ಪ್ರಜಾವಾಣಿ@70: ಅಭಿಮಾನದ ಸ್ಥಾಯಿ ಧ್ವನಿ

7

ಪ್ರಜಾವಾಣಿ@70: ಅಭಿಮಾನದ ಸ್ಥಾಯಿ ಧ್ವನಿ

Published:
Updated:

‘ಪ್ರಜಾವಾಣಿ’ ಪತ್ರಿಕೆಯ ಬಗೆಗೆ ಏನೇ ಬರೆಯಲಿ, ಅದರಲ್ಲಿ ಅಭಿಮಾನದ, ಗೌರವದ, ಮೆಚ್ಚಿಗೆಯ ಧ್ವನಿಯೇ ಸ್ಥಾಯಿಯಾಗಿರುತ್ತದೆ. ಯಾಕೆಂದರೆ ಒಂದು ಪ್ರಮುಖ ಪತ್ರಿಕೆಯಾಗಿ ಅದು ಬೆಳೆದು ಬಂದ ಪರಿಯ, ಸಾಧಿಸಿದ ವಿಕ್ರಮಗಳ ಕಥನವೇ ಅಂಥದ್ದು.

ಕೆ.ಎನ್.ಗುರುಸ್ವಾಮಿ ಮತ್ತು ಅವರ ಸ್ನೇಹಿತರು ಸ್ಥಾಪಿಸಿದ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ ಸಂಸ್ಥೆ 1948ರ ಜೂನ್ 6ರಂದು ಪ್ರಾರಂಭಿಸಿದ ಇಂಗ್ಲಿಷ್ ಪತ್ರಿಕೆ ‘ಡೆಕನ್ ಹೆರಾಲ್ಡ್’. ನಾಲ್ಕೇ ತಿಂಗಳ ನಂತರ ಅಕ್ಟೋಬರ್ 15ರಂದು ಜನ್ಮತಾಳಿದ್ದು ‘ಪ್ರಜಾವಾಣಿ’. ಅದರ ಮೊದಲ ಸಂಪಾದಕರು ನಾಟಕಕಾರರೆಂದು, ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದ ಬಿ.ಪುಟ್ಟಸ್ವಾಮಯ್ಯನವರು. ಅವರಿಗೆ ‘ಜನವಾಣಿ’, ‘ಮಾತೃಭೂಮಿ’ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿತ್ತು. ಅವರು ಪತ್ರಿಕೆಯಲ್ಲಿ ಹಲವು ವಿಭಾಗಗಳನ್ನು ಪ್ರಾರಂಭಿಸಿದ್ದಲ್ಲದೆ ‘ಪಾನ್ ಸುಪಾರಿ’ ಎಂಬ ಅಂಕಣವನ್ನೂ ಬರೆಯುತ್ತಿದ್ದರಂತೆ. ಒಂದೆರಡು ವರ್ಷಗಳ ನಂತರ ಅವರ ಜಾಗಕ್ಕೆ ಬಂದವರು ‘ಟೀಯೆಸ್ಸಾರ್’ ಎಂದೇ ಜನಪ್ರಿಯರಾದ ಟಿ.ಎಸ್.ರಾಮಚಂದ್ರರಾವ್.

ಕನ್ನಡ ಪತ್ರಕರ್ತರಲ್ಲಿ ಇಂದಿಗೂ ಅಪರೂಪವಾಗಿರುವ ಸೂಜಿಗಲ್ಲಿನಂಥ ವ್ಯಕ್ತಿತ್ವ ಟೀಯೆಸ್ಸಾರ್ ಅವರದು. ಸದಾ ಸೂಟಿನಲ್ಲಿರುತ್ತಿದ್ದ ಸ್ಫುರದ್ರೂಪಿ. ಹಳೆಯದೊಂದು ಫೋರ್ಡ್ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಬರುತ್ತಿದ್ದ ಅವರು ಮಾತಾಡುತ್ತಿದ್ದದ್ದು ಬಹುಮಟ್ಟಿಗೆ ಇಂಗ್ಲಿಷಿನಲ್ಲೇ. ಅವರ ಬರಹಗಳಲ್ಲಿ ‘ಕೊರವಂಜಿ’ಯ ನವಿರು ಹಾಸ್ಯವಿತ್ತು; ರಾಜಕೀಯ ಹುರಿಯಾಳುಗಳನ್ನು ಹಾಗೂ ವಿದ್ಯಮಾನಗಳನ್ನು ವಿಡಂಬನಾತ್ಮಕ ದೃಷ್ಟಿಯಿಂದ ವಿಮರ್ಶಿಸುವ ಅಸಾಧಾರಣ ಪ್ರತಿಭೆಯೂ ಒಡೆದು ಕಾಣುತ್ತಿತ್ತು. ಪತ್ರಿಕೆಯೊಂದು ನಿಜಕ್ಕೂ ಜನರ ವಾಣಿಯಾಗಬೇಕಾದರೆ ಅದರಲ್ಲಿ ಏನೇನೆಲ್ಲ ಇರಬೇಕೆಂಬ ಬಗ್ಗೆ ಅವರ ವಿಚಾರಗಳು ತುಂಬ ಖಚಿತವಾಗಿದ್ದವು. ಅವರು ಬರೆಯುತ್ತಿದ್ದ ‘ಛೂಬಾಣ’ ಅಂಕಣದಲ್ಲಿ ರಾಜ್ಯದ, ರಾಷ್ಟ್ರದ, ವಿದೇಶದ ರಾಜಕೀಯ, ಆರ್ಥಿಕ ಬೆಳವಣಿಗೆಗಳ ವಿಡಂಬನೆ, ಕಟು ವಿಮರ್ಶೆ ಇರುತ್ತಿದ್ದವು. ಅವರ ಭಾಷೆಯ ತುಂಬ ಅನೇಕಾರ್ಥಗಳು, ಶ್ಲೇಷೆಗಳು, ಹೊಸ ಹೊಸ ನುಡಿಗಟ್ಟುಗಳು. ಮುಖ್ಯಮಂತ್ರಿಯೂ ಸೇರಿ ರಾಜಕೀಯ ಧುರೀಣರೆಲ್ಲರೂ ತಪ್ಪದೆ ಅವರ ಆ ಅಂಕಣವನ್ನು ಓದುತ್ತಿದ್ದರು, ಕೆಲವೊಮ್ಮೆ ತಾವೇ ಅದರ ವ್ಯಂಗ್ಯಕ್ಕೆ ಗುರಿಯಾಗುತ್ತಿದ್ದರು. ವಿಧಾನ ಸಭೆ, ವಿಧಾನ ಪರಿಷತ್ತುಗಳಲ್ಲಿ ಕೂಡ ಅದು ಪ್ರತಿಧ್ವನಿಸುತ್ತಿತ್ತು. ಅಂದಹಾಗೆ ಟೀಯೆಸ್ಸಾರ್ ಮೊದಲು ಬರೆಯುತ್ತಿದ್ದದ್ದು ‘ರಾಮಬಾಣ’ ಎಂಬ ಹೆಸರಿನ ಅಂಕಣ. ‘ಕೊರವಂಜಿ’ಯ ರಾಶಿಯವರ ಸಲಹೆಯಂತೆ ಅದು ‘ಛೂಬಾಣ’ವಾಯಿತು. ರಾಜಕೀಯ ಮುತ್ಸದ್ದಿಗಳೋ ಕಲಾಕ್ಷೇತ್ರದ ದಿಗ್ಗಜರೋ ಸಮಾಜಸೇವಾ ದುರಂಧರರೋ ನಿಧನರಾದಾಗ ‘ಛೂಬಾಣ’ ‘ಹೂಬಾಣ’ವಾಗಿ ಪರಿವರ್ತನೆಗೊಳ್ಳುತ್ತಿತ್ತು.

ಉದಾಹರಣೆಗೆ ಕಾಂಗ್ರೆಸ್ ಧುರೀಣ ಕಾಮರಾಜ್ ನಾಡಾರ್ ತೀರಿಕೊಂಡಾಗ ಅವರನ್ನು ಕುರಿತ ‘ಹೂಬಾಣ’ ಮಿನುಗಿದ್ದು ಹೀಗೆ: ‘...ಅವರಿಗೆ ಅತ್ಯಂತ ಪ್ರಿಯವಾದ ‘ಪಾರ್ಕಲಾಮ್’ ಎಂಬ ವ್ಯಂಗ್ಯಾರ್ಥಗರ್ಭಿತ ಪದವನ್ನವರು ಬಿಟ್ಟುಹೋಗಿದ್ದಾರೆ – ತಾವು ಮೆರೆದ ಸ್ಥಾನವನ್ನು ತುಂಬುವುದಕ್ಕಾಗಿ... ಈ ಒಂದು ಪದದಿಂದ ಆಸೇತುಹಿಮಾಚಲಪರ್ಯಂತ ವಿಜೃಂಭಿಸಿದ ಕಾಮರಾಜರ ಸ್ಥಾನವನ್ನಾಕ್ರಮಿಸಬಲ್ಲ ಇನ್ನೊಬ್ಬ ಗಂಡು ಹುಟ್ಟಿಯಾನೊ? ಪಾರ್ಕಲಾಮ್’.

ಟೀಯೆಸ್ಸಾರ್ ಅವರ ಕಾಲದಲ್ಲಿ ಸಮರ್ಥ ಪತ್ರಕರ್ತರ ಒಂದು ಪಡೆಯೇ ಪ್ರಜಾವಾಣಿಯಲ್ಲಿತ್ತು. ಖಾದ್ರಿ ಶಾಮಣ್ಣ, ಎಂ.ಬಿ.ಸಿಂಗ್, ವೈಯೆನ್ಕೆ, ಸಿ.ಸಿದ್ಧಲಿಂಗಪ್ಪ, ಇ.ಆರ್.ಸೇತೂರಾಂ, ವಡ್ಡರ್ಸೆ ರಘುರಾಮ ಶೆಟ್ಟಿ, ಎಸ್.ವಿ. ಜಯಶೀಲರಾವ್, ಬಿ.ಎಂ. ಕೃಷ್ಣಸ್ವಾಮಿ, ಬಿ.ವಿ. ವೈಕುಂಠರಾಜು, ಮ. ಶ್ರೀಧರಮೂರ್ತಿ, ಜಿ.ಎಸ್. ರಾಮರಾವ್, ವಿ.ಅರ್. ಶ್ಯಾಮ್ (ಇಂದಿರಾತನಯ), ಮಾಗಡಿ ಗೋಪಾಲಕಣ್ಣನ್, ಹೇಮದಳ ರಾಮದಾಸ್... ಹೀಗೆ ಪ್ರತಿಭೆಯಲ್ಲಿ, ಸಾಮರ್ಥ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂಥ ಮಹನೀಯರು. ಇವರ ಜೊತೆಗೆ ಇತಿಹಾಸಕಾರ ಡಾ. ಸೂರ್ಯನಾಥ ಕಾಮತ್ ಅವರು ಕೂಡ ಸ್ವಲ್ಪ ಕಾಲ ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡಿದ್ದುಂಟು. ‘ಪ್ರಜಾವಾಣಿ’ಯ ಉಪ ಸಂಪಾದಕರು ಕೆಲವರಿಗೆ ಅಡ್ಡ ಹೆಸರುಗಳಿದ್ದವು. ಉದಾಹಣೆಗೆ ‘ಸೋದರ’ ಎನ್ನುವವರೊಬ್ಬರು. ‘ಮಾವ’ ನರಸಿಂಹಮೂರ್ತಿ ಇನ್ನೊಬ್ಬರು. ‘ಸಂದೇಶ್’ ಎಂಬ ಹೆಸರಿಗೆ ಓಗೊಡುತ್ತಿದ್ದವರು ಶ್ರೀಕಂಠಯ್ಯ. ಇವರ ಬಗ್ಗೆ ವೈಯನ್ಕೆಯವರು ಬರೆದ ‘ಕಾಂತೆಯೊಡನೆ ಕಾಂತ್‍ಜಿ, ಅಯಸ್ಕಾಂತಜಿ, ಆಯಾಸ್ಕಾಂತ್‍ಜಿ, ಎ ಬಿ ಸಿ ಡಿ ಇ ಎಫ್ ಜಿ’ ಎಂಬ ಒಂದು ಕವನವೇ ಇದೆ.

ವರದಿಗಾರಿಕೆಯ ಭಾಷೆಯನ್ನು ಹೇಗೋ ಹಾಗೆ ಶೈಲಿಯನ್ನೂ ಬದಲಿಸಿದ, ಹೊಸ ಪದಗಳನ್ನು ಟಂಕಿಸಿದ ಕೀರ್ತಿಯೂ ‘ಪ್ರಜಾವಾಣಿ’ಗೇ ಸಲ್ಲಬೇಕು. ಎಸ್.ವಿ.ಜಯಶೀಲರಾವ್ ‘ಸದನ ಸಮೀಕ್ಷೆ’ ಅಂಕಣವನ್ನಲ್ಲದೆ ‘ಸಮೀಪದರ್ಶಿ’ ಎಂಬ ದೈನಂದಿನ ಸದನ ಕಲಾಪವನ್ನು ಕುರಿತ ಇನ್ನೊಂದು ಅಂಕಣವನ್ನೂ ಬರೆಯುತ್ತಿದ್ದರು. ಸಿ.ವಿ. ರಾಜಗೋಪಾಲ್ ಬರೆಯುತ್ತಿದ್ದ ರಾಜಕೀಯ ವಿಶ್ಲೇಷಣೆಯನ್ನೂ ಐ.ಕೆ. ಜಾಗೀರ್‍ದಾರ್ ಬರೆದ ‘ಅರಸು ಆಡಳಿತ ರಂಗ’ ಎಂಬ ಸರಣಿ ಲೇಖನಗಳನ್ನೂ ಮರೆಯುವಂತಿಲ್ಲ. ‘ಪ್ರಜಾವಾಣಿ’ಯ ಸಂಪಾದಕೀಯಗಳಂತೂ ಸದನದಲ್ಲಿ ಸದಾ ಮಾರ್ದನಿಸುತ್ತಿದ್ದವು. ಪತ್ರಿಕೆಯಲ್ಲಿ ಕೆಲವರು ಸರ್ವವಿಷಯ ಪಾರಂಗತರಷ್ಟೇ ಅಲ್ಲ, ಅಗತ್ಯ ಬಿದ್ದರೆ ವಿಜ್ಞಾನ, ರಾಜಕೀಯ, ಕ್ರೀಡೆ ಹೀಗೆ ತಮ್ಮದಲ್ಲದ ಯಾವುದೇ ವಿಷಯವನ್ನು ಕುರಿತು ಒಂದೆರಡು ಗಂಟೆಗಳಲ್ಲಿ ಸುದೀರ್ಘ ಲೇಖನವನ್ನೇ ಬರೆದುಬಿಡುವಷ್ಟು ಪ್ರತಿಭಾವಂತರಾಗಿದ್ದರು.

1950ರ ದಶಕದಲ್ಲಿ ಆ ಕಾಲದಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದ ಕೆ.ಎ. ನೆಟ್ಟಕಲ್ಲಪ್ಪ ಅವರು ಸ್ವತಃ ಕೀಡಾಭಿಮಾನಿಯಾಗಿದ್ದವರು. ಪ್ರಜಾವಾಣಿಯಲ್ಲಿ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ಎಚ್.ಎಸ್. ಸೂರ್ಯನಾರಾಯಣ (‘ಸೂರಿ’) ಅವರು ‘ಕ್ರೀಡಾಂತರಂಗ’ ಎಂಬ ಅಂಕಣವೊಂದನ್ನು ಬರೆಯುತ್ತಿದ್ದರು. ಕ್ರಮೇಣ ಅವರು ಆಕಾಶವಾಣಿಯಲ್ಲಿ ಕ್ರೀಡೆಯ ವೀಕ್ಷಕ ವಿವರಣೆ ನೀಡುವುದರಲ್ಲಿಯೂ ತಮ್ಮ ಛಾಪು ಮೂಡಿಸಿದರೆನ್ನಬೇಕು. ವಾಣಿಜ್ಯ ಸುದ್ದಿಗಳಿಗೊಂದು ರೂಪ ಕೊಟ್ಟವರು ‘ಮಾವ’ ನರಸಿಂಹಮೂರ್ತಿ. ಅವರ ನಂತರ ಶೈಲೇಶಚಂದ್ರ ಗುಪ್ತ (ಮುಂದೆ ಇವರು ಕಾರ್ಯನಿರ್ವಾಹಕ ಸಂಪಾದಕರೂ ಆದರು). ಗ್ರಾಮಾಂತರ ಸುದ್ದಿಗಳಿಗೆ ವಿಶೇಷ ಮಹತ್ವ ನೀಡಿದ ಟಿ. ನಾಗರಾಜು ‘ಬದುಕಿನ ಬೆನ್ನೆಲುಬು ಬೇಸಾಯ’ ಎಂಬ ಅಂಕಣವನ್ನೂ ಬರೆಯುತ್ತಿದ್ದರು.

ಸಾಹಿತ್ಯ ಕ್ಷೇತ್ರಕ್ಕೆ ‘ಪ್ರಜಾವಾಣಿ’ ನೀಡಿರುವ ಕೊಡುಗೆ ಅಷ್ಟಿಷ್ಟಲ್ಲ. 1959ರಲ್ಲಿ ಅದು ಪ್ರಾರಂಭಿಸಿದ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರು ಕವಿ ರಾಮಚಂದ್ರ ಶರ್ಮ. ಆಮೇಲೆ 3-4 ಪೀಳಿಗೆಗಳ ನಮ್ಮ ಬಹುಮುಖ್ಯ ಕತೆಗಾರರೆಲ್ಲರೂ ಒಂದಲ್ಲ ಒಂದು ವರ್ಷ ಆ ಬಹುಮಾನವನ್ನು ಪಡೆದವರೇ. ಮತ್ತೆ ಪ್ರಜಾವಾಣಿ ದೀಪಾವಳಿ ಸಂಚಿಕೆಗಳೆಂದರೆ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಸಂಪದವೆನ್ನುವಂತಾಯಿತು.

ನಲವತ್ತು ಐವತ್ತು ವರ್ಷಗಳ ಹಿಂದೆ ನಾವು ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿಗಾಗಿ (ಈಗ ಅದು ‘ಮುಕ್ತಛಂದ’) ಒಂದಿಡೀ ವಾರ ಎದುರು ನೋಡುತ್ತಿದ್ದೆವು. ಆಗ ಆ ಪುರವಣಿಯನ್ನು ಸಂಪಾದಿಸುತ್ತಿದ್ದವರು ಎಂ.ಬಿ.ಸಿಂಗ್. (ಮುಂದೆ ಇವರು ‘ಸುಧಾ’, ‘ಮಯೂರ’ ಪತ್ರಿಕೆಗಳ ಜೊತೆಗೆ ಸ್ವಲ್ಪ ಕಾಲ ಪ್ರಜಾವಾಣಿಯ ಸಂಪಾದಕರೂ ಆಗಿದ್ದರು.) ಕವಿ ಸು.ರಂ.ಎಕ್ಕುಂಡಿ ‘ವರುಣ ಕುಂಜ’ ಎಂಬ ಅಂಕಣ ಬರೆಯುತ್ತಿದ್ದರು. ಮುಂದೆ ನಿರಂಜನರು ಬರೆದ ಅಂಕಣ ‘ಬೇವು ಬೆಲ್ಲ’. ಲಂಕೇಶ್, ನಾಡಿಗ, ಜಿ.ಎಸ್.ಆಮೂರ ಮೊದಲಾದವರ ಪುಸ್ತಕ ವಿಮರ್ಶೆ ಅದಕ್ಕೆ ಗುರಿಯಾದ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತಿದ್ದವು.

ಇದನ್ನೂ ಓದಿ: ಪ್ರಜಾವಾಣಿ@70: ಕನಡದ ಮುಖವಾಣಿ

ಕನ್ನಡ ಸಾಹಿತ್ಯದ ಹಲವು ಚಳವಳಿಗಳಿಗೆ ಪ್ರೋತ್ಸಾಹ ನೀಡಿದ ಪತ್ರಿಕೆಯೂ ಪ್ರಜಾವಾಣಿಯೇ. ಅದು ಪ್ರಗತಿಶೀಲ ಚಳವಳಿಯ ಕಾಲದಲ್ಲಿ ಅ.ನ.ಕೃ. ಮತ್ತು ನಿರಂಜನರ ನಡುವೆ ನಡೆದ ವಾಗ್ವಾದಗಳಿಗೆ ವೇದಿಕೆಯಾಯಿತು; ನವೋದಯ ಕಾಲದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂಥ ನವ್ಯರ ಬಗೆಬಗೆಯ ಬರಹಗಳಿಗೆ ಬೆಳಕು ಕಾಣಿಸಿತು; ದಲಿತ- ಬಂಡಾಯ ಚಳವಳಿಯ ಆಶಯಗಳಿಗೆ, ಮಹಿಳೆಯರ, ಮುಸ್ಲಿಮರ ಬರಹಗಳಿಗೆ ತನ್ನ ಪುಟಗಳನ್ನು ತೆರೆದಿಟ್ಟಿತು. ಕವಿ ರಾಮಚಂದ್ರ ಶರ್ಮರು ಮಾಸ್ತಿ, ಬೇಂದ್ರೆ, ವಿ.ಸೀ., ನರಸಿಂಹಸ್ವಾಮಿ, ಅಡಿಗ ಮೊದಲಾದವರ ಜೊತೆ ನಡೆಸಿದ ಮಾತುಕತೆಗಳು ‘ಪ್ರತಿಭಾ ಸಂದರ್ಶನ’ ಎಂಬ ಹೆಸರಿನಲ್ಲಿ ಪ್ರಕಟವಾದವು. ಸಂದರ್ಶನಕ್ಕೆ ಡಿ.ವಿ.ಜಿ. ಒಪ್ಪದಿದ್ದಾಗ ಶರ್ಮ, ಅವರ ಕೃತಿಗಳ ಕೆಲವು ಆಯ್ದ ಭಾಗಗಳಿಗೆ ಪ್ರಶ್ನೆಗಳನ್ನು ಹೊಸೆದು ಒಂದು ಕಾಲ್ಪನಿಕ ಸಂದರ್ಶನವನ್ನೇ ಮಾಡಿದ್ದುಂಟು.

1965ರಲ್ಲಿ ಯು.ಆರ್.ಅನಂತಮೂರ್ತಿಯವರು ಇಂಗ್ಲೆಂಡಿನಲ್ಲಿದ್ದುಕೊಂಡು ಬರೆದು ಕಳಿಸಿದ ‘ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ’ ಎಂಬ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದದ್ದೇ ಹಲವು ರೀತಿಯ ವಾಗ್ವಾದಗಳಿಗೆ ಕಾರಣವಾದದ್ದು ಈಗ ಇತಿಹಾಸ. ಅದೇ ರೀತಿ ಇಂಗ್ಲೆಂಡಿನಲ್ಲಿ ಓದಿ ಹಿಂತಿರುಗಿದ್ದ, ಆಗಷ್ಟೇ ‘ತುಘಲಖ’ ನಾಟಕವನ್ನು ಬರೆದು ಮುಗಿಸಿದ್ದ ಗಿರೀಶ ಕಾರ್ನಾಡರ ಸಂದರ್ಶನ. ಒಂದಿಡೀ ಪುಟದಷ್ಟು ದೀರ್ಘವಾಗಿದ್ದ ಅಂಥದೊಂದು ಸಂದರ್ಶನ ಪ್ರಜಾವಾಣಿಯಲ್ಲಿ ಬಂದದ್ದು ಅದೇ ಮೊದಲು.

ಬಿ.ವಿ.ಕಾರಂತರು ಬೆಂಗಳೂರಿಗೆ ಆಗಮಿಸಿದ ಮೇಲೆ ನಾಟಕ ಕ್ಷೇತ್ರದಲ್ಲಾದ ಸಂಚಲನಕ್ಕೂ ‘ಸಂಸ್ಕಾರ’ದ ನಂತರ ಸಿನಿಮಾ ಕ್ಷೇತ್ರದಲ್ಲಾದ ಹೊಸ ಹೊಸ ಪ್ರಯೋಗಗಳಿಗೂ ಪ್ರಜಾವಾಣಿ ಸಾಕ್ಷಿಯಾಯಿತು. ಕರ್ನಾಟಕ ರಾಜ್ಯೋದಯವಾದಾಗ ಕುವೆಂಪು ಬರೆದ ಒಂದು ಕವನ, ತುರ್ತು ಪರಿಸ್ಥಿತಿಯ ಕಾಲದಲ್ಲಿ ಗೋಪಾಲಕೃಷ್ಣ ಅಡಿಗರು ಅದನ್ನು ವಿರೋಧಿಸಿ ಬರೆದ ಒಂದು ಕವನ ಪ್ರಜಾವಾಣಿಯ ಮೊದಲ ಪುಟದಲ್ಲೇ ಕಾಣಿಸಿಕೊಂಡ ನೆನಪು. ಪಿ.ಲಂಕೇಶ್ ಅವರು ತಮ್ಮ ‘ಲಂಕೇಶ್ ಪತ್ರಿಕೆ’ಯನ್ನು ಪ್ರಾರಂಭಿಸುವ ಮೊದಲೇ ರಾಜಕೀಯ ಬರಹಕ್ಕೊಂದು ಹೊಸ ದಿಕ್ಕು ತೋರಿಸಿದ್ದು ಪ್ರಜಾವಾಣಿಯಲ್ಲಿಯೇ.

ಸಂಗೀತ, ನೃತ್ಯ, ಕಲೆಗಳನ್ನು ಪರಿಚಯಿಸುವಲ್ಲಿ ಕೂಡ ಪ್ರಜಾವಾಣಿ ಹಿಂದೆಬೀಳಲಿಲ್ಲ. ಅನೇಕ ದಶಕಗಳ ಕಾಲ ಸಂಗೀತ ವಿಮರ್ಶೆಯ ಜೊತೆಗೆ ಕಲಾ ವಿಮರ್ಶೆಯನ್ನೂ ಬರೆದವರು, ಈ ಕ್ಷೇತ್ರಗಳಲ್ಲಿ ಆಳವಾದ ಪರಿಶ್ರಮವಿದ್ದುದಲ್ಲದೆ ಸ್ವತಃ ಕಲಾವಿದರೂ ಆಗಿದ್ದ ಬಿ.ವಿ.ಕೆ.ಶಾಸ್ತ್ರೀ. ಅವರ ನಿಧಾನಾನಂತರ ಸ್ವಲ್ಪ ಕಾಲ ಅವರ ಜಾಗವನ್ನು ತುಂಬಿದವರು ವಿದ್ವಾನ್ ಮೈಸೂರು ವಿ.ಸುಬ್ರಹ್ಮಣ್ಯ.

‘ಡೆಕನ್ ಹೆರಾಲ್ಡ್’ಗೆ ಹೇಗೋ ಹಾಗೆ ಪ್ರಜಾವಾಣಿಗೂ ಭೂಷಣಪ್ರಾಯರಾಗಿದ್ದವರು ಪರಮ ಶ್ರೇಷ್ಠ ವ್ಯಂಗ್ಯಚಿತ್ರಕಾರ ಬಿ.ವಿ.ರಾಮಮೂರ್ತಿ. ಅವರು ಬ್ರಷ್ಷಿನಿಂದ ಎಳೆಯುತ್ತಿದ್ದ ಕೆಲವೇ ಕೆಲವು ಗೆರೆಗಳಲ್ಲಿ ಉದ್ದೇಶಿತ ರಾಜಕಾರಣಿಗಳ ರೂಪರೇಷೆ ವ್ಯಂಗ್ಯಾತಿಶಯದಿಂದ ಮೂಡಿಬಿಡುತ್ತಿತ್ತು. ಅವರ ವ್ಯಂಗ್ಯಚಿತ್ರಗಳು ನಮ್ಮ ರಾಜ್ಯದ ನಾಲ್ಕೈದು ದಶಕಗಳ ರಾಜಕೀಯ ಚರಿತ್ರೆಗೊಂದು ರೂಪಕವನ್ನು ಒದಗಿಸುವಷ್ಟು ಶಕ್ತವಾಗಿದ್ದವು. ಕಲಾವಿದರಾದ ಎಸ್.ರಮೇಶ್, ಚಂದ್ರನಾಥ ಆಚಾರ್ಯ, ಜಿ.ಕೆ.ಸತ್ಯ, ಜಿ.ಶ್ರೀನಿವಾಸಮೂರ್ತಿ, ಜಿ.ವೈ.ಹುಬ್ಳೀಕರ್ ಮೊದಲಾದವರನ್ನು ಮರೆಯುವುದು ಹೇಗೆ? ಬಹುಶಃ ಅಷ್ಟೆಲ್ಲ ಕಲಾವಿದರನ್ನು ನೇಮಿಸಿಕೊಂಡ ಪತ್ರಿಕೆ ಇನ್ನೊಂದಿರಲಿಕ್ಕಿಲ್ಲ.

ದಶಕಗಳ ಕಾಲ ಪ್ರಜಾವಾಣಿಯ ಫೋಟೊಗ್ರಾಫರರಾಗಿದ್ದವರು ಟಿ.ಎಲ್.ರಾಮಸ್ವಾಮಿ. ನಾನು ಪಿ.ಯು.ಸಿ.ಯಲ್ಲಿರುವಾಗ ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಸ್.ರಾಧಾಕೃಷ್ಣನ್ ಅವರ ಭಾಷಣವಿತ್ತು. ಅಂದು ಅಧ್ಯಕ್ಷತೆ ವಹಿಸಿದ್ದವರು ಮಹಾರಾಜ ಜಯಚಾಮರಾಜ ಒಡೆಯರ್. ಲಿಖಿತ ಭಾಷಣದ ಎರಡು ಸಾಲು ಓದಿದ್ದೇ ಅವರಿಗೆ ದಾಹವಾಯಿತು. ಸಹಾಯಕರು ನೀಡಿದ ನೀರಿನ ಗ್ಲಾಸನ್ನು ಅವರು ತುಟಿಗಿಟ್ಟುಕೊಂಡದ್ದೇ ರಾಮಸ್ವಾಮಿಯವರ ಕ್ಯಾಮೆರಾ ಬೆಳಕು ಮಿಂಚಿಸಿ ಕ್ಲಿಕ್ಕೆಂದಿತು. ಮಹಾರಾಜರಿಗೇ ನಗು ಬಂತು. ಆಮೇಲೆ ಕೂಡ ಅವರನ್ನು ನಗರದ ಮುಖ್ಯ ಕಾರ್ಯಕ್ರಮಗಳಲ್ಲೆಲ್ಲ ಕಾಣಬಹುದಿತ್ತು. ದೀಪಾವಳಿಯ ವಿಶೇಷ ಸಂಚಿಕೆಗಳಿಗೆ ಟಿ.ಎಸ್. ಸತ್ಯನ್‍ರಂಥ ಹೆಸರಾಂತ ಫೋಟೋಗ್ರಾಫರರ ಕೊಡುಗೆಯಿರುತ್ತಿತ್ತು. 1980ರ ದಶಕದಲ್ಲಿ ಅಸಾಧಾರಣ ‘ಪೋಟ್ರ್ರೇಟ್ ಫೋಟೋಗ್ರಾಫರ್’ ಕೆ.ಜಿ.ಸೋಮಶೇಖರ್ ಪ್ರಜಾವಾಣಿಯ ಬಳಗ ಸೇರಿದರು.

ಪತ್ರಿಕೋದ್ಯಮದಲ್ಲಿ ಏನೇನು ಆವಿಷ್ಕಾರಗಳಾಗುತ್ತಿದ್ದವೋ ಅವುಗಳನ್ನೆಲ್ಲ ಪ್ರಥಮತಃ ಅಳವಡಿಸಿಕೊಳ್ಳುತ್ತಿದ್ದ ಪತ್ರಿಕೆ ಪ್ರಜಾವಾಣಿ. ಅಚ್ಚಿನ ಮೊಳೆಗಳ ಜಾಗಕ್ಕೆ ಲೈನೋಟೈಪ್ ಬಂದಾಗ ಅದನ್ನು ತಂದುಕೊಂಡದ್ದು, ರೋಟರಿ ಮುದ್ರಣಯಂತ್ರವನ್ನು ಸ್ಥಾಪಿಸಿದ್ದು, ಪತ್ರಕರ್ತರಿಗೆ ತರಬೇತಿ ಕೊಡುವ ಸಂಪ್ರದಾಯಕ್ಕೆ ನಾಂದಿ ಹಾಕಿದ್ದು ಪ್ರಜಾವಾಣಿಯೇ. 50ರ ದಶಕದಲ್ಲೇ ಲಂಡನ್ನಿನ ಥಾಂಸನ್ ಫೌಂಡೇಷನ್ ಜೊತೆ ಒಂದು ಒಪ್ಪಂದ ಮಾಡಿಕೊಂಡು ಖಾದ್ರಿ ಶಾಮಣ್ಣನವರನ್ನೂ ಎಸ್.ವಿ.ಜಯಶೀಲರಾಯರನ್ನೂ ಉನ್ನತ ತರಬೇತಿಗಾಗಿ ಇಂಗ್ಲೆಂಡಿಗೆ ಕಳಿಸಿದ ಸಂಸ್ಥೆಯೂ ಪ್ರಜಾವಾಣಿಯೇ.

ಪತ್ರಿಕೆಯಲ್ಲಿ ಪ್ರೂಫ್ ಓದುವವರ ಒಂದು ಪಡೆಯೇ ಇತ್ತು. ಅವರು ಎಷ್ಟು ಪರಿಣತರಾಗಿದ್ದರೆಂದರೆ ಉಪ ಸಂಪಾದಕರ ಅಥವಾ ವರದಿಗಾರರ ವ್ಯಾಕರಣದ ತಪ್ಪುಗಳನ್ನೋ ಅಕ್ಷರ ದೋಷಗಳನ್ನೋ ಸಂಬಂಧಪಟ್ಟವರಿಗೆ ತಿಳಿಸದೆಯೇ ತಿದ್ದಿ ಮುದ್ರಣಕ್ಕೆ ಅಣಿಮಾಡುವಷ್ಟು.

ಗಮನಿಸಿ: ಪ್ರಜಾವಾಣಿ ಫೋಟೋ ನೆನಪು

ವಾರ ಭವಿಷ್ಯ ಒಂದು ಕಾಯಂ ಅಂಕಣವಾದದ್ದು 1950ರ ದಶಕದಲ್ಲಿ. ಆಗ ಅದನ್ನು ಬರೆದುಕೊಡುತ್ತಿದ್ದವರು ಪ್ರಸಿದ್ಧ ವಿಮರ್ಶಕ ಕೆ.ನರಸಿಂಹಮೂರ್ತಿಯವರ ಅಣ್ಣ ಕೆ. ನಾಗರಾಜ್. ಅದೇ ರೀತಿ ಆ ಕಾಲದಲ್ಲಿ ಕನ್ನಡಕ್ಕೆ ತೀರ ಹೊಸದಾಗಿದ್ದ ‘ಪದರಂಗ’. ನನ್ನ ನೆನಪು ಸರಿಯಾಗಿದ್ದರೆ ಅದನ್ನು ಮೊದಲು ರಚಿಸಿ, ಅನೇಕ ವರ್ಷ ಮುಂದುವರಿಸಿದವರು ಮುಖ್ಯ ಉಪ ಸಂಪಾದಕರಾಗಿದ್ದ ನಾಗಭೂಷಣಂ. ಭಾನುವಾರಗಳಂದು ಈಗಲೂ ಪ್ರಕಟವಾಗುವ(ಪದಬಂಧ) ‘ಪದಬಂಧದ’ವನ್ನು ಆಗ ಮಧ್ಯಮ ವರ್ಗದ ಮನೆಮಂದಿಯೆಲ್ಲ ತುಂಬಿಸುತ್ತಿದ್ದರು.

ನಾನೊಮ್ಮೆ ಕೆ.ಎನ್. ಶಾಂತಕುಮಾರ್ ಅವರ ಜೊತೆ ಮಾತಾಡುತ್ತಿರುವಾಗ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ‘ನ್ಯೂಯಾರ್ಕ್‌ ರಿವ್ಯೂ ಆಫ್ ಬುಕ್ಸ್’ ತರಹ ಪ್ರಜಾವಾಣಿಯು ಸಾಹಿತ್ಯಕ್ಕೇ ಮೀಸಲಾದ ಒಂದು ಪತ್ರಿಕೆ ತರಬಹುದಲ್ಲ ಎಂದು ಸೂಚಿಸಿದ್ದೆ. ಒಂದೆರಡು ವರ್ಷಗಳ ನಂತರ ಅಂಥದೊಂದು ಪ್ರಯೋಗ ‘ಸಾಹಿತ್ಯ ಪುರವಣಿ’ ಎಂಬ ಶೀರ್ಷಿಕೆಯಲ್ಲಿ, ವಿವೇಕ ಶಾನಭಾಗರ ಗೌರವ ಸಂಪಾದಕತ್ವದಲ್ಲಿ ಪ್ರಾರಂಭವಾಯಿತು. ಆದರೆ ಅದೇಕೊ, ಏಳೆಂಟು ಸಂಚಿಕೆಗಳ ನಂತರ ನಿಂತುಹೋಯಿತು.

1980ರ ದಶಕದಲ್ಲಿ ಪ್ರಜಾವಾಣಿ ಪುಸ್ತಕ ಪ್ರಕಾಶನಕ್ಕೂ ಕೈಹಾಕಿದ್ದುಂಟು. ಪ್ರಿಂಟರ್ಸ್ ಪ್ರಕಾಶನ ಎಂಬ ಮೊಹರಿನಿಂದ ಪ್ರಕಟವಾದದ್ದು ಸುಲಭ ಬೆಲೆಯ ಕೆಲವು ಉತ್ತಮ ಸಾಹಿತ್ಯ ಕೃತಿಗಳು. ಆ ನಂತರವೂ ಆಗಾಗ ಕೆಲವು ಕೃತಿಗಳನ್ನು ಪ್ರಕಟಿಸಿದ್ದುಂಟು. ಇತ್ತೀಚೆಗೆ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳ ಒಂದು ಸಂಪುಟ ‘ಹೊನ್ನ ಕಣಜ’ ಎಂಬ ಹೆಸರಿನಲ್ಲಿ ಹೊರಬಂದಿದೆ. ಸದ್ಯದಲ್ಲೇ ಇನ್ನೂ ಎರಡು ಸಂಪುಟಗಳು ಹೊರಬರಲಿವೆ.

ಪ್ರಜಾವಾಣಿ ತನ್ನ ಸುದೀರ್ಘ ಇತಿಹಾಸದಲ್ಲಿ ಏನೆಲ್ಲ ಮಾಡಿತೆಂಬುದನ್ನು ನೆನೆದರೆ ನನಗಂತೂ ಆಶ್ಚರ್ಯವಾಗುತ್ತದೆ. ಸಂಪಾದಕೀಯ ಪುಟದಲ್ಲಿ ಬರುತ್ತಿದ್ದ ‘ಮೊದ್ದುಮಣಿ’ ಎಂಬ ಕಾರ್ಟೂನ್ ಸ್ಟ್ರಿಪ್, ಲಂಡನ್ನಿನ ಬಾತ್ಮೀದಾರ ಡಿ.ವಿ.ತಹಮಣಕರ್ ಕಳಿಸುತ್ತಿದ್ದ ವಿಶೇಷ ವರದಿಗಳು, ಕರ್ನಾಟಕದ ಇತರ ಪತ್ರಿಕೆಗಳಿಂದ ಮುಖ್ಯಾಂಶಗಳನ್ನು ಸಂಗ್ರಹಿಸಿಕೊಡುತ್ತಿದ್ದ ‘ನಾಲ್ಕೂ ನಿಟ್ಟಿನಿಂದ’ ಎಂಬ ಅಂಕಣ – ಒಂದೇ ಎರಡೇ. ಹಿಂದೊಮ್ಮೆ ರಾಜ್ಯದಲ್ಲಿ ನೆರೆಹಾವಳಿಯಿಂದ ಸಂತ್ರಸ್ತರಾದವರಿಗಾಗಿ ಒಂದು ಪರಿಹಾರ ನಿಧಿಯನ್ನು ಸ್ಥಾಪಿಸಿದ ಮೊಟ್ಟ ಮೊದಲ ಪತ್ರಿಕೆ ಪ್ರಜಾವಾಣಿ. ಆ ಕಾಲದ ಪ್ರಖ್ಯಾತ ಸಿನಿಮಾ ತಾರೆಯರು ಹಲವು ಕಡೆ ಸಂಚರಿಸಿ ಹಣ ಸಂಗ್ರಹ ಮಾಡುವ ಮೂಲಕ ಆ ಪರಿಹಾರ ನಿಧಿಯ ಮೊತ್ತವನ್ನು ಹೆಚ್ಚಿಸಿದರಂತೆ.

ಕೆ.ಎನ್.ಹರಿಕುಮಾರ್ ಸಂಪಾದಕರಾಗಿದ್ದ ಕಾಲದಲ್ಲಿ ಪ್ರಜಾವಾಣಿಗೆ ಪತ್ರಕರ್ತರ ಹೊಸದೊಂದು ಹೊಳೆಯೇ ಹರಿದುಬಂದಿತೆನ್ನಬೇಕು. ಅವರೆಲ್ಲರ ಕಾರ್ಯಕ್ಷಮತೆಯಿಂದಾಗಿ ಇಂದು ಪತ್ರಿಕೆ ಹಿಂದೆಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಹೊರಬರುತ್ತಿದೆ. ಅದರದು ನಾಡಿನ, ದೇಶದ ಎಲ್ಲ ವಿದ್ಯಮಾನಗಳನ್ನು ವರದಿ ಮಾಡುವ, ಅವುಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಪರಿಶೀಲಿಸಿ ವಿಶ್ಲೇಷಿಸುವ ಮಹತ್ಕಾರ್ಯ. ಹೆಸರಿಗೆ ತಕ್ಕಂತೆ ಸರ್ವಜನಾಂಗದ ವಾಣಿಯಾಗಿರುವ ಪ್ರಜಾವಾಣಿ ಮುಂದೆಂದೂ ತನ್ನ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾಕೆಂದರೆ, ಕವಿವಾಣಿಯಂತೆ “ಹಿಂದಕೆ ನೋಡುತ ಮುಂದಕೆ ದುಡುಕುವ ನದಿಯಂತದರ ವಿಹಾರ.”


ಬೆಂಗಳೂರಿನಲ್ಲಿ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಲಲಿತಕಲಾ ಸಂಘದಿಂದ ನಡೆದ ವಾರ್ಷಿಕೋತ್ಸವದಲ್ಲಿ ಕೆ.ಎನ್‌. ಹರಿಕುಮಾರ್‌ ಮಾತನಾಡುತ್ತಿರುವುದು. ಪ್ರಜಾವಾಣಿಯ ಅಂದಿನ ಕಾರ್ಯ ನಿರ್ವಾಹಕ ಸಂಪಾದಕ ಜಿ.ಎನ್‌. ರಂಗನಾಥರಾವ್, ಶಂಕರಲಿಂಗೇಗೌಡ ಚಿತ್ರದಲ್ಲಿದ್ದಾರೆ.

*
ಗಣ್ಯರ ಅಭಿಪ್ರಾಯ

ಇಂದಿಗೂ ವಿಶ್ವಾಸಾರ್ಹ
1967ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ ದಿನದಿಂದಲೂ ‘ಪ್ರಜಾವಾಣಿ’ಯನ್ನು ಪ್ರತಿನಿತ್ಯ ತಪ್ಪದೇ ಓದುತ್ತಿದ್ದೇನೆ. ಆಗ ರಾಜ್ಯದಲ್ಲಿ ಸಾಕಷ್ಟು ಪತ್ರಿಕೆಗಳು ಇದ್ದರೂ, ರಾಜ್ಯವ್ಯಾಪಿ ಅತ್ಯಂತ ಜನಪ್ರಿಯತೆ ಪಡೆದ ಪತ್ರಿಕೆ ಆಗಿತ್ತು. ನಂಬಲು ಅರ್ಹವಾದ ಸುದ್ದಿಗಳನ್ನು ಅಂದಿನಿಂದಲೂ ನೀಡುತ್ತಲೇ ಬರುತ್ತಿದೆ. ನನ್ನ ಮತ್ತು ದೇವರಾಜ ಅರಸು ಅವರ ವ್ಯಕ್ತಿತ್ವವನ್ನು ರೂಪಿಸಿದ ಪತ್ರಿಕೆ ಎಂದು ನಿಸ್ಸಂಕೋಚವಾಗಿ ಹೇಳುತ್ತೇನೆ. ಈಗಲೂ ಅದೇ ನಂಬಿಕೆ ಮತ್ತು ವಿಶ್ವಾಸದಿಂದ ಓದುತ್ತೇನೆ.
–ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಮಂತ್ರಿ

*
ಬಾಲ್ಯದ ಆಟ.. ಆ ಒಡನಾಟ
ನಾನು ಬಾಲ್ಯದಲ್ಲಿ ಶಾಲೆ, ಕ್ಲಬ್‌ಗಳಿಗೆ ಆಡುವಾಗ ಕ್ರಿಕೆಟ್‌ ಪಂದ್ಯಗಳ ಸ್ಕೋರ್ ಶೀಟ್ ಮತ್ತು ಭಾವಚಿತ್ರ ತೆಗೆದುಕೊಂಡು ಎಂ.ಜಿ. ರಸ್ತೆಯಲ್ಲಿರುವ ಪ್ರಜಾವಾಣಿ ಕಚೇರಿಗೆ ಹೋಗುತ್ತಿದ್ದೆ. ಬಿ.ಟಿ. ರಾಮಯ್ಯ ಶೀಲ್ಡ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಹೆಚ್ಚು ರನ್ ಗಳಿಸುವ ಅಥವಾ ವಿಕೆಟ್ ಪಡೆಯುವ ಆಟಗಾರರ ಕೆಲಸ ಎಂದರೆ ಪತ್ರಿಕಾ ಕಚೇರಿಗಳಿಗೆ ಹೋಗಿ ಸುದ್ದಿ ಕೊಡುವುದು. ಮರುದಿನ ಪತ್ರಿಕೆಗಳಲ್ಲಿ ನಮ್ಮ ಸುದ್ದಿ, ಚಿತ್ರಗಳು ಪ್ರಕಟವಾದಾಗ ಬಹಳ ಖುಷಿಯಾಗುತ್ತಿತ್ತು.
–ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ

*
ಬಹುಬೇಗ ಸೆಳೆಯಿತು 
ನನ್ನ ತಾತ ಮನೆಗೆ ಎಲ್ಲ ಪತ್ರಿಕೆಗಳನ್ನು ತರಿಸುತ್ತಿದ್ದರು. ನಾನು ಶುಕ್ರವಾರದ ಸಂಚಿಕೆಗಳನ್ನು ಮಾತ್ರ ಓದುತ್ತಿದ್ದೆ. ಆಗ ದೃಶ್ಯ ಮಾದ್ಯಮಗಳು ಇರಲಿಲ್ಲ. ನಟ ಶಂಕರನಾಗ್‌ ಶೂಟಿಂಗ್‌ ಸೆಟ್‌ಗೆ ಎಲ್ಲ ಪತ್ರಿಕೆಗಳನ್ನು ತರಿಸುತ್ತಿದ್ದರು. ಅವರು ನನ್ನ ಪತ್ರಿಕೆ ಓದುವ ಕ್ರಮವನ್ನೇ ಬದಲಾಯಿಸಿದರು. ಆಗ ನನ್ನನ್ನು ಬಹುಬೇಗ ಸೆಳೆದಿದ್ದು ಪ್ರಜಾವಾಣಿ. ಇಂದಿಗೂ ಪತ್ರಿಕೆಯ ಓದುಗಳಾಗಿದ್ದೇನೆ. ನನ್ನ ವೃತ್ತಿಬದುಕಿನ ಮಹತ್ವದ ಘಟ್ಟಗಳನ್ನು ಸೆರೆಹಿಡಿದ ಪತ್ರಿಕೆ ಎಂದು ಹೇಳಲು ಹೆಮ್ಮೆಯಾಗುತ್ತದೆ. 
–ತಾರಾ ಅನುರಾಧಾ, ನಟಿ

*
ಅನುಪಮ ಸೇವೆ
ಕನ್ನಡ ಪತ್ರಿಕೋದ್ಯಮದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಬೃಹತ್ತಾಗಿ ಬೆಳೆದಿದೆ. ಪತ್ರಿಕೆಯು ಕೇವಲ ಸುದ್ದಿ ಮಾತ್ರ ಬಿತ್ತರಿಸುವುದಿಲ್ಲ. ನಾಡು, ನುಡಿ, ಆರ್ಥಿಕ ಅಭಿವೃದ್ಧಿ, ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿದೆ. ಕರ್ನಾಟಕದ ಏಕೀಕರಣಕ್ಕೆ ಅಪಾರ ಕೊಡುಗೆ ನೀಡಿದೆ. ಬಹುಭಾಷೆ, ಬಹುಜನ, ಬಹುಸಂಸ್ಕೃತಿಗಳ ಈ ದೇಶಕ್ಕೆ ಬಹುತ್ವ ಬೆಳೆಸುವಲ್ಲಿ ಈ ಪತ್ರಿಕೆ ಸೇವೆ ಗಣನೀಯ. ಪಕ್ಷಾತೀತವಾಗಿ ಈ ಪತ್ರಿಕೆ ಸಾಗಿಬಂದಿದೆ.
–ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ, ಡಂಬಳ- ಗದಗ

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !