ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನೆಂಬ ಮರೆಯಬಾರದ ಅರಿವು

basavanna
Last Updated 3 ಮೇ 2019, 4:43 IST
ಅಕ್ಷರ ಗಾತ್ರ

ಭಾರತದ ಭಕ್ತಿಪಂಥದ ವೃಕ್ಷದಲ್ಲಿ ಕನ್ನಡನಾಡಿನ ರೂಪದಲ್ಲಿ ಹರಡಿಕೊಂಡಿರುವ ಪ್ರಮುಖ ಟಿಸಿಲು ಹನ್ನೆರಡನೇ ಶತಮಾನದಲ್ಲಿ ಬಸವಣ್ಣಮುಖೇನ ರೂಪುಗೊಂಡ ಶರಣರ ಭಕ್ತಿಚಳವಳಿ. ಬಸವಣ್ಣ ಬರಿಯ ಭಕ್ತನಲ್ಲ; ಆತ ಭಕ್ತಿಭಂಡಾರಿ. ಬಸವಣ್ಣನ ಭಕ್ತಿಯ ಸ್ವರೂಪ ಹಾಗೂ ಸಾರ್ಥಕತೆಯ ಕುರಿತು – ‘ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು, / ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು / ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!’ ಎನ್ನುವುದು ಅಲ್ಲಮಪ್ರಭುವಿನ ಬಣ್ಣನೆ. ಬಸವಣ್ಣನವರ ಭಕ್ತಿಮಾರ್ಗ ಕೊಟ್ಟು ಕೊಂಬುವ ವಿಧಾನವಲ್ಲ. ತನ್ನ ಆರಾಧ್ಯದೈವಂಗೆ ತನ್ನನ್ನು ಒಪ್ಪಿಸಿಕೊಳ್ಳುವ ಮಹಾಮಾರ್ಗವದು. ‘ದಾಸನಂತೆ ತವನಿಧಿಯ ಬೇಡುವನಲ್ಲ, / ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ, / ಅಂಜದಿರು ಅಂಜದಿರು ಅವರಂದದವ ನಾನಲ್ಲ’ ಎನ್ನುವ ಭಕ್ತಿಭಂಡಾರಿ ಕೂಡಲಸಂಗಮದೇವನಲ್ಲಿ ಬೇಡುವುದು ಸದ್ಭಕ್ತಿಯನ್ನು.

ಭಕ್ತಿಯ ಮೂಲಕ ಕೂಡಲಸಂಗಮನನ್ನು ಹೊಂದುವ ಮಾರ್ಗವನ್ನು ಬಸವಣ್ಣ ಬಹು ಸೊಗಸಾಗಿ ಸೂಚಿಸಿದ್ದಾರೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, / ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, / ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.’ – ಹೀಗೆ ಮನುಷ್ಯಧರ್ಮ ಯಾವುದಾಗಿರಬೇಕೆಂದು ಸೂಚಿಸುವ ಬಸವಣ್ಣ, ಇದರ ಫಲವನ್ನು – ‘ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ / ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’ ಎನ್ನುತ್ತಾರೆ. ಡಾಂಭಿಕತೆ ಹಾಗೂ ಭಕ್ತಿಯ ಪ್ರದರ್ಶನವನ್ನು ಲೇವಡಿ ಮಾಡುವ ಬಸವಣ್ಣ, ದೈವ ಸಾಕ್ಷಾತ್ಕಾರಕ್ಕೆ ಅಂತರಂಗಶುದ್ಧಿ ಹಾಗೂ ಬಹಿರಂಗಶುದ್ಧಿಯೇ ಮೂಲ ಎನ್ನುತ್ತಾರೆ. ಬಸವಣ್ಣನ ಭಕ್ತಿಯ ಕೇಂದ್ರದಲ್ಲಿರುವುದು ಮಾನವೀಯತೆ. ಎಲ್ಲರಿಗೂ ಲೇಸೇ ಆಗುವಂತೆ ಬದುಕುವುದೇ ಭಕ್ತಿ–‍ಪೂಜೆ ಎನ್ನುವ ದರ್ಶನ, ಭಕ್ತಿಯ ಔನ್ನತ್ಯವನ್ನು ಎತ್ತರಕ್ಕೇರಿಸುವಂತಹದ್ದು, ಅದರ ಚೌಕಟ್ಟನ್ನು ವಿಸ್ತರಿಸುವಂತಹದ್ದು. ಮನುಷ್ಯಧರ್ಮ ಹಾಗೂ ಭಕ್ತಿಯಲ್ಲಿ ಹೀಗೆ ಅಭೇದವನ್ನು ಕಾಣಿಸಿದವರು ವಿರಳ.

ಭಕ್ತಿಯ ಬಗ್ಗೆ ಭಾವುಕವಾಗಿ ಮಾತನಾಡಿದರೂ ಬಸವಣ್ಣ ಇಹದ ತವಕ–ತಲ್ಲಣಗಳಿಗೆ ಕುರುಡಾದವರಲ್ಲ. ಇಷ್ಟದೈವದ ಆರಾಧನೆಯಲ್ಲಿ ತನ್ನನ್ನು ತಾನು ಮೀರುವುದು, ಲೋಕವನ್ನು ಮರೆಯುವುದು ಭಕ್ತಿಯಲ್ಲಿ ಸಹಜ. ಆದರೆ, ಬಸವಣ್ಣನ ಭಕ್ತಿಯ ಕೇಂದ್ರದಲ್ಲಿರುವುದು ಕಾಯಕ‍ಪ್ರಜ್ಞೆ. ಕಾಯಕದಲ್ಲಿ ನಿರತನಾಗಿದ್ದೊಡೆ ‘ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು’ ಎನ್ನುವ ಆಯ್ದಕ್ಕಿ ಮಾರಯ್ಯನ ದರ್ಶನದ ಹಿಂದೆ ಇರುವುದು ‘ಕಾಯಕವೇ ಕೈಲಾಸ’ ಎನ್ನುವ ಬಸವಪ್ರಜ್ಞೆಯೇ. ಭಕ್ತಿಯ ಬಗ್ಗೆ ಬಸವಣ್ಣನವರದು ನಿಷ್ಠುರ ನಿಲುವು. ‘ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು. / ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು, /
ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ, / ಪಾಪಿಯ ಕೂಸನೆತ್ತಿದಂತೆ. / ಕೂಡಲಸಂಗಮದೇವರ ಭಕ್ತಿ /
ಅಳಿಮನದವರಿಗೆ ಅಳವಡದಯ್ಯಾ’ ಎನ್ನುವ ವಚನ ಬಸವ–ಭಕ್ತಿಯ ಸ್ವರೂಪಕ್ಕೆ ಉದಾಹರಣೆಯಂತಿದೆ.

ಭಕ್ತಿಯೊಂದಿಗೆ ತಳಕು ಹಾಕಿಕೊಂಡ ಬಸವಣ್ಣನವರು ಪ್ರತಿಪಾದಿಸಿದ ಕಾಯಕಪ್ರಜ್ಞೆ ಜಾತಿಯೊಳಗಿದ್ದೂ ಅದನ್ನು ಮೀರುವ ದಾರಿಯನ್ನು ಕಾಣಿಸಿತು. ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ / ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ’ ಎನ್ನುವ ಮನೋಧರ್ಮದ ಕಾರಣದಿಂದಲೇ, ‘ಅನುಭವ ಮಂಟಪ’ ಎಲ್ಲ ವರ್ಗದ ಜನರನ್ನು ಶರಣರ ರೂಪದಲ್ಲಿ ಒಳಗೊಂಡಿತು. ಹೀಗೆ ಒಳಗೊಂಡಿದ್ದು ಮಾತ್ರವಲ್ಲ – ಅನುಭವ ಅನುಭಾವವಾಗಿ ರೂಪಾಂತರಗೊಳ್ಳಲು ದ್ರವ್ಯ ಒದಗಿಸಿತು. ‘ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ’ ಎನ್ನುವ ಬಸವಣ್ಣನವರ ಪ್ರಾರ್ಥನೆ ಶರಣರೆಲ್ಲರ ಸಮೂಹಗಾನವೂ ಹೌದು. ಭಕ್ತಿ ಹಾಗೂ ಕಾಯಕದ ನೆಲೆಗಟ್ಟಿನಲ್ಲಿ ಜಾತಿಯ ಪ್ರಶ್ನೆಯನ್ನು ನಗಣ್ಯವಾಗಿಸಿದ ಕಾರಣದಿಂದಲೇ, ಭಾರತೀಯ ಭಕ್ತಿಪಂಥದ ಚರಿತ್ರೆಯಲ್ಲಿ ಕನ್ನಡದ–ಕಲ್ಯಾಣದ ಅಧ್ಯಾಯ ಅಪೂರ್ವದ್ದೆನ್ನಿಸಿದೆ. ಕನ್ನಡ ಕಲ್ಯಾಣದ ಮಾದರಿ ಲೋಕಕಲ್ಯಾಣಕ್ಕೂ ದಾರಿಯಾಗಿದೆ.

ಬಸವಣ್ಣನ ಬದುಕು ಹಾಗೂ ಬರವಣಿಗೆ ಎರಡರಲ್ಲೂ ‘ಭಕ್ತಿ’ ಒಂದು ಮೌಲ್ಯದ ರೂಪದಲ್ಲಿ ಪುನರಾವರ್ತನೆಗೊಳ್ಳುತ್ತದೆ. ಇವತ್ತಿನ ಸಂದರ್ಭದಲ್ಲಿ ಭಕ್ತಿ–ಭಕ್ತ ಪದಗಳಿಗೆ ಹೀನಾರ್ಥ ಹಚ್ಚಿದ್ದೇವೆ. ಬಸವಮಾರ್ಗದಲ್ಲಿ ‘ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶ’ವಾದರೆ, ಪ್ರಸ್ತುತ ಭಕ್ತಿಯ ಅಭಿವ್ಯಕ್ತಿಗೆ ಚಿನ್ನದ ತೇರು ಬೇಕಾಗುತ್ತದೆ. ‘ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ’ ಎನ್ನುವಂತಹ ಸಂದರ್ಭ ಇಂದಿನದು. ಈ ಮರೆವೆಗೆ ಮದ್ದು ಬಸವಣ್ಣನೆಂಬ ಅರಿವನ್ನು ಮತ್ತೆ ಮತ್ತೆ ಜೀವಗೊಳಿಸುವುದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT