ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಣೆ ಕಾಲದ ಸುಖ

ಲಘು ಬರಹ
Last Updated 24 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕೇವಲ ಒಂದಾಣೆ ಎಂದರೆ ಏನು? ಎಂದು ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಏನಿದ್ದರೂ ಹಂಡ್ರೆಡ್ ರುಪೀಸ್ ಎನ್ನುವುದೇ ನಮ್ಮ ಮಕ್ಕಳಿಗೆ ರೂಢಿಯಾಗಿದೆ. ಒಂದಾಣೆ, ಎರಡಾಣೆ, ಮೂರಾಣೆ, ನಾಲ್ಕಾಣೆ, ಮುಂದೆ ಎಂಟಾಣೆ, ಹನ್ನರೆಡಾಣೆ, ಒಂದು ರೂಪಾಯಿ.

ನಾಲ್ಕಾಣೆಗೆ ಉರ್ದು ಭಾಷೆಯಲ್ಲಿ ಚಾರಾಣೆ ಎಂದೂ ಎಂಟಾಣೆಗೆ ಆಠಾಣೆ ಎಂದು, ಹನ್ನೆರಡಾಣೆಗೆ ಬಾರಾಣೆ ಎಂದು ಹದಿನಾರಾಣೆಗೆ ಭರ್ತಿ ರೂಪಾಯಿಯೆಂದು ಕರೆಯುತ್ತಿದ್ದರು. ಒಂದಾಣೆಗೆ ನಾಲ್ಕು ದುಡ್ಡು, ಒಂದು ದುಡ್ಡಿಗೆ ನಾಲ್ಕು ಪೈ ಎಂದು ಲೆಕ್ಕಾಚಾರವಿತ್ತು. ಇವತ್ತಿನ ಹಂಡ್ರಡ್ ಪರ್ಸೆಂಟೇಜಿಗೆ, ಅಂದು ಸೋಲಾಣೆ ಚಾರ್ ಪೈ ಎನ್ನುತ್ತಿದ್ದರು.

ನಾವು ನಮ್ಮಪ್ಪನ ಹತ್ತಿರವೋ, ಕಾಕಂದಿರ ಹತ್ತಿರವೋ, ಕೇಳಿದರೆ ನಾಲ್ಕಾಣೆ ಮಾತ್ರ. ಅವರು ಅಂಗಿಯ ಜೇಬಲ್ಲಿ ಕೈಹಾಕಿ ಸಿಕ್ಕದ್ದನ್ನು ಕೊಡುತ್ತಿದ್ದರು. ಒಂದೊಂದು ಸಲ ನಮ್ಮ ದೈವ ಚೆನ್ನಾಗಿದ್ದರೆ ನಾಲ್ಕಾಣೆ ಸಿಗುತ್ತಿತ್ತು, ದೈವ ಸರಿ ಇರದಿದ್ದರೆ ಆಣೆ, ಎರಡಾಣೆಯಂತೂ ಗಟ್ಟಿ. ಬಾಜಾರದಲ್ಲಿ (ಪೇಟೆ) ಕಾಕಂದಿರೊ, ಮಾಮಂದಿರೋ ಸಿಕ್ಕರೆ ಓಡೋಡಿ ಹೋಗಿ ಯಾವ ಎಗ್ಗಿಲ್ಲದೆ ದುಡ್ಡನ್ನು ಕೇಳುತ್ತಿದ್ದೆವು. ಅವರು ಜೇಬಲ್ಲಿ ಕೈಹಾಕಿ ಬಂದಷ್ಟು ಕೊಡುತ್ತಿದ್ದರು. ನಾನು ಚಿಕ್ಕವನಿದ್ದಾಗ ಕೇಳಿದಾಗ ಕೊಟ್ಟಿದ್ದಾರೆ. ಆ ನಾಲ್ಕಾಣೆ ಸಿಕ್ಕರೆ ನಮಗೆಷ್ಟು ಖುಷಿ. ಮುರುಕುಲಿಯೋ, ಬಜ್ಜಿಯೋ, ಮಂಡಾಳು ಉಂಡಿಯೊ, ಪೆಪ್ಪರ್‌ ಮಿಠಾಯಿಯೋ ತೆಗೆದುಕೊಂಡು ದಾರಿಯುದ್ದಕ್ಕೂ ತಿನ್ನುತ್ತಾ ಹೋಗುವುದು. ದೋಸ್ತರು (ಗೆಳೆಯರು) ಸಿಕ್ಕರೆ ಅವರಿಗಿಷ್ಟು ಕೊಡುವುದು. ನಮ್ಮ ಊರಿನ (ಯಾದಗಿರಿ) ಮಧ್ಯದಲ್ಲಿ ಪೊಲೀಸ್ ಠಾಣೆಯ ಎದುರು ಚಮನ್ (ಪುರಸಭೆಯ ಉದ್ಯಾನ) ಇತ್ತು, ದೊಡ್ಡ ನೀರಿನ ಟಾಕಿಯಿತ್ತು. ಅಲ್ಲಿ ಟಾಕಿಗೆ ನಾಲ್ಕಾರು ನಳಗಳಿದ್ದವು, ಹೊಟ್ಟೆ ತುಂಬಾ ನೀರನ್ನು ಕುಡಿಯುತ್ತಿದ್ದೆವು.

ಹಳ್ಳಿಗಳಿಂದ ಬಂದ ಜನ ತಾವು ತಂದ ರೊಟ್ಟಿಯ ಗಂಟನ್ನು ಬಿಚ್ಚಿ ಊಟ ಮಾಡುತ್ತಿದ್ದರು. ರೊಟ್ಟಿಗೆ ಪಲ್ಯ(ಬಾಜಿ) ಇರುತ್ತಿರಲಿಲ್ಲ. ಅವಾಗ ಅವರಿಗೆ ಸಹಾಯಕ್ಕೆ ಬರೋದು ನಾಲ್ಕಾಣೆ. ಈ ನಾಲ್ಕಾಣೆ ಕೊಟ್ಟರೆ ಸಾಕು, ಬಿಸಿ- ಬಿಸಿಯಾದ ಬಜ್ಜಿ ಸಿಗುತ್ತಿದ್ದವು. ರೊಟ್ಟಿಯ ಜೊತೆಗೆ ಅದೇ ಪಲ್ಯ. ಊಟ ಮಾಡಿ ನಲ್ಲಿ ನೀರು ಕುಡಿದು ಬಾಯಿ ಒರೆಸಿಕೊಳ್ಳುತ್ತಿದ್ದರು. ನಾಲ್ಕಾಣೆಯಲ್ಲಿ ಅಷ್ಟೊಂದು ಶಕ್ತಿ– ಸಂತೃಪ್ತಿ ಇರುತ್ತಿತ್ತು.

ಯಾದಗಿರಿಯ ಸಂತೆ ಮಂಗಳವಾರ. ಕೂಲಿ ಕಾರ್ಮಿಕರಿಗೆ ಉಪ್ಪು, ಬಳ್ಳೊಳ್ಳಿ, ಖಾರ, ಉಂಬ ಎಣ್ಣೆ (ಸೇಂಗಾ ಎಣ್ಣೆ), ದೀಪದ ಉರುವಲಿಗಾಗಿ ದೀಪದ ಎಣ್ಣೆ ತುಂಬಿ ಕೊಡಲು ನಾಲ್ಕಾಣೆ. ರೂಪಾಯಿಯ ಖರೀದಿಗಿಂತ ನಾಲ್ಕಾಣೆ, ಎಂಟಾಣೆಯದೇ ಕಾರುಬಾರು. ಸಿನಿಮಾ ನೋಡಲು ಹೋದರೆ ಗಾಂಧಿ ಕ್ಲಾಸಿಗೆ ಎಂಟಾಣೆ ಟಿಕೆಟ್. ಅದು ಸಿನಿಮಾದಲ್ಲಿ ಬೆಂಚಿನ ಮೇಲೆ ಮುಂದೆ ಕುಳಿತು ನೋಡುವುದು. ಇನ್ನು ನಾಟಕ ನೋಡಲು ಹೋದರೆ ಅದೇ ಎಂಟಾಣೆಗೆ ಪೂರಾ ಹಿಂದೆ ಕೂಡಿಸುತ್ತಿದ್ದರು. ನಾಟಕದಲ್ಲಿ ಮುಂದೆ ಕುಳಿತು ನೋಡಲು ತಗ್ಗು ತೋಡಿ ಕುರ್ಚಿ ಹಾಕಿರುತ್ತಿದ್ದರು. ಅಲ್ಲಿಯ ಮಣ್ಣನ್ನು ತೆಗೆದು ಎಂಟಾಣೆ ಕೊಟ್ಟು ಕೂಡುವ ಹಿಂದಿನ ಜಾಗದಲ್ಲಿ ಹಾಕಿರುತ್ತಿದ್ದರು. ಅದಕ್ಕೆ ನೆಲಾ ಎಂದು ಕರೆಯುತ್ತಿದ್ದರು. ಹೀಗೆ ಎಂಟಾಣೆಯ ಸೀಟಿನ ಜನ ಹೆಚ್ಚಿರುತ್ತಿದ್ದರು. ನಾಟಕ ತಡವಾದರೆ ಎಂಟಾಣೆ ನೆಲದ ಜನರ ಕೂಗು ಕೇಳಿ ಬರುತ್ತಿತ್ತು. ಆಗ ನಾಟಕ ಶುರುವಾಗುತ್ತಿತ್ತು.

ದಸರಾ ಬಂದರೆ ಬಂಗಾರ ಕೊಟ್ಟು ವಿನಿಮಯ ಮಾಡಿಕೊಳ್ಳುವಾಗ ಸ್ವಾಮೀಜಿಗಳಿಗೆ ದಕ್ಷಿಣೆ ಎಂದು ನಾಲ್ಕಾಣೆ ಎಂಟಾಣೆ ಕೊಟ್ಟು ಕಳಿಸುತ್ತಿದ್ದರು. ಬಸ್ಸಿನಲ್ಲಿ ಬ್ರಿಜ್ ಮೇಲೆ ಹಾದು ಹೋಗುವಾಗ ಹೊಳೆ ಬಂದರೆ ನಾಲ್ಕಾಣೆ, ಎಂಟಾಣೆಯನ್ನು ಹರಿಯುವ ನದಿಗೆ ಎಸೆಯುತ್ತಿದ್ದರು. ಇದು ಯಾವ ಪುಣ್ಯಾತ್ಮ ಮಾಡಿದ್ದಾನೋ ಗೊತ್ತಿಲ್ಲ. ಇಂದಿಗೂ ನದಿ ಬಂದರೆ ಬಸ್ಸಿನಲ್ಲಿ ಕುಳಿತವರು ಹಣ ಎಸೆಯುವುದು ನೋಡಿದರೆ ಅವರ ಮೂಢನಂಬಿಕೆಗೆ ಮನಸ್ಸು ಮರುಗುತ್ತದೆ. ಇನ್ನು ಯಾರಾದರೂ ಸತ್ತಾಗ ಎಂಟಾಣೆ, ಒಂದು ರೂಪಾಯಿ ಹಾರಿಸುತ್ತಿದ್ದರು. ಈಗ ರೂಪಾಯಿಯ ಜಾಗದಲ್ಲಿ ಹತ್ತು, ಇಪ್ಪತ್ತು, ಐವತ್ತರ ನೋಟುಗಳನ್ನು ಹಲಗೆ ಬಾರಿಸುವವರ, ಬ್ಯಾಂಡ್ ಬಾರಿಸುವವರ ಮುಂದೆ ಹಿಡಿದು ಬಾರಿಸಲು ಹಚ್ಚುತ್ತಾರೆ.

ಮಳೆ ಬಿದ್ದರೆ ಸಾಕು ಓಣಿಯ ಮನೆ ಮನೆಗಳಲ್ಲಿ ಹಾವುಗಳದೇ ಸುದ್ದಿ. ನಾಗರಹಾವು, ಅದೂ ಗೋದಿ ನಾಗರಹಾವು. ಅದನ್ನು ಹೊಡೆದು ಹಾಕಿದರೆ ನೋಡಲು ಓಣಿಯ ಮಂದಿಯೇ ಸೇರುತ್ತಿತ್ತು. ಹೊಡೆದು ಹಾಕಿದ ಹಾವಿನ ಬಾಯಲ್ಲಿ ನಾಲ್ಕಾಣೆಯೋ, ಒಂದುಡ್ಡೊ ಇಟ್ಟು ಸುಡುತ್ತಿದ್ದರು. ಸುಟ್ಟ ಮೇಲೆ ಆ ಹಾವಿನ ಬಾಯಿಯಲ್ಲಿಯ ದುಡ್ಡನ್ನು ಹುಡುಕಿ, ಕೂಸಿನ ಉಡದಾರಕ್ಕೆ ಕಟ್ಟುತ್ತಿದ್ದರು.

ಸಂತೆಯ ದಿನ ಜನ ನೆರೆದಲ್ಲಿ ಹಾವನ್ನು ಆಡಿಸುವವರು ಇರುತ್ತಿದ್ದರು. ಪುಂಗಿಯ ನಾದಕ್ಕೆ ಹಾವು ಹೆಡೆಯೆತ್ತಿ ಆಡುತ್ತಿತ್ತು. ಆಟ ಮುಗಿದಾದ ಮೇಲೆ ನೋಡಲು ನಿಂತ ಜನರ ಸುತ್ತ ತಾಟನ್ನು ಹಿಡಿದು ನಾಗಪ್ಪಗೆ ಹಾಲು ಕುಡಿಸಲು ದುಡ್ಡು ಹಾಕ್ರಿ ಎಂದು ಜನಗಳ ಸುತ್ತ ಸುತ್ತು ಹಾಕಿದಾಗ ಅದೇ ನಾಲ್ಕಾಣೆ, ಎಂಟಾಣೆಯೇ ಬೀಳುತ್ತಿದ್ದುದು.

ಇನ್ನು ಒಂದಾಣೆಗೆ ನಾಲ್ಕು ದುಡ್ಡು. ಈ ದುಡ್ಡಿಗೆ ತೂತು ಇತ್ತು. ಈ ತೂತಿನ ದುಡ್ಡನ್ನು ಮಕ್ಕಳ ಉಡದಾರದ ಟೊಂಕಕ್ಕೆ ಕಟ್ಟುತ್ತಿದ್ದರು. ಅದನ್ನು ಮಠದ ಸ್ವಾಮಿಯೋ, ಸಾಧು, ಸಂತರೊ, ಜ್ಯೋತಿಷಿಯೋ ಮಂತ್ರಿಸಿ ಕಟ್ಟಿ ತಮ್ಮ ದಕ್ಷಿಣೆಯನ್ನು ಪಡೆಯುತ್ತಿದ್ದರು. ಮಗುವಿಗೆ ಜ್ವರವೋ, ಅಂಜಿಕೆಯೋ, ಹೊಟ್ಟೆ ಬೇನೆಯೋ, ಕಾಮಣಿಯೋ, ದೆವ್ವ-ಭೂತದ ಕಾಟವೋ ಹೀಗೆ ಹಲವಾರು ಕಾರಣಗಳಿಗೆ ಈ ದುಡ್ಡನ್ನು ಮಂತ್ರಿಸಿ ಕಟ್ಟುವುದೊಂದು ಆಗಿನ ಕಾಲದ ನಮ್ಮ ತಾಯಂದಿರಿಗೆ ದಿವ್ಯೌಷಧದಂತೆಯೇ ಆಗಿತ್ತು.

ಒಂದೊಂದು ಸಲ ಈ ಆಣೆ ಸಲುವಾಗಿ ಅಪ್ಪನ ಜೇಬಿಗೆ ಕೈ ಹಾಕಿದ್ದೂ ಉಂಟು. ಸಿಕ್ಕಷ್ಟು ಸೀರುಂಡೆ ಎಂದು ನಮ್ಮ ಹಾಫ್ ಪ್ಯಾಂಟ್ ಜೇಬಿಗೆ ಇಳಿಸುತ್ತಿದ್ದೆವು. ಬಲೂನ್ ಪಡೆಯುವುದು, ಪತಂಗ (ಗಾಳಿಪಟ) ತಂದು ಮನೆಯ ಮಾಳಿಗೆ ಏರಿ ಆಡಿಸುವುದು, ಬಗರಿ ತರುವುದು, ರಬ್ಬರಚೆಂಡು ತರುವುದು, ಬೋರಾಳ ತರುವುದು, ದಪ್ಪನ್ನ ದುಪ್ಪಿ ಆಡುವುದು, ಕಿರಾಯ ಸೈಕಲ್ ಪಡೆದು ಆಡಿಸುವುದು ಮುಂತಾದ ಆಟಗಳಿಗೆ ಅ ಒಂದಾಣೆ ಎರಡಾಣೆ ಸಾಕಾಗುತ್ತಿತ್ತು.

ಬಾಜಾರದಲ್ಲಿ ಸರಾಫರು ಎಂದು ಇರುತ್ತಿದ್ದರು. ಅವರ ಮುಂದೆ ಹೊಸ ನಾಣ್ಯಗಳ ಹಣದ ಕುಂಪಿಯೇ ಇರುತ್ತಿತ್ತು. ಅದನ್ನು ರೂಪಾಯಿಗೆ ಒಂದಾಣೆ ಕಮಿಷನ್‌ ಮೇಲೆ ಚಿಲ್ಲರೆ ಹಣದ ವಹಿವಾಟು ನಡೆಸುತ್ತಿದ್ದರು. ಇಲ್ಲಿ ಒಂದು ವಿಷಯವನ್ನು ನೆನಪಿಸುವುದು ಸೂಕ್ತವೆನಿಸುತ್ತದೆ. ಆಗ ಒಂದು ರೂಪಾಯಿಯ ಬೆಳ್ಳಿ ನಾಣ್ಯಗಳಿದ್ದವು. ಮನೆಯಲ್ಲಿ ತಾಯಿಯ ಡಬ್ಬಿಯಿಂದ ಒಂದು ರೂಪಾಯಿ ಕದ್ದು ಈ ಸರಾಫರಿಗೆ ಕೊಟ್ಟರೆ ಅವರು ಅಂದು ಹದಿನಾರು ರೂಪಾಯಿ ಕೊಡುತ್ತಿದ್ದರು. ಅವು ಒಂದು ರೂಪಾಯಿ, ಎರಡು ರೂಪಾಯಿಯ ಹೊಸ ಹೊಸ ಗರಿ ಗರಿ ಗರಿಯಾದ ನೋಟುಗಳು ನಮಗೆ ಕೊಡುತ್ತಿದ್ದರು. ನಗನಿಸಿದಂತೆ ಆ ಒಂದು ರೂಪಾಯಿಯ ಬಂದಿ (ನಾಣ್ಯ) ಒಂದು ತೊಲಿ ತೂಕ ತೂಗುತ್ತಿತ್ತು. ಆ ನಾಣ್ಯ ಪೆಟ್ಟಿಗೆಯಿಂದ ಮಾಯವಾದುದು ಕಂಡು ಹೌಹಾರುತ್ತಿದ್ದರು. ಕಾರಣ ಅವರ ಸರ್ವಸ್ವವೇ ಅದಾಗಿತ್ತು. ಈಗ ಅದನ್ನು ನೆನೆಸಿಕೊಂಡರೆ ಎಷ್ಟೊಂದು ನೋವು ನಮ್ಮ ತಾಯಂದಿರಿಗೆ ಕೊಟ್ಟಿವಲ್ಲ ಎಂದು ಮನಸ್ಸು ಮಮ್ಮಲ ಮರುಗುತ್ತದೆ.

ತಾಮ್ರದ ನಾಣ್ಯಗಳು ಹೋದವು. ಬೆಳ್ಳಿಯ ನಾಣ್ಯಗಳು ಹೋದವು. ಗಿಲಾಟಿಯ (ಸಿಲ್ವಾರ)ನಾಣ್ಯಗಳು ನಯಾಪೈಸೆಯ ಲೆಕ್ಕದಲ್ಲಿ ಬಂದವು. ಒಂದು ಪೈಸೆ, ಎರಡು ಪೈಸೆ ಐದು ಪೈಸೆ ಹತ್ತು ಪೈಸೆ ಲೆಕ್ಕದಲ್ಲಿ ಬಂದು ಹೋದವು. ಆ ನಂತರದಲ್ಲಿ ಈಗ ಸ್ಟೀಲ್ ನಾಣ್ಯಗಳು ನಡೀತಾ ಇವೆ. ಅಂದು ಹತ್ತು ರೂಪಾಯಿ, ನೂರು ರೂಪಾಯಿ ನೋಟುಗಳು ಬಹಳ ದೊಡ್ಡವಿದ್ದವು. ಆ ನೋಟುಗಳನ್ನು ಮಡಿಚಿ ಇಟ್ಟುಕೊಳ್ಳುವುದೆ ಸೊಗಸಿನ ಸಂಗತಿಯಾಗಿತ್ತು. ನೂರು ರೂಪಾಯಿ ನೋಟು ನೋಡುವುದೇ ಸಂಭ್ರಮದ ಸಂತಸದ ವಿಷಯವಾಗಿತ್ತು. ಈಗ ನೂರು ರೂಪಾಯಿ ನೋಟಿಗೆ ಏನು ಬೆಲೆ ಇದೆ? ಮಕ್ಕಳು ಸಹಜವಾಗಿ ಹಂಡ್ರೆಡ್‌ ರುಪೀಸ್, ಫೈವ್‌ ಹಂಡ್ರೆಡ್ ರುಪೀಸ್ ಎಂದು ಕೇಳುತ್ತಾರೆ. ಕಾಲ ಬದಲಾಯಿತು. ನೋಟುಗಳು ಬದಲಾವಣೆಯಾದವು. ಐದಾರು ದಶಕಗಳಲ್ಲಿ ನಾನು ಮಾಯ, ನೀನು ಮಾಯ, ಎಲ್ಲಾ ಮಾಯವೋ ಎನ್ನುವಂತಾಗಿದೆ. ಆದರೆ, ಅಮ್ಮ ಸೀರೆಯ ಗಂಟಿನಲ್ಲಿ ಹುದುಗಿಸಿದ್ದ ನಾಲ್ಕಾಣೆ ತೆಗೆದುಕೊಟ್ಟಾಗ ಆಗುತ್ತಿದ್ದ ಖುಷಿಗೆ ಪಾರವೇ ಇಲ್ಲ. ಇಂದು ಎ.ಟಿ.ಎಂಗಳಲ್ಲಿ ಸಾವಿರಾರು ರೂಪಾಯಿ ಡ್ರಾ ಮಾಡಿದಾಗಲೂ ಆ ಖುಷಿ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT