ಪ್ರಜಾವಾಣಿ@70: ಕನ್ನಡದ ಮುಖವಾಣಿ

7

ಪ್ರಜಾವಾಣಿ@70: ಕನ್ನಡದ ಮುಖವಾಣಿ

Published:
Updated:
ಪ್ರಜಾವಾಣಿಯ ರೂಪಾಂತರಗಳು

‘ಪ್ರಜಾವಾಣಿ’ ಪತ್ರಿಕೆಯ ಜತೆಯಲ್ಲಿ ನನಗೊಂದು ಭಾವನಾತ್ಮಕ ಸಂಬಂಧ ಇದೆ. ಅದರ ಕುರಿತು ಹೇಳುವುದು ಬ್ರಹ್ಮಾಂಡದಷ್ಟಿದೆ. ಆದರೆ ನನ್ನ ಈ 83ನೇ ವಯಸ್ಸಿನಲ್ಲಿ ತಕ್ಷಣಕ್ಕೆ ನೆನಪಿಗೆ ಬಂದಿದ್ದನ್ನಷ್ಟೇ ಹೇಳುತ್ತ ಹೋಗುತ್ತೇನೆ.

‘ಪ್ರಜಾವಾಣಿ’ ಶುರುವಾಗಿದ್ದು 1948ರಲ್ಲಿ. 1949ರಲ್ಲಿ ನಾನು ಹೊಸಕೋಟೆಯಲ್ಲಿ ಮಿಡಲ್‌ಸ್ಕೂಲ್‌ ಮುಗಿಸಿ ಹೈಸ್ಕೂಲಿಗೆ ಬಂದಿದ್ದೆ. ಆಗ ಹೊಸಕೋಟೆ ಒಂದು ಹಳ್ಳಿ. ಈಗ ಅದು ಬೆಂಗಳೂರಿನದೇ ಒಂದು ಬಡಾವಣೆ ಆಗಿಬಿಟ್ಟಿದೆ. ನನ್ನ ತಂದೆಗೆ ಅಲ್ಲಿಗೆ ವರ್ಗಾವಣೆ ಆಗಿತ್ತು. ನನ್ನ ಮೊದಲ ಪದ್ಯ ‘ಜಲಪಾತ’ ಬರೆದಿದ್ದೂ ಅಲ್ಲಿಯೇ. ಅಲ್ಲಿ ನಮ್ಮ ಹೆಡ್ಮಾಷ್ಟ್ರು, ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳೂ ಹಿಂದಿನ ದಿನದ ಪತ್ರಿಕೆಯನ್ನು ಓದಿಕೊಂಡು ಬರಬೇಕು ಎಂದು ಹೇಳುತ್ತಿದ್ದರು. ಪ್ರಾರ್ಥನೆಗೆ ನಿಂತಾಗ ‘ಪತ್ರಿಕೆಯಲ್ಲಿ ಬಂದ ವಿಶೇಷ ಏನು?’ ಎಂದು ಕೇಳುತ್ತಿದ್ದರು.

