ಮರಳಿದ ವಿವೇಕ

7
ಮಕ್ಕಳ ಕಥೆ

ಮರಳಿದ ವಿವೇಕ

Published:
Updated:
Deccan Herald

ಸೂರ್ಯ ನೆತ್ತಿಯ ಮೇಲೆ ಬಂದು ಪ್ರಖರವಾದ ಬಿಸಿಲು ಸುರಿಸತೊಡಗಿದನು. ಇನ್ನೂ ಮಲಗಿದ್ದ ಗುರುಮೂರ್ತಿಯ ಮೇಲೆ ತಂದೆಗೆ ವಿಪರೀತ ಕೋಪ ಬಂದಿತು. ಅವನನ್ನು ಏಳಿಸಿ ಎದೆ ಎತ್ತರಕ್ಕೆ ಬೆಳೆದ ಮಗ ಎಂಬುದನ್ನು ನೋಡದೆ ಕೆನ್ನೆಗೆ ಒಂದೇಟು ಹಾಕಿ, ‘ಮದುವೆ ವಯಸ್ಸಿಗೆ ಬಂದಿದೀಯಾ. ಇಂದಿಗೂ ನಾನೇ ದುಡಿದು ನಿನ್ನ ಹೊಟ್ಟೆ ತುಂಬಿಸಬೇಕಲ್ಲೋ, ಮೊಮ್ಮಕ್ಕಳನ್ನು ಆಡಿಸುವ ಕಾಲಕ್ಕೂ ಹೊಲದ ನೇಗಿಲು ನಾನೇ ಹಿಡಿಯಬೇಕಲ್ಲೋ, ದಿನಾ ನಿಂದು ಇದೇ ಗೋಳು’ ಎಂದು ಕೋಪದಲ್ಲಿ ಕೂಗಾಡಿದರು. ಇವರ ಕೂಗಾಟವನ್ನು ಎದುರು ಮನೆಯವರು, ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲ ನೋಡಿದ್ದರಿಂದ ಗುರುವನಿಗೆ ದುಃಖ ಒತ್ತರಿಸಿಕೊಂಡು ಬಂದಿತು. ಮುಖಬಾಯಿ ಕೂಡ ತೊಳೆದುಕೊಳ್ಳದೆ ಬೀದಿಯ ಕಡೆ ರಭಸವಾಗಿ ಹೊರಟನು.

ಗುರುವ ಅಳುತ್ತ ಬಿಕ್ಕಳಿಕೆಯನ್ನು ತುಟಿಯ ಅಂಚಲ್ಲೇ ಒತ್ತಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ದಾರಿ ಸಾಗಿದ ಕಡೆ ನಡೆಯತೊಡಗಿದನು. ಎಂದೂ ಕಟುವಾಗಿ ವರ್ತಿಸದ ತಂದೆ ಇಂದು ನಡೆದುಕೊಂಡ ರೀತಿ ಬಹಳ ನೋವು ತಂದಿತ್ತು. ದಾರಿಯಲ್ಲಿ ಸಿಕ್ಕ ಮಾವ ಕೃಷ್ಣಪ್ಪ, ‘ಎಲ್ಲಿಗಪ್ಪಾ’ ಎಂದು ಕೇಳಿದ್ದಕ್ಕೆ ‘ಇಲ್ಲೇ, ಗೆಳೆಯನ ತೋಟದ ಹತ್ತಿರ’ ಎಂದು ಮಾತ್ರ ಉತ್ತರ ನೀಡಿ ಜೋರಾಗಿ ದಾಪುಗಾಲು ಹಾಕಿದನು.

ಸಂಜೆಯ ವೇಳೆಗೆ ತನ್ನ ಊರಿಂದ ಬಹುದೂರ ಬಂದದ್ದನ್ನು ಖಾತ್ರಿ ಪಡೆಸಿಕೊಂಡನು. ಅಲ್ಲೇ ಇದ್ದ ಹಳ್ಳಿಯ ಆಲದ ಮರದ ಕಟ್ಟೆಯ ಮೇಲೆ ಕುಳಿತು ಸುಧಾರಿಸಿಕೊಂಡನು. ಸ್ವಲ್ಪ ಸಮಯದ ನಂತರ ಒಂದು ಮನೆಯ ಮುಂದೆ ‘ನೀರು ಕೊಡಿಯಮ್ಮ’ ಎಂದಾಗ ಒಳಗಿದ್ದ ಹುಡುಗಿಯೊಬ್ಬಳು ಕಿಟಕಿಯಲ್ಲಿ ಇವನನ್ನು ನೋಡಿ ಸಂಕೋಚ, ಗಾಬರಿಯಿಂದ ಹೊರಗೆ ಬರಲಿಲ್ಲ.

ಗುರುಮೂರ್ತಿ ಅಲ್ಲೇ ಇದ್ದ ಇನ್ನೊಂದು ಮನೆಯಲ್ಲಿ ನೀರು ಕುಡಿದು ‘ಇದು ಯಾವೂರಮ್ಮಾ’ ಎಂದಾಗ, ನೀರು ತಂದ ಹೆಂಗಸು, ‘ಲಕ್ಕಿಹಳ್ಳಿ ಮುದ್ದಪ್ಪ ದೇವರಿಗೆ ಬಂದಿದಿಯೇನಪ್ಪಾ’ ಎಂದು ಕೇಳಿದಳು. ಆಗ ಗುರುವ ‘ಇಲ್ಲ’ ಎಂದು ಹೇಳಿ ಹೊರಟನು.

ಗುಡಿಯ ಬಳಿಯ ಹಾಸುಗಲ್ಲಿನ ಮೇಲೆ ಹೋಗಿ ಕುಳಿತನು. ಸಂಜೆಯಾಗುತ್ತಿದ್ದಂತೆಯೇ ಪೂಜಾರಿ ಬಾಗಿಲು ಹಾಕುತ್ತ ‘ಇಲ್ಲೆಲ್ಲ ಕೂರಬಾರದು ನಡಿ ನಡಿ’ ಎಂದನು. ಗುರುವ ಅಲ್ಲಿಂದಲೂ ಎದ್ದನು. ಹಸಿವಿನಿಂದ ಹೊಟ್ಟೆ ಚುರುಗುಟ್ಟುತಿತ್ತು. ಹಸಿವು ತಡೆಯಲಾರದೇ ಅಲ್ಲೇ ಮನೆ ಮುಂದೆ ಅನ್ನದ ಪಾತ್ರೆ ತೊಳೆಯುತ್ತಿದ್ದ ಹೆಂಗಸೊಬ್ಬಳ ಬಳಿ ಹೋಗಿ ‘ಅಕ್ಕಾ... ಅಕ್ಕಾ, ಊಟ ಏನಾದರೂ ಇದೆಯಾ’ ಎಂದು ಸಂಕೋಚದಿಂದ ಕೇಳಿದನು. ‘ಹೋಗು ಹೋಗೋ... ಭೀಮ ಇದ್ದಾಂಗಿದೀಯಾ. ಊಟ ಕೇಳ್ತಾನೆ’ ಎಂದು ಬೈದಳು.

ಅವಳ ಮಾತುಗಳು ಅವನ ಹೃದಯವನ್ನು ಚುಚ್ಚಿದವು. ಗುರುವನಿಗೆ ತಕ್ಷಣವೇ ಕಣ್ಣಂಚಲ್ಲಿ ನೀರು ಬಂದಿತು. ಅಲ್ಲಿ ನಿಲ್ಲಲಾರದೆ ಹೊರಟು ಊರಿನ ಕೊನೆಗೆ ಒಂದು ಮುರುಕು ಜೋಪಡಿಯ ಬಳಿ ಬಂದು ಮರವೊಂದಕ್ಕೆ ಒರಗಿ ಕುಳಿತನು.  ಹಸಿವಿನಿಂದ ಹೊಟ್ಟೆ ಚುರುಗುಟ್ಟುತಿತ್ತು. ಹಸಿವು ತಡೆಯಲಾರದೇ ಅಲ್ಲೇ ಮನೆ ಮುಂದೆ ಅನ್ನದ ಪಾತ್ರೆ ತೊಳೆಯುತ್ತಿದ್ದ ಹೆಂಗಸೊಬ್ಬಳ ಬಳಿ ಹೋಗಿ ‘ಅಕ್ಕಾ... ಅಕ್ಕಾ, ಊಟ ಏನಾದರೂ ಇದೆಯಾ’ ಎಂದು ಸಂಕೋಚದಿಂದ ಕೇಳಿದನು. ‘ಹೋಗು ಹೋಗೋ... ಭೀಮ ಇದ್ದಾಂಗಿದೀಯಾ. ಊಟ ಕೇಳ್ತಾನೆ’ ಎಂದು ಬೈದಳು.

ಜೋಪಡಿಯ ಹೊರಗೆ ಕೃಶನಾದ ಒಬ್ಬ ಮುದುಕ ಕೆಮ್ಮುತ್ತ ಕುಳಿತ್ತಿದ್ದ. ಜೋಪಡಿಯ ಒಳಗಿನಿಂದ ಹೊಗೆ ಏಳುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಹಣ್ಣು ಹಣ್ಣಾದ ಮುದುಕಿಯೊಬ್ಬಳು ಖಾಲಿ ಮಣ್ಣಿನ ಗಡಿಗೆ ತೆಗೆದುಕೊಂಡು ‘ದೇವರೇ, ನನ್ನ ಜೀವನ ಸಾಕು ಮಾಡ್ತೀಯಪ್ಪ’ ಎನ್ನುತ್ತ ಮನೆಯ ಮುಂದಿದ್ದ ಬಾವಿಯ ಬಳಿ ಬಂದು ಸೇದುವ ಹಗ್ಗದ ಕುಣಿಕೆಗೆ ಗಡಿಗೆಯ ಕಂಠವನ್ನು ಸಿಲುಕಿಸಿ ಬಾವಿಯಲ್ಲಿ ಇಳಿಬಿಟ್ಟಳು. ಗಡಿಗೆ ತುಂಬಿದಾಗ ಬಹಳ ಕಷ್ಟದಿಂದ ಗಡಿಗೆಯನ್ನು ಮೇಲಕ್ಕೆ ಎಳೆಯುತ್ತಿದ್ದಳು. ಅದನ್ನು ನೋಡಿದ ಗುರುವ ಓಡಿಬಂದು ಹಗ್ಗ ಹಿಡಿದು ಗಡಿಗೆ ಎಳೆದು ‘ಅಜ್ಜಿ ನಿನಗೆ ವಯಸ್ಸಾಗಿದೆ. ಮನೆಯಲ್ಲಿ ಇರೋದು ಬಿಟ್ಟು ಇಲ್ಲಿಗೆ ಏಕೆ ಬಂದೆ’ ಎಂದು ಕೇಳಿದನು. ಆಗ ಅಜ್ಜಿಯು ‘ಮಕ್ಕಳು ಮನೆಯಲ್ಲಿ ಇದ್ದಿದ್ದರೆ ಏಕೆ ಬರುತ್ತಿದ್ದೆನಪ್ಪಾ’ ಎಂದು ನೋವಿನಿಂದ ಹೇಳಿದಳು. ‘ನಿನ್ನ ಮಕ್ಕಳು ಎಲ್ಲಿಗೆ ಹೋದರು?’ ಎಂದು ಕೇಳಿದನು. ಆಗ ಅಜ್ಜಿಯು ‘ಮಗ ನಮ್ಮನ್ನು ಬಿಟ್ಟು ಹೆಂಡತಿಯ ಜೊತೆ ಹೋದ. ನಮ್ಮನ್ನು ನೋಯಿಸಿದ್ದಕ್ಕೋ ಏನೋ, ಕಳೆದ ವರ್ಷ ಚಕ್ಕಡಿ ಬಿದ್ದು ಸತ್ತು ಹೋದ. ಮೊಮ್ಮಕ್ಕಳ ಸೊಸೆ ಇಲ್ಲಿಗೆ ಬರುತ್ತಿಲ್ಲ. ಮಕ್ಕಳು ಸರಿಯಾಗಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ’ ಎಂದು ಭಾರವಾದ ಗಡಿಗೆಯನ್ನು ಎತ್ತಲು ಅಜ್ಜಿ ಪರದಾಡಿದಾಗ ತಕ್ಷಣ ಗುರುವ ಅದನ್ನು ಎತ್ತಿ ಗುಡಿಸಿಲಿನ ಮುಂದೆ ಇಟ್ಟ. ನಾನು ಇಲ್ಲದೇ ಹೋದರೆ ನನ್ನ ತಂದೆ ತಾಯಿಗಳ ಸ್ಥಿತಿಯೂ ಇದೇ ಆಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಗಳಗಳನೆ ಅತ್ತು ಮನೆಗೆ ಹಿಂದಿರುಗಲು ನಿರ್ಧರಿಸಿದನು. ಮಾತೃ ಪಿತೃ ವಾತ್ಸಲ್ಯದ ವಿವೇಕ ಗುರುವನಿಗೆ ಮರುಕಳಿಸಿತು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !