ಶನಿವಾರ, ಜೂನ್ 19, 2021
28 °C

ಬೆಕ್ಕು | ಕಥೆಗಾರ ಎಚ್.ಆರ್. ರಮೇಶ

ಎಚ್.ಆರ್. ರಮೇಶ Updated:

ಅಕ್ಷರ ಗಾತ್ರ : | |

Prajavani

ಅದು ತನ್ನ ಮುಂಗಾಲಿನ ಎಡ ಪಾದದಿಂದ ಮುಖ ಒರೆಸಿಕೊಳ್ಳುತ್ತಿದೆ. ಅದು ಹಾಗೆ ಮಾಡುವುದನ್ನು ಕಂಡ ಆಕೆ ಯಾರ ಬತ್ತಾರಪ್ಪ ಇವೊತ್ತು ನೆಂಟರು ಇವೊತ್ತು ಬೆಕ್ಕು ಹಿಂಗೆ ಮುಖ ತೊಳೆಯುತ್ತಿದೆ ಅಂದಳು. ಪಕ್ಕದ ನಡು ಕೋಣೆಯಲ್ಲಿ ನವಣೆಯನ್ನು ಒನಕೆಯಲ್ಲಿ ಕುಟ್ಟುತ್ತಿರುವ ಸದ್ದು ಲಯಬದ್ಧವಾಗಿ ಕೇಳುತ್ತಿದೆ. ತೌಡು ಕುಟ್ಟುವವರ ಮುಖಕ್ಕೆಲ್ಲ ಅಡರಿಕೊಂಡು ಅಷ್ಟೇ ಅಲ್ಲದೆ ಅವರು ತಲೆಗೆ ಹೊದ್ದು ಕೊಂಡಿರುವ ಸೆರಗಿನ ಮೇಲೂ ಬಿದ್ದಿದೆ. ನೊಣಗಳು ಅಲ್ಲೇ ಸುತ್ತುವರಿಯುತ್ತ ಹಾರಾಡುತ್ತಿವೆ. ಒಲೆಯ ಮುಂಭಾಗದ ಮೂಲೆಯಲ್ಲಿ ಮುಖ ಒರೆಸಿಕೊಳ್ಳುತ್ತಿದ್ದ ಬೆಕ್ಕು ನಡುಮನೆಯ ಪಕ್ಕದ ಕೋಣೆಯ ಒಳಗಡೆ ಹೋಯಿತು. ಕಪ್ಪು ಬಣ್ಣದ ಆ ಬೆಕ್ಕು. ಇಡೀ ಮೈಯಿ ಕಪ್ಪಾಗಿದ್ದರೂ ಅದರ ತಲೆ ಮುಖ ಬೇರೆ ಬಣ್ಣ. ಎಡಭಾಗ ನಶೆ. ಬಲಭಾಗ ಅಚ್ಚ ಬಿಳಿ.

‘ಲೇ ಅದುನ್ನ ನೆಲುವಿನ ಮೇಲೆ ಇಟ್ಟಿದಿಯೇನೆ’ ಎನ್ನುವ ಮಾತು ಕೇಳಿಬಂತು.

‘ಅದ್ನಟ್ಕಂಡು ಇನ್ನ ಪೂಜೆ ಮಾಡ್ರಮ್ಮ. ಸ್ವಾಡ್ಕಿಗೆ ಬೆರಿಸಿದ್ದರೆ ಎಂಥ ಕಮ್ಮಗಿರ್ತಿತ್ತು ರೊಟ್ಟಿ, ಜೊತೆಗೆ ಅಮ್ತೀನಿ’ ಅಂದಿತು ಒಂದು ಗಂಡಸಿನ ಧ್ವನಿ.

ಅದು ಅವನ ಹಂಡತಿದು. ಸೋಲಿನ ಮೇಲಿದ್ದ ಕುಡಿಕೆ ಬಿದ್ದು ಹೊಡೆದ ಸದ್ದಾಯಿತು.

ಮುಂಡಾ ಮೋಚ್ತು. ನಮ್ಮಾತೆಲ್ಲಿ ಕೇಳ್ತೀರಾ, ಭಯವಿಲ್ಲದಂಗೆ ಕುಂತವ್ರೆ. ನಮ್ಮ ಮನೆಯಾಗೆ ಹೆಂಗಸ್ರು ಅಂದಿತು ಅದೇ ಗಂಡಸಿನ ಧ್ವನಿ.

ಅಡುಗೆ ಕೋಣೆಯಿಂದ ಹೊಗೆ ನಡುಮನೆಗೆ ಆವರಿಸಿಕೊಂಡು ಅಷ್ಟೇ ಅಲ್ಲದೆ ಇಡೀ ಮನೆಗೆ ಆವರಿಸಿತು. ಬೆಕ್ಕು ತನ್ನ ಮೈಮೇಲೆ ಹಿಟ್ಟನ್ನು ಚೆಲ್ಲಿಕೊಂಡಿದ್ದರಿಂದ ಬೂದಿ, ವಿಭೂತಿ ಬಳಿದುಕೊಂಡ ನಾಗಾ ಸಾಧುಗಳ ಥರ ಕಾಣುತ್ತಿತ್ತು. ಹಿಟ್ಟಿನ ಅದರ ಹೆಜ್ಜೆಗಳು ನಡುಮನೆಯಲ್ಲಿ ಮೂಡಿ, ಹೊರಗಿನ ಅಂಗಳಕ್ಕೆ ಹರಿದುಕೊಂಡು ಹೋದವು. ಅದು ಹೊರಗಡೆ ಹೋಗಿ, ಅಲ್ಲಿಂದ ಗೋಡೆಯನ್ನು ಹಾರಿ ಮಾಳಿಗೆ ಮೇಲಕ್ಕೆ ಹೋಯಿತು. ಅದರ ಪಕ್ಕದಲ್ಲಿದ್ದ ಗವಾಕ್ಷಿಯಿಂದ ಹೊಗೆ ಆಕಾಶದ ಕಡೆ ಪ್ರಯಾಣ ಬೆಳೆಸುತ್ತಿತ್ತು. ಅದನ್ನೇ ನೋಡುತ್ತ ಒಂದು ಬದಿಯ ದೇಹವನ್ನು ಮಾಳಿಗೆಯ ನೆಲಕ್ಕೆ ಚೆಲ್ಲಿಕೊಂಡು ತನ್ನ ಕಾಲುಗಳನ್ನು ಮಡಿಚಿಕೊಂಡು ಅದನ್ನೇ ನೋಡತೊಡಗಿತು ಬೂದು ಬೆಕ್ಕು ಅಥವಾ ಅದನ್ನೇ ನೋಡುತ್ತಿತ್ತೋ ಬೇರೆ ಏನನ್ನೋ, ಆದರೆ ಕಾಣುತ್ತಿದ್ದುದು ಮಾತ್ರ ಅದನ್ನೇ ನೋಡುತ್ತಿದೆಯೇನೋ ಎನ್ನುವಂತೆ.

ಮಾಳಿಗೆ ಮನೆಗಳು ಒಂದಕ್ಕೊಂದು ಒತ್ತಿಕೊಂಡು ಕಟ್ಟಲ್ಪಟ್ಟಿರುವುದರಿಂದ ಸರಾಗವಾಗಿ ಒಂದು ಮನೆಯ ಮಾಳಿಗೆಯಿಂದ ಮತ್ತೊಂದು ಮಾಳಿಗೆಗೆ ಹೋಗಬಹುದಿತ್ತು. ಯುಗಾದಿಯ ಬೇಸಿಗೆಯಲ್ಲಿ ಸೊಂಡಿಗೆಯನ್ನು ಹೊಯ್ಯುವಾಗ ದೊಡ್ಡವರು, ಚಿಕ್ಕ ಚಿಕ್ಕ ಮಕ್ಕಳು ಒಂದು ಮಾಳಿಗೆಯಿಂದ ಮತ್ತೊಂದು ಮಾಳಿಗೆಗೆ ಹೋಗುವ ಆಟವನ್ನು ಆಡುತ್ತಿದ್ದುದು ಅವರಿಗೆ ಬಲು ಸೋಜಿಗದ, ಮಜದ ಸಂಗತಿಯಂತೆ ಇತ್ತು. ಮಾಳಿಗೆಯ ಹಾಸು ಆಕಾಶದಲ್ಲಿ ಅಂಗಳವಾಗಿದೆ. ಆಕಳಿಸಿತು ಅದು. ಸುತ್ತ ಒಮ್ಮೆ ನೋಡಿತು. ಗವಾಕ್ಷಿಯಿಂದ ಏಳುತ್ತಿದ್ದ ಹೊಗೆ ಕಡಿಮೆಯಾಗುತ್ತಿತ್ತು. ನಿನ್ನೆ ಇದೇ ಹೊತ್ತಿಗೆ ಅದು ಪಕ್ಕದ ತಾಡಜ್ಜನರ ಮನೆಯ ಮಾಳಿಗೆ ಮೇಲೆ ಕುಳಿತಿತ್ತು. ಹಿಂಭಾಗದ ಮೊಣಕಾಲುಗಳನ್ನು ಮಡಚಿ ತೊಡೆಗಳನ್ನು ಎತ್ತಿ ಮುಂಗಾಲುಗಳನ್ನು ತುಸು ಬಾಚಿ ಅವುಗಳ ಮೇಲೆ ತನ್ನ ತಲೆಯನ್ನು ಇಟ್ಟು ಬಿಟ್ಟಗಣ್ಣ ಬಿಡದಂತೆ ಒಂದೇ ಸಮ ಮನೆಗಳಿಗೆ ಒತ್ತಿಕೊಂಡಿರುವ ಸಿರಿಯಜ್ಜನರ ಹೊಲದ ಕಡೆ ನೋಡ್ತಾ ಇತ್ತು. ಸಿರಿಯಜ್ಜನರ ಹೊಲ ಮತ್ತು ಕೊತ್ಲಪ್ಪರ ಹೊಲದ ಬದುವಿನಲ್ಲಿದ್ದ ಹುಲಿಹಣ್ಣಿನ ಬೇಲಿಯ ಪಳೆ. ಅದರಲ್ಲಿ ಇಲಿಯೊಂದು ಬಿಲದಿಂದ ಹೊರಬಂದು ಅತ್ತಿತ್ತ ನೋಡುತ್ತ ಮತ್ತೆ ವಾಪಾಸ್ಸು ಬಿಲದೊಳಗೆ ಸೇರಿಕೊಳ್ಳುತ್ತಿತ್ತು. ಹೀಗೆ ಸುಮಾರು ಸಲ ಮಾಡುತ್ತಿದೆ. ನೋಡುತ್ತ ಕುಳಿತಿದ್ದ ಅದು ಮೆಲ್ಲನೆ ತನ್ನ ದೇಹವನ್ನು ಮೇಲಕ್ಕೆ ಎತ್ತಿಕೊಂಡು ಬಾಲ ನಿಗುರಿಸಿಕೊಂಡು ಎದ್ದಿತು. ಎದ್ದು, ನಿಧಾನ ಹೆಜ್ಜೆ ಹಾಕುತ್ತ ಹಿತ್ತಲಗೋಡೆಗುಂಟ ಹೆಜ್ಜೆ ಹಾಕುತ್ತ ಇಳಿಯಿತು. ಇಳಿದು ಕಣ್ಣು ಬಿಟ್ಟು ಕಣ್ಣ ತೆರೆಯುವುದರೊಳಗೆ ಹಾರಿಯೇ ಬಿಟ್ಟಿತು. ಅಷ್ಟೇ; ಅಷ್ಟರಲ್ಲಿ ಇಲಿಯ ಸದ್ದು ಕೀಕೀ ಎಂದು ಸುಮ್ಮನಾಯಿತು. ಒಂದು ಮಿಡತೆ ಹಸಿರು ಹಳದಿ ಪಟ್ಟೆಯದ್ದು. ಬಂದು ಹೊಗೆಯ ತೂರಿಕೊಂಡು ಇದರ ಮುಂದೆ ಕೂತಿತು. ಇದು ಸುಮ್ಮನೆ ಕೂತಿದೆ. ಅದು ಅದರ ಬಾಯಿಯ ಬಳಿ ಹಾರಿ ಹೋಗಿ ಕೂತಿತು. ತಕ್ಷಣಕ್ಕೆ ಬಾಯಿಯನ್ನು ಮುಂದಕ್ಕೆ ಚಾಚಿ ಕಚ್ಚಿತು. ಆದರೆ ಮಿಡತೆ ಹಾರಿ ಮತ್ತೊಂದು ಕಡೆ ಕುಳಿತುಕೊಂಡಿತು. ಬೆಕ್ಕಿನ ಬಾಯಿಗೆ ಮಾಳಿಗೆಯ ಮೇಲೆ ಹಾಕಲಾಗಿದ್ದ ಕರಲು ಮಣ್ಣು ಮೆತ್ತಿಕೊಂಡಿತು. ಬೆಕ್ಕಿನ ಬಾಯಿಗೆ ಮಣ್ಣು ಮೆತ್ತಿಕೊಂಡಿತ್ತಲ್ಲ ಅದನ್ನು ತನ್ನ ಮುಂಗಾಲ ಪಾದಗಳಿಂದ ಒರೆಸಿಕೊಂಡಿತು. ನಂತರ ಐದೇ ನಿಮಿಷದಲ್ಲಿ ಒಂದು ರೀತಿಯ ವಿಲಕ್ಷಣ ಸದ್ದನ್ನು ಮಾಡಿಕೊಂಡು ಆಕಾಶದಲ್ಲಿ ಸಹಸ್ರಾರು ಸಂಖ್ಯೆಯ ಮಿಡತೆಗಳ ಸಮೂಹವೇ ಹಾರಿಕೊಂಡು ಹೋದವು. ಬೆಕ್ಕು ಅವುಗಳನ್ನು ತನ್ನ ಕತ್ತನ್ನು ಎತ್ತಿಕೊಂಡು ನೋಡಿ ಮೇಲಕ್ಕೆ ಹಾರಿತು. ಆದರೆ, ಇದಕ್ಕೆ ಒಂದು ಮಿಡತೆಯೂ ಸಿಗಲಿಲ್ಲ. ಅವುಗಳು ಇದರ ನೆತ್ತಿಯ ಮೇಲೆ ಹಾರಿ ಹೋಗುತ್ತಿದ್ದುದನ್ನು ಬೆಪ್ಪಾಗಿ ನೋಡತೊಡಗಿತು. ಅಷ್ಟೊಂದು ಸಹಸ್ರ ಸಂಖ್ಯೆಗಳಲ್ಲಿ ಅವು ಹಾಗೆ ಕನಸಿನಲ್ಲೆಂಬಂತೆ ಅದರ ತಲೆಯ ಮೇಲೆ ಹಾರಿ ಹೋದರೂ ಒಂದು ಮಿಡತೆಯೂ ಅದರ ಕೈಗೆ ಸಿಗಲಿಲ್ಲ. ಎದ್ದು ನಿಂತಿತು. ಮತ್ತೆ ನೋಡಿತು. ಅವು ಬಲೆ ಥರ, ಅಲೆ ಥರ ಮೇಲಕ್ಕೆ ಕೆಳಕ್ಕೆ ಹೊಯ್ದಾಡುತ್ತಾ ಮುಂದೆ ಮುಂದೆ ಸಾಗಿ ಮರೆಯಾದವು. ಇದು ಎದ್ದು ನಿಧಾನ ಹೆಜ್ಜೆ ಇಡತೊಡಗಿತು. ಕೆಳಗಡೆ ಇಳಿಯಿತು. ಓಣಿಯಲ್ಲಿ ಹಾದು ಹೋಯಿತು. ಎದುರಿನ ಶಿವನ ಗುಡಿಯ ಪಕ್ಕದ ರಸ್ತೆಯನ್ನು ದಾಟಿ ಜಿಂಕಣ್ಣರ ಮನೆಯ ಕಡೆ ಹೋಗಿ ಅವರ ಮನೆಯ ಕಡೆ ನಿಧಾನ ಹೆಜ್ಜೆ ಇಟ್ಟಿತು. ಮಿಯಾಂ.. ಮಿಯಾಂ ಎಂದು ಕೂಗಲಿಲ್ಲ. ಇಲ್ಲಿಗೆ ಬರುವಷ್ಟರಲ್ಲಿ ಆಗಲೇ ಕಂದು ಬಣ್ಣವಾಗಿದೆ. ಕಿಟಕಿಯ ಕಂಬಿಯ ನಡುವೆ ನಿಂತು ಕ್ಷಣ ನೋಡಿತು. ಯಾರೂ ಕಾಣಲಿಲ್ಲ. ನೇರ ಒಂದು ಪಾತ್ರೆಯನ್ನು ಮೂಗಿನಿಂತ ಮುಟ್ಟಿತು. ಚುರ್ರೆಂದು ತಕ್ಷಣಕ್ಕೆ ಹಿಂದಕ್ಕೆ ಹಾರಿತು. ನಂತರ ಅದರ ಮೇಲೆ ಹಾರಿತು. ಆಗ ಅದರೊಳಗಡೆ ಇದ್ದ ಹಾಲು ಗಾರೆ ನೆಲದ ಮೇಲೆ ಚೆಲ್ಲಿತು. ಚೆಲ್ಲಿರುವ ಹಾಲನ್ನು ಕಣ್ಣು ಮುಚ್ಚಿಕೊಂಡು ನೆಕ್ಕುತ್ತಿದೆ. ಲೊಚ... ಲೊಚ.. ಈಗ ಏನ್ಮಾಡೋದು, ಮಂಥನದ ಮರ್ಯಾದೆ ಕಳ್ದಲ್ಲೆ, ನಮ್ಮರ್ಗೇನು ಬರವಾಗಿತ್ತೇನೆ, ಕುಲಕ್ಕೆ ಇಟ್ಟ್ಬಿಟ್ಟೆಲ್ಲೆ ಕೊಳ್ಳಿನಾ, ಹೋಗಿ ಹೋಗಿ ಆ ಹಟ್ಟಿಗಳನ್ನ್ಯಾವನೋ ಬೇಕಿತ್ತೇ? ಕೊನಿಗೆ ನಮ್ಮನ್ಯಾರಾದ್ರು ಆಗಿದ್ರೆ ಅವ್ನಕೈಯಿಂದ್ಲೇ ತಾಳಿ ಕಟ್ಟಿಸ್ತಿದ್ದೆ, ಸಿವ ಸಿವ ಇನ್ನ ಈ ಎರಡು ಕಣ್ಣಾಗೆ ಇನ್‌ ಏನೇನು ನೋಡಬೇಕಪ್ಪ! ಹೆಂಗಪ್ಪ ಮುಖ ತೋರ್ಸಾದು ಎಂದು ಬಿಳಿಯ ಕುದುರೆಯ ಮೆಲೆ ಕುಳಿತಿರುವ ಬಸವಣ್ಣನ ಫೋಟೋವನ್ನು ನೋಡುತ್ತ ಅಂದು, ಹೀಗೇನ್ಮಾಡದು ಅಂದಳು. ನಡುಮನೆಯ ಕೋಣೆಯಲ್ಲಿ. ಈಗ ಏನ್ಮಾಡನಾ ಸಿವ ಸಿವ, ದೊಡ್ಡವಳೇ ಹೀಗಾದ್ರೆ ಇನ್ನ ಸಣ್ಣವಳು ಇವಳ ದಾರೀನೇ ತುಳತಾಳೇನಪ್ಪ ಸಿವ.

ನಾವು ಊರು ಬಿಟ್ಟು ಹೋಗೋನ, ಮರ್ಯಾದೆ ಇಲ್ಲದ ಮೇಲೆ ಈ ಊರಲ್ಲಿ ಇದ್ರೆಷ್ಟು ಬಿಟ್ರೆಷ್ಟು.

ಇಲ್ನೋಡವ್ವ ಅವ್ನೂ ಎಲ್ಲರಂಗೆ ಮನುಸ್ನೇ, ನಮ್ಮೋರಿಗಿಂತ ಒಳ್ಳೋನು, ಎಷ್ಟೊಂದು ಓದಿಕೊಂಡವ್ನೆ, ಜಾತಿ ನೋಡಿ ಪ್ರೀತ್ಸಕಾಗುತ್ತಾ ಅಷ್ಟಕ್ಕೂ ಆ ಐಯ್ಯನೋರು ನನಗೆ ಕಂಕಣ ಭಾಗ್ಯನೇ ಇಲ್ಲ ಆರು ವರ್ಷ ಅಂಥ ಹೇಳವ್ರಲ್ಲ, ಬಿಡು ನನ್ನ ಕಂಕಣಭಾಗ್ಯನ ನಾನೇ ಮಾಡಿಕಂತೀನಿ. ಅವಯ್ಯ ಹೇಳ್ತಾನೆ ಕಾಮರಾಯನ ಬೆತ್ತಲೆ ಶಿಲೆಗೆ ರಾತ್ರಿ ಹನ್ನೆರಡು ಗಂಟೆಗೆ ಬರೆ ಬೆತ್ಲಗೆ ಹೋಗಿ ಗಂಗಾ ದೇವತೆ ಪೂಜೆ ಮಾಡಿ ಆ ಶಿಲೆನ ಅಪ್ಕೋಬೇಕಂತೆ. ಅದೂ ಐದು ಧನುರ್ಮಾಸ. ಐದು ವರ್ಷ. ಆರನೇ ವರ್ಷಕ್ಕೆ ಕಂಕಣಭಾಗ್ಯ. ಆಗ ಬಂದ ವರನ ಒಪ್ಪಿಕೋ ಬೇಕಂತೆ, ಇಲ್ಲಂದೆ ಮತ್ತೆ ಮುಂದಕ್ಕೆ ಆರು ವರ್ಷ ಕಂಕಣಭಾಗ್ಯ ಇಲ್ಲ, ಅಷ್ಟೊತ್ತಿಗೆ ನನ್ನ ಅರ್ಧ ಆಯಸ್ಸೇ ಮುಗಿದಿರುತ್ತೆ. ಅಷ್ಟುಕ್ಕೂ ನಾನು ಅವುನು ಸಣ್ಣಾಗಿಂದಾನೆ ಜೊತೆಗೆ ಓದಿವಿ. ಒಬ್ಬಿರಿಗೊಬ್ಬರು ಇಷ್ಟಾನು ಪಟ್ಟೀವಿ ಈಗ. ಈಗೆ ಇಬ್ಬರು ಮದುವೆ ಆದ್ರೆ ತಪ್ಪೇನು.

ನಿನ್ನ ಪುರಾಣ ಕಂತೆ ಏನು ಬೇಡ ಮುಚ್ಚೆ ಬಾಯಿ, ಹಲ್ಲು ಉದಿರಿಸೇನು ಆಮೇಲೆ, ಯಾರ್ದಾನ ಭಯ ಐತೇನೆ ನಿನಗೆ, ಲೌಡಿ ಮುಂಡೆ ಎಷ್ಟು ಮುಂದುವರೆದಿದಿಯಾ ನೀನು? ಸ್ವಾಟಿಗೆ ಕುಳ ಕಾಯ್ಸಿ ಇಡುತೀನಿ ನೋಡು ಮುಂದಕ್ಕೆ ಮಾತಾಡಿದ್ರೆ.

ಬೆಕ್ಕು ಹಾಲು ಕುಡಿತು, ಹಾಲಿನ ಥರನೇ ಹೊಳೆಯುತ್ತಿದೆ ಬೆಳ್ಳಗೆ. ಅದು ತನ್ನ ಮೀಸೆಯನ್ನು ಹಾಲಲ್ಲಿ ಒದ್ದೆಮಾಡಿಕೊಂಡಿದೆ. ಅದರ ಕಾಲುಗಳೂ ಹಾಲಲ್ಲಿ ಒದ್ದೆಯಾಗಿವೆ. ಹಾಲಿನ ಒದ್ದೆಕಾಲುಗಳನ್ನು ಮೆಲ್ಲಗೆ ಇಟ್ಟಿತು. ಇಡುತ್ತ ಕಂಬವನ್ನು ಹಿಡಿದು ಮೇಲಕ್ಕೆ ಅಡರಿತು. ಅಲ್ಲಿಂದ ಅಡ್ಡಗೋಡೆಯ ಮೇಲೆ ಕೂತಿತು. ಅದು ಹಾಗೆ ಹೋಗುವಾಗ ಅದರ ಹಿಂದೆ ಹಾಲಿನ ಬಿಳಿ ಪಾದದ ಗುರುತುಗಳು ಮೂಡಿದವು. ಅಲ್ಲಿ ಕೂತು ಸ್ವಲ್ಪ ಹೊತ್ತು ಕುಳಿತು ವಿರಮಿಸಿಕೊಂಡು ಮತ್ತೆ ಪಕ್ಕದ ಕಿಟಕಿಗೆ ತನ್ನ ಹೆಜ್ಜೆಯ ಗುರುತುಗಳನ್ನು ಮೂಡಿಸಿ ಬಯಲಿಗೆ ಹೋಯಿತು. ಬಿಳಿಯ ಬೆಕ್ಕು ಬಯಲಲ್ಲಿ. ಸೀದಾ ಹಟ್ಟಿಯ ಮಾರಕ್ಕನ ಗುಡಿಯ ಹತ್ತಿರ ಬಂತು. ಪಕ್ಕದಲ್ಲಿ ಕಲ್ಲಿನ ಕಟ್ಟೆ. ಅದರ ಮೇಲೆ ಒಂದು ಕಲ್ಲಿನ ಬಾನೆ. ಅದರಲ್ಲಿ ನೀರು. ಬಗ್ಗಿ ನೀರು ಕುಡಿಯಿತು. ಮಾರಕ್ಕನ ಗುಡಿ ಎಲ್ಲ ಗುಡಿಗಳಂತಿಲ್ಲ. ಗದ್ದಿಗೆಯ ಆಕಾರದಲ್ಲಿರುವ ಎತ್ತರದ ಸಮತಟ್ಟಾದ ಕಲ್ಲು ಮಣ್ಣಿನ ದಿಬ್ಬ. ಅದರ ಮಧ್ಯೆ ಒಂದು ಕಪ್ಪನೆ ಶಿಲೆ. ಅದರ ಮುಂದೆ ಒಂದು ಮಣ್ಣಿನ ದೊಡ್ಡ ದೀಪ. ಉರಿಯುತ್ತಿದೆ. ಅದರ ಬಳಿ ಹೋಯಿತು. ಆ ಬೆಳಕಿಗೆ ಬಂಗಾರದ ಬಣ್ಣದಂತೆ ಹೊಳೆಯುತ್ತಿದೆ ಅದು. ಬೆಳಕಿನ ಪ್ರಭೆಗೆ ಮಿನುಗುತ್ತಿದೆ. ಆ ಕತ್ತಲಲ್ಲೂ ಅಲ್ಲೇ ಮೂಲೆಯಲ್ಲೆಲ್ಲೋ ಬಿದ್ದಿದ್ದ ಒಂದು ಒಣ ಮೂಳೆ ಇದನ್ನು ನೋಡಿ ನಕ್ಕಿತು. ಇದು ಅದರ ಕಡೆ ಒಂದು ದಿವ್ಯ ನಿರ್ಲಕ್ಷ್ಯವನ್ನು ತೋರಿ ಹಾಪನ್ನು ಹೊದ್ದುಕೊಂಡಿರುವ ಗುಡಿಸಿಲಿನ ಕಡೆ ನೋಡಿತು. ಸಂದುಗೊಂದುಗಳಲ್ಲಿ ಅಕ್ಕಿಕಾಳಿನಷ್ಟು ಬೆಳಕಿನ ಅಲೆಗಳು ಬಂದು ಕತ್ತಲ ತೀರದಲ್ಲಿ ಕರಗುತ್ತಿದ್ದವು.ಎರಡು ಅಂಕಣದ ಗುಡಿಸಲು ಅದು. ಅಲ್ಲಿದ್ದವೆಲ್ಲ ಸರಿಸುಮಾರು ಅಷ್ಟೇ ಪ್ರಮಾಣದವು. ಕೆಲವು ತೆಂಗಿನ ಗರಿಯವು. ಕೆಲವು ಹಾಪಿನವು. ಕೆಲವು ಬಾದೆ ಹುಲ್ಲಿನವು. ಒಲೆಯಲ್ಲಿ ಆಗಷ್ಟೇ ಬೆಂಕಿ ನಂದಿತ್ತು. ಹೊಗೆಯ ಕೊನೆಯ ಸುರುಳಿ ಬೆಂಕಿಯ ಕಿಡಗಳ ಜೊತೆ ಕಣ್ಣಮುಚ್ಚಾಲೆ ಆಡುತ್ತಿತ್ತು. ಇದು ಬಂದದ್ದನ್ನು ಒಳಗಡೆ ಇದ್ದವರು ಗಮನಿಸಿದಂತೆ ಕಾಣಲಿಲ್ಲ. ಮಿಯಾಂ ಎಂದಿತು. ಮಡಿಕೆ, ಕುಡಿಕೆ, ಸೋರೆ, ಗಡಿಗೆ, ಒಂದರ ಮೇಲೋಂದು ಪೇರಿಸಿಟ್ಟೆರುವ ಸೋರೆ ಸಾಲಿನ ಕಡೆ ಹೋಗಿ ತನ್ನ ನಾಲ್ಕೂ ಕಾಲುಗಳನ್ನು ಬಲಪಕ್ಕಕ್ಕೆ ಚಾಚಿಕೊಂಡು ಮಲಗಿತು.

ಅಮಿ ಏನ್ಮಾಡನಿವಾಗ, ಅವ್ರು ಸುಮ್ಕೆ ಬಿಡ್ತಾರಾ? ಹಟ್ಟಿ ಮಾರಮ್ಮ ಎಂಥ ಕೆಲಸ ಆಗೋಯ್ತು ಅಮ್ತೀನಿ. ಹೋಗಿ ಹೋಗಿ ಅಯ್ಯನೋರ ಹಡುಗೀನ, ಸುಮ್ಕೆ ಬಿಟ್ಟಾರಾ, ನಡಾ ಊರಾಗೆ ಸಿಗಿದು ತೋರಣ ಕಟ್ಟುತಾರೆ. ಹಟ್ಟಿನೇ ಭಸ್ಮ ಮಾಡ್ತಾರೆ. ಇವ್ನಿಂದ ಹಟ್ಟಿ ಗಂಗಳದಕೆ ಮಣ್ಣು ಬಿದ್ದಂಗೆ ಆಯಿತು.

ಅಪೋಯ್, ನೀನು ಯಾವಕಾಲ್ದಾಗಿದೀಯಾ, ಪೊಲೀಸ್ ಕಂಪ್ಲೆಂಟ್ ಕೊಡ್ತೀನಿ ಹಂಗೇನಾರು ಆದ್ರೆ.

ಕುತ್ಕಳೋ ಭಾಡ್ಕೋ. ನಮ್ಮ ಹಟ್ಟಿಗೆ ಒಳ್ಳೆ ಮರ್ಯಾದೆ ತಂದೆ. ಓದಕೆ ಕಳಿಸಿದ್ದೇ ಅಲ್ಲ. ತಲೆ ಗಿಲೆ ನೆಟ್ಟಗೆ ಐತೋ ಹೆಂಗೆ. ನೀನು ನನ್ನ ಮಗನೇ ಅಲ್ಲೆ ಈ ಕ್ಷಣನೇ ಮನೆ ಹಟ್ಟಿ ಬಿಟ್ಟು ಹೋಗು, ಮೂರು ದಿನ್ನಕ್ಕೆ ತಿಥಿ ಮಾಡ್ಕೆಮ್ತೀವಿ. ಅಲ್ಲಲೆ ಅವಳಿಗೆ ಮೂರು ತಿಂಗಳಂತೆ. ಅಲ್ಲಲೆ ನಿನಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇನ್ಲಾ? ಹ್ಞಾ! ಎಂಥ ಕೆಲಸ ಮಾಡಿದೋ?

ಅವಳ್ಣ ಮದುವೆ ಆಗ್ತಿದಿನಲ್ಲ, ಇನ್ನೇನು ಆದಂಗೆ.

ಹೀಗೆ ಹೇಳುತ್ತಿದ್ದ ಹಾಗೆ ಅವನ ಅಪ್ಪ ಎದ್ದು ಇವನ ಎದೆಗೆ ಒದ್ದ. ಅವನು ಹಾಗೆ ಒದ್ದ ರಭಸಕ್ಕೆ ಬಾಗಿಲ ಆಚೆ ಬಿದ್ದ. ಗುಡಿಸಲ ತಡಿಕೆಯ ಬಾಗಿಲು ಕಿತ್ತುಕೊಂಡು ಬಿತ್ತು.

ಬೆಕ್ಕು ಇದನ್ನು ಒಂದು ಸಲ ನೇತಾಡುತ್ತಿರುವ ಕರುಬಾಡನ್ನು ಒಂದು ಸಲ ನೋಡುತ್ತ ಕುಳಿತಿತ್ತು ಒಂದೇ ಕಣ್ಣಲ್ಲಿ. ಎದ್ದು ಆಕಳಿಸಿಕೊಂಡು ನಡೆಯಿತು.

ಸ್ವಾಮಿ ಏನ್ಮಾಡದು ನೀವೇ ಹೇಳೀ, ನೀವೆಂಗೆ ಹೇಳ್ತೀರೋ ಹಂಗೆ. ಅವನ ತಂದೆ ತಾಯಿ ಎರಡು ಕೈಗಳನ್ನು ಕಟ್ಟಿಕೊಂಡು ತಲೆಬಾಗಿಸಿ ಅಯ್ಯನೋರ ಅಂಗಳದಲ್ಲಿ ನಿಂತು ಅಂದರು. ಮತ್ತೆ ಅವನ ಹೆಂಡತಿ ಮುಂದುವರೆದು, ಅಮ್ಮಣ್ಣಿದು ಏನೂ ತಪ್ಪಿಲ್ಲ ಬಿಡಿ ಇದ್ರಗೆ ನಮ್ಮುಡುಗುಂದೆ ತಪ್ಪು ಅಂದಳು. ಇವರು ಹಿಂಗೆ ಹೊರಗೆ ಮಾತಾಡುತ್ತಿದ್ದರು.

ಒಳಗೆ..

ಅಪೋಯ್ ನೋಡಿಲ್ಲಿ ಬೆಕ್ನಾ! ಗೋಡೆ ಮೇಲೆ ನಾನು ಇಲಿ ಚಿತ್ರ ಬರ್ದಿದ್ನಲ್ಲ ಪೆಂಚಿಲ್ಲಿ, ಅದ್ನ ಬೆಕ್ಕು ಕೆರಿತೈತೆ. ಅಯ್ಯೋ ಗಣೇಶ ಸುಮ್ನೆ ಪಟದಗೆ ಕುತ್ಕಂಡಿದಿಯಲ್ಲ ಮಾರಾಯ ಎದ್ದು ಬಂದು ಆಚೆಗೆ ಅದ್ನ ಓಡ್ಸು ಎಂದಿತು ಒಂದು ಪುಟ್ಟ ಹುಡುಗಿ. ಅವಳು ಹೇಳ್ತಾ ಇದಾಳೆ. ಆದರೆ ಅವಳ ಆ ಮಾತುಗಳನ್ನು ಯಾರೂ ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ. ಅದು ಬೆಕ್ಕಿಗೂ ಕೇಳಿಸಲಿಲ್ಲ. ಹುಶ್ಶು ಹಶ್ಶು ಎಂದಳು. ಅದು ಗೋಡೆ ಕೆರೆಯುವುದನ್ನು ಬಿಟ್ಟು ಓಡಿತು. ಅಡ್ಡ ಗೋಡೆಯ ಮೇಲಕ್ಕೆ ನೆಗೆದು ಕುಳಿತುಕೊಂಡಿತು. ಋಷಿಮುನಿಗಳು ತಪಸ್ಸು ಮಾಡುವಾಗ ಕುಳಿತುಕೊಳ್ಳುವ ಭಂಗಿಯಲ್ಲಿ ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿತು. ಮಾಳಿಗೆ ಮನೆಯಾದುದ್ದರಿಂದ ಗವಾಕ್ಷಿಯಿಂದ ಸೂರ್ಯನ ಕಿರಣಗಳು ಕೋಲಿನ ಥರ ತುಸು ವಾರೆಯಾಗಿ ನಡುಮನೆಯಲ್ಲಿ ಬಿದ್ದಿತು. ಅದು ಹಾಗೆ ತಪಸ್ಸು ಮಾಡುವ ಭಂಗಿಯ ಕಂಡು ಅಲ್ಲೇ ತುಸು ಸನಿಹದಲ್ಲಿ ಹುರಿಮಂಜಿನ ಬಣ್ಣವನ್ನು ಬಳಿದಿದ್ದ ತೊಲೆಗೆ ತಲೆದಿಂಬಿನಲ್ಲಿ ಅಂಟಿಸಿದ್ದ ಬಣ್ಣದ ರಂಗೋಲಿಗಳು ಮುಸಿ ಮುಸಿ ನಗುತ್ತಿದ್ದವು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಅದು ತನ್ನ ತಪೋಭಂಗಿಯಲ್ಲಿ ಕುಳಿತುಕೊಂಡಿತ್ತು.

ನಿಮ್ಮ ಮಗುನ್ನ ಹದ್ದುಬಸ್ತಿನಲ್ಲಿ ಇಟ್ಟಿದ್ದರೆ ಇಂತ ಕುಲಗಟ್ಟ ಕೆಲಸ ಆಗುತ್ತಿತ್ತಾ? ನಡುಮನೆಯಿಂದ ಮುಂದಿನ ವರಾಂಡಕ್ಕೆ ಮಾತುಗಳು ಹರಿದುಹೋದವು.

ಅಯ್ಯನೋರೆ ನಿಮ್ಮ ಮುಂದೆ ನಿಂತು ಮಾತೋಡಕೂ ನಮಗೆ ಯೋಗ್ತಿ ಇಲ್ಲ, ಇಲ್ಲಿ ತನ್ಕ ನಮ್ಮನ್ನ ಸುಮ್ಕೆ ಬಿಟ್ಟಿರೋದು ಹೆಚ್ಚು, ಈಗಲೇ ನಮ್ಮ ಪ್ರಾಣನ ಹಾರಿಸಿ ಬಿಡ್ರಿ ಎಂದು ಅವರಿಬ್ಬರು ನೆಲದ ಮೇಲೆ ಉದ್ದಕ್ಕೆ ಬಿದ್ದರು.

ಈಗ ಅಂದ್ರೆ

ಹಟ್ಟಿ ಮಾರಮ್ಮನ ಆಣೆ ನಮಗೆ ಏನೂ ಗೊತ್ತಿಲ್ಲ, ಏನೇನೋ ಓದ್ಕೆಂಡವ್ನಂತೆ, ಅವ್ನು ಮಾತೋಡೋದು ನಮಗೊಂದಿಷ್ಟು ಅರ್ಥ ಆಗಲ್ಲ. ಇವನಿಂದಾಗಿ ಹಟ್ಟೆಗೆ, ಊರಾಗೆ ತಲೆ ಎತ್ತಂಗಿಲ್ಲ, ನಮ್ಮುನ್ನ ಗುಡಿ ಮುಂದೆ ನೇಣಾಕ್ರಿ, ಎಲ್ಲ ಮುಗೀತು. ಇಲ್ಲಿಗೆ.

ಐಯ್ಯನೋರ ಹೆಂಡತಿ ವಿಭೂತಿ ಕಟ್ಟನ್ನು ಹಣೆಗೆ ಇಟ್ಟುಕೊಂಡು ನಡುವೆ ನಾಕಾಣೆಯಷ್ಟಗಲದ ಕುಂಕುವನ್ನು ಇಟ್ಟುಕೊಂಡು, ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡು ಸಿವ ಸಿವ ನನ್ನ ಮಗಳ ಬಾಳ್ನ ಹಾಳು ಮಾಡಿದ್ರಲ್ಲೋ, ಎಷ್ಟು ದಿನದಿಂದ ಕಾತ್ಕಂಡಿದ್ರಿ ಹಿಂಗ್ಮಾಡಕೆ ಅಂದಳು. ಕಣ್ಣಲ್ಲಿ ಪಳಪಳ ನೀರು ಉದುರಿದವು.

ಬೆಕ್ಕು ಕಣ್ಣು ಬಿಟ್ಟು ಮತ್ತೆ ಮುಚ್ಚಿತು. ತೊಲೆಗಂಟಿದರುವ ಬಣ್ಣದ ರಂಗೋಲಿಗಳ ಅನೂಹ್ಯ ತಿರುವಿನ ರೇಖೆಗಳು ಕಿಲಕಲ ಎಂದು ಸುಮ್ಮನಾದವು. ಅದು ತನ್ನ ತಲೆ ಎತ್ತಿ ಎಡಗಣ್ಣನ್ನು ತೆರೆದು ಮತ್ತೆ ರಪ್ಪಂಥ ಮುಚ್ಚಿತು.

ಇಲ್ಲೋಡಪ್ಪ ನೀನು ಎಷ್ಟೇ ಅಂದರೂ ಅಷ್ಟೆ ಎನ್ನುವ ಮಾತುಗಳು ನಡುಮನೆಯ ಕೋಣೆಯೊಂದರಿಂದ ನಡುಮನೆಯ ಮೂಲಕ ಹಾದು ಹೊರಗಿನ ವರಂಡಕ್ಕೆ ಹೋದವು. ಇಲ್ಲೋಡವ್ವ, ಇಲ್ಲೋಡಪ್ಪ ನೀವು ಏನೇ ಅಂದರು ಅಷ್ಟೆಯಾ ಈ ಕೂಸ್ನ ತಂದೆ ಅವನೆಯ. ಇದಕ್ಕೆ ನಾನೇ ಕಾರಣ. ನಾನೇ ಹೇಳಿದ್ದು ಮಗು ಮಾಡ್ಕಣನ ಅಂತ. ಇದೆಲ್ಲ ಮಾತಾಡ್ಕಂಡ ಆಗಿರೋದು. ನನಗೆ ಅವರು ಇಷ್ಟ. ಎನ್ನುವ ಮಾತು ಇನ್ನೂ ಮುಗಿದಿರಲಿಲ್ಲ ಅಷ್ಟೊತ್ತಿಗೆ ಇವಳ ಅಪ್ಪ ಏನೆ ದೊಡ್ಡ ಅಮುಲ್ದಾರ ಅವುನು, ಅವರು ಆಗಲೆ ನಿನಗೆ ಅವುನು, ಬಾಯಿಗೆ ಬರೆ ಇಟ್ಟೇನು, ನಿನ್ನಂತವುಳು ಇದ್ದರೆಷ್ಟು ಸತ್ರೆಷ್ಟು ಎಂದ.

ಬುದ್ಧಿ ಅಂಗ್ಮಾತಡ್ಬೀಡಿ

ಹಟ್ಟೆರೆಲ್ಲ ನಮಿಗೆ ಬುದ್ದಿ ಹೇಳಂಗಾದ್ರು, ಕುಲನು ಕೆಡಿಸಿದ್ದಲ್ಲದೆ ಈಗ ಮತ್ತೆ..

ಅಮ್ಮೋರೆ ಹೆಣ್ಣಾಗಿ ಹೇಳಬಾರ್ದು, ಇಕ ತಕಳಿ ಎಂದು ತನ್ನ ಸೀರೆಯ ಅಂಚಿನಲ್ಲಿ ಕಟ್ಟಿದ್ದ ಪೊಟ್ಟಣವೊಂನ್ನು ಬಿಚ್ಚಿ ಮುಂದಿದ್ದ ಹಾಸು ಕಲ್ಲ ಮೇಲೆ ಇಟ್ಟು, ಇದ್ನ ಕೊಡಿ ಗೊತ್ತಾಗ್ದಂಗೆ ಹುಣ್ಣಿಮಕರಗಿ ಅಮಾಸೆ ಬರೋದ್ರೊಳಗೆ. ನಾವು ಹಟ್ಟಿ ಬಿಟ್ಟು ಹೋಗ್ತೀವಿ, ಎಲ್ಲಾದರೂ ದೇಶಾಂತರ. ಮಗುಳ್ಣ ಎಲ್ಲಾದರು ಒಳ್ಳೆ ಸಮ್ಮಂದ ನೋಡಿ ಕೊಡ್ರಿ. ನಿಮ್ಮ ಕಣ್ಣಿಗೆ ಕಾಣ್ದಂಗೆ ಹೋಗ್ತಿವಿ.
ನಡುಮನೆಯ ಕೋಣೆಯಿಂದ ಬರುತ್ತಿದ್ದ ಮಾತುಗಳು ನಿಂತಿದ್ದವು. ಬೆಕ್ಕು ಕಣ್ಣು ಮುಚ್ಚಿಕೊಂಡೇ ತನ್ನ ಮೀಸೆಯನ್ನು ಒರೆಸಿಕೊಂಡಿತು. ಅದರ ಬಾಲ ನಿಧಾನ ಅಲುಗಾಡ ತೊಡಗಿತು.

ಬಂದವರು ತಲೆ ಬಗ್ಗಿಸಿಕೊಂಡು ಹೋದರು. ಐಯ್ಯನೋರು ಮತ್ತು ಅವನ ಹೆಂಡತಿ ಒಳಗಡೆ ಬಂದರು. ಪಶ್ಚಿಮದ ಸೂರ್ಯ ಒಳಗಡೆ ಬಸವಣ್ಣನ ಫೋಟೋದ ಮೇಲೆ ಮುಂಬಾಗಿಲಿನಿಂದ ಹಾದು ಬಂದು ಪ್ರತಿಫಲನ ಗೊಂಡು ಮುಳುಗಿತು. ಮುಳುಗುವುದಕ್ಕಿಂದ ಮುಂಚೆ ಗೂಡಿನಲ್ಲಿದ್ದ ಹರಳೆಣ್ಣೆ ದೀಪಕ್ಕೆ ಒಂದಿಷ್ಟು ಬೆಳಕನ್ನು ಹಿಂಡಿತು.

ರಾತ್ರಿಯ ಕತ್ತಲನ್ನು ಮಣ್ಣಿನ ಹಣತೆಯ ಬೆಳಕನ್ನು ಎಷ್ಟೇ ನುಂಗಲು ಪ್ರಯತ್ನಿಸಿದರೂ ಸೂರ್ಯ ಹಿಂಡಿರುವ ಬೆಳಕನ್ನು ನಂದಿಸಲು ಆಗಲಿಲ್ಲ. ಬೆಕ್ಕು ಹಟ್ಟಿಯ ಕಡೆ ನಡೆಯಿತು. ಮಂದ ಬೆಳಕಿಗೆ ಅದರ ಬಣ್ಣ ಬದಲಾದಂತೆ ಕಂಡರೂ ಅವುಗಳ ಕಣ್ಣು ಗಾಜಿನ ಗೋಲಿಗಳಂತೆ ಹೊಳೆಯುತ್ತಿವೆ. ಹಟ್ಟಿಯಲ್ಲಿ ಪಕ್ಕದ ಊರಿನ ನೆಂಟರು ಕೊಟ್ಟುಕಳುಹಿಸಿದ್ದ ಹಬ್ಬದ ಬಾಡು ಬೇಯುತ್ತಿತ್ತು. ಐದುಗುದಿ ಆಗಿ ಆರನೆಯದು ಮುಗಿದು ಏಳನೇ ಗುದಿ.

ಅದು ಹೋಗಿದ್ದೇ ಹಟ್ಟಿಯ ಬಾವಿ ಕಟ್ಟೆಯ ಮೇಲೆ ಮೈಚೆಲ್ಲಿತು.

ಸೂಳೆ ಮಕ್ಕಳಿಗೆ ಆಗಬೇಕು. ಸರಿಯಾಗೇ ಮಾಡ್ಯವ್ನೆ ಈಗೇನ್ಮಾಡ್ತರೆ ಮಾಡ್ಲಿ, ಅದೇನು ಕತ್ಕಮ್ತರೆ ಕತ್ಕಮ್ಲಿ, ಅಲ್ಲ ನಮ್ಮೆಂಡ್ರುನ ಕಪ್ಲೆಗೆ ಕೆಡಿವಿಕೆಮ್ತಿದ್ದರು, ಹಲಾಲ್ಕೋರ್ನನಮಕ್ಕಳು ಈಗ ನೋಡಪ್ಪ ಆಟ ಹೆಂಗೈತೆ. ಇಡ್ಕಮಕಾಗಲ್ಲ, ಬಿಡಕಾಗಲ್ಲ ಯಾರ ಮನೆದಲ ಇದು, ಏನು ಘಾಟು, ಏನಾದರು ಬೆರೆಸಿದರೇನೋ ದಿನಾ ಇದ್ದಂಗಿಲ್ಲಪ್ಪ ಆಹ್ಞಾಹ್ಞಾ ಉಮ್ಮ್ ಉಮ್ ಉಮ್ಮಕ್ ಆಆ ಹುಮ್ಮ ಹುಮ್ಮಮಮಮ್ಮುಉಉ ಅವುಂದೆ?! ಅಲ್ಲಗ್ಯಾಕೆ ಓಗಿದ್ದೋ ಆ ಮಿಂಡ್ರಿ ಏನೇನೋ ಬೆರಿಸ್ತಾನಂತೆ ಅಂತೂ ಊರು ಕುಲಗೆಟ್ಟಿತು ಬರೆ ಭಜನೆ ಪದದಗೆ ತತ್ವ ಹೇಳದಲ್ಲ ಹೆಂಗೈತೀಗ ನಿಜವಾದ ತತ್ವ ಹಹಹಹ ಹಾಆಆಆ ಅಲ್ಲವೆ ಮತ್ತೆ ಯಾರು ಯಾರು ಯಾರ‍್ಯಾರಿಗೆ ಹುಟ್ಟವ್ರೆ ಅಂತ ಎಲ್ರಿಗೂ ಗೊತ್ತಿರೋದೆಯಾ ಎಲ್ಲ ನಾಟ್ಕ ಇನ್ನ ಒಂದು ತುಸ ವಯ್ಯಲ, ಇವುನ ಕೈಯಾಗೆ ಉದ್ರದೆ ಇಲ್ಲ ಕಣಲಾ,
ತಾಳಪ್ಪ ಅದೆಷ್ಟು ಬೇಕು ತಕ ಕಳ್ಳ ಬೋಳಿ ಮಕ್ಕಳು ಎಲ್ಲ ಎಲ್ಲ ಲೌಡೇರು ಹೇ ದಾರೆಗೆ ಯಾವನನ ಕೇಳಿಸ್ಕೆಡಂನು, ಬಂದು ಬಾಯಾಕೆ ಏನಾರು ತುರ್ಕೆರು ಬೆಳಗೆ ಮಾಥಡ್ರಪ್ಪ ಗಂಡುಸ್ರು ಮುಚ್ಚಲೆ ಕಂಡಿದಿನ, ಹಾಕ ಒಂದಿಷ್ಟು ಲೇ ಲೋಫರ್ ನನ್ ಮಗನೆ ಹಗುರವಾಗಿ ಮಾತಾಡಬೇಡಲ, ಅಮ್ಯಾಕೆ ಹಟ್ಟಿ ಹತ್ಕೆಂಡು ಉರ್ದಾತು ನಿಮ್ಮಂಥ ಏತ್ಲಾಂಡಿ ನನ್ಮಕ್ಕಳು ಇದ್ದರೆ ಇನ್ನೇನು ಮತ್ತೆ ಅದ್ಕೆ ನಾವು ಇಂಗಿರುದು.

ಲೇ ಅಮ್ಮಿ ಗಿಳ್ಳೆ ಸೇರುವ ತಕಮ್ಬಾ, ತುಂಡಾಕ್ಕೆಂಬಾ, ಬೆಂದೈತೋ ಇಲ್ಲ ನೋಡನ ವಸಿ.

ಬೆಕ್ಕು ತನ್ನ ಎರಡೂ ಕಿವಿಗಳನ್ನು ನಿಮಿರಿಸಿಕೊಂಡು, ಅಗಲಿಸಿಕೊಂಡು ಕೊನೆಯ ಮಾತನ್ನು ಕೇಳಿಸಿಕೊಂಡಿತು. ಬಾವಿಯ ಕಟ್ಟೆಯ ಮೇಲಿಂದ ಇಳಿದು ಅವರ ಮುಂದೆ ಮುಂಗಾಲುಗಳ ನೆಟ್ಟಗೆ ಕಂಬದ ಥರ ಮಾಡಿಕೊಂಡು ಹಿಂಗಾಲುಗಳನ್ನು ಮಡಿಚಿಕೊಂಡು ಬಾಲವನ್ನು ಆ ಕಡೆ ಈ ಕಡೆ ಅಲ್ಲಾಡಿಸುತ್ತ ಕುಳಿತುಕೊಂಡಿತು. ಮಿಯಾಂ ಎಂದು ಎನ್ನಬೇಕು ಅಷ್ಟರಲ್ಲಿ ಅದರ ಒಳಗಿನ ಜೀವ ಸುಮ್ನಿರು, ಇಲ್ಲಂದ್ರೆ ಓಡಿಸಿ ಬಿಡುತ್ತಾರೆ ಅಮ್ಯಾಕೆ ಬಾಡು ಸಿಗಲ್ಲ ನೋಡು ಎಂದಿತು. ಅದಕ್ಕೆ ಸುಮ್ಮನಾಯಿತು. ಕಟ್ಟೆಯ ಕೆಳಗಡೆ ನಾಯಿಗಳು ಜೊಲ್ಲನ್ನು ಸುರಿಸಿಕೊಂಡು ನಿಂತುಕೊಂಡಿದ್ದವು. ಅವುಗಳ ನಾಲಿಗೆಗಳಿಂದ ನೆಲಕ್ಕೆ ಬೀಳುತ್ತಿದ್ದ ಜೊಲ್ಲು ರಾತ್ರಿಯಲ್ಲಿ ಫಳಫಳ ಹೊಳೆಯುತ್ತಿತ್ತು.

ಅಮ್ಮಿ ಇಲ್ಲಿಗೆ ಇಟ್ಟಂಡು ಬಾ, ಬೆಂದೈತೆ ಸಾಕು ಇಳಿಸು. ಕಟ್ಟೆಮೇಲೆ ಕುತ್ಕಮ್ತಿವಿ, ಇಲ್ಲೆ ಚೆನ್ನಾಗೈತೆ , ಇಲ್ಲೆ ಉಂಬಾನ.

ಬೆಕ್ಕು ಪುನಃ ಎದ್ದು ಬಾವಿಗೆ ನೀರು ಸೇದಲು ಹಾಕಿರುವ ಅಡ್ಡ ಕಲ್ಲಿನ ಮೇಲಿನ ರಾಟೆಯ ಮೇಲೆ ಕೂತಿತು.
ಅರೆರೆರೆ ಇದೇನು ನನ್ನಮಗುನ್ನ ಬೆಕ್ಕಪ್ಪ ಇಲ್ಲೊಂತರ ಬಣ್ಣ, ಅಲ್ಲೋಂತರ ಬಣ್ಣ, ಆಹಹಹಹ
ಇದಕೇನು ನಿಟ್ಟಿಲ್ಲ ಮೈ ಮೇಲೆ ಅಮ್ತೀನಿ. ಹ್ಞಾ! ಬಿದ್ರಾತೆ ಮಾಡಿದ್ರಾತೆ
ತಕ್ಷಣಕ್ಕೆ ಅದು ಇವರ ಮಾತುಗಳನ್ನು ಕೇಳಿಸಿಕೊಂಡಿತೇನೋ ಎನ್ನುವಂತೆ ನೆಗೆದು, ಕಟ್ಟೆಯ ಒಂದು ಮೂಲೆಯಲ್ಲಿ ಕುಳಿತುಕೊಂಡಿತು.
ಅಹಹಹ ಏನ್ ಹದವಾಗಿ ಬೆಂದೈತೆ
ನಿನ್ನ ಹೆಂಡತಿ ಕೈಯೇ ಕೈಯಿ ಕಣಯ್ಯ, ಸಂಬಾರ ಬಲು ಪಸಂದಾಗೈತೆ ಅಮ್ತಿನಿ
ಅಮ್ಮಿ ಇನ್ನೊಂದಿಷ್ಟು ತುಂಡಾಕಮ್ಮಿ, ತಿಮ್ಲಿ. ಹಂಗೆ ಅವರ್ನೂ ಕರಕ್ಕಮ್ಬಂದು ಇಕ್ಕು. ಉಮ್ಲಿ, ಪಾಪ ಅವರದೇನು ತಪ್ಪು ಇದ್ರಾಗೆ ಅಮ್ತಿನಿ ಅವನು ಹಿಂಗಿ ಮಾಡಿದ್ರೆ
ನೋಡಲ್ಲಿ ಯಾರ ಓಡಿ ಬತ್ತಿರಂಗಿದಾರೆ ಈ ಕಡೆಕೆ
ಹೌದು ಕಣ್ಲ
ಯಾಕಲ ನಿದಾನುಕ್ಕೆ ಬಾರೋ ನಿನಗು ಬಾಡು ಐತೆ. ವೊಷ್ಟು ಏನು ಮುಗಿಸಿಲ್ಲ.
ಒಂದೇ ಉಸಿರಿಗೆ ಬಂದವನು ಏಳು ಮಂದಕ್ಕನ ಗುಡಿತಗೆ ಇವೊತ್ತು ರಾತ್ರಿ ಹನ್ನೆರಡು ಗಂಟೆಗೆ ಮದುವೆ ಅಂತೆ ಕಣೋ
ಅವರಿಬ್ಬರಿಗೆ
ಹ್ಞೂ
ಯಾರು ಆ ಹುಡುಗಿ ಅಪ್ಪಅಮ್ಮನೇ ಮಾಡುಸ್ತಾರೆ
ಹಂಗ ಮಾಡ್ಸಂಗಿದ್ರೆ ನಾಳೆ ಬೆಳಗ್ಗೆನೆ ಮಾಡಿಸಬಹುದಪ್ಪ
ಈಗಂತೂ ನಮ್ಮ ಹೊಟ್ಟೆ ಬಾರ, ಉಂಬಕೆ ಆಗೊಲ್ಲ
ಈ ನನ ಮಗನಿಗೆ ಯಾವಾಗ್ಲು ತಮ್ಬದೇ ದ್ಯಾಸ
ಏಳ್ಲ ಪಾಪ ಅದೇನು ಸ್ವಚ್ಛವಾಗಿ
ಪೊಲೀಸ್ ವ್ಯಾನು ಬಂದೈತೆ, ಇನ್ನೂ ಯಾರ‍್ಯಾರೊ ಬಂದವ್ರೆ. ಪ್ಯಾಂಟು ಶಲ್ಟು, ಜುಬ್ಬ ಹಾಕ್ಕೆಂಡು, ಇವರಿಬ್ಬರಿಗೂ ಮದುವೆ ಮಾಡ್ಸಕೆ ಅಮ್ತಾನೆ ಬಂದವ್ರಂತೆ. ಯಾವನಾದರು ಮಾತಾಡಿದರೆ ಗುಂಡಾರಿಸ್ತಾರಂತೆ
ಅಹಹ ಇದು ಅವನಮ್ಮನ್ನು ಆಗಬೇಕಿದ್ದು.
ಮುಚ್ಚಲೆ ಬಾಯಿ,
ನೀ ಮುಚ್ಚಲೆ,
ನಾಮರ್ಧನನ ಮಗನೆ,
ಯಾರುಪೂಕ ನನಮಗನೆ ಸರಿಯಾಗಿ ಬೊಗಳು, ಅಮ್ಯಾಕೆ ಒಲೆಯಾಕೆ ಅದುಮೇನು, ಕಲ್ಲು ನೀರು ಕರಗೋ ಹೊತ್ತಾನಾಗೆ ಯಾರ‍್ಯಾರು ಮದುವೆ ಮಾಡ್ಕೆಮ್ತರೆನಲೆ
ನನಗೆ ಗೊತ್ತಿಲ್ಲ, ಬೇಕಾರೆ ನೀವೆ ಹೋಗ್ರಿ
ಸರಿ ಸರಿ ಬಾಡು ತತ್ತರ್ರಿ ನನಗೂ ಒಂದಿಷ್ಟು
ಮದುವೆ ಅದ ಮ್ಯಾಕೆ ಉಮ್ಮುವಂತೆ ಬಿಡಲೆ
ಅಲ್ಲೆ ತನಕ ಹೊಟ್ಟೆಗಿರೋ ಹುಳ ಸತ್ತು ಹೋಗ್ತವಷ್ಟೆ, ಕೊಡ್ರಪ್ಪ ಹೊಟ್ಟೆ ಹಸಿದೈತೆ, ಅಷ್ಟಕ್ಕು ಅಲ್ಲಿರೋ ಜನ, ವಾತಾವರಣ ನೋಡುದ್ರೆ ಮದುವೆ ಆಗುತ್ತೋ ಲಡಾಯಿ ಆಗುತ್ತೋ ಹಟ್ಟಿ ಮಾರಮ್ಮಗೇ ಗೊತ್ತು.
ಬಾಡನ್ನು ಬಾಯಲ್ಲಿ ಇಟ್ಟುಕೊಂಡು ಪೊಲೀಸ್ನೋರ್ಗು ಮತ್ತೆ ಅವರ ಜೊತೆ ಬಂದೈದರಲ್ಲ ಅವರಿಗೂ ಮತ್ತು ನಮ್ಮೂರ್ನೋರ್ಗು ವಾದುಕ್ಕೆ ವಾದ. ಇಷ್ಟೊತ್ತಿಗೆ ಯಾವನಾರು ಹೋಗಿದ್ದರೂ ಹೋಗಿರಬಹುದು
ಹೇ ಸುಮ್ಕೆ ತಿನ್ಲ ತುಂಡ್ಣ, ಇಲ್ಲುದ್ದ ಅಪದ್ಧ ನುಡಿಬೇಡ, ಮೊದ್ಲೆ ಮಚ್ಚ ನಾಲ್ಕೆನು ನೀನು
ಇದ್ದಿದ್ದು ಇದ್ದಂಗೆ ಹೇಳಿದರೆ ಅದೇನು ಅಮ್ತಾರಲ್ಲ ಅಂಗೆ
ನಮ್ಮೋನು ನಿಜಕ್ಕೂ ಗಂಡ್ಸು ಕಣ್ಳ ಗಂಡ್ಸು.
ನಾವೆಲ್ಲ ಬಳೆ ತೊಟ್ಕಬೇಕು ಕಣ್ಲ,
ಅದಕೆ ಹೇಳೋದು ಓದ್ಕೆಬೇಕು ಅಮ್ತ, ನಿಮ್ಮಂಗೆ ಪೋಲಿ ಬಿದ್ದರೆ ಇನ್ನೇನು
ಈ ಕೊಂಪೆಗೆ ಸಾಯಬೇಕು.
ಅದೇ ಇಂತಹ ಕುಲಗೆಟ್ಟ ಕೆಲಸ ಮಾಡಕೆ ಓದ್ಕೆಬೇಕು ನೋಡಪ್ಪ.
ನೀನು ಹೇಳಿದೆ, ಮುಚ್ಚಲೆ, ಹಿಂಗೆ ಮಾಡಿದ್ರೆ ಮುಗೀತು ನಮ್ಮ ಹೆಂಡ್ತಿ ಮಕ್ಳು ಮಣ್ಣ ತಿನ್ಬೇಕು. ನಾಳಿಕ್ಕೆ ಯಾರ‍್ಲ ನಮ್ಮುನ್ನ ಕೂಲಿಗೆ ಕರೆಯೋದು.
ಏನು ಆಗುತ್ತೋ ಆಗೇ ಬಿಡಲಿ, ಈ ಎಲ್ಡು ಕಣ್ಣುಗಳು ಕಾಯ್ತಾ ಅವೆ ನೋಡಕೆ ಆ ದೃಶ್ಯನಾ. 
ಏನೇ ಅನ್ನು ಆ ಹುಡುಗಿ ಗಟ್ಟಿಗಿತ್ತಿ ಬಿಡು,
ನಮ್ಮನೇನು ಕಮ್ಮಿ ಇಲ್ಲ ಕಣಲೆ, ಬಲು ಓದ್ಕೆಂಡವ್ನೆ, ಈಟು ಗಾತ್ರ ಕಣಲೆ ಪುಸ್ತುಕಗಳು. 
ಈ ಓದ್ದೋರು ಹಣೆಬರನೆ ಇಷ್ಟಿಯಾ. ಕುಲಗೆಡ್ಸದು.
ಬೆಕ್ಕು ಮಿಯಾಂ ಮಿಯಾಂ ಎಂದು ಎದ್ದು ಸದ್ದು ಮಾಡಿತು. ಅದಕ್ಕೆ ಹಟ್ಟಿಯಲ್ಲಿನ ಬಾಡಿನ ವಾಸನೆ ಬಡಿದಿದ್ದುದರಿಂದ ಅದು ಗಿಂಡಿಯಲ್ಲಿದ್ದ ಹಾಲನ್ನು ಕುಡಿಯದೆ ಬಂದಿತ್ತು. ಮೂಳೆ ಅವುಗಳಿಗೆ ಅಂಟಿದ್ದ ಮಾಂಸ ತಿಂದು ಮೈಮುರಿದು ನಿಧಾನ ಊರೊಳಗೆ ಕಾಲನ್ನು ಬೆಳೆಸಿತು. ಅವರು ಬಂದು ಹಾಗೆ ಹೇಳೆ ಔಷಧಿ ಪೊಟ್ಟಣ ಕೊಟ್ಟು ಹೋದ ಮೇಲೆ ಅದನ್ನು ಅಯ್ಯನೋರ ಹಂಡತಿ ಜತನದಿಂದ ಯಾರಿಗೂ ಕಾಣದೆ ಹಾಲಲ್ಲಿ ಹಾಕಿದ್ದಳು. ಹಾಕಿ ಅದನ್ನು ದೇವರ ಕೋಣೆಯಲ್ಲಿ ಇಟ್ಟಿದ್ದಳು. ಆದರೆ ಇದನ್ನು ಅದು ನೋಡಿತ್ತು. ನೋಡಿ ಸುಮ್ಮನಿತ್ತು.
ಬೆಕ್ಕು ವಾಪಸ್ಸು ಬಂದು ದೇವರ ಕೋಣೆಯಲ್ಲಿ ಇಣುಕಿ ನೋಡಿತು. ಅಲ್ಲಿ ಹಾಲು ಇರಲಿಲ್ಲ. ಅದು ತನ್ನ ರಾತ್ರಿಯ ಊಟವನ್ನು ಹಟ್ಟಿಯಲ್ಲಿ ಮುಗಿಸಿಕೊಂಡು ಬಂದಿದ್ದರಿಂದ, ಮಲಗಲು ಇನ್ನೂ ಸಮಯವಾಗಿಲ್ಲದಿದ್ದುರಿಂದ ಊರೊಳಗಡೆ ತಿರುಗಾಡಿಕೊಂಡು ಬರಲು ಹೋಗಿ, ಮತ್ತೆ, ಏಳಮಂದಕ್ಕನ ಗುಡಿಯ ಹತ್ತಿರ ಹೋಯಿತು. ಅಲ್ಲಿ ಜನವೋ ಜನ. ಅದು ಅಲ್ಲೇ ಗುಡಿಯ ಎದುರಿಗೆ ಇದ್ದ ಬನ್ನಿಮರದ ಮೇಲೆ ಹೋಗಿ ಕೂತುಕೊಂಡಿತು ಬಾಲವನ್ನು ಅಲ್ಲಾಡಿಸಿಕೊಳ್ಳುತ್ತ.
ಅದೆಂಗೆ ಮಾಡ್ತೀರ ಮಾಡ್ರಿ, ರಕ್ತ ಹರಿತೈತೆ,
ಜಾತಿ ಕೆಡ್ಸಕೆ ಬಂದಿದರ...
ಈ ಮಾತುಗಳ ಚಕಮಕಿಯಲ್ಲಿ ಒಬ್ಬ ಬಂದು ಅವರಿಬ್ಬರು ಕಾಣಿಸುತ್ತಿಲ್ಲವಂತೆ
ಮಾಡ್ರ ಮದುವೆನ ಈಗ
ಏನೋ ಹಿಕ್ಮತ್ತು ನಡ್ದೈತೆ, ಅವರಿಬ್ಬರಿಗೆ ಏನಾದರು ಆದರೆ ನಿಮ್ಮನ್ನ ಸುಮ್ಮನೆ ಬಿಡಲ್ಲ, ಊರ್ನಾಗಿರೋ ಎಲ್ಲರೂ ಕಂಬಿ ಏಣಸ ಬೇಕಾಗುತ್ತೆ.
ಅರೆರೆ ಇದೇನೋ ನಾಟಕ, ಹಂಗ್ಮಾಡಿ, ಹಂಗ್ಮಾಡಿ ಬಿಟ್ರಲ್ಲ!
ಬನ್ನಿಮರದ ನೆತ್ತೆಯ ಮೇಲೆ ಕತ್ಲಲ್ಲಿ ಕುಳಿತುಕೊಂಡಿದ್ದ ಬೆಕ್ಕು ಈ ಮಾತಿಗೆ ನಕ್ಕುಬಿಟ್ಟಿತು.
ನೆರೆದಿದ್ದ ಬಹಳಷ್ಟು ಜನಕ್ಕೆ ನಿರಾಸೆ ಆಗಿ ಮನೆಯ ಕಡೆ ಪಾದ ಬೆಳೆಸಿದರು.
ಕ್ಷಣಾರ್ಧದಲ್ಲಿ ತುಂಬಿದ್ದ ಗುಡಿಯ ಅಂಗಳ ಕಾಲಿಯಾಗತೊಡಗಿತು.
ಹಿಂದಿನ ದಿನದ ಸೂರ್ಯ ಮರುದಿನ ತನ್ನ ಮುಖ ತೊಳೆದುಕೊಂಡು ಬರತೊಡಗಿದ. ಅದರ ಎಳೆಯ ಕರಣದ ಬೆರಳುಗಳು ಆಗಷ್ಟೇ ಮೂಡುತ್ತಿದ್ದ ಮೊಳಕೆಯ ಕುಡಿಯನ್ನು ಸವರುತ್ತಿದ್ದವು. ಬೆಕ್ಕು ಮಾಳಿಗೆ ಮೇಲೆ ನಿಂತು ಅದನ್ನೇ ನೋಡ್ತಾ ಇತ್ತು. ಅದರ ಮೈಮೇಲೆ ಬಂಗಾರ ಬಣ್ಣದ ಅಲೆಗಳು ಹರಿದಾಡಿ ಅದು ಕುಣಿದಾಡತೊಡಗಿತು.
ಕುಡಿ ಎಳೆಯ ಕಿರಣಗಳ ಕುಡಿಯುತ್ತ ಮಿಂದು ಅದರಲ್ಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.