ನಾವು ಪ್ರತಿದಿನ ಸ್ಕೂಲಿನಿಂದ ವಾಪಸ್ ಹೋಗುವಾಗ ಸಂಜೆ ರೀಡಿಂಗ್ ರೂಮ್‌ಗೆ ಹೋಗಿ ಪತ್ರಿಕೆಯ ಮೇಲೆ ಕಣ್ಣಾಡಿಸಿಕೊಂಡು ಹೋಗುತ್ತಿದ್ದೆವು. ಅಲ್ಲಿ ಯಾವಾಗಲೂ ‘ಪ್ರಜಾವಾಣಿ’ ಇರುತ್ತಿತ್ತು. ಆಗ ಅಷ್ಟೊಂದು ಆಸ್ಥೆವಹಿಸಿ ಓದುತ್ತಿರಲಿಲ್ಲ. ಮುಂದೆ ನನ್ನ ತಂದೆಗೆ ಬೆಂಗಳೂರಿಗೆ ವರ್ಗವಾಗಿ ಬಂದಾಗ ನಾನು ಇಂಟರ್‌ಮಿಡಿಯೇಟ್ ಕಾಲೇಜಿಗೆ ಸೇರಿಕೊಂಡೆ. ಆಗಲೇ ಪದ್ಯಗಳನ್ನು ಬರೆಯುತ್ತಿದ್ದೆ. ತುಂಬ ಬಾಲಿಶವಾಗಿರುತ್ತಿದ್ದವು ಆಗಿನ ಪದ್ಯಗಳು. ಅಲ್ಲಿ ಎಲ್‌. ಗುಂಡಪ್ಪ ಅಂತ ಮೇಷ್ಟ್ರು ಇದ್ದರು. ನನ್ನ ಸ್ನೇಹಿತರೆಲ್ಲ ಒತ್ತಾಯ ಮಾಡಿದ್ದಕ್ಕೆ ಪದ್ಯಗಳನ್ನು ಅವರಿಗೆ ತೋರಿಸಿದೆ. ‘ಪ್ರಜಾವಾಣಿ’ಯಲ್ಲಿ ಒಂದು ಪದ್ಯ ಬರಬೇಕು ಎಂದು ಬಹಳ ದೊಡ್ಡ ಆಸೆ ಇತ್ತು ಆಗ ನನಗೆ. ‘ಪ್ರಜಾವಾಣಿ’ಯಲ್ಲಿ ಪದ್ಯ ಬಂದುಬಿಟ್ಟರೆ ಇಡೀ ಕನ್ನಡನಾಡಿಗೇ ಸುದ್ದಿಯಾಗಿಬಿಡುತ್ತಿತ್ತು. 

1953ರಿಂದ ನನಗೆ ‘ಪ್ರಜಾವಾಣಿ’ ಜತೆ ಒಡನಾಟ ಬೆಳೆದುಬಂತು. ಕೆಲವು ಶಿಷ್ಟವಾದ ಪರಂಪರೆಯನ್ನು ಕಾಪಾಡಿಕೊಂಡು ಬಂದಿತ್ತು ಆ ಪತ್ರಿಕೆ. ಮೂವತ್ತು ಜನ ಇದ್ದಿದ್ದರೇನೋ ಆ ಕಚೇರಿಯಲ್ಲಿ. ಈ ಸಲಕರಣೆಗಳು ಸೌಲಭ್ಯಗಳು ಇರಲಿಲ್ಲ. ದೊಡ್ಡ ಹಾಲು ಇತ್ತು. ಉದ್ದ ಮೇಜು ಹಾಕಿರುತ್ತಿದ್ದರು. ಅದರ ಎರಡೂ ಬದಿಗೆ ಕುರ್ಚಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಆವಾಗೆಲ್ಲ ಅಂದ ಚಂದ ಏನೂ ಇರಲಿಲ್ಲ. ಬರೀ ಬ್ಲ್ಯಾಕ್‌ ಆ್ಯಂಡ್ ವೈಟ್‌.


ಪ್ರಜಾವಾಣಿಗೆ ಪ್ರಶಸ್ತಿ

ಆದರೂ ನಮಗೆ ಅವೆಲ್ಲ ಲೆಕ್ಕಕ್ಕೆ ಬರುತ್ತಿರಲಿಲ್ಲ. ಸುದ್ದಿ ಮುಖ್ಯವಾಗುತ್ತಿತ್ತು. ಹೇಳಿದರೆ ತುಂಬ ಜನ ನಂಬಲಿಕ್ಕಿಲ್ಲ, ಆಗ ಯಾರೂ ಕಚೇರಿಗೆ ಪ್ಯಾಂಟು ಹಾಕಿಕೊಂಡು ಬರುತ್ತಿರಲಿಲ್ಲ. ಪಂಚೆ ಮತ್ತು ಶರ್ಟು ಹಾಕಿಕೊಂಡು ಬರುತ್ತಿದ್ದರು. ಅವರಿಗೆಲ್ಲ ಸಂಬಳ ಕಡಿಮೆ ಇತ್ತು. ಜಾಹೀರಾತುಗಳೂ ಜಾಸ್ತಿ ಸಿಗುತ್ತಿರಲಿಲ್ಲ. ಪತ್ರಿಕೆ ನಡೆಸುವುದೇ ಕಷ್ಟವಾಗಿತ್ತು. ಆದರೆ ಅದನ್ನೇ ಒಂದು ಸವಾಲನ್ನಾಗಿ ತೆಗೆದುಕೊಂಡು ನೆಟ್ಟಕಲ್ಲಪ್ಪನವರು ಪತ್ರಿಕೆ ನಡೆಸಿಕೊಂಡು ಹೋದರು.

ಇಂಟರ್‌ಮಿಡಿಯೇಟ್ ಅಂತಿಮ ವರ್ಷದಲ್ಲಿದ್ದಾಗ ನನಗೆ ಎಂ.ಬಿ.ಸಿಂಗ್ ಪರಿಚಯ ಆದರು. ಪ್ರಜಾವಾಣಿಯ ಏಳಿಗೆಗೆ ತುಂಬ ಶ್ರಮಿಸಿದವರು ಅವರೆಲ್ಲ. ನನ್ನ ಮನೆ ಆಗ ಮಾವಳ್ಳಿಯಲ್ಲಿತ್ತು. ಎಂ.ಬಿ.ಸಿಂಗ್ ತುಂಬ ಗಂಭೀರ ಮನುಷ್ಯ. ಜಾಸ್ತಿ ಮಾತಾಡುತ್ತಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಗೆ ಕೆಲಸಕ್ಕೆ ಕೂತರೆ ಸಂಜೆ ಆರು ಗಂಟೆಯವರೆಗೂ ಏಳುತ್ತಿರಲಿಲ್ಲ. ಆ ಕಾಲದಲ್ಲಿ ‘ಸುಧಾ’ ಪತ್ರಿಕೆ ಇನ್ನೂ ಶುರುವಾಗಿರಲಿಲ್ಲ. ಮೊದಲ ಸಂಚಿಕೆ ಬಂದ ಮೇಲೆ ‘ಗ್ರಂಥಾಂತರಂಗ’ ಅಂತೊಂದು ಪುಸ್ತಕ ವಿಮರ್ಶಾ ಕಾಲಂ ಪ್ರಾರಂಭಿಸಿದರು. ಅದರಲ್ಲಿ ವಿಮರ್ಶೆ ಬರೆಯಲು ಸತತವಾಗಿ ನನಗೆ ಅವಕಾಶ ಕೊಡುತ್ತ ಹೋದರು. ತುಂಬ ಪ್ರೋತ್ಸಾಹ ಕೊಡುತ್ತಿದ್ದರು. ಯಾವಾಗಲೂ ನನ್ನೊಂದಿಗೆ ಉರ್ದು ಭಾಷೆಯಲ್ಲಿ ಮಾತನಾಡಿಸುತ್ತಿದ್ದರು. ನಾನು ಕನ್ನಡದಲ್ಲಿಯೇ ಉತ್ತರಿಸುತ್ತಿದ್ದೆ. ನನ್ನನ್ನು ತಾವೇ ಕರೆದುಕೊಂಡು ಹೋಗಿ ವಿ.ಕೃ. ಗೋಕಾಕರ ಸಂದರ್ಶನ ಮಾಡಿಸಿ ‘ಮಯೂರ’ದಲ್ಲಿ ಪ್ರಕಟಿಸಿದರು.

ಆಮೇಲೆ 1954ರಲ್ಲಿ ವೈಎನ್ಕೆ ಪರಿಚಯ ಆದರು. ಅದುವರೆಗೂ ಅವರ ಹೆಸರು ಕೇಳಿರಲಿಲ್ಲ. ಆಗ ಸೆಂಟ್ರಲ್ ಕಾಲೇಜಿನಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಆಗಿದ್ದೆ. ಅಲ್ಲಿ ‘ಸಂಸ ದಿನಾಚರಣೆ’ ಮಾಡಿದಾಗ ಅವರು ನೋಡಲು ಬಂದಿದ್ದರು. ಆಗ ಯಾರೋ ಅವರಿಗೆ ನನ್ನನ್ನು ಪರಿಚಯ ಮಾಡಿಸಿದರು. ಬಹಳ ವೇಗವಾಗಿ ಮಾತನಾಡುತ್ತಿದ್ದರು.

ಇದನ್ನೂ ಓದಿ: ಅಭಿಮಾನದ ಸ್ಥಾಯಿ ಧ್ವನಿ

1950ರ ಪ್ರಾರಂಭಿಕ ದಿನದವರೆಗೂ ‘ಪ್ರಜಾವಾಣಿ’ಯಲ್ಲಿ ಒಂದು ವರ್ಗದ ಜನರ ಪ್ರಾಬಲ್ಯ ಇತ್ತು. ಯಾಕೆಂದರೆ ಆ ಕಾಲದಲ್ಲಿ ಹೆಚ್ಚು ವಿದ್ಯಾವಂತರಾಗಿರುತ್ತಿದ್ದವರು ಅವರೇ ಆಗಿದ್ದರು. 55–56ರ ನಂತರ ಬೇರೆ ಬೇರೆ ವರ್ಗದ ಜನರಿಂದ ಜನರನ್ನು ತೆಗೆದುಕೊಂಡರು. ನಂತರ ಹೇಮದಳ ರಾಮದಾಸ್, ಸೂರಿ, ಶಾಮಣ್ಣ, ಮುನಿಯಪ್ಪ, ಕಣ್ಣನ್, ಸಿ.ವಿ. ರಾಜಗೋಪಾಲ್, ವೈಕುಂಠರಾಜು, ರಂಗನಾಥ ರಾವ್ ಹೀಗೆ ಪ್ರಜಾವಾಣಿಯಲ್ಲಿ ಹಲವರ ಪರಿಚಯ ಆಯಿತು. ಪ್ರತಿಯೊಬ್ಬರೂ ಪ್ರಜಾವಾಣಿಯ ಏಳಿಗೆಗೆ ಯಥಾನುಶಕ್ತಿ ಶ್ರಮಿಸಿದವರೇ. ಮರೆಯಬಾರದು ಅವರನ್ನೆಲ್ಲ. 

ಪಾಶ್ಚಾತ್ಯ ಹೊಸ ಸಾಹಿತ್ಯವನ್ನು ನನಗೆ ಮೊದಲು ಪರಿಚಯಿಸಿದವರೇ ವೈಎನ್ಕೆ. ನಮ್ಮ ಎಂ.ಬಿ.ಸಿಂಗ್ ನನಗೆ ಅನುಕೂಲಗಳನ್ನು ಸೃಷ್ಟಿಸಿದರು. ಬಹುಶಃ 1960 ಇರಬೇಕು. ಸಿಂಗ್ ಪ್ರಜಾವಾಣಿಯಲ್ಲಿ ಪುರವಣಿ ಸಂಪಾದಕರಾಗಿದ್ದರು. ಆಗ ನನಗೆ ಪ್ರಜಾವಾಣಿಯಲ್ಲಿ ವಿಮರ್ಶೆ ಮಾಡುವ ಅವಕಾಶ ಕಲ್ಪಿಸಿಕೊಟ್ಟರು. 1967ರಲ್ಲಿ ನನಗೆ ಶಿವಮೊಗ್ಗಕ್ಕೆ ವರ್ಗ ಆಯ್ತು. ಅಲ್ಲಿಗೂ ವಿಮರ್ಶೆ ಮಾಡಿಕೊಡಲು ಪುಸ್ತಕಗಳನ್ನು ಕಳಿಸುತ್ತಿದ್ದರು ನಿರಂತರವಾಗಿ. ಒಂದೊಂದು ಸಲ ಟ್ರಂಕ್‌ ಕಾಲ್ ಬುಕ್ ಮಾಡಿ ‘ಏ ಭಯ್ಯಾ, ಇನ್ನೂ ಇಟ್ಟುಕೊಂಡಿದ್ದೀಯಲ್ಲಾ ಪುಸ್ತಕಗಳನ್ನು. ಬೇಗ ಕಳಿಸು’ ಎಂದು ಒತ್ತಾಯ ಮಾಡಿ ಬರೆಸಿಕೊಳ್ಳುತ್ತಿದ್ದರು. ಹೀಗೆ ವಿಮರ್ಶೆಯಲ್ಲಿಯೂ ನನಗೆ ಒಂದು ಸ್ಥಾನವನ್ನು ದಕ್ಕಿಸಿಕೊಟ್ಟಿದ್ದು ಪ್ರಜಾವಾಣಿ ಪತ್ರಿಕೆ. ಪ್ರಜಾವಾಣಿ ಮಾಡಿದ ಬಹಳ ಮುಖ್ಯವಾದ ಕೆಲಸ ಏನು ಗೊತ್ತೇನು? ಐವತ್ತರ ಪ್ರಾರಂಭದಲ್ಲಿ ನವ್ಯಕಾವ್ಯ ಬಂತು. ಯಾರೂ ಅದರ ಬಗ್ಗೆ ಆಸಕ್ತಿ ವಹಿಸಿರಲಿಲ್ಲ.

ಇನ್ನೊಂದು ವಿಷಯ ತುಂಬ ಜನರಿಗೆ ಗೊತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಚಿಕ್ಕಜೋಗಿಹಳ್ಳಿ ಎಂಬ ಗ್ರಾಮ ಇದೆ. ಕುಗ್ರಾಮ ಆಗಿತ್ತು ಆಗ. ಅದನ್ನು ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರೆಲ್ಲ ದತ್ತು ತೆಗೆದುಕೊಂಡು ಸುಧಾರಣೆ ಮಾಡಿ, ಗಾಂಧೀಜಿ ಕಲ್ಪನೆಯ ಗ್ರಾಮಕ್ಕೆ ಹತ್ತಿರವಾದ ಗ್ರಾಮವನ್ನಾಗಿ ರೂಪಿಸಿದರು. ಇದು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ ಪತ್ರಿಕಾ ಬಳಗದ ದೊಡ್ಡ ಸಾಧನೆ. ನೆಟ್ಟಕಲ್ಲಪ್ಪ ಅವರ ಮಕ್ಕಳೂ ತುಂಬ ವಿನಯವಂತರು. 

 ನಾನು ಪ್ರಜಾವಾಣಿ ಕಚೇರಿಗೆ 1962ರವರೆಗೂ ನಿರಂತರವಾಗಿ ಹೋಗುತ್ತಿದ್ದೆ. ಈಗ ಪ್ರಜಾವಾಣಿ ಕಚೇರಿಗೆ ಹೋಗದೆ ತುಂಬ ಕಾಲ ಆಗಿಹೋಯ್ತು. ಈಗ ಆ ಪತ್ರಿಕೆ ಬೆಳೆದುನಿಂತಿರುವ ರೀತಿ ನೋಡಿದರೆ ಖುಷಿಯಾಗುತ್ತದೆ. ‌ಪ್ರಜಾವಾಣಿ ನನ್ನ ಸಾಂಘಿಕ ಮತ್ತು ವೈಯಕ್ತಿಕವಾದ ಎರಡೂ ಬಗೆಯ ಬೆಳವಣಿಗೆಗಳಿಗೆ ಸಹಾಯಕವಾಗಿದೆ. ನನ್ನ ಹೆಸರನ್ನು ನಾಲ್ಕು ದಿಕ್ಕಿಗೆ ಪಸರಿಸಿದೆ.
ಇನ್ನೊಂದು ಮುಖ್ಯ ವಿಷಯ ಹೇಳಬೇಕು. ಆಗ ಟಿಎಸ್‌ಆರ್ ‘ಛೂಬಾಣ’ ಅಂಕಣ ಬರೆಯುತ್ತಿದ್ದರು. ಆ ಅಂಕಣ ಓದಲಿಕ್ಕಾಗಿಯೇ ತುಂಬ ಜನರು ಪತ್ರಿಕೆ ಓದುತ್ತಿದ್ದರು. ಹಾಗೆಯೇ ಡೆಕ್ಕನ್ ಹೆರಾಲ್ಡ್‌ನಲ್ಲಿ ಪೋನತ್ ಜೋಸಫ್‌ ಎನ್ನುವವರು ‘ಓವರ್‌ ಎ ಕಪ್‌ ಆಫ್‌ ಟೀ’ ಎಂದು ಒಂದು ಅಂಕಣ ಬರೆಯುತ್ತಿದ್ದರು. ತುಂಬ ಚೆನ್ನಾಗಿ ಬರೆಯುತ್ತಿದ್ದರು. ಸದಭಿರುಚಿಯ ಲೇಖನಗಳು. ಅವುಗಳನ್ನು ಓದುವುದೇ ಒಂದು ಆನಂದ. 


1989ರ ಏಪ್ರಿಲ್‌ 15ರಂದು ಬೆಂಗಳೂರಿನಲ್ಲಿ ಡೆಕ್ಕನ್‌ ಹೆರಾಲ್ಡ್‌ನಿಂದ ನಡೆದ ವಿಚಾರ ಸಂಕಿರಣದಲ್ಲಿ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರಾದ ಕೆ.ಎನ್‌.ಶಾಂತಕುಮಾರ್‌ (ಎಡದಿಂದ ಎರಡನೇಯವರು) ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್‌.ತಿಲಕ್‌ಕುಮಾರ್‌ (ಎಡದಿಂದ ಆರನೇಯವರು) ಚಿತ್ರದಲ್ಲಿದ್ದಾರೆ. 

ಸಂಜೆ ಕಾಲೇಜು ಮುಗಿದ ಮೇಲೆ ನಮ್ಮ ಕಾಲೇಜಿನಿಂದ ನಡೆದುಕೊಂಡೇ ಎಂ.ಜಿ.ರಸ್ತೆಗೆ ಬಂದುಬಿಡುತ್ತಿದ್ದೆ. ಸಂಜೆ ಹೊತ್ತಿಗೆ ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರಿಬ್ಬರೂ ಪ್ರಜಾವಾಣಿ ಎದುರಿಗೆ ಏನೋ ಮಾತನಾಡಿಕೊಂಡು ನಿಂತಿರುತ್ತಿದ್ದರು. ಗುರುಸ್ವಾಮಿಗಳು ಸ್ವಲ್ಪ ಕುಳ್ಳಗಿದ್ದರು. ದೊಡ್ಡ ಪೇಟ ಹಾಕಿಕೊಂಡಿರುತ್ತಿದ್ದರು. ನೆಟ್ಟಕಲ್ಲಪ್ಪ ಯಾವಾಗಲೂ ಟಿಪ್‌ಟಾಪ್‌. ಒಳ್ಳೆಯ ಅರಸುಮಗನ ಥರ ಇದ್ದ ಮನುಷ್ಯ ಅವರು. ‘ನಮಸ್ಕಾರ ಸರ್’ ಎಂದರೆ ಗುರುಸ್ವಾಮಿಗಳು ‘ಏನಪ್ಪಾ ಹೇಗಿದ್ದೀಯಾ?’ ಎಂದು ತೆಲುಗಿನಲ್ಲಿಯೇ ಕೇಳುತ್ತಿದ್ದರು. ನೆಟ್ಟಕಲ್ಲಪ್ಪ ಅವರೂ ಹಾಗೆಯೇ ಕುಶಲ ವಿಚಾರಿಸುತ್ತಿದ್ದರು. ಹೆಚ್ಚು ಮಾತಿಲ್ಲ ಅವರದು. ಬಿಂಕ ಬಿಗುಮಾನ ಇರಲಿಲ್ಲ ಅವರಲ್ಲಿ.

ಆ ಕಾಲದಲ್ಲಿ ಸಾಮಾಜಿಕವಾಗಿ ಕನ್ನಡಿಗರ ಅಸ್ಮಿತೆಯನ್ನು ಮತ್ತು ಅಸ್ತಿತ್ವವನ್ನು ತಂದುಕೊಟ್ಟ ಪತ್ರಿಕೆ ಪ್ರಜಾವಾಣಿ. ಅಷ್ಟು ವರ್ಷಗಳ ಇತಿಹಾಸ ಇರುವ ಪತ್ರಿಕೆ ಇಂದಿಗೂ ತನ್ನ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಿದೆಯಲ್ಲ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಎಲ್ಲ ಮೌಲ್ಯಗಳನ್ನೂ ಉಳಿಸಿಕೊಂಡು ಸಮಚಿತ್ತವಾದ ಏಕೋದೃಢವಾದ ದೃಷ್ಟಿಯನ್ನು ಉಳಿಸಿಕೊಂಡಿದೆಯಲ್ಲ, ಅದು ಮಹತ್ವದ್ದು. 

ಗಮನಿಸಿ: ಪ್ರಜಾವಾಣಿ ಫೋಟೋ ನೆನಪು

ಒಂದು ಧ್ಯೇಯ ಇಟ್ಟುಕೊಂಡು ಮುಂದೆ ಬಂದ ಸಂಸ್ಥೆ ಇದು. ಈ ಸಂಸ್ಥೆಯನ್ನು ಪ್ರಾರಂಭಿಸಿದವರೂ ಇಷ್ಟೊಂದು ಬೆಳೆಯತ್ತದೆ ಎಂದು ಕನಸು ಕಂಡಿರಲಿಕ್ಕಿಲ್ಲ. ಒಂದು ಪತ್ರಿಕೆ ಎಪ್ಪತ್ತು ವರ್ಷಗಳಲ್ಲಿ ಹೀಗೆ ಬೆಳೆಯಬೇಕಾದರೆ ಬೇಕಾದಷ್ಟು ಒಳಸುಳಿಗಳು ಇರುತ್ತವೆ. ಆ ಒಳಸುಳಿಗಳನ್ನು ದಾಟಿಕೊಂಡು ನಾವೆಯನ್ನು ತೀರದ ಕಡೆಗೆ ತೆಗೆದುಕೊಂಡು ಹೋಗುವುದು ಸಾಹಸವೇ. ಅದು ಇನ್ನೂ ತೀರ ಮುಟ್ಟಿಲ್ಲ, ಸಾಗಬೇಕಾದ ದಾರಿ ದೂರವಿದೆ. ಆದರೆ ಇದು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಕೇಂದ್ರದಲ್ಲಿ ನಿಂತಿದೆ. ನಾನು ಎಲ್ಲ ಪತ್ರಿಕೆಗಳನ್ನೂ ಓದುತ್ತೇನೆ. ಆದರೆ ಪ್ರಜಾವಾಣಿಯನ್ನು ಓದದಿದ್ದರೆ ಏನೋ ಕಳೆದುಕೊಂಡಂತಾಗುತ್ತದೆ. ಯಾಕೆ ಹಾಗಾಗಬೇಕು? ಆ ಪತ್ರಿಕೆಯ ಬಗ್ಗೆ ಒಂದು ಅಂತರ್‌ಬಾಂಧವ್ಯ ಇದೆಯಲ್ಲ, ಆದ್ದರಿಂದಲೇ ಹಾಗಾಗುತ್ತದೆ ಅನಿಸುತ್ತದೆ. ಬಹುಶಃ ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರು ಇದನ್ನೆಲ್ಲ ನೋಡಿ ಸ್ವರ್ಗದಲ್ಲಿಯೇ ಸಂತೋಷಪಡುತ್ತಿರಬಹುದು.

ನಿರೂಪಣೆ: ಪದ್ಮನಾಭ ಭಟ್‌

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !