ಚರ್ಮಕ್ಕೂ, ಕೂದಲಿಗೂ ಬೇಕಾದ್ದನ್ನು ತಿಂದಿರಾ?

7
ಕಾಳಜಿ

ಚರ್ಮಕ್ಕೂ, ಕೂದಲಿಗೂ ಬೇಕಾದ್ದನ್ನು ತಿಂದಿರಾ?

Published:
Updated:

* ಸಣ್ಣ ವಯಸ್ಸಿಗೇ ಚರ್ಮ ಸುಕ್ಕುಗಟ್ಟುವ ಸಮಸ್ಯೆ ಕಾಣಿಸುವುದೇಕೆ?
ಬೆಂಗಳೂರಿನಂತಹ ಮೆಟ್ರೊ ಪಾಲಿಟನ್‌ ನಗರದ ವೇಗಕ್ಕೆ ಸರಿಯಾಗಿ ನಮ್ಮ ಬದುಕಿನ ವೇಗವನ್ನೂ ನಾವು ಟ್ಯೂನ್‌ ಮಾಡಿಕೊಂಡಿದ್ದೇವೆ. ಹೊತ್ತಿಗೆ ಸರಿಯಾದ ವ್ಯಾಯಾಮ, ಊಟ, ನಿದ್ದೆ ಮಾಡುತ್ತೇವೆ ಎಂಬ ಖಾತರಿ ಇಲ್ಲ. ಇನ್ನು ಕೆಲವರು ಪಥ್ಯ (ಡಯಟ್‌) ಹೆಸರಿನಲ್ಲಿ ಆಹಾರದಲ್ಲಿ ಸಹಜವಾಗಿ ಇರಬೇಕಾದ ಎಲ್ಲಾ ಪೌಷ್ಟಿಕಾಂಶಗಳನ್ನು ಕಿತ್ತುಹಾಕಿದ ಒಣಆಹಾರವನ್ನು ಸೇವಿಸುತ್ತಾರೆ. ಮನೆಯಿಂದಾಚೆ ಹೋದರೆ ಮಲಿನ ವಾತಾವರಣ. ನಾವು ತಿನ್ನುವ ಆಹಾರ ಮತ್ತು ದೈಹಿಕ ಚಟುವಟಿಕೆಗಳೇ ನಮ್ಮ ಸೌಂದರ್ಯದ ಶಕ್ತಿ. ಆ ಶಕ್ತಿಯನ್ನೇ ದುರ್ಬಲ ಮಾಡಿಕೊಂಡರೆ ಸಣ್ಣ ವಯಸ್ಸಿಗೇ ಚರ್ಮ ಸುಕ್ಕುಗಟ್ಟುವುದು ಸಹಜ.

*ಅಂದರೆ ಜೀವನಶೈಲಿ, ಅಹಾರಸೇವನೆ ಮತ್ತು ಅತಿಯಾದ ಡಯಟ್‌ ಪ್ರಜ್ಞೆ ಚರ್ಮದ ಸೌಂದರ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ?
ನೂರಕ್ಕೆ ನೂರು ನಿಜ. ಸೌಂದರ್ಯಪ್ರಜ್ಞೆ ಮತ್ತು ಜೀವನಶೈಲಿಯಲ್ಲಿನ ಶಿಸ್ತು ಸಮಾನವಾಗಿರಬೇಕು. ದಪ್ಪ ಆಗುವ ಅಥವಾ ತೂಕ ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಗ್ರಾಂ ಲೆಕ್ಕದಲ್ಲಿ ತಿನ್ನುವುದು, ಕಾರ್ಬೊ ಡಯಟ್‌, ಫಾಸ್ಟ್ ಡಯಟ್‌ ಹೀಗೆ ಆಧುನಿಕ ಡಯಟ್‌ ಮಂತ್ರಗಳನ್ನು ಕುರುಡಾಗಿ ಪಾಲಿಸುವುದು ಸರಿಯಲ್ಲ. ನಮ್ಮ ದೇಹಕ್ಕೆ ಕೊಬ್ಬು ಬೇಕು. ಸಸ್ಯಜನ್ಯ ಕೊಬ್ಬು ನಮ್ಮ ದೇಹಕ್ಕೆ ಅತ್ಯಗತ್ಯ. ಕಾರ್ಬೊಹೈಡ್ರೇಟ್‌, ಕೊಬ್ಬು ಮತ್ತು ಪ್ರೊಟೀನ್‌ ಸಮೃದ್ಧವಾಗಿರುವ ಆಹಾರ ಸೇವಿಸಿದರೆ ಮಾತ್ರ ಇಡೀ ಶರೀರವೇ ಆರೋಗ್ಯದಿಂದ ಕೂಡಿರುತ್ತದೆ. ಆಗ ಸಹಜವಾಗಿಯೇ ಚರ್ಮ, ಕೂದಲು ಮತ್ತು ಕಣ್ಣು ಆಕರ್ಷಕವಾಗಿರುತ್ತದೆ. ಇಲ್ಲದಿದ್ದರೆ ಮಂಕಾಗುತ್ತೇವೆ, ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ.

*ಚರ್ಮ ಸುಕ್ಕುಗಟ್ಟುವ ಆರಂಭಿಕ ಲಕ್ಷಣ ಏನು?
ಮುಖದಲ್ಲಿ ಸಣ್ಣ ಸಣ್ಣ ಮಚ್ಚೆಗಳು, ಕಣ್ಣಿನ ಸುತ್ತ ಕಪ್ಪು ವರ್ತುಲ, ಚರ್ಮದ ಬಣ್ಣ ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗುವುದು, ಮೂಗಿನ ಎರಡೂ ಬದಿಗಳಲ್ಲಿ ಕಂಡೂ ಕಾಣದಂತೆ ಗೆರೆ ಮತ್ತು ನೆರಿಗೆ ಮೂಡುವುದು ಚರ್ಮ ಸುಕ್ಕುಗಟ್ಟುವ ಆರಂಭಿಕ ಲಕ್ಷಣ. 25ನೇ ವಯಸ್ಸಿಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ‘ಮೈಕ್ರೊ ಏಜಿಂಗ್‌’ ಎಂದು ಕರೆಯುತ್ತೇವೆ. ಸಮೃದ್ಧವಾದ ಆಹಾರ, ನೀರು ಸೇವನೆ, ಆರೋಗ್ಯಕರ ಚಟುವಟಿಕೆ, ನಿದ್ದೆ ಮಾಡುವ ಮೂಲಕ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪೂರೈಸುವುದೊಂದೇ ಪರಿಹಾರ. 

*ಚರ್ಮದ ಅಂದ ಕಾಪಾಡಲು ಒಮ್ಮೆ ಲೇಸರ್‌ ಚಿಕಿತ್ಸೆ ಪಡೆದು ಕೈಬಿಟ್ಟರೆ ಚರ್ಮ ತನ್ನ ಸಹಜ ಬಿಗಿತನ, ಸೂಕ್ಷ್ಮತೆ ಕಳೆದುಕೊಳ್ಳುತ್ತದೆಯೇ?
ಇಲ್ಲ. ಆದರೆ ನಿರ್ದಿಷ್ಟವಾದ ಸಮಸ್ಯೆಗೆ ಲೇಸರ್ ಚಿಕಿತ್ಸೆ ಪಡೆದವರು ಸಮಸ್ಯೆ ನಿವಾರಣೆಯಾಗುವ ವರೆಗೆ ನಿಯಮಿತವಾಗಿ ಚಿಕಿತ್ಸೆ ಮುಂದುವರಿಸುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಒಮ್ಮೆ ಲೇಸರ್‌ ಚಿಕಿತ್ಸೆ ಪಡೆದು ನಿಲ್ಲಿಸಿದರೆ ಯಾವುದೇ ಪ್ರಯೋಜನವಾಗದು. ಆಗ, ಚರ್ಮ ಸಡಿಲವಾದಂತೆ ಭಾಸವಾಗಬಹುದು ಅಷ್ಟೇ. ಪಿಗ್ಮೆಂಟೇಷನ್‌ಗೆ ಲೇಸರ್‌ ಚಿಕಿತ್ಸೆ ಪಡೆದರೆ ಜೀವನಪರ್ಯಂತ ಮುಂದುವರಿಸಬೇಕಾದೀತು.

*ಹೇರ್‌ ಕೇರ್‌ ಹೆಸರಿನಲ್ಲಿಯೂ ಹತ್ತಾರು ಉತ್ಪನ್ನಗಳ ಬಳಕೆಯೂ ಜೋರಾಗಿದೆ. ಇವು ಚರ್ಮಕ್ಕೆ ಅಪಾಯಕಾರಿ ಅಲ್ಲವೇ?
ಹೌದು. ಕೂದಲ ರಕ್ಷಣೆಗೆ ಬಳಸುವ ಉತ್ಪನ್ನಗಳಿಗಿಂತಲೂ ಅಂದಗೊಳಿಸಲು ಬಳಸುವ ಉತ್ಪನ್ನಗಳು ಚರ್ಮಕ್ಕೆ ಅಪಾಯಕಾರಿ. ಕೂದಲಿಗೆ ಬಣ್ಣ ಹಚ್ಚುವಾಗ ಮತ್ತು ತೆಗೆಯುವಾಗ ಹಣೆಗೆ ಪೆಟ್ರೋಲಿಯಂ ಜೆಲ್‌ ಅಥವಾ ಹರಳೆಣ್ಣೆ (ಕ್ಯಾಸ್ಟರ್‌ ಆಯಿಲ್‌) ಹಚ್ಚಿಕೊಳ್ಳಿ. ಇದರಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. 

ಬೆಂಗಳೂರಿನಲ್ಲಿ ಪುರುಷರಿಗೆ ಪಿಗ್ಮೆಂಟೇಷನ್‌ ಹೆಚ್ಚು
ಪರವೂರಿನಿಂದ ಬಂದವರಿಗೆ ಬೆಂಗಳೂರಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಕೂದಲು ಉದುರುವ ಸಮಸ್ಯೆ. ಇಲ್ಲಿನ ಗಡಸು ನೀರು ಇದಕ್ಕೆ ಕಾರಣ. ಚರ್ಮದ ವಿಭಾಗದಲ್ಲಿ ಮೊಡವೆ ಮತ್ತು ಗುಳ್ಳೆಗಳು ಅತ್ಯಧಿಕ ಪ್ರಮಾಣದಲ್ಲಿ ಕಾಡುತ್ತಿರುವ ಸಮಸ್ಯೆ. ಒತ್ತಡದ ಬದುಕು, ಮಲಿನವಾದ ವಾತಾವರಣ, ಅವೈಜ್ಞಾನಿಕ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಕಾರಣ.

ನಿಮಗೆ ಗೊತ್ತಾ?
ಬೆಂಗಳೂರಿನಲ್ಲಿ ಮಹಿಳೆಯರಿಗಿಂತಲೂ ಪುರುಷರು ಪಿಗ್ಮೆಂಟೇಷನ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹಣೆಯ ಎರಡೂ ಭಾಗದಲ್ಲಿ ಮತ್ತು ಕೆನ್ನೆಯ ಅರ್ಧ ಭಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು ಹೆಚ್ಚುತ್ತಿದೆ.  ಬೈಕ್‌ನಲ್ಲಿ ಓಡಾಡುವಾಗ ಚರ್ಮ ಎಲ್ಲಾ ಬಗೆಯ ವಾತಾವರಣಕ್ಕೆ ತೆರೆದುಕೊಳ್ಳುತ್ತದೆ. ಸನ್‌ಸ್ಕ್ರೀನ್‌ ಲೋಷನ್‌ ಬಳಸಲೂ ಅಸಡ್ಡೆ ಮಾಡುತ್ತಾರೆ. ಇದರಿಂದಾಗಿ ಚರ್ಮ ವಿಕಾರಗೊಂಡು ಪಿಗ್ಮೆಂಟೇಷನ್‌ ಕಾಡುತ್ತದೆ. 

*

–ಕಾಸ್ಮೊಡರ್ಮ ಸ್ಕಿನ್‌ ಆ್ಯಂಡ್‌ ಹೇರ್ ಕ್ಲಿನಿಕ್ಸ್‌ನ ಡಾ.ಚೈತ್ರಾ ವಿ.ಅನಂದ್‌ 
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !