ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮರಾವ್ ಹೇಳಿದ ಅಂಬೇಡ್ಕರ್ ಕಥೆ

Last Updated 27 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹೆತ್ತವರು ನಮ್ಮಿಬ್ಬರಿಗೆ ಆ ಹೆಸರುಗಳನ್ನು ಇಟ್ಟಿದ್ದು ಅಪ್ರಜ್ಞಾಪೂರ್ವಕವಾಗಿ. ಭೀಮ ಎನ್ನುವ ನಾಮವಾಚಕಕ್ಕೆ ರಾವ್ ಎಂಬ ಉಪಾದಿ ಸೇರಿಸಿದ್ದು ಡಿಗ್ರಿ ಪೂರೈಸಿದ ಬಳಿಕ. ಆಕೆ ಸಹ ಸಾವಿತ್ರಿ ಎನ್ನುವ ನಾಮವಾಚಕಕ್ಕೆ ಭಾಯಿ ಎನ್ನುವ ಉಪಾದಿ ಸೇರಿಸಿದ್ದು ಸಹ ಡಿಗ್ರಿ ಪೂರೈಸಿದ ಬಳಿಕ. ನಾವು ಅಂಬೇಡ್ಕರ್ ವಿಚಾರಧಾರೆಗೆ ಮನಸೋತಿದ್ದೆವು. ಎರಡನೆ ಸಲ ಪರಸ್ಪರ ಸಂಧಿಸಿದ್ದು ಅದೇ ಡಿಸೆಂಬರ ಮಾಹೆ ಆರರಂದೇ. ಅಂತರಂಗದಲ್ಲಿ ಪರಸ್ಪರ ಪ್ರೀತಿಸುತ್ತಿದ್ದೆವು, ಅದೇ ಡಿಸೆಂಬರ ಆರರಂದು ಮದುವೆಯಾಗಲು ನಿರ್ಧರಿಸಿದೆವು. ಅದಕ್ಕೆ ನಮ್ಮನಮ್ಮ ಮನೆಯವರು ಅವರು ಎಡ ಇವರು ಬಲ ಎಂಬ ತಕರಾರು ತೆಗೆದರು. ಅವರ‍್ಯಾರೂ ಸಮ್ಮತಿಸಲಿಲ್ಲ. ಅಲ್ಲದೆ ವಿವಾಹ ನೋಂದಣಿ ಆಫೀಸಿಗೆ ಬಂದು ಕಡತಕ್ಕೆ ಸಹಿ ಸಹ ಹಾಕಲಿಲ್ಲ. ನಾವಿಬ್ಬರೂ ಈ ದಿವಸ ಮದುವೆಯಾದೆವು, ಆ ದಿವಸ ಬೆಂಗಳೂರಲ್ಲಿ ನೌಕರಿ ದೊರಕಿತು. ಆದರೆ ಆ ದಿವಸಗಳಲ್ಲಿ ಬಾಡಿಗೆ ಮನೆ ಹಿಡಿಯುವುದು ಸುಲಭ ಸಂಗತಿಯಾಗಿರಲಿಲ್ಲ. ಮನೆ ಮಾಲಕರು ನಿಮ್ಮ ಕಾಸ್ಟು ಎಂದು ಕೇಳುವುದು, ಅದಕ್ಕೆ ನಾವು ಇದು ನಮ್ಮ ಕಾಸ್ಟು ಎಂದು ಹೇಳುವುದು, ಅದನ್ನು ಕೇಳಿದೊಡನೆ ಅವರು ಲೋ ಕಾಸ್ಟು ಎಂದು ಮುಖ ಸಿಂಡರಿಸಿಕೊಳ್ಳುವುದು!

ಮನೆ ಇಲ್ಲದವರಿಗೆ ಮಾನವಿಲ್ಲ. ಜ್ಞಾನೋದಯವಾಯಿತು, ಹೈಕಾಸ್ಟಿನವರ ಬಡಾವಣೆಯಲ್ಲಿ ಮನೆ ನಿರ್ಮಿಸುವ ನಿರ್ಧಾರಕ್ಕೆ ಬಂದೆವು. ಇಬ್ಬರೂ ದುಡಿಯುತ್ತಿದ್ದುದರಿಂದ ಸಾಲ ಕೈಗಡ ಪಡೆಯುವುದು ತ್ರಾಸೆನಿಸಲಿಲ್ಲ. ಶ್ರೀನಗರ ಬಡಾವಣೆಯಲ್ಲಿ ಥರ್ಟಿ ಫಾರ್ಟಿ ಸೈಟು ಖರೀದಿಸಿದೆವು. ಸಂಪಾದನೆಗೆ ಸಂತಾನ ಅಡ್ಡಿಪಡಿಸುವುದೆಂಬ ಆತಂಕದಿಂದ ಕರುಳ ಕುಡಿಗಳನ್ನು ಸಹ ಸ್ವಾಗತಿಸಲಿಲ್ಲ. ಮನೆ ಕಟ್ಟಿ ನೋಡು! ಹ್ಹಾ ಹ್ಹಾ ಹಿರಿಯರ ಮಾತೇ! ಇದು ಅಕ್ಷರಶಃ ಅನುಭವವೇದ್ಯ ಮಾತು. ಮನವರಿಕೆಯಾದದ್ದು ಕಟ್ಟಿಸಲು ಆರಂಭಿಸಿದ ಬಳಿಕವೆ! ಗೆಳೆಯರ ಶಿಪಾರಸ್ಸಿನ ಮೇರೆಗೆ ಅದರ ಉಸ್ತುವಾರಿಯನ್ನು ನಾಯ್ಡುಗೆ ವಹಿಸಿದೆವು, ಆದರೂ ಮೈಮರೆಯುವಂತಿರಲಿಲ್ಲ. ಅತ್ತ ನೌಕರಿ, ಇತ್ತ ಮನೆ ಕಟ್ಟಿಸುವ ಕೈಂಕರ್ಯ! ಕಾಲುಗಳಿಗೆ ಚಕ್ರ ಕಟ್ಟಿಕೊಂಡರೂ ಉಸಿರಾಡುವುದಕ್ಕೆ ಪುರಸೊತ್ತು ದೊರೆಯದಾಯಿತು. ಇರುವ ಎರಡು ಕಣ್ಣುಗಳನ್ನು ಕಟ್ಟಡ ಸಾಮಗ್ರಿಗಳ ಕಡೆಗೂ, ಕಟ್ಟಡ ಕಾರ್ಮಿಕರ ಕಡೆಗೂ! ನಿಶ್ಚಿಂತರಾಗಿರಿ ಎಂದು ಹೇಳುವ ನಾಯ್ಡುವಿನ ಕಡೆಗೂ! ಎಲ್ಲವನ್ನೂ ಸಂದೇಹಿಸುವುದು ಎಲ್ಲಿಯವರೆಗೆ! ಎಲ್ಲೋ ಇದ್ದು ಬಂದುಹೋಗುವುದಕ್ಕಿಂತ ನಿವೇಶನಕ್ಕೆ ಹತ್ತಿರದ ಮನೆ ಬಾಡಿಗೆ ಹಿಡಿಯುವುದೇ ಸೂಕ್ತವಲ್ಲವೆ!

ನಿವೇಶನಕ್ಕೆ ಹತ್ತಿರದಲ್ಲಿ ಎರಡು ಅಪಾರ್ಟ್‌ಮೆಂಟುಗಳಿದ್ದವು, ಅವುಗಳಲ್ಲಿ ಒಂದು ಅಪಾರ್ಟಮೆಂಟಿನಲ್ಲಿ ಹಲವು ಫ್ಲಾಟುಗಳು ಖಾಲಿ ಇದ್ದವು. ವಾಸ್ತುದೋಷಕ್ಕೆ ಹೊಂದಿಕೊಂಡು ಇರುವುದಾದರೆ ಜಾತಿ ಮುಖ್ಯವಲ್ಲ ಎಂದು ಅದರ ಮಾಲಿಕ ಸ್ಪಷ್ಟವಾಗಿ ಹೇಳಿದ. ಜೊತೆಗೆ ಠೇವಣಿ ವಿನಾಯಿತಿ ತೋರಿಸಿದ. ಅದರ ಎರಡನೆ ಮಹಡಿಯ ಫ್ಲಾಟು ದೊರಕಿತು. ಲಗೇಜು ಹೆಚ್ಚಿರಲಿಲ್ಲದಿದ್ದುದರಿಂದ ಮಾರನೆ ದಿವಸವೇ ಅಲ್ಲಿ ವಾಸ ಆರಂಭಿಸಿದೆವು. ಪಶ್ಚಿಮಾಭಿಮುಖ ವಿದ್ದ ಕಿಟಕಿಯಲ್ಲಿ ನಿಂತರೆ ನಿವೇಶನದ ಆಗುಹೋಗುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅಲ್ಲದೆ ಬಿಡುವು ದೊರೆತೊಡನೆ ಇಬ್ಬರಲ್ಲಿ ಒಬ್ಬರು ಅಲ್ಲಿಗೆ ಹೋಗಿ ಕಟ್ಟಡ ಕಾರ್ಯ ಪರಿವೇಕ್ಷಣೆ ನಡೆಸುತ್ತಿದ್ದೆವು.

ನನಗಿಂತ ಹೆಚ್ಚು ಕಷ್ಟ ಅನುಭವಿಸುತ್ತಿದ್ದುದು ಸಾವಿತ್ರಿ. ನಾವಿಬ್ಬರೂ ಒಂಭತ್ತಕ್ಕೆ ಬಸ್ ಹಿಡಿಯಬೇಕಿತ್ತು. ಕಸ ಮುಸುರೆ ಅಡುಗೆ ಕೆಲಸಗಳನ್ನು ಹಂಚಿಕೊಂಡು ಮುಗಿಸಿದರೂ ಸಮಯ ಸಾಲುತ್ತಿರಲಿಲ್ಲ. ಕೆಲವೊಮ್ಮೆ ನಿವೇಶನದ ಕಡೆ ಕಾಲು ಹಾಕಲು ಸಮಯ ದೊರೆಯುತ್ತಿರಲಿಲ್ಲ. ಆದರೂ ಕಟ್ಟಡ ಕಾರ್ಯ ನಿರ್ಣಾಯಕ ಹಂತ ತಲುಪಿತ್ತು. ಕಷ್ಟ ಕೋಟಲೆಗಳ ನಡುವೆ ಆರ್‌ಸಿಸಿ ಕೆಲಸದಲ್ಲಿ ಭಾಗಿಯಾಗಿದ್ದವರಲ್ಲಿ ಉತ್ತರ ಕರ್ನಾಟಕದವರು ಅಧಿಕ ಸಂಖ್ಯೆಯಲ್ಲಿದ್ದರು. ಅವರೆಲ್ಲರೂ ಎಲ್ಲೆಲ್ಲೋ ಚದುರಿದರು. ಆದರೆ ಒಂದು ಕುಟುಂಬ ಮಾತ್ರ ಅದೇ ನಿವೇಶನದ ತಾತ್ಕಾಲಿಕ ಝೋಪಡಿಯಲ್ಲಿ ಉಳಿಯಿತು. ಮೇಸ್ತ್ರಿ ನಾಯ್ಡು ಆ ಕುಟುಂಬ ಪರಿಚಯಿಸಿದ. ನಮಗೆ ಅನುಕೂಲವಾಗಲೆಂದು ಆ ಮಧ್ಯವಯಸ್ಕ ಮಹಿಳೆಯನ್ನು ಮನೆಗೆಲಸಕ್ಕೆ ಶಿಫಾರಸು ಮಾಡಿದ. ಆಕೆಯಿಂದ ನಮಗೆ ಅನುಕೂಲ ವಾಯಿತೋ, ನಮ್ಮಿಂದ ಆಕೆಗೆ ಅನುಕೂಲವಾಯಿತೊ! ಬಸವಕಲ್ಯಾಣ ಕಡೆಯ ಒಂದು ಹಳ್ಳಿ. ಹೆಸರು ಗೌರಮ್ಮ. ನಾಯ್ಡು ಆಕೆಯ ಗಂಡನಿಗೆ ಮೇಸ್ತ್ರಿ ವಾಚಮನ್ ಕೆಲಸ ಕೊಟ್ಟಿದ್ದ. ಆ ಆಸ್ತಮಾ ರೋಗಿಯ ಕೆಮ್ಮುಗೂರಲಿಗೆ ಕಳ್ಳರು ಹೆದರುತ್ತಿದ್ದರು. ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ದಾವಣಗೆರೆ ಬೆಣ್ಣೆ ದೋಸೆ ಹೋಟಲಲ್ಲಿ ಕೆಲಸಕ್ಕಿದ್ದ, ಪೋಲಿಯೊಪೀಡಿತ ಕಿರಿಯ ಮಗ ಸನಿಹದ ಬೀದಿಬದಿ ವ್ಯಾಪಾರಿಯ ಸಹಾಯಕನಾಗಿದ್ದ. ಅಲ್ಲದೆ ಮಗಳಿರುವಳಂತೆ, ಆಕೆಗೆ ಟಿಸಿಎಚ್ ಮಾಡಿಸಿದರೆ ಮದುವೆಯಾಗುವುದಾಗಿ ಸದ್ಯ ತಮ್ಮ ಮಾತು ಕೊಟ್ಟಿರುವನಂತೆ, ಆಕೆಯನ್ನು ನೊಣವಿನಕರೆ ಸಮೀಪದ ಮಠದ ಹಾಸ್ಟಲಲ್ಲಿರಿಸಿ ಓದಿಸುತ್ತಿರುವಳಂತೆ, ಸೆಂಟ್ರಿಂಗ್ ತೆಗೆಯುವುದರೊಳಗೆ ಆಕೆ ಬರುವಳೆಂದು ಗೌರಮ್ಮ ಅಭಿಮಾನದಿಂದ ಹೇಳಿದಳು.

ಗೌರಮ್ಮ ಹೆಸರಿಗೆ ತಕ್ಕಂತೆ ಇದ್ದಳು. ಪ್ರತಿದಿವಸ ಬೆಳಗ್ಗೆ ಐದು ಗಂಟೆಗೆ ತಪ್ಪದೆ ಬರುತ್ತಿದ್ದಳು. ‘ಶರಣ್ರೀ ಅಪ್ಪೋರೆ’ ಎಂದು ಕೆಲಸ ಆರಂಭಿಸುತ್ತಿದ್ದಳು. ವಿಭೂತಿ ಪಟ್ಟೆಗಳ ಮರೆಯಲ್ಲಿ ಹಣೆಯ ಸುಕ್ಕುಗಳನ್ನು ಅಡಗಿಸಿಡುತ್ತಿದ್ದಳು. ಬಡಕಲೆದೆ ಮೇಲಿರುತ್ತಿದ್ದ ಲಿಂಗದಕಾಯಿ ಕಸಗುಡಿಸುವಾಗ ಕಸಮುಸುರೆ ಮಾಡುವಾಗ ಇತರರಿಗೆ ಗೋಚರಿಸುತ್ತಿತ್ತು. ಬಾಯಿಗೆ ರೆಸ್ಟು ನೀಡದೆ ಅರಳು ಹುರಿದಂತೆ ಮಾತಾಡುತ್ತಿದ್ದಳು, ಆಕೆ ತನ್ನ ತವರು ಮನೆಗೆ ಗಂಡನ ಮನೆಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಹೇಳುತ್ತಿದ್ದಳು. ತಮ್ಮ ಊರುಗಳಲ್ಲಿ ಹೊಲ ಮನೆಗಳಿರುವುದು ಎಷ್ಟು ನಿಜವೊ, ಮಳೆ ಇಲ್ಲದ ಕಾರಣಕ್ಕೆ ಬೆಂಗಳೂರಿಗೆ ವಲಸೆ ಬಂದಿರುವುದು ಸಹ ಅಷ್ಟೇ ನಿಜ! ಪ್ರತಿ ಮಾತಿಗೂ ಗದ್ಗದಿತಳಾಗುತ್ತಿದ್ದಳು, ಭಾವಪರವಶಳಾಗುತ್ತಿದ್ದಳು. ನಮ್ಮ ಮನೆಯಲ್ಲಿ ಅಳಿದುಳಿದಿರುತ್ತಿದ್ದ ಆಹಾರವನ್ನು ತಮ್ಮ ಮನೆಗೆ ಒಯ್ಯುತ್ತಿದ್ದಳು, ತಮ್ಮ ಮನೆಯಲ್ಲಿ ಅಪರೂಪಕ್ಕೆ ಮಾಡುತ್ತಿದ್ದ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳನ್ನು ತಂದು ನಮಗೆ ತಿನ್ನಿಸಿ ಹೆಂಗೈತ್ರಿ ಎಂದು ವಿಚಾರಿಸುತ್ತಿದ್ದಳು. ದಿನಗಳೆದಂತೆ ಆಕೆ ಮನೆಗೆಲಸದ ಜೊತೆ ಅಡುಗೆ ಮನೆಯ ಉಸ್ತುವಾರಿ ವಹಿಸಿಕೊಂಡಳು. ಎಂಟು ಗಂಟೆ ಹೊತ್ತಿಗೆ ಎರಡು ಮೂರು ನಮೂನೆ ಖಾದ್ಯಗಳನ್ನು ತಯಾರಿಸುತ್ತಿದ್ದಳು. ಅಪ್ಪೋರೆ ಇದು ನಿಮ್ದು, ಅವ್ವೋರೆ ಇದು ನಿಮ್ದು ಎಂದು ಟಿಫಿನ್ ಬಾಕ್ಸುಗಳನ್ನು ಚೀಲಗಳಲ್ಲಿರಿಸಿ ಕೊಡಲಾರಂಭಿಸಿದಳು. ಅನುಭವಸ್ಥೆಯಾದ ಆಕೆ ಉಪಯುಕ್ತ ಸಲಹೆಗಳನ್ನು ನೀಡಿ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲಾರಂಭಿಸಿದಳು. ಹೀಗಾಗಿ ಆಕೆ ನಮ್ಮ ಕುಟುಂಬದ ಸಹ ಸದಸ್ಯೆಯಾದಳು. ನಮ್ಮಿಂದ ಆಕೆಗೆ ಸಹಾಯವಾಯಿತೆನ್ನುವುದಕ್ಕಿಂತ ಆಕೆಯಿಂದ ನಮ್ಮಿಬ್ಬರಿಗೆ ಸಾಕಷ್ಟು ಅನುಕೂಲವಾಯಿತು.

ಮುಂದೆ ಆ ದಿವಸ ಬೆಳಗ್ಗೆ ಐದು ಗಂಟೆಗೆ ಕಾಲಿಂಗ್ ಬೆಲ್ ಸದ್ದು ಮಾಡಿತು. ತೆರೆದು ನೋಡಿದರೆ ಗೌರಮ್ಮನ ಬದಲಿಗೆ ಹದಿಹರೆಯದ ಹುಡುಗಿ ಬಂದಿದ್ದಳು. ಸ್ಫುರದ್ರೂಪಿಯಾಗಿದ್ದ ಆಕೆ ಹೇಳಿಕೊಳ್ಳದಿದ್ದರೂ ಗೌರಮ್ಮನ ಮಗಳೆಂದು ಮನವರಿಕೆಯಾಯಿತು. ಕಾರಣ ಈಕೆ ಆಕೆಯನ್ನು ಅಕ್ಷರಶಃ ಹೋಲುತ್ತಿದ್ದಳು. ಆಕೆ ನನ್ನನ್ನು ಅಂಕಲ್ಲು ಎಂದೂ, ಸಾವಿತ್ರಿಯನ್ನು ಆಂಟಿ ಎಂದೂ ಮಾತು ಆರಂಭಿಸಿದಳು. ವಿಷಯ ತಿಳಿದು ಸಾವಿತ್ರಿ ಝೋಪಡಿಗೆ ಹೋಗಿ ಗೌರಮ್ಮನ ಆರೋಗ್ಯ ವಿಚಾರಸಿದಳು. ಫ್ಲೂ ವ್ಯಾಧಿಗೆ ಸೂಕ್ತ ಚಿಕಿತ್ಸೆ ಕೊಡಿಸಿದಳು. ಹಣ್ಣುಗಳು ಹಾಗೂ ಖರ್ಚಿಗೆ ಹಣ ನೀಡಿ ಮರಳಿದಳು. ಆಕೆಯ ದಯಾಪರತೆ ನನಗೆ ಹಿಡಿಸಿತು. ಗಿರಿಜಾ ಸಹ ಪ್ರತಿಯಾಗಿ ಥ್ಯಾಂಕ್ಸಾಂಟಿ ಎಂದಳು.
ಕಾಲೇಜು ಉಪನ್ಯಾಸಕನಾಗಿದ್ದ ನಾನು ಸಹಜವಾಗಿಯೆ ಆಕೆಯ ವ್ಯಾಸಂಗ ಬಗ್ಗೆ ವಿಚಾರಿಸಿದೆ, ಜೊತೆಗೆ ಸೂಕ್ತ ಸಲಹೆ ಸೂಚನೆ ನೀಡಿದೆ. ಗಿರಿಜಾ ಥೇಟ್ ತಾಯಿಯಂತೆ! ವಿದ್ಯಾವಂತೆಯಾಗಿದ್ದ ಗಿರಿಜೆಗೆ ಕೆಲಸದ ವಿಷಯದಲ್ಲಿ ಮೇಲು ಕೀಳೆಂಬ ಭಾವನೆ ಇರಲಿಲ್ಲ, ಶ್ರದ್ಧೆಯಿಂದ ಮನೆ ಕೆಲಸ ನಿರ್ವಹಿಸಿದ್ದು ನಮಗೆ ಹಿಡಿಸಿತು. ಗಿರಿಜೆಗೆ ಸೂಕ್ತ ಉಡುಪುಗಳನ್ನು ಜೊತೆಗೆ ಪ್ರತಿ ತಿಂಗಳು ಒಂದಿಷ್ಟು ಹಣ ಕಳಿಸುವುದೆಂದು ನಿರ್ಧರಿಸಿದೆವು. ಆಕೆ ಮೂರು ದಿವಸ ಸತತ ಬಂದು ಮನೆಗೆಲಸ ಮಾಡಿದಳು. ಆದರೆ ನಾಲ್ಕನೆ ದಿವಸ ಬರಲಿಲ್ಲ. ಜ್ವರ ತಾಪವಿರದಿದ್ದರೂ ಗೌರಮ್ಮ ಸಹ ಮನೆಗೆಲಸಕ್ಕೆ ಬರಲಿಲ್ಲ. ನಮಗೆ ಕುತೂಹಲ, ಆತಂಕ ಇಮ್ಮಡಿಸಿತು.

ಅವರು ಒಳ್ಳೆಯವರು! ಖಂಡಿತ ನಿಜ, ಆದರೆ ಮನೆಯಲ್ಲಿರುವರೊ ಇಲ್ಲವೊ! ಅಥವಾ ಬೇರೆ ಸಮಸ್ಯೆಗಳಲ್ಲಿ ಸಿಲುಕಿರಬಹುದೆ! ಸಂದೇಹ ಪರಿಹರಿಸಿಕೊಳ್ಳಲೆಂದು ಸಾವಿತ್ರಿ ಹೋದಳು. ಆದರೆ ಮರಳಿದ ಆಕೆಯ ಮುಖದಲ್ಲಿ ಆತಂಕದ ಮೋಡ ಆವರಿಸಿತ್ತು. ಕೇಳಿದ್ದಕ್ಕೆ ನಿಡುಸುಯ್ದಳು. ಝೋಪಡಿಯ ಒಳಗೆ ಇದ್ದರೂ ಅವರ‍್ಯಾರೂ ಹೊರಗೆ ಕಾಣಿಸಿಕೊಳ್ಳಲಿಲ್ಲವಂತೆ! ಮುಖಕ್ಕೆ ಮುಖ ಕೊಟ್ಟು ಮಾತಾಡಲಿಲ್ಲವಂತೆ! ಕೇಳಿದೊಡನೆ ಆತಂಕಕ್ಕೊಳಗಾದೆ. ಆಕೆ ಬೇಡವೆಂದಳು, ಹೋಗಿ ಮನಸ್ಸಿಗೆ ನೋವು ಮಾಡಿಕೊಳ್ಳುವುದು ಉಚಿತವಲ್ಲ ಎಂದು ತಡೆಯಲೆತ್ನಿಸಿದಳು. ಕೊನೆಗೂ ಹೋದೆ.

ಗೌರಮ್ಮ ಅಂಗಳದಲ್ಲಿ ಅಕ್ಕಿಯಲ್ಲಿ ಕಲ್ಲು ಹುಡುಕುತ್ತಿದ್ದಳು, ಹೆಜ್ಜೆ ಸದ್ದಿಗೆ ತಲೆ ಎತ್ತಿದಳು. ‘ಅಪ್ಪೋರೆ’ ಎಂಬ ಬಹುವಚನ ಪ್ರಯೋಗಿಸಲಿಲ್ಲ ಆಕೆ. ‘ನೀವು ಅಂಥೋರು ಎಂದು ಮಗಳಿಂದ ತಿಳಿತ್ರೀ’ ಎಂದು ಮಾತ್ರ ಹೇಳಿ ಪುನಃ ಒಳಗೆ ಹೋದಳು. ಕಾರಣ ತಿಳಿದ ಬಳಿಕ ನಗುವುದೊ ಅಳುವುದೊ! ಒಂದೂ ತಿಳಿಯಲಿಲ್ಲ. ಸ್ವಭಾವತಃ ತಾಯಿ ಮಗಳಿಬ್ಬರೂ ಒಳ್ಳೆಯವರೆ! ಆದರೆ ಅಂಬೇಡ್ಕರ್‌ರವರ ಭಾವಚಿತ್ರ! ಅದು ನನ್ನ ಕೊಠಡಿಯಲ್ಲಿತ್ತು. ಅದನ್ನು ಅನಕ್ಷರಸ್ಥ ತಾಯಿ ಅರ್ಥ ಮಾಡಿಕೊಂಡಿದ್ದೇ ಬೇರೆ, ಅಕ್ಷರಸ್ಥೆ ಮಗಳು ಗಿರಿಜಾ ಅದನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ. ‘ಅವ್ವಾ ಅದು ಯಾರ ಫೋಟೋ ಅಂದ್ಕೊಂಡಿ’ ಎಂದು ಆಕೆ ತಾಯಿಯನ್ನು ಪ್ರಶ್ನಿಸಿದಳಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT