ಚದುರಂಗ

7

ಚದುರಂಗ

Published:
Updated:
Deccan Herald

‘ನೀವು ಏನು ಹೇಳುತ್ತಿದ್ದೀರಾ ಅಂತ ನಿಮಗೆ ಜ್ಞಾನ ಇದೆಯಾ ರಾಕೇಶ್?... ಇಲ್ಲಿ ಸತ್ತು ಬಿದ್ದಿರುವ ವ್ಯಕ್ತಿ, ಈಗ ಐದು ನಿಮಿಷದ ಕೆಳಗಡೆ ನಿಮ್ಮ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡರಾ?...’

ಇನ್‌ಸ್ಪೆಕ್ಟರ್‌ ನಾಗೇಶ್ ತನ್ನ ಮುಂದೆ ಮಂಕಾಗಿ ಕುಳಿತಿದ್ದವನನ್ನು ಪ್ರಶ್ನಿಸಿದ. ಭಯದಿಂದ ಅವನ ಮುಖ ಬಾಡಿತ್ತು. ಇಡೀ ಮೈ ಬೆವರಿನಿಂದ ತೊಯ್ದಿತ್ತು. ನೋಡಲು ಸುಂದರವಾಗಿರುವ ಅವನನ್ನು ಆ ವಾತಾವರಣ, ಸುತ್ತ ಮುತ್ತಲಿನ ಪೊಲೀಸರು, ಅಲ್ಲಿಯೇ ಬಿದ್ದಿದ್ದ ರಕ್ತಸಿಕ್ತ ಶವ– ಎಲ್ಲವೂ ಭಯಭೀತನನ್ನಾಗಿ ಮಾಡಿತ್ತು. ಅದೆಲ್ಲದರ ಮಧ್ಯೆ ಅವನನ್ನು ಕೊರೆಯುತ್ತಿದ್ದ ಪ್ರಶ್ನೆ ಒಂದೇ...

‘ಐದು ನಿಮಿಷದ ಹಿಂದೆ ಆದ ಈ ಸಾವಿನ ಬಗ್ಗೆ ಪೊಲೀಸರಿಗೆ ಹೇಗೆ ತಿಳಿಯಿತು... ಇಷ್ಟು ಬೇಗ ಅವರು ಇಲ್ಲಿಗೆ ಬರಲು ಹೇಗೆ ಸಾಧ್ಯವಾಯಿತು?...’

‘ಸರ್, ನಿಮಗೆ ಇಲ್ಲಿ ಒಂದು ಸಾವು ಆಗಿದೆ ಎಂದು ಹೇಗೆ ತಿಳಿಯಿತು?’

‘ಹ ಹ... ನೀವೇ ಕೊಲೆ ಮಾಡಿ ನಮಗೆ ಹೇಗೆ ತಿಳಿಯಿತು ಅಂತಾ ಕೇಳ್ತಾ ಇದ್ದೀರಾ?’ ಇನ್‌ಸ್ಪೆಕ್ಟರ್‌ ನಾಗೇಶ್ ಪ್ರಶ್ನಿಸಿದ.
‘ಸರ್... ನಾನು ಕೊಲೆ ಮಾಡಿಲ್ಲ...’ ರಾಕೇಶ್ ತೊದಲಿದ.

‘ಹಾಗಾದರೆ ನಾವು ಒಳಗೆ ಬರುತ್ತಿರುವಾಗ ಯಾಕೆ ಓಡಿ ಹೋಗಲು ಪ್ರಯತ್ನಿಸುತ್ತ ಇದ್ರಿ? ನಮಗೆ ಹದಿನೈದು ನಿಮಿಷದ ಕೆಳಗೆ, ಇಲ್ಲಿ ಒಂದು ಸಾವು ಆಗಿದೆ ಅಂತ ಫೋನ್ ಬಂದಿತ್ತು. ನಾವು ಹೊರಟು ಬರುವಷ್ಟರಲ್ಲಿ ನೀವು ಸಾಕ್ಷ್ಯಗಳನ್ನೆಲ್ಲಾ ನಾಶಪಡಿಸಿ ಇಲ್ಲಿಂದ ಓಡಲೆತ್ನಿಸಿದ್ರಿ. ಅದೃಷ್ಟವಶಾತ್ ಅದೇ ಸಮಯಕ್ಕೆ ನಾವು ಬಂದೆವು, ನೀವು ಸಿಕ್ಕಿ ಹಾಕಿಕೊಂಡ್ರಿ... ಈಗ ಕೊಲೆ ಮಾಡಲಿಲ್ಲ ಅಂತೀರಾ?’ ದೊಡ್ಡ ದನಿಯಲ್ಲಿ ಗದರಿದ ನಾಗೇಶ್.

‘ಸರ್, ನಾನು ನಿಜ ಹೇಳ್ತಾ ಇದ್ದೀನಿ. ಇದು ಕೊಲೆ ಅಲ್ಲ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದೂ ನನ್ನ ಕಣ್ಣ ಎದುರಿಗೇ.’
ಅಲ್ಲಿದ್ದವರೆಲ್ಲ ತಮ್ಮ ಕೆಲಸ ಬಿಟ್ಟು ಒಮ್ಮೆ ರಾಕೇಶನ ಕಡೆ ತಿರುಗಿದರು. ಅವನ ಆ ಮಾತುಗಳು ಇಡೀ ಕೇಸ್ ಅನ್ನು ತಿರುವು ಮುರುವಾಗಿ ನೋಡುವಂತೆ ಮಾಡಿತ್ತು.

‘ನೀವ್ಯಾಕೆ ಇಲ್ಲಿ ಬಂದ್ರಿ?’
‘ಸರ್, ಬೆಳಗ್ಗೆ ಇವರೇ ಫೋನ್ ಮಾಡಿ ಇಂದೇ ಬಾ ಎಂದು ಕರೆಸಿಕೊಂಡರು... ನಾನು ಒಂದು ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇವರ ಮತ್ತು ಇವರ ಪತ್ನಿಯ ಜಾಯಿಂಟ್ ಅಕೌಂಟ್ ನಮ್ಮ ಬ್ಯಾಂಕ್‌ನಲ್ಲಿದೆ. ನಾನು ಇವರ ರಿಲೇಶನ್‌ಶಿಪ್ ಮ್ಯಾನೇಜರ್. ಕಳೆದ ಎರಡು ತಿಂಗಳಲ್ಲಿ ಇವರ ಪತ್ನಿ ಸುಮಾರು ಹದಿನೈದು ಲಕ್ಷ ಡ್ರಾ ಮಾಡಿದ್ದರು... ಅದನ್ನು ವಿಚಾರಿಸಲೆಂದು ನನ್ನನ್ನು ಕರೆಸಿದ್ದರು. ಇದು ಅವರ ಪತ್ನಿಗೆ ಸಂಬಂಧಿಸಿದ ವಿಷಯ ಆದ್ದರಿಂದ ಅವರಿಗೆ ಹೇಳಬೇಡ ಎಂದು ತಾಕೀತು ಮಾಡಿದ್ದರು.’

ರಾಕೆೇಶನ ಮಾತುಗಳನ್ನು ತಡೆಯುತ್ತಾ ಒಬ್ಬ ಕಾನ್‌ಸ್ಟೆಬಲ್, ‘ಸರ್, ಸತ್ತಿರುವ ವ್ಯಕ್ತಿಯ ಹೆಸರು ಕೃಷ್ಣನ್... ವಯಸ್ಸು ಸುಮಾರು ಐವತ್ತೈದು ಅರವತ್ತಿರಬಹುದು, ಕೋಟ್ಯಧಿಪತಿ, ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಇದೆ. ಇಲ್ಲಿಯೂ ಬಹಳಷ್ಟು ಆಸ್ತಿ ಪಾಸ್ತಿ ಇದೆ. ಪತ್ನಿ ಇದ್ದಾರೆ, ಮಕ್ಕಳಿಲ್ಲ. ಅವರ ಫೋನ್‌ನಲ್ಲಿ ನಂಬರ್ ಹುಡುಕಿ, ಅವರ ಪತ್ನಿಗೆ ಕರೆ ಮಾಡಿ ಹೇಳಿದ್ದೇನೆ’ ಎಂದು ಯಾಂತ್ರಿಕವಾಗಿ ವರದಿ ಒಪ್ಪಿಸಿ ಹೋದ.
‘ಸರ್, ಮತ್ತೊಮ್ಮೆ ಹೇಳುತ್ತಿದ್ದೇನೆ... ಇದು ಕೊಲೆ ಅಲ್ಲ... ಇವರು ನನ್ನ ಕಣ್ಣ ಎದುರಿಗೇ ಆತ್ಮಹತ್ಯೆ ಮಾಡಿಕೊಂಡರು. ಅದೂ ನೀವು ಬರುವ ಐದು ನಿಮಿಷದ ಮೊದಲು... ನನ್ನನ್ನು ನಂಬಿ ಪ್ಲೀಸ್...’ ಬೇಡಿಕೊಳ್ಳತೊಡಗಿದ ರಾಕೆೇಶ್. ಅವನ ಕಣ್ಣುಗಳಲ್ಲಿ ಆಗಲೇ ನೀರು ಸುರಿಯತೊಡಗಿತ್ತು. ಇನ್‌ಸ್ಪೆಕ್ಟರ್ ನಾಗೇಶನಿಗೆ ಅವನ ಮುಖ ನೋಡಿ ಅನುಕಂಪವಾಯಿತು. ಬ್ಯಾಂಕ್‌ನ ಒಬ್ಬ ನೌಕರ ತನ್ನ ಖಾತೆದಾರನ ಮನೆಗೆ ಬಂದು ಸುಖಾಸುಮ್ಮನೆ ಸಿಕ್ಕಿ ಹಾಕಿಕೊಂಡನಾ... ಅಂತ ಅನ್ನಿಸಿತು. ಆದರೆ ಅವನ ಪೊಲೀಸ್‌ ಬುದ್ಧಿ ಹೇಳಿತು, ‘ಯೂನಿಫಾರಂ ತೊಟ್ಟ ದಿನದಿಂದಲೇ ನಂಬಿಕೆ ಎನ್ನುವ ಶಬ್ದ ನನ್ನ ಪದಕೋಶದಿಂದ ಅಳಿಸಿ ಹೋಗಿದೆ. ಎಲ್ಲರ ಮೇಲೆ ಸಂಶಯ ಪಟ್ಟು, ಆ ಸಂಶಯ ನಿವಾರಿಸಿಕೊಳ್ಳುವುದಕ್ಕಾಗಿಯೇ ನನಗೆ ಸಂಬಳ ಕೊಡುವುದು.’

ಇನ್‌ಸ್ಪೆಕ್ಟರ್‌ ನಾಗೇಶ್ ಭಯದಿಂದ ಕುಳಿತಿದ್ದ ರಾಕೇಶನನ್ನು ಒಮ್ಮೆ ನೋಡಿ ಆ ಶವದ ಕಡೆ ಮತ್ತೊಮ್ಮೆ ನೋಡಿದ.
ಸತ್ತ ವ್ಯಕ್ತಿ ಕುರ್ಚಿಯಲ್ಲಿ ಕುಳಿತ ಹಾಗೆಯೇ ಪ್ರಾಣ ತೊರೆದಿದ್ದಾನೆ. ಗುಂಡು ಅವನ ಬಲ ಕಿವಿಯ ಕೊಂಚ ಮೇಲುಗಡೆಯಿಂದ ನುಗ್ಗಿ ಇನ್ನೊಂದು ಬದಿಯಿಂದ ಹೊರಬಂದಿದೆ. ಗುಂಡಿನ ರಭಸಕ್ಕೆ ತಲೆ ಛಿದ್ರವಾಗಿದೆ. ರಕ್ತ ಎಲ್ಲಕಡೆ ಚಿಮ್ಮಿ ಇಡೀ ಹಾಲ್ ರಕ್ತಮಯವಾಗಿದೆ. ರಕ್ತದ ಹನಿಗಳು ರಾಕೆೇಶನ ಬಟ್ಟೆಗಳ ಮೇಲೂ ಬಿದ್ದಿದ್ದು, ಆ ವ್ಯಕ್ತಿಯ ಸಾವು ಸಂಭವಿಸಿದಾಗ ರಾಕೆೇಶ್ ಅವನ ಹತ್ತಿರವೇ ಇದ್ದಿರಬಹುದು ಎನ್ನುವ ಸುಳಿವು ಕೊಡುತ್ತಿದೆ.

‘ಅಷ್ಟು ಭಯಾನಕ ಸಾವು ತನ್ನ ಮುಂದೆಯೇ ಆಗಿದ್ದು ನೋಡಿ ರಾಕೆೇಶ್ ಭಯ ಪಟ್ಟಿರುವುದು ಸಹಜ. ಆದರೆ ಅವನೇ ಕೊಲೆ ಮಾಡಿದ್ದರೆ ರಾಕೆೇಶನಷ್ಟು ಉತ್ತಮ ನಾಟಕಕಾರ ಯಾರೂ ಇಲ್ಲ’ ಎಂದೆನಿಸಿತು ಇನ್‌ಸ್ಪೆಕ್ಟರ್‌ ನಾಗೇಶನಿಗೆ.

ಕೃಷ್ಣನ್ ಸತ್ತು ಬಿದ್ದಿದ್ದ ಕೋಣೆಯಲ್ಲಿ ಪುಸ್ತಕಗಳು, ಅವಾರ್ಡ್‌ಗಳು, ಮೆಡಲ್‌ಗಳು ತುಂಬಿದ್ದವು. ಎಲ್ಲವನ್ನೂ ನೀಟಾಗಿ ಜೋಡಿಸಿಡಲಾಗಿತ್ತು. ಅಷ್ಟು ದೊಡ್ಡ ಕೋಣೆ ಎಲ್ಲಿಯೂ ಒಂದೇ ಒಂದು ದೂಳಿನ ಕಣ ಕೂಡ ಕಾಣದಷ್ಟು ಸ್ವಚ್ಛವಾಗಿತ್ತು.

‘ನೀವು ಇಲ್ಲಿಗೆ ಎಷ್ಟು ಹೊತ್ತಿಗೆ ಬಂದಿರಿ ರಾಕೆೇಶ್?’
‘ಸರ್, ಇವತ್ತು ಬೆಳಗ್ಗೆ ಒಂಬತ್ತು ಮುವತ್ತಕ್ಕೆ ನನ್ನ ಮೊಬೈಲ್‌ಗೆ ಫೋನ್ ಮಾಡಿದ್ದರು. ಹಾಗಾಗಿ ನಾನು ಬ್ಯಾಂಕ್‌ಗೆ ಹೋಗಿ, ಹಾಜರಿ ಹಾಕಿ, ಸುಮಾರು ಹತ್ತು ಗಂಟೆಗೆ ಇಲ್ಲಿಗೆ ಬಂದೆ’ ನಡುಗುತ್ತಲೇ ಹೇಳಿದ ರಾಕೆೇಶ್.

‘ಹತ್ತು ಗಂಟೆಗೆ ಬಂದ್ರಿ... ಈಗ ಎರಡು ಗಂಟೆ... ಘಟನೆ ನಡೆದು ಒಂದು ಗಂಟೆ ಆಗಿರಬಹುದು... ಅಂದರೆ ಹತ್ತು ಗಂಟೆಯಿಂದ ಒಂದು ಗಂಟೆಯವರೆಗೆ ನೀವು ಇಲ್ಲಿ ಏನು ಮಾಡ್ತಾ ಇದ್ರಿ?’

ಒಂದು ಕೇಸ್ ಬಗೆಹರಿಯಬೇಕಾದರೆ ಅದರ ಇನ್ವೆಸ್ಟಿಗೇಶನ್ ಆಫೀಸರ್‌ಗೆ ತನ್ನೆಲ್ಲ ಬುದ್ಧಿಬಲ, ಒತ್ತಡ, ಪ್ರಭಾವವನ್ನು ಬಳಸಬೇಕಾಗುತ್ತದೆ. ಆದರೆ ಆ ಯುಕ್ತಿಗಳು ಸಮಯದ ವಿರುದ್ಧವೇ ಕೆಲಸ ಮಾಡಬೇಕು. ಒಂದು ಸಣ್ಣ ತಪ್ಪು ಹೆಜ್ಜೆ ಕೂಡ ಅವನನ್ನು ನಿಜವಾದ ಅಪರಾಧಿಯಿಂದ ದೂರ ಕರೆದೊಯ್ಯುತ್ತದೆ. ನಾಗೇಶನಿಗೆ ಇದರ ಅರಿವಿತ್ತು. ಘಟನೆ ನಡೆದ ಸ್ಥಳದಲ್ಲಿಯೇ, ಒಬ್ಬ ವ್ಯಕ್ತಿ ಸಂಶಯಾಸ್ಪದವಾಗಿ ಸಿಕ್ಕರೂ, ಅವನು ಕೇವಲ ಆರೋಪಿ ಅಷ್ಟೇ! ಇದನ್ನು ಚತುರತೆಯಿಂದ ನಿರ್ವಹಿಸಬೇಕು. ಆಗ ಮಾತ್ರ ಗೆಲ್ಲಬಹುದು. ಈಗಿನ ಸಂಚುಕೋರರಿಗೆ ಪೊಲೀಸರ ಕಾರ್ಯವಿಧಾನಗಳು ಗೊತ್ತಿರುವುದರಿಂದ, ಹೇಗೆ ಆರೋಪದಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡೇ ಇಂತಹ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆಗಳು ಇರುತ್ತವೆ. ಆದರೂ ಅವನ ಮನದ ಯಾವುದೋ ಮೂಲೆಯಲ್ಲಿ ‘ರಾಕೆೇಶ್ ನಿಜ ಹೇಳುತ್ತಿದ್ದಾನಾ?’ ಎನ್ನುವ ಪ್ರಶ್ನೆ ಕೂಡ ಇತ್ತು.

‘ಸರ್, ಬಂದ ಹತ್ತು ನಿಮಿಷಕ್ಕೇ ನನ್ನ ಕೆಲಸ ಮುಗಿದಿತ್ತು. ನಾನು ಹೊರಡುವೆ ಎಂದು ಎದ್ದಾಗ, ನನ್ನನ್ನು ಕುಳ್ಳಿರಿಸಿ, ತಮ್ಮೊಡನೆ ಚದುರಂಗದಾಟ ಆಡುವಂತೆ ಕೇಳಿಕೊಂಡರು. ನಾನು, ಸಮಯವೂ ಇಲ್ಲ, ನನಗೆ ಚದುರಂಗ ಆಡಲೂ ಅಷ್ಟಾಗಿ ಬರುವುದಿಲ್ಲ ಎಂದು ಹೇಳಿದರೂ ಕೇಳಲಿಲ್ಲ. ತನ್ನನ್ನು ಮೂರೂ ಆಟಗಳ ಪಂದ್ಯದಲ್ಲಿ ಸೋಲಿಸಿದರೆ ನಾನು ಕೇಳಿದ್ದು ಕೊಡುತ್ತೇನೆ ಎಂದರು. ನಾನು ತಮಾಷೆಗೆ ಐದು ಕೋಟಿ ಕೊಡುತ್ತಿರಾ ಅಂತಾ ಕೇಳಿದೆ, ಒಪ್ಪಿಕೊಂಡು ಬಿಟ್ಟರು. ನನ್ನ ಅದೃಷ್ಟವೋ ಅಥವಾ ದುರದೃಷ್ಟವೋ ನಾನು ಎರಡು ಆಟದಲ್ಲಿ ಗೆದ್ದು ಬಿಟ್ಟೆ. ಮಾತಿನಂತೆ ನನ್ನ ಅಕೌಂಟ್‌ಗೆ ಐದು ಕೋಟಿ ವರ್ಗಾವಣೆ ಮಾಡಿದರು ಕೂಡಾ...’

ಇನ್‌ಸ್ಪೆಕ್ಟರ್‌ ನಾಗೇಶ್ ದಂಗಾದ. ಸತ್ತಿರುವವನು ಕೋಟ್ಯಧಿಪತಿ, ಸರಿಯೇ. ಆದರೆ ಕೇವಲ ಚೆಸ್ ಆಟದಲ್ಲಿ ಸೋತಿದ್ದಕ್ಕೆ ಐದು ಕೋಟಿ! ನಂಬಲು ಅಸಾಧ್ಯ!

‘ನಂತರ ಆ ಮೂಲೆಯಲ್ಲಿದ್ದ ಡ್ರಾವರ್‌ನಲ್ಲಿ ನನ್ನ ಪಿಸ್ತೂಲ್ ಇದೆ ಕೊಡು ಅಂದರು. ಭಯ ಪಡಬೇಡ ಲೋಡ್ ಆಗಿಲ್ಲ ಎಂದು ಹೇಳಿದ ಮೇಲೆಯೇ ನಾನು ಅದನ್ನು ತಂದು ಕೊಟ್ಟೆ. ನನ್ನೊಂದಿಗೆ ಅದು ಇದು ಮಾತಾಡುತ್ತಾ... ಒಮ್ಮೆಲೇ ತಮ್ಮ ಕಿವಿಯ ಬಳಿ ಗನ್ ಇಟ್ಟುಕೊಂಡು, ನಾನು ಜೀವನದಲ್ಲಿ ಎಂದೂ ಸೋತಿರಲಿಲ್ಲ, ಇಂದು ಸೋತೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಗುಂಡು ಹೊಡೆದುಕೊಂಡು ಸತ್ತರು... ಸ್ವಲ್ಪ ಹೊತ್ತು ಭಯದಿಂದ ಏನೂ ಮಾಡದಂತಾಗಿ ಅಲ್ಲಿಯೇ ನಿಂತಿದ್ದೆ. ನಂತರ ಭಯ ಆಗಿ ಇಲ್ಲಿಂದ ಓಡಲು ಹೋದಾಗ ನೀವು ಬಂದಿರಿ... ಇಷ್ಟೇ ಆಗಿದ್ದು ಸರ್.’

ನಾಗೇಶ್, ತನ್ನೊಡನೆ ಬಂದಿದ್ದ ಫೋರೆನ್ಸಿಕ್‌ನವನ ಕಡೆ ತಿರುಗಿ, ‘ಆ ಗನ್ ಚೆಕ್ ಮಾಡಿ’ ಎಂದ. ಅವನು ಈ ಮಾತು ಕೇಳುತ್ತಾನೆ ಎಂದು ಮೊದಲೇ ತಿಳಿದಿದ್ದ ಅವನು, ‘ಸರ್, ಎರಡು ಗುಂಡು ಹಾರಿದೆ. ಉಳಿದಿದ್ದು ಇಲ್ಲಿಯೇ ಇದೆ. ಮಾರ್ಕ್‌ ನೋಡಿದರೆ ಇವತ್ತೇ ಹಾರಿಸಿರುವ ಹಾಗಿದೆ’ ಎಂದ.

ಅವನ ಮಾತು ಕೇಳಿ ರಾಕೇಶ್ ದಂಗಾದ. ಅವನಿಗೆ ಗೊತ್ತಿತ್ತು, ಹಾರಿದ್ದು ಒಂದೇ ಗುಂಡು... ಅದೂ ಕೃಷ್ಣನ್‌ನ ತಲೆ ಸೀಳಿ ಹೋಗಿದ್ದು... ಎರಡನೆಯದು ಎಂದರೆ... ಆ ಪಿಸ್ತೂಲ್ ಮೇಲೆ ನನ್ನ ಬೆರಳಚ್ಚು ಕೂಡಾ ಇದೆ!

‘ಸರ್, ನಾನು ನಿಜ ಹೇಳ್ತಾ ಇದ್ದೀನಿ... ಹಾರಿದ್ದು ಒಂದೇ ಗುಂಡು... ಅವರು ನನ್ನೆದುರಿಗೇ ಲೋಡ್ ಮಾಡಿದ್ದರು...’ ರಾಕೆೇಶ್ ಕೂಗಿದ.
‘ಇನ್ನೊಂದು ಬುಲೆಟ್ ಸಿಗುವವರೆಗೂ ಮಾತಾಡಿ... ಆಮೇಲೆ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ’ ನಾಗೇಶನ ಮಾತುಗಳು ಮುಗಿಯುವಷ್ಟರಲ್ಲಿ ಸುಮಾರು ಮುವತ್ತು ವರ್ಷದವಳು ಎಲ್ಲರನ್ನೂ ತಳ್ಳುತ್ತಾ... ‘ಕೃಷ್ಣನ್... ಕೃಷ್ಣನ್...’ ಎಂದು ಕೂಗುತ್ತಾ ಒಳಗೆ ಓಡಿ ಬಂದಳು. ಅವಳು ನೂಕಿದ ರಭಸಕ್ಕೆ, ಒಂದಿಬ್ಬರು ಕೆಳಗೆ ಬಿದ್ದರು. ಎದುರಿಗೆ ಕಂಡ ಆ ಬೀಭತ್ಸ ದೃಶ್ಯ ಕಂಡು ನೋಡಲಾರದೇ ಕುಸಿದು ಬಿದ್ದಳು.

‘ಸರ್, ಇವರೇ ಕೃಷ್ಣನ್ ಅವರ ಪತ್ನಿ’ ನಿಧಾನವಾಗಿ ನುಡಿದ ರಾಕೆೇಶ್.
ಇಂಥಾ ಅತಿಶಯ ಸುಂದರಿ... ಈ ವಯಸ್ಸಾದವನನ್ನು ಮದುವೆ ಆಗಿದ್ದಾಳಾ? ಪ್ರೀತಿ, ಹಣ ಎರಡರಲ್ಲಿ ಏನಾದರೂ ಇರಬಹುದು ಎಂದುಕೊಂಡ ನಾಗೇಶ್.
‘ಏನಾಯಿತು, ಹೇಗಾಯಿತು ಸರ್?’ ಪ್ರಶ್ನಿಸಿದಳು.

‘ಇಲ್ಲಿ ಒಂದು ಅಸಹಜ ಸಾವು ಆಗಿದೆ ಅಂತಾ ಫೋನ್ ಬಂದಿತ್ತು. ನಾವು ಬಂದಾಗ ಈ ವ್ಯಕ್ತಿ ಇಲ್ಲಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದು, ನಮ್ಮ ಕೈಗೆ ಸಿಕ್ಕಿ ಹಾಕಿಕೊಂಡ. ಕೇಳಿದರೆ ನಿಮ್ಮ ಪತಿ ಕರೆಸಿದ್ದಾರೆಂದೂ, ಅದೂ ಅಲ್ಲದೆ ಅವರು, ಇವನೊಂದಿಗೆ ಚೆಸ್ ಆಟದಲ್ಲಿ ಸೋತಿದ್ದರಿಂದ ಇವರಿಗೆ ಐದು ಕೋಟಿ ಹಣ ನೀಡಿ ಅದೇ ಬೇಜಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾನೆ’ ಎಂದ ನಾಗೇಶ್.
‘ಚೆಸ್ ಆಟದಲ್ಲಿ ಅವರು ಸೋಲುವುದಾ? ಸಾಧ್ಯವೇ ಇಲ್ಲ, ಅವರು ಚೆಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಟಗಾರ...’
ಎಲ್ಲರ ಗಮನ ರಾಕೆೇಶನ ಕಡೆ ತಿರುಗಿತು. ಅವನೇ ಹೇಳಿದಂತೆ ಚೆಸ್ ಅಷ್ಟಾಗಿ ಬರದವನು ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್‌ನನ್ನು ಎರಡು ನೇರ ಆಟಗಳಲ್ಲಿ ಸೋಲಿಸುವುದಾ?

‘ಸರ್, ನಾನು ನಿಜ ಹೇಳ್ತಾ ಇರೋದು... ಅವರೇ ಕಾಲ್ ಮಾಡಿದ್ದರು...’ ಅವನ ಮಾತುಗಳನ್ನು ಅಲ್ಲಿಯೇ ತಡೆಯುತ್ತಾ ನಾಗೇಶ್ ಅಲ್ಲಿ ಇದ್ದ ಕಾನ್‌ಸ್ಟೆಬಲ್‌ಗೆ ಕೃಷ್ಣನ್‌ ಮೊಬೈಲ್ ತರಲು ಹೇಳಿದ. ಅದು ಲಾಕ್ ಆಗಿತ್ತು.
‘ಸರ್, ಅವರ ಬೆರಳ ಗುರುತಿನಿಂದ ತೆರೆದುಕೊಳ್ಳುತ್ತದೆ’ ಅಂದಳು ಅವನ ಪತ್ನಿ.
ಮೊಬೈಲ್ ಆನ್ ಆಯಿತು. ನಾಗೇಶ್ ಕಾಲ್ ಲಿಸ್ಟ್ ಚೆಕ್ ಮಾಡಿದ... ಅಲ್ಲಿ ಯಾವ ಕಾಲ್ ಕೂಡಾ ಬೆಳಿಗ್ಗೆಯಿಂದ ಹೋಗಿರಲಿಲ್ಲ.
‘ನಿಮ್ಮ ಆಟ ಸಾಕು ರಾಕೇಶ್, ಈ ಫೋನ್‌ನಲ್ಲಿ ಬೆಳಗ್ಗೆ ನಿಮಗೆ ಕಾಲ್ ಮಾಡಿರುವ ಯಾವ ಕುರುಹೂ ಇಲ್ಲ.’
ರಾಕೆೇಶ್ ದಿಗ್ಭ್ರಾಂತನಾದ. ಅವನ ಇಡೀ ದೇಹ ಬೆವರಿನಿಂದ ತೋಯ್ದಿತ್ತು. ಬಾಯಿಯಲ್ಲಿದ್ದ ತೇವವೆಲ್ಲ ಒಣಗಿತ್ತು, ಕೈ ಕಾಲಿನ ಶಕ್ತಿಯೆಲ್ಲ ಒಮ್ಮೆಲೇ ಸೋರಿಹೋದಂತೆ ಆಯಿತು.

‘ಕೃಷ್ಣನ್ ಅವರ ಅಕೌಂಟ್‌ನಿಂದ ನೀವೇ ಹಣ ತೆಗೆದಿರಬೇಕು ಅದನ್ನು ಕೇಳಲು ಕರೆದಿದ್ದಾಗ, ಎಲ್ಲಿ ಬ್ಯಾಂಕ್‌ನವರಿಗೆ ಕಂಪ್ಲೇಂಟ್ ಕೊಟ್ಟು ಜೈಲಿಗೆ ಕಳುಹಿಸುತ್ತಾರೊ ಎಂದು, ಅವರನ್ನು ಕೊಲೆ ಮಾಡಿ, ಓಡಿ ಹೋಗಲು ಪ್ರಯತ್ನ ಮಾಡಿದ್ದಿರಿ. ದುರದೃಷ್ಟವಶಾತ್ ನಮ್ಮ ಕೈಗೆ ಸಿಕ್ಕಿಕೊಂಡಿರಿ.’
ಅಷ್ಟರಲ್ಲಿ ಫೋರೆನ್ಸಿಕ್‌ನವನು, ‘ಸರ್, ಇನ್ನೊಂದು ಬುಲೆಟ್ ಸಿಕ್ಕಿದೆ...’ ಎಂದು ಕೂಗಿದ.
ರಾಕೆೇಶ್ ಕುಳಿತಲ್ಲಿಯೇ ಕುಸಿದ. ಇನ್‌ಸ್ಪೆಕ್ಟರ್‌ ನಾಗೇಶ್ ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ಸಾವರಿಸಿಕೊಂಡು, ‘ಸರ್, ಇಲ್ಲೇನೋ ನನ್ನ ವಿರುದ್ಧ ಸಂಚು ನಡೆಯುತ್ತಿದೆ... ಯಾರೋ ನನ್ನನ್ನು ಸಿಕ್ಕಿ ಹಾಕಿಸಲು ಪ್ರಯತ್ನಿಸುತ್ತಿದ್ದಾರೆ. ಸಾವು ಸಂಭವಿಸಿದಾಗ ಇಲ್ಲಿ ಇದ್ದಿದ್ದು ನಾವಿಬ್ಬರೇ. ಅವರು ಸಾಯುವ ಮುಂಚೆಯೇ ನಿಮಗೆ ಫೋನ್ ಮಾಡಲಾಗಿತ್ತು... ಅಂದರೆ ನಾನಿಲ್ಲಿ ಬರುವುದು, ಕೃಷ್ಣನ್ ಸಾಯುವುದು ಯಾರಿಗೋ ಗೊತ್ತಿತ್ತು. ಅದು ನನ್ನ ಮೇಲೆ ಬರುವ ಹಾಗೆ ಪ್ಲಾನ್ ಮಾಡಿದ್ದಾರೆ...’

‘ನಿಮ್ಮನ್ನು ಯಾರು ಸಿಗಿಸಲು ಪ್ರಯತ್ನ ಮಾಡ್ತಾರೆ? ನಾಟಕ ಸಾಕು... ಇಲ್ಲಿನ ಕೆಲಸ ಮುಗಿದ ತಕ್ಷಣ ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ’ ಎಂದ ನಾಗೇಶ್‌ ಗಂಭೀರವಾಗಿ.
‘ಸರ್, ನಿಮಗೆ ನಾನು ಪೂರ್ತಿ ಸತ್ಯ ಹೇಳಿಲ್ಲ...’ ರಾಕೆೇಶ್ ಒಂದೊಂದೇ ಮಾತುಗಳನ್ನು ಬಿಡಿ ಬಿಡಿಸಿ ಹೇಳಿದ.
‘ನನಗೂ ಕೃಷ್ಣನ್ ಅವರ ಪತ್ನಿಗೂ ಕಳೆದ ಎರಡು ವರ್ಷಗಳಿಂದ ಸಂಬಂಧ ಇದೆ. ಕೆಲ ದಿನಗಳ ಹಿಂದೆ ಅವಳು ತನ್ನ ಪತಿಯೊಂದಿಗೆ ಮಾತಾಡಿ ಅವರೊಂದಿಗೆ ಡೈವೋರ್ಸ್ ಪಡೆಯುತ್ತೇನೆ ಅಂತಾ ಹೇಳಿದ್ದಳು. ಅದೇ ವಿಚಾರದಲ್ಲಿ ಮಾತಾಡಲು ನನ್ನನ್ನು ಕರೆಸಿದ್ದರು. ಬ್ಯಾಂಕ್‌ನಲ್ಲಿ, ಗ್ರಾಹಕರು ಕರೆದಿದ್ದಾರೆ ಎಂದು ಹೇಳಿ ಮಾತಾಡಲು ಬಂದಿದ್ದೆ’ ತಲೆ ತಗ್ಗಿಸಿ ಒಂದೊಂದು ಶಬ್ದಗಳನ್ನೂ ಬಿಡಿಸಿ ಬಿಡಿಸಿ ಹೇಳತೊಡಗಿದ ರಾಕೆೇಶ್.
ಆಶ್ಚರ್ಯ ಪಡುವ ಸರದಿ ನಾಗೇಶನದಾಗಿತ್ತು. ಒಮ್ಮೆ ಕೃಷ್ಣನ್‌ನ ಪತ್ನಿಯ ಕಡೆ ನೋಡಿದ. ಅವಳಿಗೆ ಅರ್ಥವಾಯಿತೇನೋ ಎದ್ದು ಬಂದಳು. ಅವಳನ್ನು ಗಮನಿಸದ ರಾಕೆೇಶ್ ಮುಂದುವರೆಸಿದ.

‘ಸರ್, ಡೈವೋರ್ಸ್ ಕೊಡಿ ಮದುವೆ ಆಗುತ್ತೇನೆ ಎಂದೆ. ಅವಳ ಖರ್ಚು ನಿನಗೆ ನಿಭಾಯಿಸಲು ಆಗಲ್ಲ, ನನ್ನನು ಚೆಸ್‌ನಲ್ಲಿ ಸೋಲಿಸು ನಿನಗೆ ಐದು ಕೋಟಿ ಕೊಡುತ್ತೇನೆ ಎಂದರು.’
‘ಕತೆ ಕಟ್ಟುತ್ತಿದ್ದೀರಾ... ಯಾವುದೊ ಇಂಗ್ಲಿಷ್‌ ಸಿನಿಮಾದ ಕತೆ ಇದ್ದಂತೆ ಇದೆ...’ ಗದರಿದ ನಾಗೇಶ್.
‘ಚೆಸ್‌ನಲ್ಲಿ ನಾನು ಗೆದ್ದ ತಕ್ಷಣ ತಮ್ಮ ಬ್ಯಾಂಕ್‌ನಿಂದ ಹಣ ವರ್ಗಾವಣೆ ಮಾಡಿ ನಾನು ಇನ್ನು ನಿಮ್ಮ ಜೀವನದಲ್ಲಿ ಬರಲ್ಲ, ನಿಮ್ಮಿಬ್ಬರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಗನ್‌ನಿಂದ ಶೂಟ್ ಮಾಡಿಕೊಂಡು ಸತ್ತರು. ಇಷ್ಟೇ ಆಗಿರೋದು... ಇದೇ ಪೂರ್ತಿ ಸತ್ಯ... ನೀವು ನನ್ನನ್ನು ಸಾಯಿಸಿದರೂ ನನ್ನ ಬಳಿ ಹೇಳಲು ಇರುವುದು ಇಷ್ಟೇ... ನನ್ನ ಖಾತೆಗೆ ಹಣ ವರ್ಗಾವಣೆ ಆಗಿರುವ ಮೆಸೇಜ್ ಕೂಡ ಬಂದಿದೆ ನೋಡಿ...’ ತನ್ನ ಮೊಬೈಲ್‌ನಲ್ಲಿ ಬಂದಿದ್ದ ಮೆಸೇಜ್ ತೋರಿಸಿದ.

‘ಇದು ನಿಮ್ಮ ಬ್ಯಾಂಕ್‌ನ ಅಕೌಂಟ್ ಅಲ್ಲವಲ್ಲ...’
‘ಇಲ್ಲ ಸರ್, ನಮ್ಮ ಬ್ಯಾಂಕ್‌ನಲ್ಲಿ ಹಾಕಿದರೆ ಗೊತ್ತಾಗುತ್ತೆ ಅಂತಾ ಈ ಅಕೌಂಟ್‌ಗೆ ಹಾಕಿಸಿದೆ.’
ಅದ್ಯಾಕೋ ನಾಗೇಶನಿಗೆ ಒಮ್ಮೆ ರಾಕೆೇಶನ ಮೇಲೆ ಸಣ್ಣದೊಂದು ನಂಬಿಕೆ ಬರತೊಡಗಿತು. ಎಂಥಾ ಕ್ರಿಮಿನಲ್ ಆದರೂ ಅದಷ್ಟೂ ಬೇಗ ಕ್ರೈಂ ಸೀನ್‌ನಿಂದ ದೂರ ಹೋಗಲು ಯತ್ನಿಸುತ್ತಾನೆ. ಇವನಿಗಿದ್ದದ್ದು ಹದಿನೈದು ನಿಮಿಷ, ಅಷ್ಟರಲ್ಲಿ ಅಲ್ಲಿಂದ ಓಡಿ ಹೋಗಬಹುದಿತ್ತು. ಹೋಗಿಲ್ಲ... ಕ್ರೈಂ ಸೀನ್ ಅನ್ನು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಷ್ಟು ಬದಲಾಯಿಸುವ ಚಾಕಚಕ್ಯತೆ ಕಾಣುತ್ತಿಲ್ಲ... ಆದರೆ ಅವನ ಮುಂದೆ ಇದ್ದ ಎರಡು ಉತ್ತರವಿಲ್ಲದ ಪ್ರಶ್ನೆಗಳು – ರಾಕೆೇಶನ ಪ್ರಕಾರ ನಾವು ಬರುವ ಐದು ನಿಮಿಷದ ಹಿಂದೆ ಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡರು. ಹಾಗಾದರೆ ಹದಿನೈದು ನಿಮಿಷದ ಕೆಳಗೆ ನಮಗೆ ಫೋನ್ ಮಾಡಿದವರು ಯಾರು ?

ಕೃಷ್ಣನ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದರೆ ಇವನಿಗೆ ಯಾಕೆ ಐದು ಕೋಟಿ ಕೊಡುತ್ತಿದ್ದರು... ಅಂಥದ್ದೇನಿತ್ತು?
ಅವನ ಗಮನ ಕೃಷ್ಣನ್ ಅವರ ಹೆಂಡತಿಯ ಮೇಲೆ ಹೋಯಿತು... ಪ್ರೀತಿ–ಪ್ರೇಮ ಏನುಬೇಕಾದರೂ ಮಾಡಿಸಬಹುದು!
‘ನಿಮ್ಮ ಬಳಿ ಯಾವ ಶಂಕಿತರೂ ಇಲ್ಲದಿದ್ದರೆ ಕ್ರೈಂ ಸೀನ್‌ನ ಹತ್ತಿರ ಇರುವವರೂ ದೂರ ಇರುವವರೂ ಶಂಕಿತರೆ’ ಎನ್ನುವ ಪೊಲೀಸ್ ಮಾತುಗಳು ನೆನಪಾಗಿ–‘ಮೇಡಂ, ಈ ಘಟನೆ ನಡೆದಾಗ ನೀವೆಲ್ಲಿ ಇದ್ರಿ?’ ಎಂದು ಕೇಳಿದ.
‘ನಾನು ಶಾಪಿಂಗ್‌ಗೆ ಹೋಗಿದ್ದೆ. ನಿಮ್ಮ ಫೋನ್ ಬಂದ ತಕ್ಷಣ ಬಂದೆ.’

‘ನಾವು ಕರೆ ಮಾಡಿದ ಹತ್ತು ನಿಮಿಷದಲ್ಲಿ ಇಲ್ಲಿಗೆ ಬಂದ್ರಿ. ಅಂದರೆ ನೀವು ಈ ಮನೆಯಿಂದ ಹತ್ತು ನಿಮಿಷದ ದೂರದಲ್ಲಿ ಇದ್ರಿ ಅಂತಾಯಿತು.’
‘ನೀವು ಏನು ಹೇಳುತ್ತಿದ್ದೀರಾ... ನನಗರ್ಥ ಆಗುತ್ತಿಲ್ಲ...’ ಸಿಡುಕಿನ ದನಿಯಲ್ಲಿ ನುಡಿದಳು. ಅವಳ ನಡೆ ನುಡಿಯಲ್ಲಿ ಅಹಂಕಾರ ಇತ್ತು. ತನ್ನ ಕಣ್ಮುಂದೆ ಪತಿಯ ಶವ ಇದೆ ಅನ್ನುವ ಬೇಸರ, ದುಃಖ, ಭಯ ಕೊಂಚವೂ ಇರಲಿಲ್ಲ ಅವಳಲ್ಲಿ.
‘ನೀವಿಬ್ಬರೂ ಸೇರಿ ಕೃಷ್ಣನ್ ಅವರ ಕೊಲೆ ಮಾಡಿ ಈ ರಾಕೆೇಶನನ್ನು ಕ್ರೈಂ ಸೀನ್ ಕ್ಲೀನ್ ಮಾಡಲು ಬಿಟ್ಟು ನೀವು ಯಾಕೆ ಹೋಗಿರಬಾರದು... ನಿಮ್ಮ ಮನೆಯಲ್ಲಿ ಸಿ.ಸಿ. ಟೀವಿ ಬೇರೆ ಇಲ್ಲ ಚೆಕ್ ಮಾಡಲು...’

‘ಮೊದಲು ನಿಮಗೆ ಫೋನ್ ಮಾಡಿದ್ದು ಯಾರು ಅಂತಾ ತಿಳಿದುಕೊಳ್ಳಿ. ಅವರಿಗೆ ಗೊತ್ತಿರಬಹುದು ಏನಾಯಿತು ಇಲ್ಲಿ ಅಂತಾ, ಸುಮ್ಮನೆ ಇಲ್ಲ ಸಲ್ಲದ ಅಪಾದನೆ ಮಾಡಬೇಡಿ.’ ಅದೇ ದುರಹಂಕಾರದ ಮಾತುಗಳು.
ಕೋಟ್ಯಂತರ ರೂಪಾಯಿಗಳ ಆಸ್ತಿ ಇನ್ನು ತನ್ನದೇ ಎನ್ನುವ ದುರಹಂಕಾರ ಆಗಲೇ ಬಂದಿದೆ ಎಂದುಕೊಂಡ ನಾಗೇಶ್.
‘ಆ ಫೋನ್ ನೀವೇ ಯಾಕೆ ಮಾಡಿರಬಾರದು? ರಾಕೆೇಶ್ ಇರುವಂತೆಯೇ ಪೋಲಿಸ್ ಬಂದರೆ ಅವನು ಕೊಲೆ ಆಪಾದನೆಯಿಂದ ಅರೆಸ್ಟ್ ಆದರೆ ಆಸ್ತಿಯೂ ನಿಮಗೆ, ಮತ್ತೆ ಹೊಸ ಜೀವನ ನಡೆಸುವ ಅವಕಾಶ...’ ವ್ಯಂಗ್ಯವಾಗಿ ಪ್ರಶ್ನಿಸಿದ ಇನ್‌ಸ್ಪೆಕ್ಟರ್‌ ನಾಗೇಶ್.
ರಾಕೆೇಶ್ ದಂಗಾದ.

‘ನಿಜಾನಾ? ಇವಳೇ ಮಾಡಿದ್ದಳಾ? ನನ್ನ ಮೇಲಿನ ಪ್ರೀತಿ ಎಲ್ಲ ನನ್ನ ಭ್ರಮೆಯಾ?’
‘ರಾಕೆೇಶ್ ನಂಬಬೇಡಾ... ನಾನು ಹಾಗೆ ಮಾಡಿಲ್ಲ... ಹಾಗೇನಾದರೂ ಆಗಿದ್ದರೆ ಕೃಷ್ಣನ್ ಯಾಕೆ ಐದು ಕೋಟಿ ನಿನಗೆ ಕೊಡುತ್ತಿದ್ದರು?’
‘ರಾಕೆೇಶ್ ನಿಮ್ಮ ಫೋನ್ ಕೊಡಿ’ ಎಂದ ಇನ್‌ಸ್ಪೆಕ್ಟರ್‌ ನಾಗೇಶ್.
‘ನಿಮಗೆ ಕೃಷ್ಣನ್ ಅವರು ಐದು ಕೋಟಿ ಕೊಟ್ಟರು ಅಂತ ಹೇಳಿದಿರಲ್ಲ, ಆ ಮಾಹಿತಿ ನಿಮಗೆ ಬ್ಯಾಂಕ್‌ನಿಂದ ಬಂತಲ್ಲ, ಆ ಮೆಸೇಜ್ ತೋರಿಸಿ... ನಿಮ್ಮ ಅಕೌಂಟ್ ಈ ಬ್ಯಾಂಕ್‌ನ ಯಾವ ಬ್ರಾಂಚ್‌ನಲ್ಲಿ ಇದೆ ಅಂತಾ ಹೇಳಿ.’

ರಾಕೆೇಶ್‌ಗೆ ಏನೂ ಅರ್ಥ ಆಗಲಿಲ್ಲ. ಅವಳೆಡೆ ನೋಡಿದ. ಅವಳು ತಲೆ ಆಡಿಸಿದಳು, ತೋರಿಸೆಂದು.
ನಾಗೇಶ್ ಕಾನ್‌ಸ್ಟೆಬಲ್ ಕರೆದು, ‘ಈ ಬ್ಯಾಂಕ್‌ಗೆ ಫೋನ್ ಮಾಡಿ ರಾಕೆೇಶ್ ಅವರ ಅಕೌಂಟ್‌ಗೆ ಇವತ್ತು ಐದು ಕೋಟಿ ಹಣ ಹಾಕಿದ್ದಾರೆ, ಅದು ಯಾರ ಅಕೌಂಟ್‌ನಿಂದ ಅಂತಾ ಕೇಳಿ ತಿಳಿದುಕೋ...’
‘ಅಂದರೆ ನಿಮ್ಮ ಅನುಮಾನದ ಪ್ರಕಾರ ನಾನು ರಾಕೆೇಶ್‌ಗೆ ಹಣ ಕೊಟ್ಟು ನನ್ನ ಪತಿ ಕೊಲೆ ಮಾಡಿಸಿ, ಈ ನಾಟಕ ಆಡು ಅಂತಾ ಹೇಳಿದ್ದೇನೆ ಅಂತಾನಾ?’ ಸಿಟ್ಟಿನಿಂದ ಕೂಗಿದಳು. ಅವಳ ಆ ಕೂಗಿಗೆ ಅಲ್ಲಿದ್ದವರೆಲ್ಲ ಒಮ್ಮೆ ಬೆದರಿದರು.
‘ನಾವು ಏನೂ ಹೇಳುತ್ತಿಲ್ಲ. ನಾವು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತಿದ್ದೇವೆ ಅಷ್ಟೇ...’ ಎಂದ ನಾಗೇಶನ ಕಿವಿಯಲ್ಲಿ ಬ್ಯಾಂಕ್‌ಗೆ ಫೋನ್ ಮಾಡಿದ ಕಾನ್‌ಸ್ಟೆಬಲ್ ಬಂದು ಏನೋ ಉಸುರಿದ.

‘ನನ್ನ ಅನುಮಾನ ನಿಜ, ಐದು ಕೋಟಿ ಹಣ ಕೃಷ್ಣನ್ ಅವರ ಅಕೌಂಟ್‌ನಿಂದ ನಿಮ್ಮ ಖಾತೆಗೆ ಜಮಾ ಆಗಿಯೇ ಇಲ್ಲ. ಅಂದರೆ ಹಣದ ವಿಚಾರ ಕೂಡ, ಕೇವಲ ನಮ್ಮನ್ನು ದಾರಿತಪ್ಪಿಸಲು ಆಡಿದ ನಾಟಕ.’
‘ಸರ್, ಹಣ ಬಂದಿರುವ ಮೆಸೇಜ್ ನನಗೆ ಬಂದಿದೆ...’ ರಾಕೆೇಶ್ ಕೂಗಿದ. ನಾಗೇಶ್ ಅವನ ಮಾತುಗಳು ಕೇಳಿಸಲೇ ಇಲ್ಲವೇನೋ ಎಂಬಂತೆ, ‘ನೀವಿಬ್ಬರೂ ಸೇರಿ ಈ ನಾಟಕ ಆಡಿ ಕೃಷ್ಣನ್ ಅವರನ್ನು ಕೊಂದು ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಬಿಂಬಿಸಲು ಪ್ರಯತ್ನ ಮಾಡಿದಿರಿ. ಚೆಸ್ ಆಟದಲ್ಲಿ ಸೋತಿದ್ದು, ಗನ್ ತೆಗೆದುಕೊಂಡು ಬಾ ಎಂದಿದ್ದು, ಬ್ಯಾಂಕ್‌ಗೆ ಹಣ ಹಾಕಿದರು ಎಂದದ್ದು ಎಲ್ಲ ನಾಟಕದ ಒಂದು ಭಾಗ. ಎಲ್ಲ ಸರಿಯಾಗಿತ್ತು ಆದರೆ, ಆ ಎರಡನೇ ಬುಲೆಟ್ ನಮಗೆ ಸಿಕ್ಕು, ನಿಮ್ಮ ಕತೆಯಲ್ಲಿ ಅನುಮಾನ ಹುಟ್ಟಿತು.’
ಅದೇ ಸಮಯಕ್ಕೆ ಕರಿ ಕೋಟನ್ನು ತೊಟ್ಟ ಒಬ್ಬ ದಡೂತಿ ವ್ಯಕ್ತಿ ಆ ಮನೆಯ ಒಳಗಡೆ ಪ್ರವೇಶಿಸಿದ. ಇನ್‌ಸ್ಪೆಕ್ಟರ್‌ ನಾಗೇಶ್‌ಗೆ ಅವರ್‍ಯಾರೆಂದು ತಿಳಿದಿತ್ತು. ಪ್ರಖ್ಯಾತ ಲಾಯರ್ ಶ್ರೀನಿವಾಸ ಗುಪ್ತ.

‘ಏನಾಯಿತು ಇಲ್ಲಿ... ನಾಗೇಶ್... ಕೃಷ್ಣನ್‌ಗೆ ಏನಾಯಿತು?’
ನಾಗೇಶ್ ಅವರನ್ನು ಕುಳ್ಳರಿಸಿ ಸಂಕ್ಷಿಪ್ತವಾಗಿ ವಿವರಿಸಿದ.
‘ಅಂದರೆ ನಾನು ಬರುವ ಮೊದಲೇ ಕೃಷ್ಣನ್‌ನ ಕೊಲೆ ಆಗಿದೆ.’
‘ಏನು ಹೇಳುತ್ತಿದ್ದೀರಿ ಸರ್? ನಿಮಗೆ ತಿಳಿದಿತ್ತಾ... ಕೃಷ್ಣನ್ ಅನ್ನು ಕೊಲೆ ಮಾಡಲು ಯಾರೋ ಸಂಚು ಹೂಡಿದ್ದಾರೆ ಅಂತಾ?’
‘ಎರಡು ದಿನದ ಹಿಂದೆ ಕೃಷ್ಣನ್ ನನಗೆ ಫೋನ್ ಮಾಡಿ, ತನ್ನ ಪತ್ನಿಗೆ ಹೊರಗಡೆ ಸಂಬಂಧ ಇದೆ, ತನ್ನ ಆಸ್ತಿಗೋಸ್ಕರ ಅವಳು ತನ್ನನ್ನು ಕೊಲೆ ಮಾಡಬಹುದು ಅಥವಾ ಮಾಡಿಸಬಹುದು. ಅಕಸ್ಮಾತ್ ನಾನು ಕೊಲೆಯಾಗಿ ಸತ್ತರೆ ನನ್ನ ಸಕಲ ಆಸ್ತಿಯನ್ನೂ ಮಾರಿ ‘ಸೈನಿಕರ ಕಲ್ಯಾಣ ನಿಧಿಗೆ ಕೊಡುವುದು’ ಎಂದು ವಿಲ್ ಬದಲಾಯಿಸಬೇಕು ಎಂದು ಹೇಳಿದ್ದರು. ಇವತ್ತು ಎರಡೂವರೆ ಹೊತ್ತಿಗೆ ಬನ್ನಿ ಒಟ್ಟಿಗೆ ಊಟ ಮಾಡಿ ವಿಲ್‌ಗೆ ಸಹಿ ಹಾಕ್ತೀನಿ ಅಂತ ಹೇಳಿದ್ದರು.’

ಇನ್‌ಸ್ಪೆಕ್ಟರ್‌ ನಾಗೇಶನ ಮುಖ ಅರಳಿತು. ಕೊಲೆಗೆ ಬೇಕಾದ ಉದ್ದೇಶ ತಿಳಿಯಿತು. ಶಂಕಿತರು ತನ್ನ ಎದುರಿಗೇ ಇದ್ದಾರೆ. ರಾಕೆೇಶ್ ಕಡೆ ತಿರುಗಿ – ‘ಈಗ ಅರ್ಥ ಆಯಿತು ನಿಮ್ಮ ಪೂರ್ತಿ ನಾಟಕ. ಕೃಷ್ಣನ್ ಕೊಲೆ ಆದರೆ ನಿಮಗೆ ಯಾವ ಆಸ್ತಿ, ಹಣ ಏನೂ ಬರದು ಅಂತಾ ಗೊತ್ತಾಗಿ ನಿಮ್ಮ ಪ್ಲಾನ್ ಅನ್ನು ಸ್ವಲ್ಪ ಬದಲಾಯಿಸಿದಿರಿ. ಕೊಲೆಯನ್ನು ಆತ್ಮಹತ್ಯೆ ಅಂತಾ ಬಿಂಬಿಸಿದರೆ ಅಕಸ್ಮಾತ್ ಕೃಷ್ಣನ್ ಈ ವಿಲ್‌ಗೆ ಸಹಿ ಹಾಕಿದ್ದರೂ ನಿಮಗೇ ಆ ಆಸ್ತಿ ಬರುತ್ತಿತ್ತು. ಒಳ್ಳೆಯ ಪ್ಲಾನ್. ನನಗೂ ಮನಸ್ಸಿನ ಒಂದು ಮೂಲೆಯಲ್ಲಿ ಕೊರೆಯುತ್ತಿತ್ತು – ಈ ರಾಕೆೇಶ್ ನಿಜ ಹೇಳುತ್ತಿದ್ದಾನಾ ಅಂತಾ... ಈಗ ಎಲ್ಲ ಕ್ಲಿಯರ್. ಕೃಷ್ಣನ್ ಅವರ ಕೊಲೆಯ ಆಪಾದನೆ ಮೇರೆಗೆ ನಿಮ್ಮಿಬ್ಬರನ್ನು ಅರೆಸ್ಟ್ ಮಾಡುತ್ತಿದ್ದೇವೆ.’
‘ಸರ್, ನಾನು ನಿರಪರಾಧಿ. ನನಗೇನೂ ತಿಳಿದಿಲ್ಲ. ಈ ವಿಲ್, ಹಣಕಾಸಿನ ಬಗ್ಗೆ ನನಗೇನೂ ತಿಳಿದಿಲ್ಲ. ನನ್ನ ತಪ್ಪು ಇವಳನ್ನು ಅತೀವವಾಗಿ ಪ್ರೀತಿಸಿದ್ದು... ಅಷ್ಟೇ’ ರಾಕೆೇಶ್ ಕುಸಿದು ಬಿಳುತ್ತಾ ಹೇಳಿದ.

‘ಸರ್, ನಮಗೆ ನಿಜವಾಗಿಯೂ ಈ ವಿಲ್ ಬಗ್ಗೆ ತಿಳಿದಿರಲಿಲ್ಲ. ನಾವು ಈ ಕೊಲೆ ಮಾಡಿಲ್ಲ. ನಮ್ಮನ್ನು ನಂಬಿ’ ಕೃಷ್ಣನ್ ಪತ್ನಿ ಅಳಲು ಪ್ರಾರಂಭಿಸಿದಳು. ಅಲ್ಲಿಯವರೆಗೆ ತೋರುತ್ತಿದ್ದ ದರ್ಪ, ದುರಹಂಕಾರ ಎಲ್ಲ ಹೊರಟು ಹೋಗಿತ್ತು.
ಮುಂದಿನ ಕೆಲಸ ಮಾಡಿರೆಂದು ಅಲ್ಲಿದ್ದವರಿಗೆ ಹೇಳಿ ಅವರಿಬ್ಬರನ್ನು ಕರೆದುಕೊಂಡು ಹೊರಟ ನಾಗೇಶ್.
ಅಷ್ಟರಲ್ಲಿ ರಾಕೆೇಶನ ಫೋನ್ ರಿಂಗ್ ಆಯಿತು. ಯಾವುದೊ ಗೊತ್ತಿಲ್ಲದ ನಂಬರ್! ತೆಗೆದುಕೊಳ್ಳಲಾ ಎಂದು ತಲೆ ಎತ್ತಿ ಕೇಳಿದ ನಾಗೇಶ್‌ಗೆ.
‘ಹಲೋ ಯಂಗ್ ಮ್ಯಾನ್’ ಆಕಡೆಯಿಂದ ಬಂತು ದನಿ.
ಅದು ಕೃಷ್ಣನ್‌ ದನಿ!

ಗಾಬರಿಯಿಂದ ಹತ್ತಿರದಲ್ಲಿದ್ದ ಗೋಡೆಗೆ ಒರಗಿದ ರಾಕೆೇಶ್.
‘ಗಾಬರಿಯಾದೆಯಾ ಯಂಗ್ ಮ್ಯಾನ್? ಅಲ್ಲಿ ಸತ್ತು ಬಿದ್ದಿರುವ ವ್ಯಕ್ತಿ ಇಲ್ಲಿ ಫೋನ್‌ನಲ್ಲಿ ಹೇಗೆ ಮಾತಾಡುತ್ತಿದ್ದಾನೆ ಅಂತ? ಇದೇ ತಂತ್ರಜ್ಞಾನದ ವಿಶೇಷತೆ. ಈ ಸಮಯಕ್ಕೆ ಈ ಆಡಿಯೋ ನಿನ್ನ ಫೋನ್‌ನಲ್ಲಿ ಬರುವ ಹಾಗೆ ಸೆಟ್ ಮಾಡಿದ್ದೇನೆ. ಈ ಹೊತ್ತಿಗೆ ನೀನು ಮತ್ತು ಅವಳು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರಬೇಕಲ್ಲ? ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ... ಯಾಕೆಂದರೆ ಸಾಯುವ ಹದಿನೈದು ನಿಮಿಷದ ಮೊದಲು ನಾನೇ ಪೊಲೀಸರಿಗೆ ಫೋನ್ ಮಾಡಿದ್ದೆ. ನೀನು ನನ್ನ ಸಾವು ನೋಡಿ ಹೆದರಿ ಓಡಿ ಹೋಗುವ ಮೊದಲು ಅವರು ಬಂದಿರಬೇಕಲ್ಲವಾ?’
ರಾಕೇಶ್ ಬೆವರತೊಡಗಿದ. ಅವನ ಬಾಯಿಯಿಂದ ಯಾವ ಮಾತುಗಳೂ ಹೊರಡದಂತಾಯಿತು. ಕೃಷ್ಣನ್‌ನ ಮಾತುಗಳು ಮುಂದುವರೆದಿದ್ದವು...

‘ಇದೆಲ್ಲ ಹೀಗೆಯೇ ನಡೆಯುತ್ತದೆ ಅಂತಾ ಹೇಗೆ ಯೋಚಿಸಿದೆ ಅಂದುಕೊಳ್ಳುತ್ತಿರುವೆಯಾ? ಚದುರಂಗದ ಆಟದಲ್ಲಿ ಒಂದು ನಡೆ ನಡೆಸಬೇಕಾದರೂ ಎದುರಾಳಿ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ, ಅದರಿಂದ ನಮ್ಮ ಮುಂದಿನ ನಡೆಗಳನ್ನು ಹೇಗೆ ಬದಲಾವಣೆ ಮಾಡಿಕೊಳ್ಳಬೇಕು, ಅದಕ್ಕೆ ಅವನ ಪ್ರತಿನಡೆ ಏನು ಎನ್ನುವುದನ್ನು ಊಹಿಸಿ ನಮ್ಮ ಕಾಯಿಗಳನ್ನು ಮುಂದೆ ನಡೆಸಬೇಕಾಗುತ್ತದೆ. ಅದೇರೀತಿ, ಕಡೆಯಲ್ಲಿ ಹೀಗೆಯೇ ಆಗಬೇಕೆಂದೇ ಮೊದಲಿನಿಂದ ನನ್ನ ನಡೆಗಳನ್ನು ನಡೆಸುತ್ತಾ ಬಂದೆ.

ನೀನು ನಿರಪರಾಧಿ ಎಂದು ಪೊಲೀಸರಿಗೆ ನಂಬಿಸಲು ಬೇಕಾದ ಯಾವ ಸಾಕ್ಷಿಗಳೂ ಇಲ್ಲ. ನಿನಗೆ ಬರಹೇಳಿದೆ ಎಂದು ಪ್ರೂವ್ ಮಾಡಲು, ನನ್ನ ಆ ಕಾಲ್ ವಿವರಗಳು ಇಲ್ಲ. ಬ್ಯಾಂಕ್‌ನಲ್ಲಿ ನಿನ್ನ ಖಾತೆಗೆ ಐದು ಕೋಟಿ ಹಣ ಜಮಾ ಆಗಿದೆ ಎಂದು ಬಂದಿದ್ದು ನಕಲಿ ಮೆಸೇಜ್. ಅವರಿಗೆ ಸಿಕ್ಕ ಇನ್ನೊಂದು ಬುಲೆಟ್ ಅವರ ಸಂಶಯ ಜಾಸ್ತಿ ಮಾಡುತ್ತದೆ. ಅದಲ್ಲದೆ, ನನ್ನ ಲಾಯರ್‌ಗೆ ನಾನು ಕೊಲೆ ಆದರೆ, ನನ್ನ ಆಸ್ತಿ, ಸೈನಿಕರ ಕಲ್ಯಾಣ ನಿಧಿಗೆ ಹೋಗಲಿ ಎಂದು ವಿಲ್ ಮಾಡಿಕೊಂಡು, ಇವತ್ತು ಸರಿಯಾದ ಸಮಯಕ್ಕೆ ಬರಲು ಹೇಳಿದ್ದೆ. ನೀನು ನನ್ನ ಸಾವನ್ನು ಆತ್ಮಹತ್ಯೆ ಎಂದು ಹೇಳುತ್ತೀಯ... ಅದನ್ನು ನಂಬಲು ಪೂರಕ ಸಾಕ್ಷಿ ಇಲ್ಲದೆ, ಆಸ್ತಿಗೋಸ್ಕರ ನೀನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ನನ್ನನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದೀರ ಎಂದು ಪೊಲೀಸರಿಗೆ ಮನವರಿಕೆ ಆಗುತ್ತದೆ. ನಿಮ್ಮನ್ನು ಕೋರ್ಟಿನಲ್ಲಿ ನನ್ನ ಲಾಯರ್ ನೋಡಿಕೊಳ್ಳುತ್ತಾನೆ... ಅವಳ ಸೌಂದರ್ಯಕ್ಕೆ ಮಾರುಹೋಗಿ ನಿನ್ನ ಜೀವನ ಹಾಳು ಮಾಡಿಕೊಂಡೆ. ಇನ್ನು ಹದಿನಾರು ವರ್ಷ ಇಬ್ಬರೂ ಜೈಲಿನಲ್ಲಿ ಕಳೆಯಲು ತಯಾರಾಗಿರಿ... ಬೈ...’ ದನಿ ನಿಂತಿತು.

‘ಸರ್...’ ರಾಕೆೇಶ್ ಸಾವರಿಸಿಕೊಂಡು ಕೂಗಿದ. ನಾಗೇಶ್ ಸಮೇತ ಎಲ್ಲರೂ ಅವನನ್ನೇ ತಿರುಗಿ ನೋಡಿದರು.
‘ಸರ್, ಈಗ ಕೃಷ್ಣನ್ ಅವರ ವಾಯ್ಸ್ ಮೆಸೇಜ್ ಬಂದಿತ್ತು ಈ ಫೋನ್‌ಗೆ. ಅದರಲ್ಲಿ ಅವರೇ ತಾನು ಆತ್ಮಹತ್ಯೆ ಮಾಡಿಕೊಂಡು ಅದರ ಅಪವಾದ ನನ್ನ ಮೇಲೆ ಬರುವ ಹಾಗೆ ಮಾಡಿದೆ ಎಂದು ಹೇಳಿದ್ದಾರೆ... ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ...’
ಅಲ್ಲಿದ್ದವರಿಗೆಲ್ಲ ಒಮ್ಮೆಲೇ ಆಶ್ಚರ್ಯ!
‘ನೋಡಿ ಸರ್, ನಾನು ಪ್ಲೇ ಮಾಡಿ ತೋರಿಸುತ್ತೇನೆ.’
ಫೋನ್‌ನ ಬಟನ್ ಒತ್ತಿದ. ಇಡೀ ಫೋನ್ ಸ್ಕ್ರೀನ್ ಖಾಲಿ! ಯಾವ ಬಟನ್ ಒತ್ತಿದರೂ ಕೆಲಸ ಮಾಡುತ್ತಿಲ್ಲ!
‘ಸರ್, ಅವರು ಚಾಣಾಕ್ಷ, ಆ ಮೆಸೇಜ್ ಜೊತೆಗೆ ಯಾವುದೊ ವೈರಸ್ ಕಳುಹಿಸಿ ನನ್ನ ಇಡೀ ಫೋನ್‌ನ ಎಲ್ಲ ವಿವರಗಳೂ ಡಿಲಿಟ್ ಆಗುವಹಾಗೆ ಮಾಡಿದ್ದಾರೆ...’ ಹತಾಶನಾಗಿ ಕೂಗಿದ.
‘ಸಾಕು ನಿಮ್ಮ ನಾಟಕ ರಾಕೇಶ್, ಏನೇ ಹೇಳುವುದಿದ್ದರೂ ಕೋರ್ಟ್‌ನಲ್ಲಿ ಹೇಳಿ.’
ತನ್ನ ಕಣ್ಣ ಮುಂದೆ ಸಾಗಿದ ಕೃಷ್ಣನ್‌ನ ಶವವನ್ನು ಒಮ್ಮೆ ನೋಡಿದ ರಾಕೆೇಶ್... ಅದು ಅವನನ್ನು ನೋಡಿ, ವ್ಯಂಗ್ಯವಾಗಿ ನಕ್ಕಂತೆ ಅನಿಸಿತು.

***

ವಾಸುದೇವ ಮೂರ್ತಿ ಪಿ.
ಹುಟ್ಟಿದ ಊರು ಶಿವಮೊಗ್ಗ. ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ವೃತ್ತಿ. ಸಂವಹನ ಕಲೆ ಮತ್ತು ಇತರ ವೃತ್ತಿಪರ ಕೌಶಲ್ಯಗಳಿಗೆ ತರಬೇತಿ ಕೊಡುವ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಮೊದಲಿನಿಂದಲೂ ಪತ್ತೆದಾರಿ ಸಾಹಿತ್ಯದ ಬಗ್ಗೆ ಆಸಕ್ತಿ. ಪತ್ತೆದಾರಿ ಕಾದಂಬರಿಕಾರರಾದಎನ್. ನರಸಿಂಹಯ್ಯ, ಟಿ.ಕೆ. ರಾಮರಾವ್ ಅವರ ಕಾದಂಬರಿಗಳಿಂದ ಶುರುವಾದ ಓದುವ ಆಸಕ್ತಿ ಬಳಿಕ ಪತ್ತೆದಾರಿ ಕತೆಗಳ ಬರವಣಿಗೆಯತ್ತ ಹೊರಳಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !