ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಊರಿಗೆ ಹೋದಾಗ

Last Updated 13 ಜುಲೈ 2019, 19:30 IST
ಅಕ್ಷರ ಗಾತ್ರ

‘ಇವನನ್ನ ನಂಬ್ಕೊಂಡು ಮನೆ ಬಿಟ್ಟು ಹೋಗೋಕಾಗುತ್ತಾ? ನಂಗೆ ಅಷ್ಟು ಧೈರ್ಯ ಇಲ್ಲ’ ಅಂದಳು ಅಭಿಯ ಅಮ್ಮ.

‘ಹೀಗೆ ಸೆರಗಲ್ಲಿ ಮುಚ್ಚಿಟ್ಕೋತಾ ಹೋದ್ರೆ ಅವನು ದೊಡ್ಡೋನಾಗೋದೇ ಇಲ್ಲ. ಜವಾಬ್ದಾರಿ ಕಲಿಸ್ಬೇಕು ಕಣೇ...’ ಎಂದು ಹೇಳಿದರು ಅಭಿಯ ಅಪ್ಪ.

ಸಂಬಂಧಿಕರ ಒಂದು ಮದುವೆಗೆ ಅಭಿಯ ಅಮ್ಮ ಹೋಗಲೇಬೇಕಾದ ಪ್ರಸಂಗ ಬಂದಿತ್ತು. ಅಭಿಯ ಪರೀಕ್ಷೆಗೆ ಬಾಕಿ ಉಳಿದಿದ್ದು ಬರೀ ಹದಿನೈದು ದಿನ. ಮೂರು ದಿನಗಳ ಮಟ್ಟಿಗೆ ಅವನನ್ನು ಕರೆದುಕೊಂಡು ಹೋಗಬಹುದಿತ್ತು. ಆದರೆ ಮದುವೆ ಮನೆಯ ಊಟ, ತಿಂಡಿ ತಿಂದು ಅವನ ಆರೋಗ್ಯ ಕೆಟ್ಟರೆ ಎಂದು ಅಮ್ಮನಿಗೆ ಭಯ. ಅದೂ ಅಲ್ಲದೆ ಮೂರು ದಿನ ಅಭಿ ಪುಸ್ತಕ ಮುಟ್ಟದೆ ಇರುವುದನ್ನು ನೆನೆಸಿಕೊಂಡರೆ ಅಮ್ಮನಿಗೆ ಚಳಿ, ಜ್ವರ ಬಂದಂತಾಗುತ್ತಿತ್ತು. ಸಂಜೆ ಹೊತ್ತು ಆಟಕ್ಕೂ ಕಳಿಸದೆ ‘ಓದು, ಓದು’ ಎಂದು ದುಂಬಾಲು ಬೀಳುತ್ತಿದ್ದ ಅಮ್ಮನಿಗೆ ಅವನೊಬ್ಬನನ್ನೇ ಬಿಟ್ಟು ಹೋಗುವುದಕ್ಕೆ ಚೂರೂ ಮನಸ್ಸಿಲ್ಲ.

‘ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳೋದು’ ಅಂತಾರಲ್ಲ, ಹಾಗಾಗಿತ್ತು ಅಮ್ಮನ ಪರಿಸ್ಥಿತಿ. ಅಪ್ಪ ರಜಾ ಹಾಕಿ ಮನೆಯಲ್ಲಿ ಇರುವುದಾದರೆ ಅಮ್ಮನಿಗೆ ಅಷ್ಟೊಂದು ಚಿಂತೆ ಆಗುತ್ತಿರಲಿಲ್ಲ. ಆದರೆ ಅಪ್ಪ ರಜಾ ಹಾಕಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು. ‘ಆಡಿಟಿಂಗ್’ ಅಂತೆ, ‘ಇಯರ್ ಎಂಡ್’ ಅಂತೆ, ಅದೇನೋ ಆ ಭಾಷೆ ಅಭಿಗೆ ಅರ್ಥವಾಗಿರಲಿಲ್ಲ. ಬೇಕಾಗಿಯೂ ಇರಲಿಲ್ಲ. ಅಂತೂ ರಾತ್ರಿ ಹೊತ್ತು ಅಭಿ ಒಬ್ಬನೇ ಮನೆಯಲ್ಲಿರಬೇಕಾಗಿಲ್ಲ ಅನ್ನುವುದೊಂದೇ ಅಮ್ಮನಿಗೆ ಸಮಾಧಾನ.

‘ಆದಷ್ಟು ಬೇಗ ಮನೆಗೆ ಬಂದ್ಬಿಡಿ. ಯಾವತ್ತಿನ ಹಾಗೆ ಆಫೀಸಲ್ಲಿ ರಾತ್ರಿ ಎಂಟಾದರೂ ಕೂತ್ಕೊಂಡಿರ್ಬೇಡಿ’ ಎಂದು ಅಪ್ಪನಿಗೆ ಹೇಳಿಟ್ಟಳು ಅಮ್ಮ. ಅಪ್ಪ ಎದುರು ಮಾತಾಡಲಿಲ್ಲ. ಅಭಿಯ ಮುಖ ನೋಡಿ ಕಣ್ಣು ಮಿಟುಕಿಸಿ ನಕ್ಕರು. ಅಬ್ಬಬ್ಬಾ, ಅಮ್ಮನ ಆತಂಕ ಒಂದೆರಡಲ್ಲ. ಅಭಿಗೆ ಬುದ್ಧಿ ಹೇಳಿದ್ದೇ ಹೇಳಿದ್ದು.‘ಅಪ್ಪ ಮನೇಲಿಲ್ಲದಿದ್ದಾಗ ಒಲೆ ಗಿಲೆ ಹಚ್ಚೋಕ ಹೋಗ್ಬೇಡ’ ಎಂದು ತಲೆ ತಿಂದಳು ಅಮ್ಮ. ಸ್ಕೂಲಿನಿಂದ ಬಂದ ಕೂಡಲೇ ಓದಲು ಕೂರಬೇಕೆಂದು ನೂರೆಂಟು ಸಲ ಹೇಳಿದಳೇನೋ. ‘ಯಾವಾಗ ಈ ಅಮ್ಮ ಊರಿಗೆ ಹೊರಡುತ್ತಾಳೋ’ ಎಂದು ಅವನ ಮನಸ್ಸು ತಕಪಕಗುಟ್ಟುತ್ತಿತ್ತು. ಏನೇನೋ ಯೋಜನೆ ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಅತ್ಯುತ್ಸಾಹದಿಂದ ಕಾಯುತ್ತಿದ್ದ ಅಭಿ.

***

ಅಂತೂ ಇಂತೂ ಅಮ್ಮನ ಸವಾರಿ ಊರಿಗೆ ಹೊರಟಿತು. ಮಧ್ಯಾಹ್ನ ಮೂರೂವರೆಗೆ ಸ್ಕೂಲ್ ವ್ಯಾನ್ ಇಳಿದು ಮನೆಗೆ ಬಂದ ಅಭಿ ಬ್ಯಾಗಿನಲ್ಲಿ ಜೋಪಾನವಾಗಿಟ್ಟುಕೊಂಡಿದ್ದ ಕೀಯನ್ನು ಹುಡುಕಿ ಬಾಗಿಲು ತೆಗೆದು ಒಳಗೆ ಹೋಗಿ ಮರೆಯದೆ ಬಾಗಿಲು ಮುಚ್ಚಿ ಭದ್ರಪಡಿಸಿದ. ಶೂಸು, ಸಾಕ್ಸು ತೆಗೆದವನು ಯಾವಾಗಿನ ಹಾಗೆ ತೆಗೆದ ಜಾಗದಲ್ಲೇ ಬಿಡದೆ ಚಪ್ಪಲಿ ಸ್ಟ್ಯಾಂಡಿನಲ್ಲಿ ಜೋಡಿಸಿಟ್ಟು, ಕೈ–ಕಾಲು–ಮುಖ ತೊಳೆಯಲು ಬಚ್ಚಲಿಗೆ ಹೋಗುವಾಗ ‘ಅಪ್ಪ ಹೇಳುತ್ತಿದ್ದ ಜವಾಬ್ದಾರಿ ಅಂದರೆ ಇದೇನಾ?’ ಎನ್ನುವ ಅನಿಸಿಕೆಯೊಂದು ಮನಸ್ಸಲ್ಲಿ ಮಿಂಚಿ ಹೋಯ್ತು.

‘ಮಾಡೋರೊಬ್ರಿದ್ರೆ ನೋಡು ನನ್ನ ಸಿರಿ’ ಅನ್ನುವ ಗಾದೆಯನ್ನು ಯಾವಾಗಲೂ ಹೇಳುತ್ತಿರುತ್ತಿದ್ದಳು ಅಮ್ಮ. ಅಭಿಯ ರೂಮನ್ನು ಚೊಕ್ಕ ಮಾಡಿ ಪುಸ್ತಕ ಗಿಸ್ತಕ ಅದರದರ ಜಾಗದಲ್ಲಿ ಇಡುವಾಗಲೆಲ್ಲಾ ಅಮ್ಮನ ಬಾಯಿಂದ ಈ ಮಾತು ಉದುರುತ್ತಿತ್ತು.

ಕೈಕಾಲು ತೊಳೆದು ಅಡುಗೆಮನೆಗೆ ಹೋದ ಅಭಿ ಫ್ರಿಜ್ಜಿನಲ್ಲಿದ್ದ ಹಾಲನ್ನು ಒಂದು ಪಾತ್ರೆಗೆ ಬಗ್ಗಿಸಿ, ಸ್ಟೌವ್ ಮೇಲಿಟ್ಟು ಗ್ಯಾಸ್ ಹೊತ್ತಿಸಿ, ಬಿಸಿ ಮಾಡಿಕೊಂಡ. ಬಿಸಿ ಹಾಲಿಗೆ ಸಕ್ಕರೆ ಹಾಕಿ ಚಮಚದಿಂದ ಕಲಕುವಾಗ ಅಮ್ಮ ಹೇಳಿದ ಬುದ್ಧಿಮಾತನ್ನು ಮೊದಲ ದಿನವೇ ಬ್ರೇಕ್ ಮಾಡಿದ್ದು ನೆನೆದು ಅವನಿಗೆ ನಗು ಬಂತು. ಒಲೆ ಮುಟ್ಟಲು ಹೋಗದಿದ್ದರೆ ಅವನು ಅಂದುಕೊಂಡಿದ್ದನ್ನೆಲ್ಲಾ ನಡೆಸುವುದಾದರೂ ಹೇಗೆ? ಮುಂದಿನ ಪ್ರೋಗ್ರಾಂ ನೆನೆದು ಅವನಿಗೆ ಮೈ ತುಂಬಾ ನವಿರು.

***

ಅಮ್ಮ ಅಡುಗೆ, ತಿಂಡಿ ಮಾಡುತ್ತಿದ್ದಾಗ ಅಭಿ ಅದರ ಕಡೆ ಗಮನ ಕೊಡುತ್ತಿದ್ದವನೇ ಅಲ್ಲ. ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ತಿಂಡಿಯ ತಟ್ಟೆ ತನ್ನಷ್ಟಕ್ಕೆ ಬಂದು ಕೂರುತ್ತಿತ್ತು. ‘ಬಾರೋ, ಹೊತ್ತಾಗಿಲ್ವಾ ಸ್ಕೂಲಿಗೆ? ಈಗ ಬಂದುಬಿಡುತ್ತೆ ವ್ಯಾನು’ ಎಂದು ಅಮ್ಮ ಹೇಳಿ ಹೇಳಿ ಗಂಟಲು ಒಣಗಿಸಿಕೊಳ್ಳುತ್ತಿದ್ದಳು. ಇಂತಾ ಅಭಿ ಬದಲಾಗಿದ್ದಕ್ಕೆ ಅಮ್ಮನೇ ಕಾರಣ. ಅವತ್ತೊಂದು ದಿನ ಅಭಿಗೆ ರಜ ಇತ್ತು. ಅವನು ರೂಮಲ್ಲಿ ಕೂತು ಕಂಪ್ಯೂಟರ್ ಗೇಮ್ ಆಡುತ್ತಿದ್ದಾಗ ಅಮ್ಮ ಅಸಹನೆಯಿಂದ ಕರೆದಿದ್ದಳು,
‘ರಜಾ ಇತ್ತು ಅಂದ್ರೆ ಮೂರು ಹೊತ್ತೂ ಇದೇ ಉದ್ಯೋಗ ಆಗ್ಹೋಯ್ತು. ಬಾ ಇಲ್ಲಿ, ನಿನ್ನ ವಯಸ್ಸಿನ ಹುಡುಗ ಅಡುಗೆ ಮಾಡ್ತಿದಾನೆ ನೋಡು. ನೀನೂ ಇದ್ದಿ...’

ಅಮ್ಮ ಪದೇ ಪದೇ ಕರೆದ ಮೇಲೆ ಅಭಿ ಹಾಲ್‍ಗೆ ಬಂದು ಟೀವಿ ಎದುರು ಕೂತಿದ್ದ. ಅಡುಗೆ ಕಾರ್ಯಕ್ರಮ ನೋಡುವುದು ಅಂದರೆ ಅಮ್ಮನಿಗೆ ಹುಚ್ಚು. ಅಭಿ ಅವಳ ಜೊತೆಗೇನಾದರೂ ಕೂತಿದ್ದರೆ ಟೀವಿಯಲ್ಲಿ ನೋಡಿದ ‘ಆ ತಿಂಡಿ ಮಾಡು, ಈ ತಿಂಡಿ ಮಾಡು’ ಎಂದು ದುಂಬಾಲು ಬೀಳುತ್ತಿದ್ದ.

‘ಅದೆಲ್ಲಾ ಬರೀ ನೋಡೋಕೆ ಅಷ್ಟೇ ಕಣೋ. ಮಾಡೋಕೆ ಅಲ್ಲ’ ಅಪ್ಪ ಕಿಚಾಯಿಸುತ್ತಿದ್ದರು. ಅಭಿ ಅವತ್ತು ಅಮ್ಮನ ಪಕ್ಕ ಕೂತು ತನ್ನ ವಯಸ್ಸಿನವನು ಅದ್ಯಾವುದೋ ತಿಂಡಿ ಮಾಡಿದ್ದನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡಿದ. ಆಮೇಲಿಂದ ಶುರುವಾಯ್ತಪ್ಪಾ ಪಿತ್ಥ. ರಜಾ ಇದ್ದಾಗಲೆಲ್ಲಾ ಅಮ್ಮನ ಪ್ರಾಣ ತಿನ್ನುತ್ತಿದ್ದ. ‘ಜ್ಯೂಸ್ ಮಾಡ್ತೀನಿ’, ‘ಸಲಾಡ್ ಮಾಡ್ತೀನಿ’, ‘ಚಪಾತಿ ಲಟ್ಟಿಸಿ ಕೊಡ್ತೀನಿ’, ‘ದೋಸೆ ಹಾಕ್ತೀನಿ’ ಇಂತಾದ್ದೇ ಕನವರಿಕೆ. ‘ಕೈಕಾಲಿಗೆ ಅಡ್ಡಡ್ಡ ಬರ್ಬೇಡ, ಆಚೆಗೆ ಹೋಗು’ ಎಂದು ಕೆಲವು ಸಲ ಬೈಯುತ್ತಿದ್ದಳು ಅಮ್ಮ. ಕೆಲವು ಸಲ ‘ಏನಾದ್ರೂ ಮಾಡ್ಕೋ...’ ಎಂದು ಪರವಾನಗಿ. ರಜಾ ಇದ್ದಾಗ ಅಡುಗೆಮನೆಯಲ್ಲಿ ಕಾಲ ಕಳೆಯೋದು ಅಭಿಗೆ ಇಷ್ಟದ ಕೆಲಸ ಆಯ್ತು. ಆದರೂ ಒಬ್ಬನನ್ನೇ ಒಲೆ ಮುಂದೆ ನಿಲ್ಲಲು ಯಾವತ್ತೂ ಬಿಡುತ್ತಿರಲಿಲ್ಲ ಅಮ್ಮ.

ಹಾಲು ಕುಡಿದು ಮುಗಿಸಿದ ಅಭಿ ಕೈಲಿದ್ದ ಲೋಟವನ್ನು ಠಣಾರನೆ ಸಿಂಕಿನಲ್ಲಿ ಬಿಸಾಕದೆ ಕ್ಲೀನಾಗಿ ತೊಳೆದು ಅದರ ಜಾಗದಲ್ಲಿ ಕವುಚಿಟ್ಟ.

***

‘ಇದು ಯಾವ ದೇಶದ ನಕ್ಷೆ?’ ಕೈಲಿದ್ದ ಚಪಾತಿಯನ್ನು ತಿರುಗಿಸಿ ಮುರುಗಿಸಿ ನೋಡುತ್ತಾ ತಮಾಷೆ ಮಾಡಿದರು ಅಪ್ಪ. ಒಂದು ಚೂರು ಮುರಿದು ಸಾಂಬಾರಿನಲ್ಲಿ ಅದ್ದಿ ಬಾಯಿಗಿಟ್ಟುಕೊಂಡವರು ‘ಭೇಷ್’ ಎನ್ನುವಂತೆ ಹೆಬ್ಬೆರಳು, ತೋರುಬೆರಳನ್ನು ಉಂಗುರದಂತೆ ಜೋಡಿಸಿ ಶಾಭಾಷ್‍ಗಿರಿ ಕೊಟ್ಟರು. ಅಭಿಯ ಮುಖ ಪೂರಿಯಂತೆ ಉಬ್ಬಿ ಹೋಯ್ತು. ಅಪ್ಪ, ಮಗ ಒಟ್ಟೊಟ್ಟಿಗೆ ಕೂತು ನಾಲ್ಕು ಚಪಾತಿ ತಿಂದರು.

‘ನಾಳೆ ಫ್ರೈಡ್ ರೈಸ್ ಮಾಡ್ತೀನಿ ಅಪ್ಪಾ, ಬರುತ್ತೆ ನಂಗೆ...’ ಅಭಿ ಉತ್ಸಾಹದಿಂದ ಹೇಳಿದ.

‘ನಿಮ್ಮಮ್ಮ ಮೂರು ದಿನಕ್ಕಾಗುವಷ್ಟು ಸಾಂಬಾರು ಮಾಡಿಟ್ಟು ಹೋಗಿದಾಳಲ್ಲೋ...’ ಅಪ್ಪ ಹೇಳಿದವರು ತಕ್ಷಣ ಪರಿಹಾರವನ್ನೂ ಸೂಚಿಸಿದರು, ‘ಅವಳು ಬಂದ್ಮೇಲೆ ಅವಳೇ ತಿಂತಾಳೆ, ಅಲ್ವಾ?’

ಡೈನಿಂಗ್ ಟೇಬಲ್ಲಿನ ಮೇಲಿದ್ದ ತಟ್ಟೆಗಳನ್ನು ಎತ್ತುತ್ತಾ ಅಭಿ ಹೇಳಿದ, ‘ಈಗ ಕೂತ್ಕೊಂಡು ಓದ್ಕೋತೀನಿ ಅಪ್ಪಾ. ರಾತ್ರಿ ಕೂಡ ಸ್ವಲ್ಪ ಜಾಸ್ತಿ ಹೊತ್ತು ಓದಿದ್ರಾಯ್ತು’

‘ಓಕೇ...’ ಎನ್ನುತ್ತಾ ಅಭಿಯ ತಲೆ ಸವರಿದರು ಅಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT