ಅಪ್ಪನ ಪದ್ಯಗಳೇ ಶಬಾನಾಗೆ ಪ್ರೇರಣೆ

7
ಕವಿ ಕೈಫಿ ಆಜ್ಮಿ ಶತಮಾನೋತ್ಸವ ವರ್ಷಾಚರಣೆ

ಅಪ್ಪನ ಪದ್ಯಗಳೇ ಶಬಾನಾಗೆ ಪ್ರೇರಣೆ

Published:
Updated:
Prajavani

‘ಪದ್ಯಗಳು ನನ್ನ ನಿರಂತರ ಸಂಗಾತಿ. ಅವು ನನಗೆ ಸಮಾಧಾನ, ಉತ್ತೇಜನ ನೀಡುತ್ತವೆ. ಅವು ನನ್ನ ಶಕ್ತಿಯೂ ಹೌದು. ಕಾಡುವ ಪ್ರಶ್ನೆಗಳಿಗೆ ಉತ್ತರ ಬೇಕಾದಾಗಲೆಲ್ಲ ನನ್ನ ತಂದೆ ಕೈಫಿಯವರ ಪುಸ್ತಕ ಓದುತ್ತೇನೆ. ಸಾಮಾಜಿಕ ಪರಿವರ್ತನೆಯತ್ತ ಮುಗುಳ್ನಗುತ್ತ ಹೆಜ್ಜೆ ಹಾಕುತ್ತೇನೆ...’

ಶಬಾನಾ ಆಜ್ಮಿ, ಭಾರತೀಯ ಚಲನಚಿತ್ರ ರಂಗದ ಹೆಸರಾಂತ ನಟಿ ತಮ್ಮ ಪ್ರೀತಿಯ ತಂದೆ ಕೈಫಿ ಆಜ್ಮಿ ಕುರಿತು ಆಡುವ ಮಾತಿದು. ನಟನೆಯ ಜೊತೆ ಸಾಮಾಜಿಕ ಹೋರಾಟಗಾರ್ತಿ ಮತ್ತು ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿ ರೂಪುಗೊಂಡ ಶಬಾನಾ ವ್ಯಕ್ತಿತ್ವದ ಮೇಲೆ ಅವರ ತಂದೆ ಭಾರತೀಯ ಸಾಹಿತ್ಯ ಅದರಲ್ಲೂ ಉರ್ದು ಸಾಹಿತ್ಯ ಲೋಕದ ಮೇರು ಕವಿ ಕೈಫಿ ಅಜ್ಮಿ ಬೀರಿದ ದಟ್ಟ ಪರಿಣಾಮಕ್ಕೆ ಮೇಲಿನ ಮಾತೇ ಸಾಕ್ಷಿ.

ಕೈಫಿ ಸಾಬ್ ಅವರ ಕಥೆ, ಕವನ, ಸಾಹಿತ್ಯದ ವಿಷಯ ಪ್ರಸ್ತಾಪ ಆದಾಗಲೆಲ್ಲ ಶಬಾನಾ ಭಾವಲಹರಿಗೆ ಜಾರುತ್ತಾರೆ. ತಂದೆಯ ಕಾವ್ಯ ಸಾಲುಗಳಲ್ಲಿ ಪಯಣಕ್ಕಿಳಿದು ಒಳಾರ್ಥ, ಮಹತ್ವ ಸವಿಯುತ್ತ ಸಂಭ್ರಮಿಸುತ್ತಾರೆ.

ತಂದೆಯವರ ಎಡಪಂಥೀಯ ವಿಚಾರಗಳನ್ನು ಗ್ರಹಿಸುತ್ತ ಬೆಳೆದ ಶಬಾನಾಗೆ ಆ ಅಮೋಘ ನೆನಪುಗಳನ್ನು ಇನ್ನಷ್ಟು ಗಾಢ ಮತ್ತು ಆಪ್ತವಾಗಿಸುವ ಉಮೇದು. ಅದಕ್ಕೆಂದೇ ಅವರು ತಂದೆಯವರ ನೆನಪಿನಲ್ಲಿ ಶತಮಾನೋತ್ಸವ ವರ್ಷಾಚರಣೆ ಕೈಗೊಂಡಿದ್ದಾರೆ. ಅವರಿಗೆ ಕುಟುಂಬ ಸದಸ್ಯರೂ ಸಾಥ್‌ ನೀಡಿದ್ದಾರೆ.

ಹೋರಾಟದ ಬದುಕು

ಖ್ಯಾತ ಕವಿಯ ಪುತ್ರಿಯಾದರೂ ಶಬಾನಾ ಅವರ ಬಾಲ್ಯ ಸುಗಮ ಇರಲಿಲ್ಲ. ಬಡತನ, ಸಂಘರ್ಷ, ಸವಾಲುಗಳ ಸಮೇತ ತಂದೆಯ ಜೊತೆಗೆ ಅವರು ಕೆಂಬಾವುಟದ ಆಶ್ರಯದಲ್ಲಿ ಹೋರಾಟದ ಬದುಕು ಕಟ್ಟಿಕೊಂಡರು. ಕಮ್ಯುನಿಸ್ಟ್ ನಾಯಕರು ಜೊತೆಗೂಡಿ ಇರುತ್ತಿದ್ದ ಕಮ್ಯೂನ್‌ನಲ್ಲಿ ಜನಿಸಿದ ಅವರಿಗೆ ಬಾಲ್ಯದಲ್ಲೇ ಎಡಪರ ಚಿಂತನೆ ಹತ್ತಿರವಾದವು.

‘ನನ್ನ ತಂದೆ-ತಾಯಿ ರೆಡ್‌ಫ್ಲ್ಯಾಗ್ ಎಂಬ ಕಟ್ಟಡದಲ್ಲಿ ವಾಸವಿದ್ದರು. ಕಟ್ಟಡದ ಮೇಲೆ ಕೆಂಬಾವುಟ ಸದಾ ಹಾರಾಡುತಿತ್ತು. ರಂಗನಟಿ ತಾಯಿಯ ಜೊತೆಗೆ ಫೃಥ್ವಿ ಥೇಟರ್ ಹೋಗುತ್ತಿದ್ದೆ, ಕಮ್ಯುನಿಸ್ಟ್ ಆಗಿದ್ದ ತಂದೆಯ ಜೊತೆ ಕಾರ್ಮಿಕರು, ರೈತರ ಸಭೆ ಹಾಜರಾಗುತ್ತಿದ್ದೆ. ನನ್ನ ಬಾಲ್ಯ ಕಳೆದಿದ್ದೇ ಹೀಗೆ’ ಎಂದು ಶಬಾನಾ ಹೇಳುತ್ತಾರೆ.

ಭೌತಿಕ ವಸ್ತುಗಳ ಮೇಲೆ ಹೆಚ್ಚು ಆಸಕ್ತಿ ಇರದಿದ್ದರೂ ತಂದೆಯವರಿಗೆ ಎರಡು ವಸ್ತುಗಳ ಮೇಲೆ ಹೆಚ್ಚು ಆಸ್ಥೆ, ಅಭಿಮಾನ ಇತ್ತು. ಒಂದು ಕಮ್ಯುನಿಸ್ಟ್ ಪಕ್ಷದ ಕಾರ್ಡು, ಮತ್ತೊಂದು ಮೌಂಟ್‌ಬ್ಲಾಂಕ್ ಫೌಂಟೇನ್ ಪೆನ್‌. ಎರಡನ್ನೂ ಸದಾ ಶುಚಿಗೊಳಿಸಿ, ಕಾಪಾಡಿಕೊಳ್ಳುತ್ತಿದ್ದರು. ಪೆನ್‌ಗಳನ್ನು ಶುಚಿಗೊಳಿಸಿ, ಅವುಗಳ ಸಮರ್ಪಕ ನಿರ್ವಹಣೆಗಾಗಿ ಅಮೆರಿಕದ ನ್ಯೂಯಾರ್ಕ್‌ಗೆ ಕಳುಹಿಸಿಕೊಡುತ್ತಿದ್ದರು ಎನ್ನುತ್ತಾರೆ ಅವರು.

ಬದುಕಿನುದ್ದಕ್ಕೂ ತಂದೆ-ಪುತ್ರಿಯಾಗಿ ಅಷ್ಟೇ ಅಲ್ಲ, ಗುರು-ಶಿಷ್ಯೆ, ಸ್ನೇಹಿತರಾಗಿ, ಹೋರಾಟಗಾರರಾಗಿ, ಕವಿ-ನಟಿಯಾಗಿ ಹಲವು ಸಂವಾದ ಅವರಿಬ್ಬರ ನಡುವೆ ನಡೆದಿವೆ. ’ಇತ್ತೀಚಿನ ವರ್ಷಗಳಲ್ಲಿ ಜಾತಿ-ಕೋಮಿನ ಹೆಸರಿನಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮೂಡುತ್ತಿರುವ ದ್ವೇಷ-ಅಸೂಯೆ ಭಾವನೆ ಕಂಡಾಗ ಸಮಾನತೆಯ ಕನಸು ನುಚ್ಚುನೂರಾಗುತ್ತಿವೆ ಎಂದು ಅನ್ನಿಸುವುದಿಲ್ಲವೇ’ ಎಂದು ಶಬಾನಾ ಒಮ್ಮೆ ಕೇಳಿದರಂತೆ.

ಅದಕ್ಕೆ ಕೈಫಿಯವರದ್ದು ಸಹಜ ಪ್ರತಿಕ್ರಿಯೆ ಹೀಗಿತ್ತು: ಬದಲಾವಣೆ ಎಂಬುದು ಒಂದೆರಡು ದಿನ ಅಥವಾ ವರ್ಷಗಳಲ್ಲಿ ಆಗುವಂಥದ್ದಲ್ಲ. ನಿರೀಕ್ಷೆ ಕಳೆದುಕೊಳ್ಳಬಾರದು. ಬದಲಾವಣೆಗೆ ಕ್ರಿಯೆ ಮುಂದುವರೆಯಬೇಕು. ಎಂದಿಗೂ ನಿಲ್ಲಬಾರದು.⇒v

**

ಕೈಫಿ ಬಗ್ಗೆ ಒಂದಿಷ್ಟು...

ಕೈಫಿ ಆಜ್ಮಿಯವರ (14 ಜನವರಿ 1919-10 ಮೇ 2002) ಪೂರ್ಣ ಹೆಸರು ಸಯ್ಯದ್ ಅಖ್ತರ್ ಹುಸೇನ್ ರಿಜ್ವಿ. ಉತ್ತರ ಪ್ರದೇಶದ ಆಜಮ್‌ಗಢ ಸಮೀಪದ ಮಿಸ್ವಾನ್‌ನಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಕಾವ್ಯನಾಮ ಕೈಫಿಯೊಂದಿಗೆ ‘ಆಜ್ಮಿ‘ ಎಂಬ ಹೆಸರು ಸೇರಿಸಿಕೊಂಡರು.

11ನೇ ವಯಸ್ಸಿನಲ್ಲೇ ಪದ್ಯಗಳನ್ನು ಆರಂಭಿಸಿದ ಅವರು ಕ್ರಮೇಣ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ಪಾಲ್ಗೊಂಡರು. ಎಕರೆಗಟ್ಟಲೆ ಜಮೀನನ್ನು ರೈತರಿಗೆ, ಕೂಲಿಕಾರ್ಮಿಕರಿಗೆ ಹಂಚಿ 23ನೇ ವಯಸ್ಸಿನಲ್ಲೇ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದರು. ಕಾವ್ಯ, ಗೀತೆಗಳನ್ನು ರಚಿಸಿ ಗಳಿಸಿದ್ದೆಲ್ಲವನ್ನೂ ಪಕ್ಷಕ್ಕೆ ಸಮರ್ಪಿಸುತ್ತಿದ್ದ ಅವರು ಪಕ್ಷವು ಗೌರವಧನದ ರೂಪದಲ್ಲಿ ನೀಡುತ್ತಿದ್ದ ₹ 40 ಮಾತ್ರ ಸ್ವೀಕರಿಸುತ್ತಿದ್ದರು.

ವರ್ಷಗಳು ಕಳೆದಂತೆ ಕೈಫಿಯವರ ಶಾಯರಿ, ಗಝಲ್ ಪ್ರಸಿದ್ಧಿ ಗಳಿಸಿದವು. 1951ರಲ್ಲಿ ತೆರೆ ಕಂಡ ‘ಬುಜ್ದಿಲ್’ ಚಿತ್ರದೊಂದಿಗೆ ಅವರು ಚಿತ್ರರರಂಗ ಪ್ರವೇಶಿಸಿದರು. ಗೀತೆ ರಚನೆಕಾರ, ಸಂಭಾಷಣೆಕಾರರಾಗಿ ರೂಪುಗೊಳ್ಳಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಗುರುದತ್ ಅವರ ‘ಕಾಗಜ್ ಕೆ ಫೂಲ್ ’ (1959) ಚೇತನ್ ಆನಂದ್ ಅವರ ‘ರಾಂಜಾ’ (1964), ಎಂ.ಎಸ್.ಸತ್ಯು ಅವರ ‘ಗರಂ ಹವಾ’ (1973), ಶ್ಯಾಮ್ ಬೆನಗಲ್ ಅವರ ‘ಮಂಥನ್’ (1976) ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಪತ್ನಿ, ನಟಿಯೂ ಆಗಿರುವ ಶೌಖತ್ ಆಜ್ಮಿ ಮತ್ತು ಸ್ನೇಹಿತರು ಜೊತೆಗೂಡಿ ‘ಇಪ್ಟಾ‘ ಸಾಂಸ್ಕೃತಿಕ ಸಂಘಟನೆ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !