು ಬೆಳೆಗೆ ಜಿಲ್ಲೆಯ 89 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದರು. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದರು. ಜೋಳ, ನೆಲಗಡಲೆ, ಉದ್ದು, ಹೆಸರು, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಒಟ್ಟು ₹ 172 ಕೋಟಿ ಪರಿಹಾರ ಮಂಜೂರಾಗಿತ್ತು.

ಜೋಳ, ಮುಸಕಿನ ಜೋಳ, ನೆಲಗಡಲೆ, ಉದ್ದು, ಹೆಸರು ಸೇರಿದಂತೆ ವಿವಿಧ ಬೆಳೆಗಳಿಗೆ ಮಂಜೂರಾಗಿದ್ದ ₹ 123 ಕೋಟಿ ಹಣ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದ ರೈತರ ವಿಮಾ ಹಣ ಇನ್ನೂ ಬಿಡುಗಡೆಯಾಗಿಲ್ಲ.

ಕುಂದಗೋಳ, ಅಣ್ಣಿಗೇರಿ ಭಾಗದ ಹತ್ತಿ ಬೆಳೆದ ರೈತರ ₹ 9.46 ಕೋಟಿ ಹಾಗೂ ಜಿಲ್ಲೆಯಾದ್ಯಂತ ಮೆಣಸಿನಕಾಯಿ ಬೆಳೆದ 30 ಸಾವಿರಕ್ಕೂ ಹೆಚ್ಚು ರೈತರ ₹ 37.50 ಕೋಟಿ ಪರಿಹಾರದ ಹಣ ಬಾಕಿ ಇದೆ. ವಿಮಾ ಕಂತು ಪಾವತಿಸಿ ಎರಡು ವರ್ಷಗಳ ಕಳೆದರೂ ಹಣ ಬಿಡುಗಡೆಯಾಗಿಲ್ಲ.

ವಿಳಂಬ ಯಾಕೆ?: ಹತ್ತಿ ಹಾಗೂ ಮೆಣಸಿನಕಾಯಿ ಫಸಲನ್ನು ಮೂರರಿಂದ ನಾಲ್ಕು ಬಾರಿ ಬಿಡಿಸಲಾಗುತ್ತದೆ. ಬೆಳೆ ಹಾನಿಯಾಗಿದ್ದರಿಂದ ಒಂದು ಬಾರಿ ಮಾತ್ರ ಅಲ್ಪ ಪ್ರಮಾಣದಲ್ಲಿ ಬಂದಿದ್ದ ಫಸಲನ್ನು ಬಿಡಿಸಲಾಗಿದೆ. ಇದನ್ನೇ ದಾಖಲೆಗಳಲ್ಲಿ ನಮೂದಿಸಿದ್ದು, ಫಸಲು ಪಡೆದ ಮೇಲೆಯೂ ಏಕೆ ಪರಿಹಾರ ನೀಡಬೇಕು ಎನ್ನುವುದು ವಿಮಾ ಕಂಪನಿಯಾದ ಟಾಟಾ ಎಐಜಿ ಅಧಿಕಾರಿಗಳ ವಾದವಾಗಿದೆ.

ಬೆಳೆ ಪದ್ಧತಿ ಹೇಗಿದೆ ಹಾಗೂ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಉಂಟಾಗಿರುವ ನಷ್ಟದ ಕುರಿತು ವರದಿಯನ್ನು ವಿಮಾ ಕಂಪನಿಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಹೇಳಿದರು.

2017ರ ಮುಂಗಾರಿನ ಬೆಳೆಗೂ ವಿಮಾ ಕಂತು ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಪರಿಹಾರದ ಮೊತ್ತ ಇನ್ನಷ್ಟೇ ಪ್ರಕಟವಾಗಬೇಕಿದೆ.

ಬೆಂಬಲ ಬೆಲೆ ಯೋಜನೆಯಡಿ ಕಡಲೆಯನ್ನು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಲಾಗಿದೆ. ₹ 100 ಕೋಟಿಗೂ ಹೆಚ್ಚು ಮೊತ್ತ ಬಾಕಿ ಇದ್ದು, ಬಿಡುಗಡೆಯಾಗಿಲ್ಲ. ಬಿತ್ತನೆ ಕಾರ್ಯ ಆರಂಭವಾಗಿರುವುದರಿಂದ ಬೀಜ, ರಸಗೊಬ್ಬರ ಮುಂತಾದವುಗಳಿಗೆ ಖರ್ಚು ಮಾಡಲು ಸಾಲ ಮಾಡಬೇಕಿದೆ. ಸರ್ಕಾರವೇ ಬಿಲ್‌ ಪಾವತಿಸದಿದ್ದರೆ, ಇನ್ನು ವಿಮಾ ಕಂತಿಗೆ ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸುತ್ತಾರೆ ಕುಂದಗೋಳದ ರೈತರ ಮಲ್ಲಿಕಾರ್ಜುನ.

ವಿಮಾ ಪರಿಹಾರದ ಹಣ ಬಿಡುಗಡೆ ಹಾಗೂ ರೈತರ ಸಂಕಷ್ಟಗಳ ಬಗ್ಗೆ ಚರ್ಚಿಸಲು ಶೀಘ್ರವೇ ಜಿಲ್ಲಾಧಿಕಾರಿ ಅವರು ಸಭೆ ಕರೆದು ಚರ್ಚೆ ನಡೆಸಬೇಕು
– ಅಮೃತ ಇಜಾರಿ, ಕಳಸಾ–ಬಂಡೂರಿ ಪಕ್ಷಾತೀತ ಸಮಿತಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT