ಕಂಬಾರರು ಹೇಳಿದ ದೇವಲೋಕದ ಮಕ್ಕಳ ಕಥೆ

7
ಮಕ್ಕಳ ದಿನಾಚರಣೆ ವಿಶೇಷ

ಕಂಬಾರರು ಹೇಳಿದ ದೇವಲೋಕದ ಮಕ್ಕಳ ಕಥೆ

Published:
Updated:
Deccan Herald

ಚಂದ್ರಶೇಖರ ಕಂಬಾರರೊಮ್ಮೆ ರಾಯಚೂರು ಜಿಲ್ಲೆಯ ಗಬ್ಬೂರಿಗೆ ಬಂದಿದ್ದರು. ಅವರು ಸ್ವೀಕರಿಸಬೇಕಿದ್ದ ಮಹಾತಪಸ್ವಿ ಕುಮಾರಸ್ವಾಮಿ ಪ್ರಶಸ್ತಿಯ ಸಮಾರಂಭ ಆರಂಭವಾಗುವುದು ಸ್ವಲ್ಪ ತಡವಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಸ್ಥಳೀಯ ಶಾಲೆಯ ಮುಖ್ಯಸ್ಥರೊಬ್ಬರು ಕಂಬಾರರನ್ನು ತಮ್ಮ ಶಾಲೆಗೆ ಕರೆದೊಯ್ದು ವೇದಿಕೆ ಹತ್ತಿಸಿಯೇಬಿಟ್ಟರು. ಎದುರಿಗೆ ನೋಡಿದರೆ ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಪ್ರಾಥಮಿಕ ಶಾಲಾ ಮಕ್ಕಳು! ಮುಂದಿನದ್ದನ್ನು ಊಹಿಸಿದ ಕಂಬಾರರು ಮೈಕು ತೆಗೆದುಕೊಂಡು ಮಕ್ಕಳಿಗೆ ನಿರಾಶೆಯಾಗಬಾರದೆಂದು ಮಾತಿಗಾರಂಭಿಸಿ ಒಂದು ಕಥೆ ಹೇಳತೊಡಗಿದರು. ಅದು ಹೀಗಿತ್ತು:

‘ಒಮ್ಮೆ ದೇವಲೋಕದಲ್ಲಿರುವ ದೇವತೆಗಳ ಮಕ್ಕಳೆಲ್ಲ ಭೂಮಿಗೆ ಹೋಗುವ ಆಸೆ ವ್ಯಕ್ತಪಡಿಸಿ ಹಠ ಮಾಡಿದರಂತೆ. ಆಗ ದೇವತೆಗಳು ಒಂದು ಕರಾರಿಗೆ ಒಪ್ಪಿದರೆ ಮಾತ್ರ ಕಳಿಸಬಹುದೆಂದು ಹೇಳಿದಾಗ ಮಕ್ಕಳೆಲ್ಲ ಒಕ್ಕೊರಲಿನಿಂದ ಹ್ಞೂಂಗುಟ್ಟಿದರಂತೆ. ದೇವತೆಗಳು ಹಾಕಿದ ಕರಾರೇನೆಂದರೆ ಸಂಜೆ ಹೊತ್ತು ಮುಳುಗುವುದರೊಳಗೆ ಅವರಿಗಾಗಿ ಕಾದಿರುವ ವಿಮಾನಗಳನೇರಿ ವಾಪಸು ಬಂದುಬಿಡಬೇಕು. ಹೊತ್ತು ಮೀರಿದರೆ ಅಲ್ಲೇ ಉಳಿಯಬೇಕಾಗುತ್ತದೆ ಅಂತ. ಸರಿ ಅದೇನು ಮಹಾ ಅಂದ ಮಕ್ಕಳೆಲ್ಲ ಒಂದು ದಿನ ಭೂಮಿಗೆ ಬಂದರಂತೆ.

ಭೂಲೋಕದಲ್ಲಿ ವಿಹರಿಸುತ್ತಾ, ಬಗೆಬಗೆಯ ಆಟಗಳನ್ನಾಡುತ್ತಾ ಅವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲವಂತೆ. ನೋಡನೋಡುತ್ತಿದ್ದಂತೆ ಹೊತ್ತು ಮುಳುಗತೊಡಗಿ, ಇವರಿಗಾಗಿ ವಿಮಾನದಲ್ಲಿ ಕಾದು ಕೂತಿದ್ದ ದೇವತೆಗಳು ಆತಂಕಪಡತೊಡಗಿದರಂತೆ. ಅವಸರವಸರವಾಗಿ ಮಕ್ಕಳೆಲ್ಲ ವಿಮಾನಗಳ ಕಡೆಗೆ ಧಾವಿಸಿ ವೇಗವಾಗಿ ಓಡಿ ಹೋಗಿ, ಇನ್ನೇನು ವಿಮಾನದೊಳಗಿಂದ ಕೈಚಾಚಿ ಕೂಗುತ್ತ ನಿಂತಿರುವ ಪಾಲಕರ ಕೈ ಹಿಡಿದರು.. ಎಂಬಲ್ಲಿಗೆ ಸೂರ್ಯ ಪರಮಾತ್ಮ ಮುಳುಗೇಬಿಟ್ಟನಂತೆ.

ಇಷ್ಟು ಆದದ್ದೇ ತಡ ಅವರವರ ಪಾಲಕರ ಕಣ್ಣೆದುರೇ ಆ ಮಕ್ಕಳ ಪಾದಗಳು ನಿಂತ ನಿಲುವಿನಲ್ಲೇ ಭೂಮಿಯೊಳಗೆ ಬೇರು ಬಿಡತೊಡಗಿದವಂತೆ. ಹಾಗೆ ಆ ದೇವಲೋಕದ ಮಕ್ಕಳೆಲ್ಲ ಭೂಮಿಯಲ್ಲಿ ಗಿಡಮರಗಳಾಗಿ ನೆಲೆ ನಿಂತರಂತೆ. ಹಾಗಾಗಿ ಈಗ ಭೂಮಿಯ ಮೇಲಿರುವ ಗಿಡ ಮರ ಕಾಡುಗಳೆಲ್ಲ ಸ್ವಯಂ ದೇವರ ಮಕ್ಕಳೇ ಅಂತೆ. ತಂದೆ ತಾಯಂದಿರಿಂದ ದೂರವಾಗಿ ಇಲ್ಲಿ ಉಳಿದಿರುವ ಈ ದೇವರ ಮಕ್ಕಳ ಪಾಲನೆ ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯಾವ ಗಿಡವನ್ನೂ ಕಡಿಯದೆ ಕಾಪಾಡಿದರೆ ನಾವು ದೇವರ ಕೃಪೆಗೆ ಪಾತ್ರರಾಗ್ತೀವಿ” ಎಂದು ಕಥೆಯ ಮುಗಿಸಿದರು. ಮಕ್ಕಳಿನ್ನೂ ಈ ಕಥೆಯ ಮಾಯಾಲೋಕದ ಗುಂಗಲ್ಲಿರುವಾಗಲೇ ಜುಬ್ಬಾ ಪಂಚೆಯ ಅಪ್ಪಟ ಹಳ್ಳಿ ಉಡುಪಲ್ಲಿದ್ದ ಕಂಬಾರರು ವೇದಿಕೆಯಿಳಿದು ನಡೆದೇ ಬಿಟ್ಟಿದ್ದರು. ಈಗಲೂ ಯಾವ ಗಿಡ ನೋಡಿದರೂ ನನಗೆ ಕಂಬಾರರು ಹೇಳಿದ ಈ ಕಥೆಯೇ ನೆನಪಾಗುವುದು. ಇನ್ನು ಆ ಮಕ್ಕಳ ಮನಸಿನ ಮೇಲೆ ಈ ಕಥೆ ಬೀರಿದ ಪ್ರಭಾವವನ್ನು ಬಿಡಿಸಿಹೇಳಲಿಕ್ಕುಂಟೆ?

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !