ಅಂತೂ ಇಂತೂ ಹೋಗಿ ಬಂದ್ರು...

7
Shabari male- women's entry

ಅಂತೂ ಇಂತೂ ಹೋಗಿ ಬಂದ್ರು...

Published:
Updated:
Prajavani

ಮಹಿಳೆ ಮತ್ತು ಮುಟ್ಟಿನ ವಿಚಾರಕ್ಕಾಗಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹಲವು ವರ್ಷಗಳ ಕಾಲ ಋತುಮಾತಿಯಾದ ಹೆಣ್ಣುಮಕ್ಕಳ ಪ್ರವೇಶ ನಿಷೇಧಿಸಲಾಗಿತ್ತು.

‘ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಇದಕ್ಕೆ ಅಯ್ಯಪ್ಪ ದೇವರು ಪ್ರತ್ಯೇಕ ಅಲ್ಲ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಎಂದು 2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ತೀರ್ಪಿಗೆ ಪ್ರಗತಿಪರರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಸಂಪ್ರದಾಯವಾದಿಗಳಿಂದ ಟೀಕೆಗಳು ವ್ಯಕ್ತವಾಗಿದ್ದವು.

ಮಹಿಳೆಯರ ದೇಗುಲ ಪ್ರವೇಶಕ್ಕೆ ಯತ್ನಿಸಿದಾಗ ಅದಕ್ಕೆ ಹಲವು ಅಡೆತಡೆಗಳು ಎದುರಾಗಿದ್ದವು. ಬುಧವಾರ ಬೆಳಗಿನ ಜಾವ ಇಬ್ಬರು ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಈ ಬಗ್ಗೆ ವಿವಿಧ ಕ್ಷೇತ್ರದ ಯುವಜನರನ್ನು ‘ಮೆಟ್ರೊ’ ಮಾತನಾಡಿಸಿದಾಗ ವ್ಯಕ್ತವಾದ ಅಭಿಪ್ರಾಯಗಳು ಇಲ್ಲಿವೆ.

ನಿಯಮ ಪಾಲಿಸಬೇಕಿತ್ತು

ಪೂರ್ವ ಕಾಲದಿಂದಲೂ ಯಾರೂ ಹೋಗುತ್ತಿರಲಿಲ್ಲ. ತಿಳಿದುತಿಳಿದೂ ಯಾರೂ ತಪ್ಪು ಮಾಡುವುದಿಲ್ಲವಲ್ಲ. ಆದರೂ ಮತ್ತೆ ಅದೇ ತಪ್ಪು ಮಾಡುತ್ತಿರುವುದು ಸರಿಯಲ್ಲ. ಕಾಲ ಬದಲಾಗಿದೆ ಅಂದಾಕ್ಷಣ ಎಲ್ಲವೂ ಬದಲಾಗಿದೆ ಅಂತಲ್ಲ. ಹಿಂದೆ ಹೇಗಿತ್ತೋ ಹಾಗಿಯೇ ಇದ್ದರೆ ಚೆನ್ನಾಗಿರುತ್ತಿತ್ತು.  ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವುದನ್ನು ಪಾಲಿಸಬೇಕಿತ್ತು.

–ಚಂದ್ರಮೋಹನ್ ದೀಕ್ಷಿತ್, ಅರ್ಚಕ, ಜಲಕಂಠೇಶ್ವರ ದೇವಸ್ಥಾನ, ಕೋಟೆ ಕಲ್ಯಾಸಿಪಾಳ್ಯ

**

ನ್ಯಾಯದ ವಿಜಯ

ಮಹಿಳೆಯರ ದೇಗುಲ ಪ್ರವೇಶ ನ್ಯಾಯದ ವಿಜಯ ಅಂತ ಹೇಳಬಹುದು. ಸಂವಿಧಾನದಲ್ಲಿ ಇರುವ ಹಕ್ಕುಗಳು ಬರೀ ಸ್ವಪ್ನವಾಗಿ ಉಳಿಯಬಾರದು. ಅದಕ್ಕಾಗಿಯೇ ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಸಮಾನತೆಯನ್ನು ಎತ್ತಿ ಹಿಡಿದಿತ್ತು. ಅಂತೆಯೇ ಈ ತೀರ್ಪನ್ನುಈ ಮಹಿಳೆಯರು ಪಾಲಿಸಿರುವುದು ಅಭಿನಂದನೀಯ. ಆದರೆ, ಅವರು ಬೆಳಗಿನ ಜಾವ ಅಥವಾ ಕದ್ದುಮುಚ್ಚಿ ಹೋಗಬಾರದಿತ್ತು.

ಕೋರ್ಟಿನ ತೀರ್ಪಿಗೆ ಕೆಲ ಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಧರ್ಮ ಯಾರ ಸ್ವತ್ತೂ ಅಲ್ಲ. ಯಾವ ಭಕ್ತಿಯಲ್ಲಿ ಹಿಂಸೆ ಮಾಡಬೇಕು ಅಂತ ಇದೆ ಹೇಳಿ? ಹಿಂದೂ ಧರ್ಮ ಅಹಿಂಸಾ ಧರ್ಮ ಪರಿಪಾಲಿಸುತ್ತದೆ. ಕೇರಳದಲ್ಲಿ ಹಿಂದೆ ದಲಿತರು ದೇಗುಲ ಪ್ರವೇಶಿಸಬಾರದು ಎಂದು ಈ ಹಿಂದೆ ಬ್ರಾಹ್ಮಣರು ತಡೆಯೊಡಿದ್ದರು. ಜನರ ಶಕ್ತಿ ಮತ್ತು ಚಳವಳಿಯಿಂದ ಬದಲಾವಣೆ ಬಂದಿತು. ಋತುಮತಿಯಾಗಿರುವ ಹೆಣ್ಮಕ್ಕಳು ಅಶುದ್ಧ ಅಂತ ಹೇಳುವ ನಂಬಿಕೆಯೇ ಅಶುದ್ಧ. ಅಯ್ಯಪ್ಪ ಸ್ವಾಮಿ ಅವರು ನನ್ನ ಭಕ್ತರು ಗಂಡಸರೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹೆಣ್ಮಕ್ಕಳ ದೇಗುಲ ಪ್ರವೇಶ ನ್ಯಾಯದ ವಿಜಯ.

–ತೇಜಸ್ವಿನಿ ರಾಜಕುಮಾರ್, ವಕೀಲೆ

**

ಮುಟ್ಟು ಮೈಲಿಗೆಯಲ್ಲ

ಕೇರಳ ರಾಜ್ಯ ಸರ್ಕಾರ ತನ್ನ ಕರ್ತವ್ಯ ಪಾಲಿಸಿದೆ. ಮಹಿಳೆ ಇನ್ನೊಂದು ಜೀವಿಗೆ ಜೀವ ಕೊಡುತ್ತಾಳೆ ಅನ್ನುವ ಕಾರಣಕ್ಕೇ ಹರಪ್ಪ, ಮೊಹಂಜಾದರೊ ಕಾಲದಿಂದಲೂ ಹೆಣ್ಣಿಗೆ ಉನ್ನತ ಸ್ಥಾನವಿತ್ತು. ನಮ್ಮ ದೇವತೆಗಳಲ್ಲಿ ಲಕ್ಷ್ಮಿ ಆರ್ಥಿಕ ಪಂಡಿತೆ, ಸರಸ್ವತಿ ವಿದ್ಯಾ ದೇವತೆ, ದುರ್ಗೆ ಶಕ್ತಿ ದೇವತೆ. ಅಂತೆಯೇ ಪ್ರತಿ ಗ್ರಾಮದಲ್ಲಿ ಗ್ರಾಮದೇವತೆ ಇದ್ದಾಳೆ ಹೊರತು ಪುರುಷ ದೇವರಲ್ಲ.

ದೇವತೆಯೆಂದು ಪೂಜಿಸುವ ಸಮಾಜ ಅವಳನ್ನು ಮುಟ್ಟುಮೈಲಿಗೆ ಇತ್ಯಾದಿಗಳ ಕಾರಣವೊಡ್ಡಿ ಸಮಾನತೆಯನ್ನು ನಿರಾಕರಿಸಬಾರದು.ಮಹಿಳೆ ಯಾವುದೇ ವಯಸ್ಸಿನಲ್ಲಿ ಅಮಂಗಲ ಅಥವಾ ಕೀಳು ಆಗಲು ಸಾಧ್ಯವಿಲ್ಲ. ಮುಟ್ಟನ್ನು ಮೈಲಿಗೆ ಅನ್ನುವವರು ಮುಠ್ಠಾಳರು.

 –ಅಖಿಲಾ ವಿದ್ಯಾಸಂದ್ರ, ಸಾಮಾಜಿಕ ಕಾರ್ಯಕರ್ತೆ

**

ಸಂವಿಧಾನ, ಧರ್ಮ ಬೇರೆ

ಧರ್ಮನೇ ಬೇರೆ, ಕಾನೂನು– ಸಂವಿಧಾನಗಳೇ ಬೇರೆ. ಉಪನಿಷತ್‌ನಲ್ಲಿ ‘ಮಾತೃದೇವೋಭವ’ ಅಂತ ಕರೆಯುತ್ತೇವೆ. ಆಗಿನಿಂದಲೂ ಹೆಣ್ಣಿಗೆ ಪ್ರಾಶಸ್ತ್ಯ ನೀಡಲಾಗಿದೆ. ಹೆಣ್ಣನ್ನು ದೇವತೆಗಳೆಂದು ಪೂಜಿಸುತ್ತೇವೆ. ಅಂಥ ದೇವತೆಗಳು ಬೆಟ್ಟ ಹತ್ತಿ ದೇಗುಲ ದರ್ಶನ ಮಾಡುವುದಕ್ಕೆ ಬದಲು ಅವರು ಎಲ್ಲಿ ಕರೆಯುತ್ತಾರೋ ಅಲ್ಲಿಯೇ ದೇವರು ದರ್ಶನ ನೀಡುತ್ತಾರೆ. ಮನೆಯಲ್ಲೇ ದೀಪ ಹಚ್ಚಿ ಅಯ್ಯಪ್ಪ ಅಂದರೆ ಸಾಕು ಅಲ್ಲಿಯೇ ಹಾರೈಕೆ ಸಿಗುತ್ತದೆ.

ಧರ್ಮದ ಅರ್ಥ ತಿಳಿದು ಮಹಿಳೆಯರು ಹೋಗಿದ್ದರೆ ಸಾಕಿತ್ತು. ಉಲ್ಲಂಘನೆ ಮಾಡಬೇಕೆಂಬ ಕೆಟ್ಟ ಮನಸ್ಥಿತಿ ಬೇಕಿರಲಿಲ್ಲ. ದೇವರ ವಿಷಯದಲ್ಲಿ ಎಲ್ಲರೂ ಸಮಾನರು. ಆದರೆ, ಪ್ರಕೃತಿ ವಿಚಾರದಲ್ಲಿ ಮಾತ್ರ ಭಿನ್ನತೆ ಇದೆ. ನೀವು ಎಲ್ಲೇ ಕರೆದರೂ ಅಯ್ಯಪ್ಪ ನಿಮ್ಮ ಜತೆ ಬರುತ್ತಾನೆ. ಅದಕ್ಕಾಗಿ ಅಲ್ಲಿಗೇ ಹೋಗಬೇಕಿಲ್ಲ.

 –ಎನ್. ಮಂಜುನಾಥ ಶರ್ಮಾ,  ಪ್ರಧಾನ ಅರ್ಚಕ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಚಾಮರಾಜಪೇಟೆ

**

‘ಲಿಂಗ ಸಮಾನತೆಯೆಡೆಗೆ ಇದು ಮೊದಲ ಹೆಜ್ಜೆ. ನನಗೆ ತುಂಬಾ ಖುಷಿಯಾಗುತ್ತಿದೆ’
–ಬಿಂದು ಅಮ್ಮಿನಿ, ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ ಮೊದಲ ಮಹಿಳೆ

**

ಸ್ವಾಗತಾರ್ಹ

ಕೋರ್ಟು ತೀರ್ಪು ಆಚರಣೆಗೆ ಬಂದದ್ದು ಸ್ವಾಗತಾರ್ಹ. ಈ ತೀರ್ಪು ಸಮಾನತೆಯ ದೃಷ್ಟಿಯಿಂದ ಮುಖ್ಯವಾದದ್ದು. ಇದು ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತದೆ. ಜಾತಿ ವ್ಯವಸ್ಥೆಯೊಳಗೆ ಹೇಗೆ ಅಸ್ಪೃಶ್ಯತೆ ಇದೆಯೋ ಅಂತೆಯೇ ಮಹಿಳೆಯರ ಬಗ್ಗೆಯೂ ಇಂಥದ್ದೇ ಭಾವವಿದೆ.

ಕೇರಳದಲ್ಲಿ ಇಷ್ಟು ಪ್ರತಿಭಟನೆ, ವಿರೋಧಗಳ ನಡುವೆ ಮಹಿಳೆಯರು ದೇಗುಲ ಪ್ರವೇಶಿಸಿದ್ದು ಒಳ್ಳೆಯ ಬೆಳವಣಿಗೆ. ಸಮಾನತೆಯನ್ನು ಒಪ್ಪಿಕೊಳ್ಳಲಾಗದು ಎಂದರೆ ಇದು ಎಂಥ ಸಮಾಜ. ಸಮಾನತೆಯ ವಿಚಾರಕ್ಕೆ ಎಲ್ಲರೂ ಕೈಜೋಡಿಸಬೇಕಿತ್ತು.

–ಮೈತ್ರಿ ಕೃಷ್ಣನ್, ವಕೀಲೆ

**

ಕಾನೂನು ದೊಡ್ದದು

ಪ್ರಜಾಸತ್ತಾತ್ಮಕ ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದೇವರ ಬಗ್ಗೆ ವೈಯಕ್ತಿಕವಾಗಿ ನಂಬಿಕೆಗಳಿಲ್ಲ. ಆದರೆ, ಇತರರ ಧಾರ್ಮಿಕ ಭಾವನೆಯನ್ನು ಗೌರವಿಸುತ್ತೇನೆ. ನನಗೆ ಸಿನಿಮಾ ಇಷ್ಟವಿದ್ದರೆ ನೋಡ್ತೀವಿ, ಇಲ್ಲದಿದ್ದರೆ ಇಲ್ಲ.

ಅಂತೆಯೇ ದೇಗುಲ ಪ್ರವೇಶಕ್ಕೆ ಇಷ್ಟವಿದ್ದವರು ಹೋಗಲಿ, ಬೇಡವಾದವರು ಬಿಡಲಿ. ಅದನ್ನು ದೊಡ್ಡದೊಂದು ಇಶ್ಯೂ ಮಾಡುವ ಅಗತ್ಯವಿರಲಿಲ್ಲ. ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದು ಇತಿಹಾಸ. ಆದರೆ, ಹೋಗಲೇಬೇಕೆಂಬ ಹಟ ಏಕೆ ಎಂಬುದು ನನ್ನ ಪ್ರಶ್ನೆ.  

–ಸ್ಮಿತಾ ಮಾಕಳ್ಳಿ, ಉಪನ್ಯಾಸಕಿ

 **

ಅಭಿನಂದನೀಯ ನಡೆ

ಇದೊಂದು ಐತಿಹಾಸಿಕ ಘಟನೆ. ತೀರ್ಪು ಬಂದ ಮೇಲೂ ಗಂಡಸರು ಇದನ್ನು ತಡೆದಿದ್ದರು. ಈಗ ಮಹಿಳೆಯರು ದೇಗುಲ ಪ್ರವೇಶಿಸಿರುವುದು ಸ್ವಾಗತಾರ್ಹ. ಮೊನ್ನೆಯಷ್ಟೇ ಮಹಿಳಾ ಮಹಾಗೋಡೆ ಮಾಡಿದ್ದರು. ಕೇರಳದಲ್ಲಿ ಎದೆವಸ್ತ್ರಕ್ಕೆ ಹೋರಾಟ ನಡೆಸಿದ್ದ ನಂಗಲಿ ತನ್ನ ಎದೆಯನ್ನೇ ಕತ್ತರಿಸಿ ಕೊಟ್ಟಿದ್ದಳು. ಈಗ ಅದೇ ಕೇರಳ ಈಗ ಮಹಿಳೆಯರ ವಿಚಾರದಲ್ಲಿ ಮತ್ತೊಮ್ಮೆ ಕ್ರಾಂತಿಕಾರಕ ಮುನ್ನುಡಿ ಬರೆದಿದೆ. ವಿರೋಧಿಸುವವರು ವೈಚಾರಿಕ ಕಾರಣ ಕೊಟ್ಟಿದ್ದರೆ ಮಹಿಳೆಯರು ಒಪ್ಪಬಹುದಿತ್ತು. ದೇಗುಲ ಪ್ರವೇಶದ ವಿಷಯದಲ್ಲಿ ಮಾತ್ರ ಹೆಣ್ಣನ್ನು ಅಪವಿತ್ರವೆಂದು ಪರಿಗಣಿಸುವುದು ದುರಂತದ ಸಂಗತಿ. 

–ಪಲ್ಲವಿ ಇಡೂರು, ಲೇಖಕಿ

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !