ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೆಮಗೆ ಜೀವ ಬದುಕು

ಮಕ್ಕಳ ದಿನಾಚರಣೆ ವಿಶೇಷ
Last Updated 10 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಮಕ್ಕಳು ನಮ್ಮ ಮೂಲಕ ಈ ಜಗತ್ತಿಗೆ ಬಂದಿವೆಯೇ ಹೊರತು, ಅವು ನಮ್ಮವಲ್ಲ ಎನ್ನುತ್ತಾನೆ ಖಲೀಲ್‌ ಗಿಬ್ರಾನ್. ಮಕ್ಕಳ ದೇಹಗಳಿಗೆ ನೀವು ಮನೆಯಾಗಿದ್ದಿರೇ ಹೊರತು, ಅವರ ಆತ್ಮಗಳಿಗಲ್ಲ ಎನ್ನುತ್ತಾನಾತ. ಹೀಗೆ ಮಗು ಮೂಲತಃ ಅಪರಿಮಿತ, ಅನನ್ಯ ಮತ್ತು ಅದ್ವಿತೀಯ ಗುಣಗಳನ್ನ ಹೊತ್ತು ಶಾಲೆಗೆ ಬರುವ ಹೊತ್ತಿಗೆ ನಾವು ಹೇಗೆಲ್ಲಾ ತಯಾರಾಗಿರಬೇಕು ಅಲ್ಲವೆ?

ಅದಕ್ಕೆಂದೇ ನಮ್ಮ ಸರ್ಕಾರಿ ಶಾಲೆ ಹೊಸ ರೂಪದೊಂದಿಗೆ ಸಿದ್ಧವಾಗಿದೆ. ಇಲ್ಲಿ ಬಣ್ಣ ಬಣ್ಣದ ಹೂಗಳಿಂದ ತುಂಬಿದ ಬೃಂದಾವನವಿದೆ, ಯಾರೂ ಹೂಗಳನ್ನ ಕೀಳುವುದಿಲ್ಲ, ಕಾಳು, ನೀರು ಕುಡಿದ ಹಕ್ಕಿ, ಪುಟ್ಟ ಪಕ್ಷಿಗಳು ನಲಿಯುತ್ತವೆ, ಹಾಡುತ್ತವೆ, ಹಾರುತ್ತವೆ, ಯಾರೂ ಪೀಡಿಸುವುದಿಲ್ಲ. ದೇವಾಲಯದಂತಹದೇ ಪವಿತ್ರ ಭಾವ ಬರುವ ಸುಂದರ ಶಾಲಾ ವಾತಾವರಣವಿದೆ, ಮಕ್ಕಳು ನಿತ್ಯ ಸಂಭ್ರಮದಿಂದ ಶಾಲೆಗೆ ಬರಲು ಹಂಬಲಿಸುತ್ತಾರೆ. ಕಲಿಯಲು ಎಲ್ಲ ಅವಕಾಶ ಮತ್ತು ಸೌಲಭ್ಯಗಳಿರುವ ಸಂಪನ್ಮೂಲ ತರಗತಿಗಳಿವೆ. ಇದು ಯಾರು ಕೂಡ ಕನಸಬಹುದಾದ, ಇಚ್ಛಾಶಕ್ತಿಯಿದ್ದರೆ ಯಾರು ಕೂಡ ಮೂರ್ತರೂಪ ಕೊಡಬಹುದಾದ ನಮ್ಮ ಸರ್ಕಾರಿ ಶಾಲೆ. ಮಕ್ಕಳನ್ನ ದೇವರು ಎಂದು ತಿಳಿದಿದ್ದೇವೆ ನಿಜ. ಆದರೆ, ಇಲ್ಲಿ ಸರ್ಕಾರಿ ಶಾಲೆಯ ದೇವರು ಬೇರೆ, ಖಾಸಗಿ ಶಾಲೆಯ ದೇವರು ಬೇರೆ ಎಂಬ ಭೇದವನ್ನು ನಾವೇ ಮಾಡಿಕೊಂಡಿದ್ದೇವೆ. ಶಾಲೆ ದೇಗುಲವೇ. ಆದರೆ ಆ ದೇಗುಲಗಳಲ್ಲಿಯೂ ಇಸ್ಕಾನ್‌ ಟೆಂಪಲ್ ಬೇರೆ, ನಮ್ಮೂರಿನ ದ್ಯಾಮವ್ವನ ಗುಡಿ ಬೇರೆ ಎಂದು ವಿಂಗಡಿಸಿಕೊಂಡಿದ್ದೇವೆ. ಈ ಯೋಚನೆಯೇ ನಮ್ಮನ್ನು ಸಮಾನ ಶಿಕ್ಷಣಕ್ಕೆ ಹಂಬಲಿಸುವಂತೆ ಒತ್ತಾಸೆಯಾಗಿ ನಿಂತಿದೆ ಮತ್ತು ಬದಲಾವಣೆಯ ಹಾದಿಯಲ್ಲಿ ಈಗ ನಾವೆಲ್ಲ ಸಾಗುತ್ತಿದ್ದೇವೆ. ಈ ನಮ್ಮ ಪ್ರಯತ್ನಕ್ಕೆ ಸರ್ಕಾರ ಮೊಟ್ಟ ಮೊದಲ ಬಾರಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಅನುದಾನ ಹೆಚ್ಚಿಸಿದೆ.

ನೂರು ಮಕ್ಕಳಿದ್ದರೂ ಸಾಕು, ಸರ್ಕಾರ ವರ್ಷಕ್ಕೆ ಐವತ್ತು ಸಾವಿರ ರೂಪಾಯಿ ಅನುದಾನವನ್ನು ಈ ವರ್ಷದಿಂದ ನೀಡುತ್ತಿದೆ. ನಾವು ಪೂಜಿಸುವ ದೇವರು ನಮಗೆ ಎಂದಿಗೂ ಅನ್ನ ನೀಡಿಲ್ಲ, ಆದರೆ ನಾವು ಕಲಿಸುತ್ತಿರುವ ಈ ಪುಟ್ಟ ದೇವರು, ದೇವತೆಯರು ನಮಗೆ ನಿತ್ಯದ ಅನ್ನ ಖಾತರಿಪಡಿಸಿದ್ದಾರೆ. ನಾವು ಹಾಕಿಕೊಳ್ಳುವ ಬಟ್ಟೆಯನ್ನ ಖಾತರಿಪಡಿಸಿದ್ದಾರೆ, ಹೆಂಡಿರು ಮಕ್ಕಳಿಗೆ ಒಳ್ಳೆ ಬದುಕು, ಮರ್ಯಾದೆ ತರಬಲ್ಲ ಮನೆ ಕಟ್ಟಿಕೊಳ್ಳಲು ಕಾರಣರಾಗಿದ್ದಾರೆ. ಈ ಅಪ್ಯಾಯಮಾನತೆಯೊಂದು ಸಾಕು, ನಮಗೆ ದೊರೆತ ಹಣದಲ್ಲಿಯೇ ಏನೆಲ್ಲ ಅದ್ಭುತಗಳನ್ನ ಮಾಡಬಹುದು. ಈ ರೀತಿಯ ಪ್ರಯತ್ನಗಳು ಈಗಾಗಲೇ ರಾಜ್ಯದಾದ್ಯಂತ ಶುರುವಾಗಿವೆ, ಹೊಸ ಸಾಧ್ಯತೆಗಳನ್ನು ತೋರುತ್ತಿವೆ. ಜನಮಾನಸದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಪರಿಮಿತ ಸಂಭ್ರಮ ತುಂಬುವಂತೆ ಮಾಡುತ್ತಿವೆ, ಇದಕ್ಕೆಎಲ್ಲ ಜಿಲ್ಲೆಗಳಲ್ಲಿ ಸಾಕ್ಷಿಗಳು ಸಿಗುತ್ತಿವೆ.

ಮುಂದಿನ ಹಾದಿ

ಗುಣಮಟ್ಟದ ಕಲಿಕೆಯ ಖಾತರಿಯಲ್ಲಿ ದೇಶದಲ್ಲಿಯೇ ಮುಂದಿರುವ ನಮ್ಮರಾಜ್ಯದ ಸರ್ಕಾರಿ ಶಾಲೆಗಳು ಇನ್ನೂ ಪಯಣಿಸಬೇಕಿರುವ ಹಾದಿ ದೂರವಿದೆ. ಆದರೆ ಅಸಾಧ್ಯವಾದುದೇನಲ್ಲ. ಹಾಗಾದರೆ ಆಗಬೇಕಾದುದೇನು? ಮೊದಲ ಆದ್ಯತೆಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯನವರು ಮತ್ತು ಅವರ ತಂಡ ರೂಪಿಸಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಯೋಜನಾ ವರದಿಯನ್ನು ಅದರ ಎಲ್ಲ ಸತ್ವದೊಂದಿಗೆ ಜಾರಿಗೆ ತರಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ಸಮತೆಯ ಕನಸು

ಒಂದು ದಿನ ಜಗತ್ತು ಕೆನಡಾ, ಆಸ್ಟ್ರೇಲಿಯಾ, ಅಮೆರಿಕದ ಶಾಲೆಗಳ ಕಡೆ ಮಾತ್ರವಲ್ಲ, ನಮ್ಮ ಹಳ್ಳಿಗಳಲ್ಲಿ ಮರುರೂಪ ಪಡೆಯುತ್ತಿರುವ ಸರ್ಕಾರಿ ಶಾಲೆಗಳೆಂಬ ಅಕ್ಷರಧಾಮಗಳ ಕಡೆಗೆ ಬೆರಗುಗಣ್ಣುಗಳಿಂದ ನೋಡುವಂತಾಗುತ್ತದೆ. ಒಂದು ದಿನ ನಮ್ಮ ಮಕ್ಕಳು ಸಹ ಅತ್ಯಾಧುನಿಕ ಕೌಶಲಗಳಿಗೆ ತಮ್ಮ ಪ್ರತಿಭೆ ಮತ್ತು ಕ್ರಿಯಾಶಕ್ತಿಯಿಂದ ಹೊಸ ಉದಾಹರಣೆಗಳನ್ನು ಸೇರಿಸುತ್ತಾರೆ. ಒಂದು ದಿನ ನಮ್ಮ ಮಕ್ಕಳು ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ, ಧಾರ್ಮಿಕವಾಗಿ, ಮುಖ್ಯವಾಗಿ ಮಾನವೀಯವಾಗಿ ಹೊಸ ಜಗತ್ತೊಂದನ್ನು ನಿರ್ಮಾಣ ಮಾಡುತ್ತಾರೆ. ಸರ್ಕಾರಿ ಶಾಲಾ ಶಿಕ್ಷಕರಾದ ನಾವು ಈ ಎಲ್ಲ ಮಹಾತ್ವಾಕಾಂಕ್ಷೆಗಳೊಂದಿಗೆ ನಮ್ಮ ಅನ್ನ ಕೊಟ್ಟ ಪುಟ್ಟ ದೇವರುಗಳೊಂದಿಗೆ ಮುನ್ನಡೆಯುತ್ತೇವೆ, ಅವರ ಜೊತೆ ನಮ್ಮ ಶಾಲೆಯನ್ನೂ ಬೆಳೆಸುತ್ತೇವೆ, ನಾವೂ ಮತ್ತಷ್ಟು ಮಾನವೀಯವಾಗಿ ವಿಕಾಸ ಹೊಂದುತ್ತೇವೆ. ಆ ದಿನಗಳಿಗಾಗಿ ಎದುರು ನೋಡುತ್ತಾ...

ನಿರೀಕ್ಷೆಗೂ ಮೀರಿ ನೆರವು

ಈ ಬಾರಿಯ ದಸರಾ ರಜೆಯಲ್ಲಿ ನಿಡಗುಂದಿಯ ಅಂಬೇಡ್ಕರ್ ನಗರದ ಕಿರಿಯ ಪ್ರಾಥಮಿಕ ಶಾಲೆಗೆ ಹೊಸ ರೂಪ ಕೊಡಲು ನಿರ್ಧರಿಸಿದೆವು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡೆವು. ನಿರೀಕ್ಷೆಗೂ ಮೀರಿ ನೆರವು ಬಂದಿತು. ಒಟ್ಟು ₹ 82 ಸಾವಿರ ನೆರವಿನಲ್ಲಿ ಶಾಲೆಯನ್ನ ನಮ್ಮ ಕನಸಿನ ಶಾಲೆಯಾಗಿ ಪರಿವರ್ತಿಸಿದೆವು. ನನ್ನ ಜೊತೆ ಹಿರಿಯ ಕಲಾವಿದರಾದ ಸಿದ್ದಪ್ಪ ಬ್ಯಾಳಿ ಕೈಗೂಡಿಸಿದರು. ನಮ್ಮ ಕನಸಿನ ಶಾಲೆ ಕಣ್ಣು ಮುಂದೆ ಈಗ ಕುಣಿಯುತ್ತಿದೆ. ಮಕ್ಕಳಿಗೆಲ್ಲಾ ಸಂಭ್ರಮ ತಂದಿದೆ. ಇಲ್ಲಿರುವ ಚಿತ್ರಗಳು ಶಾಲೆಯ ಸಂಭ್ರಮವನ್ನು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT