ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಕ್ಕೆ ಕಾರಣ

Last Updated 10 ನವೆಂಬರ್ 2018, 12:06 IST
ಅಕ್ಷರ ಗಾತ್ರ

ತೃಣಕೆ ಹಸಿರೆಲ್ಲಿಯದು ? ಬೇರಿನದೆ? ಮಣ್ಣಿನದೆ? |
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ||
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೆ? – ಮಂಕುತಿಮ್ಮ ||53||

ಪದ-ಅರ್ಥ: ತೃಣ= ಹುಲ್ಲು, ದಿನಪ=ಸೂರ್ಯ, ತಣಿತಣಿವ=ತೃಪ್ತಿಪಡುವ.

ವಾಚ್ಯಾರ್ಥ: ಹುಲ್ಲಿಗೆ ಹಸಿರುಬಣ್ಣ ಬಂದುದು ಎಲ್ಲಿಂದ? ಅದು ಬೇರಿನಿಂದ ಬಂದದ್ದೇ? ಮಣ್ಣಿನ ಗುಣವೇ? ಸೂರ್ಯನ ಶಾಖವೇ? ಚಂದ್ರನ ತಂಪೇ? ನೀರಿನಲ್ಲಿಯ ಅಂಶಗಳೇ? ಅದು ನಿನ್ನ ದೃಷ್ಟಿಯೇ? ಅಥವಾ ಅದನ್ನು ಕಂಡು ತೃಪ್ತಿಪಡುವ ನಿನ್ನ ಕಣ್ಣಿನ ಪುಣ್ಯವೊ? ಗುಣಕ್ಕೆ ಒಂದೇ ಕಾರಣವಿರಲು ಸಾಧ್ಯವೇ?

ವಿವರಣೆ: ಹಳ್ಳಿಯಲ್ಲಿ ನಮ್ಮ ಸೋದರ ಮಾವನವರದೊಂದು ದೊಡ್ಡ ಮಾವಿನ ತೋಟವಿತ್ತು. ಅಲ್ಲಿ ಬೇಸಿಗೆ ಕಾಲದಲ್ಲಿ ಅತ್ಯಂತ ರುಚಿಯಾದ ರಸಭರಿತ ಮಾವಿನಹಣ್ಣುಗಳು ರಾಶಿರಾಶಿಯಾಗಿ ದೊರೆಯುತ್ತಿದ್ದವು. ನಾವೆಲ್ಲ ಮಕ್ಕಳು ತೋಟಕ್ಕೆ ಹೋಗಿ ಆ ಕಾಯಿಗಳನ್ನು ಮರದಿಂದ ಇಳಿಸುವುದನ್ನು ನೋಡುವುದೇ ಸಂಭ್ರಮ. ಈ ತೋಟ ರಸ್ತೆಯ ಬದಿಗೇ ಇತ್ತು. ನಮ್ಮ ಮಾವ ರಸ್ತೆಯ ಬದಿಗೆಲ್ಲ ಸಾಲುಸಾಲಾಗಿ ಬೇವಿನ ಮರ ನೆಡಿಸಿದ್ದರು. ಈ ಸಾಲು ಬೇವಿನ ಮರದ ಹತ್ತಿರದಲ್ಲೇ ಕೇವಲ ಇಪ್ಪತ್ತು ಅಡಿಯಲ್ಲಿಯೇ ಮಾವಿನ ಮರಗಳಿದ್ದವು.

ನಾನು ಮಾವನನ್ನು ಕೇಳಿದ್ದೆ, ‘ಈ ಬೇವಿನ ಮರ, ಮಾವಿನ ಮರ ಎರಡಕ್ಕೂ ಒಂದೇ ತರಹದ ಮಣ್ಣಿದೆ. ಅದೇ ಗಾಳಿ, ಅದೇ ನೀರು, ಅದೇ ಗೊಬ್ಬರ. ಆದರೆ ಮಾವಿನಹಣ್ಣು ಸಿಹಿಯಾಗಿದೆ, ಬೇವು ಕಹಿಯಾಗಿದೆ, ಏನು ಕಾರಣ?’. ಆತ ಹೇಳಿದ, ‘ನೀನು ಹೇಳಿದ ಅಂಶಗಳೆಲ್ಲವೂ ಕೊಂಚ ಕೊಂಚ ಕಾರಣವಾಗಿರಬೇಕು. ಆದರೆ ಅದರ ಮೂಲಗುಣ ಬೀಜದಲ್ಲಿದೆ’. ಅಂತೆಯೇ ಹುಲ್ಲಿನ ಹಸಿರಿನ ಗುಣ ಅದರ ಬೀಜದಲ್ಲಿದೆ. ಆ ಗುಣಕ್ಕೆ ಒಂದೇ ಕಾರಣವೇ? ಇಲ್ಲ. ಅದು ಅದರ ಬೇರಿನ ಶಕ್ತಿ, ಮಣ್ಣಿನ ಗುಣ, ಬಿಸಿಲು ಬೀಳುವ ಬಗೆ, ನೀರಿನಂಶಗಳು ಎಲ್ಲದರ ಮೇಲೂ ಅವಲಂಬಿತವಾಗಿದೆ.

ಮಂಗಳೂರಿನಲ್ಲಿ ಬೆಳೆಯುವ ಮಲ್ಲಿಗೆ ಬೆಂಗಳೂರಿನಲ್ಲಿ ಬೆಳೆಯುವುದಿಲ್ಲ. ವಿಜಯಪುರದ ಗಜ್ಜರಿಯ ರುಚಿ ಮೈಸೂರಿನ ಗಜ್ಜರಿಯಲ್ಲಿ ಬರಲಾರದು. ಎರಡಕ್ಕೂ ಗಜ್ಜರಿ ಎಂದು ಕರೆದರೂ ಗುಣ ಬೇರೆ. ಅಂದರೆ ಗುಣಕ್ಕೆ ಒಂದೇ ಕಾರಣವಿರಲು ಸಾಧ್ಯವಿಲ್ಲ.

ಕೆಲವು ಗುಣಗಳು ವಂಶಾನುಗತವಾಗಿ ಬರುತ್ತವೆ. ಮತ್ತೆ ಲೋಕಸಂಪರ್ಕ ಜೀವಗುಣವನ್ನು ಸಂಸ್ಕಾರಗೊಳಿಸುತ್ತದೆ. ಕರ್ಮಗಳು, ಆತುರಗಳು, ಅವಿವೇಕಗಳು, ಲಾಭ-ನಷ್ಟಗಳು, ಮೋಹ, ದ್ವೇಷಗಳು ಹಠಗಳು, ವಿಯೋಗಗಳು, ಮಿಲನಗಳು. ರೋಗಗಳು, ದುಃಖಗಳು ಮುಂತಾದ ಎಲ್ಲ ಬಗೆಯ ಅನುಭವಗಳು ನಮ್ಮ ಜೀವವನ್ನು ಕುಕ್ಕಿ, ಬಡಿದು, ಅಲುಗಾಡಿಸಿ ಮನುಷ್ಯ ಶಕ್ತಿಯ ಮಿತಿಗಳನ್ನು ನಮ್ಮ ಅರಿವಿನ ಪರಿಧಿಗೆ ತಂದಾಗ ಮೂಲಗುಣದಲ್ಲಿ ಬದಲಾವಣೆ ಕಾಣುತ್ತದೆ.

ಭತ್ರ್ಯಹರಿಗೆ ಮರಣಕಾಲ ಬಂದಾಗ ಆತ ಹೇಳುತ್ತಾನೆ, ‘ಭೂಮಿತಾಯಿಯೇ, ವಾಯುವೇ, ಅಗ್ನಿಯೇ, ಜಲವೇ, ಆಕಾಶವೇ ನಿಮಗೆ ನನ್ನ ಕಡೆಯ ನಮಸ್ಕಾರ. ನಿಮ್ಮೆಲ್ಲರ ಸಹವಾಸದಿಂದ ನನಗೆ ಈ ಪುಣ್ಯ ಬಂತು. ಆ ಪುಣ್ಯದಿಂದ ವಿಸ್ತಾರವೂ, ನಿರ್ಮಲವೂ ಆದ ತತ್ತ್ವ ನನಗೆ ದೊರಕಿತು. ವ್ಯಾಮೋಹಗಳೆಲ್ಲ ಕಳಚಿದವು’. ಹೀಗೆ ಅವನ ಗುಣ ಬದಲಾವಣೆ ಆದದ್ದು ಲೊಕಸಂಪರ್ಕದಿಂದ.

ಅದಕ್ಕಾಗಿಯೇ ಡಿ.ವಿ.ಜಿ ಹೇಳುತ್ತಾರೆ. ಹುಲ್ಲಿನ ಹಸಿರು ಬಣ್ಣಕ್ಕೆ ಎಲ್ಲವೂ ಕಾರಣವಾಗಿರಬಹುದು. ಮುಖ್ಯವಾಗಿ ಅದು ನಿನ್ನ ಕಣ್ಣನ್ನು ತಂಪಾಗಿಸಿ ತೃಪ್ತಿಪಡಿಸುತ್ತಿದೆ. ಅದನ್ನು ಕಾಣುವುದು ನಿನ್ನ ಕಣ್ಣಿನ ಪುಣ್ಯ. ಅದನ್ನು ನೆನೆದು ಸಂತೋಷಿಸು. ಜೀವನದ ಗುಣಕ್ಕೆ ಒಂದೇ ಕಾರಣವಲ್ಲ. ಒಂದು ಜೀವ ಒಂದು ಹದಕ್ಕೆ ಬಂದಿರಬೇಕಾದರೆ ಅದಕ್ಕೆ ಅನೇಕ ದೃಷ್ಟ, ಅದೃಷ್ಟ ಕಾರಣಗಳಿವೆ. ಅವೆಲ್ಲದರ ಫಲಸ್ವರೂಪ ಈ ಜೀವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT