7
ಮಕ್ಕಳ ಕತೆ

ಆಮೆ ಕಲಿಸಿದ ಪಾಠ

Published:
Updated:

ಒಂದು ಕಾಡಿನ ಬಳಿಯ ಬಿಲದಲ್ಲಿ ಮೊಲವೊಂದು ವಾಸವಾಗಿತ್ತು. ಅದಕ್ಕೆ ಆಪ್ತ ಮಿತ್ರನಾಗಿದ್ದುದು ಒಂದು ಆಮೆ. ಒಂದು ಸಲ ಮೊಲ ಆಮೆಯ ಬಳಿ ಬಂದು ತನ್ನ ಕಷ್ಟ ಸುಖ ಹೇಳಿಕೊಂಡಿತು. ‘ಇಷ್ಟು ದಿನ ಯಾವ ಭಯವೂ ಇಲ್ಲದೆ ನಾನು ಇಲ್ಲಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದೆ. ಆದರೆ ಈಗ ಸಂಕಷ್ಟ ಎದುರಾಗಿದೆ. ಬಿಲದಲ್ಲಿ ಪುಟ್ಟ ಮಕ್ಕಳಿವೆ. ಅವುಗಳಿಗೆ ಆಹಾರ ತರಲು ಹೊರಗೆ ಬರುವಂತಿಲ್ಲ. ಒಂದು ಮುದಿ ನರಿ ನನ್ನನ್ನು ಕಬಳಿಸಲು ಹೊಂಚು ಹಾಕುತ್ತ ಇರುತ್ತದೆ. ಏನು ಮಾಡುವುದೆಂದು ತೋಚುತ್ತಿಲ್ಲ’ ಎಂದು ಚಿಂತೆಯಿಂದ ಹೇಳಿತು.

ಅದಕ್ಕೆ ಆಮೆ, ‘ನೀನು ಚಿಂತಿಸಬೇಡ. ಬಿಲದಿಂದ ಧೈರ್ಯವಾಗಿ ಹೊರಗೆ ಬಾ. ಆಗ ನರಿ ನಿನ್ನ ಬಳಿಗೆ ಬರುತ್ತದೆ. ಅಯ್ಯಾ ನನ್ನನ್ನು ತಿನ್ನಬೇಡ. ಮಕ್ಕಳಿರುವ ಮೊಲ ತಿಂದರೆ ದೇವರು ನಿನ್ನನ್ನು ತಕ್ಷಣ ಕೊಂದು ಹಾಕುತ್ತಾನೆ. ನರಕಕ್ಕೇ ಹೋಗುವೆ. ಅದರ ಬದಲು ಅದೋ ಅಲ್ಲಿ ಕಾಣುತ್ತಿರುವ ಆಮೆಯನ್ನು ತಿನ್ನು. ಆಮೆ ಮಾಂಸದಿಂದ ಚಿರಯೌವನ ಬರುತ್ತದೆ ಎಂದು ಹೇಳಿ ನನ್ನನ್ನು ಅದಕ್ಕೆ ತೋರಿಸು. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಉಪಾಯ ಹೇಳಿಕೊಟ್ಟಿತು.

ಆಮೆಯ ಮಾತಿನಿಂದ ಮೊಲಕ್ಕೆ ಧೈರ್ಯ ಬಂದಿತು. ಬಿಲದಿಂದ ಹೊರಗೆ ಬಂದಿತು. ಕಾದು ನಿಂತಿದ್ದ ನರಿ ಅದರೆಡೆಗೆ ಗಬಕ್ಕನೆ ಹಾರಿತು. ಮೊಲ ಭಯ ತೋರಿಸದೆ, ‘ತಾಳು ತಾಳು. ಮಕ್ಕಳಿರುವ ತಾಯಿ ಮೊಲವನ್ನು ಕೊಂದು ನರಕಕ್ಕೆ ಯಾಕೆ ಹೋಗುವೆ? ಮುದುಕನಾಗಿ ಸಾವನ್ನು ಎದುರು ನೋಡುತ್ತಿರುವ ನಿನಗೆ ಚಿರಯೌವನ ಪುನಃ ಬೇಕೆಂದು ಅನಿಸುವುದಿಲ್ಲವೇ?’ ಎಂದು ಕೇಳಿತು. ಮುದಿ ನರಿ ಯೋಚಿಸಿತು.

‘ಚಿರ ಯೌವನ ಸಿಗುವುದೇ? ಮೊದಲಿನಂತೆ ನಾನು ಯುವಕನಾಗಿ ದೊಡ್ಡ ಬೇಟೆಗಳನ್ನು ಹಿಡಿಯುವಷ್ಟು ಶಕ್ತಿವಂತನಾಗುವ ಮಾರ್ಗವಿದೆಯೇ?’ ಎಂದು ಕೇಳಿತು. ‘ಯಾಕಿಲ್ಲ? ಅದೋ ಅಲ್ಲಿ ನೋಡು. ಒಂದು ಆಮೆ ಮಲಗಿಕೊಂಡಿದೆ ತಾನೆ? ಅದರ ವಯಸ್ಸು ಎಷ್ಟಾಗಿರಬಹುದು ಗೊತ್ತಿದೆಯೇ? ನಿನ್ನ ಮುತ್ತಾತನಿಗಿಂತ ಮೊದಲೇ ಹುಟ್ಟಿದ ಆಮೆ ಅದು. ಇನ್ನೂ ಯುವಕನಾಗಿದೆ. ಅದು ಭಾರೀ ವೇಗದಲ್ಲಿ ಓಡುವುದಿಲ್ಲ. ಹಿಡಿಯಲು ಸುಲಭ. ಅದನ್ನು ತಿಂದರೆ ನೀನು ಯುವಕನಾಗುತ್ತೀ’ ಎಂದು ಮೊಲ ಆಮೆಯನ್ನು ತೋರಿಸಿತು.

‘ನಿಜ, ನನಗೆ ಯೌವನ ಬೇಕು. ಸತ್ತು ನರಕಕ್ಕೆ ಹೋಗಲು ಇಷ್ಟವಿಲ್ಲ’ ಎಂದು ನರಿ ಮೊಲವನ್ನು ಬಿಟ್ಟು ಆಮೆಯೆಡೆ ಹೋಯಿತು. ಮಲಗಿದ್ದ ಆಮೆಯನ್ನು ಆತುರದಿಂದ ಕಚ್ಚಿತು. ಆದರೆ ಗಟ್ಟಿಯಾದ ಚಿಪ್ಪು ಆಮೆಯದು. ನರಿಯ ಎರಡು ಹಲ್ಲುಗಳು ಗಟ್ಟಿ ಚಿಪ್ಪಿನಿಂದಾಗಿ ಲಟಕ್ಕನೆ ಮುರಿದವು. ನರಿಗೆ ನಿರಾಸೆಯಾಯಿತು. ಅದನ್ನು ನೋಡಿ ಪಕಪಕನೆ ನಕ್ಕಿತು ಆಮೆ. ‘ಮುದುಕನಾದರೂ ಬುದ್ಧಿ ಬರಲಿಲ್ಲ ನೋಡು. ಹೀಗೆ ನನ್ನನ್ನು ತಿನ್ನುವುದು ಸಾಧ್ಯವೇ? ಒಣ ಹುಲ್ಲು ತಂದು ಬೆಂಕಿ ಹಚ್ಚಬೇಕು. ಆ ಬೆಂಕಿಯಲ್ಲಿ ನನ್ನನ್ನು ಮಲಗಿಸಬೇಕು. ಸ್ವಲ್ಪ ಹೊತ್ತಿನ ಬಳಿಕ ತಿಂದರೆ ಮೃದುವಾಗಿಯೂ ರುಚಿಕರವಾಗಿಯೂ ಇರುತ್ತದೆ’ ಎಂದು ಉಪಾಯ ಹೇಳಿತು.

‘ಹೌದಲ್ಲ, ನನಗಿದು ಗೊತ್ತೇ ಇರಲಿಲ್ಲ’ ಎಂದು ಪೆದ್ದು ನರಿ ಒಣಹುಲ್ಲಿನ ಹೊರೆ ಹೊತ್ತು ತಂದಿತು. ಆಮೆಯ ಸುತ್ತಲೂ ಹುಲ್ಲು ಹರಡಿ ಬೆಂಕಿ ಉರಿಸಿತು. ಆಮೆಯ ಚಿಪ್ಪು ದೃಢವಾಗಿದ್ದ ಕಾರಣ ಅದಕ್ಕೆ ಏನೂ ತೊಂದರೆಯಾಗಿರಲಿಲ್ಲ. ಹುಲ್ಲು ಉರಿದು ಮುಗಿದ ಮೇಲೆ ನರಿಯು ಬೆಂದ ಮಾಂಸ ತಿನ್ನಲು ಆತುರದಿಂದ ಹೋಯಿತು. ಆದರೆ ಹುಲ್ಲಿನೊಳಗೆ ಇನ್ನೂ ಬೆಂಕಿ ಆರಿರಲಿಲ್ಲ. ನರಿಯ ಎರಡೂ ಕಾಲುಗಳು ಸುಟ್ಟು ಗುಳ್ಳೆಗಳು ಬಂದವು. ‘ಅಯ್ಯೋ ಅಯ್ಯೋ’ ಎಂದು ನೋವಿನಿಂದ ಕೂಗಿಕೊಂಡಿತು. ಆಮೆ ಪುನಃ ನಕ್ಕಿತು.

‘ಅಯ್ಯೋ ಮಂಕೇ, ನಿನಗೆ ಬುದ್ಧಿ ಇದೆಯಾ? ಬೆಂದ ಕೂಡಲೇ ನನ್ನನ್ನು ತಿನ್ನುವುದಕ್ಕೆ ಸಾಧ್ಯವೇ? ನೋಡು ಈ ಗಟ್ಟಿ ಚಿಪ್ಪು ಮೆತ್ತಗಾಗಬೇಕಿದ್ದರೆ ನನ್ನನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಬೇಕು. ಅದೋ ಅಲ್ಲೊಂದು ಸರೋವರವಿದೆ. ಅದರ ನೀರಿಗೆ ನನ್ನನ್ನು ಹಾಕಿ ಕೊಂಚ ಹೊತ್ತು ಕಾದು ಕುಳಿತುಕೋ. ಆಗ ನಾನು ಮೆತ್ತಗಾಗುತ್ತೇನೆ. ಬಳಿಕ ನನ್ನನ್ನು ತಿಂದು ಚಿರ ಯುವಕನಾಗಬಹುದು’ ಎಂದಿತು ಆಮೆ.

‘ಸರಿ, ಹಾಗಿದ್ದರೆ ಸರೋವರದ ಬಳಿ ನಡೆ. ನಿನ್ನನ್ನು ನೀರಿಗೆ ಹಾಕಿ ನೆನೆಸುತ್ತೇನೆ’ ಎಂದಿತು ನರಿ. ‘ನನ್ನನ್ನು ನೀರಿಗೆ ಹಾಕಬೇಕಿದ್ದರೆ ನೀನು ಹೊತ್ತುಕೊಂಡು ಹೋಗು. ನಾನೇ ಅಲ್ಲಿಯವರೆಗೆ ತೆವಳುತ್ತ ಹೋಗಲು ಒಂದು ವರ್ಷ ಬೇಕಾಗಬಹುದು. ಅಷ್ಟರಲ್ಲಿ ನೀನು ಮುದುಕನಾಗಿ ಸತ್ತು ಹೋಗಿರುತ್ತೀಯಾ’ ಎಂದು ಆಮೆ ಹೇಳಿತು. ‘ಸರಿ’ ಎಂದು ನರಿ ಆಮೆಯನ್ನು ಹೊತ್ತುಕೊಂಡಿತು. ಅದರ ಭಾರದಿಂದ ಒಂದಡಿ ಹೆಜ್ಜೆ ಮುಂದಿಡಲೂ ಕಷ್ಟವಾಯಿತು. ಆದರೂ ಶ್ರಮಪಟ್ಟು ಅದರೊಂದಿಗೆ ಸರೋವರ ತಲಪಿತು. ಆಮೆಯನ್ನು ನೀರಿಗೆ ಹಾಕಿತು. ಆಮೆ ನೀರಿನಲ್ಲಿ ಮುಳುಗಿತು.

ಸ್ವಲ್ಪ ಹೊತ್ತು ಕಳೆಯಿತು. ನರಿ ಮೇಲಿನಿಂದ, ‘ಆಮೆ ಎಲ್ಲಿದ್ದೀಯಾ?’ ಎಂದು ಕೂಗಿತು. ‘ನಾನು ಇಲ್ಲಿ ಮೊಣಕಾಲಿನಷ್ಟೇ ಆಳದ ನೀರಿನಲ್ಲಿದ್ದೇನೆ. ಮೇಲಕ್ಕೆ ಬರೋದಕ್ಕೆ ಆಗೋದಿಲ್ಲ. ನೀರಿಗಿಳಿದು ಹೊತ್ತುಕೊಂಡು ಹೋಗು’ ಎಂದು ನೀರಿನೊಳಗಿಂದ ಉತ್ತರಿಸಿತು ಆಮೆ. ನರಿ ಬಂದು ಬಾಗಿ ನೋಡಿದಾಗ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣಿಸಿತು. ಯಾವುದೋ ನರಿ ನೀರಿನೊಳಗೆ ಅಡಗಿ ಕುಳಿತು ಆಮೆಯನ್ನು ಹಿಡಿಯಲು ಪ್ರಯತ್ನಿಸುತ್ತಿದೆಯೆಂದು ಭಾವಿಸಿ ಕೋಪದಿಂದ, ‘ಯಾವ ಕಳ್ಳ ಅದು ನೀರೊಳಗೆ ಕುಳಿತಿರುವುದು?’ ಎಂದು ಗರ್ಜಿಸಿತು.

ಆಗ ದಡದಲ್ಲಿದ್ದ ಕೆಲವು ಕಪ್ಪೆಗಳು ಕಿಸಿಕಿಸಿ ನಗುತ್ತ, ‘ತಿಳಿಯಲಿಲ್ಲವೇ? ನೀರೊಳಗೆ ಇರುವುದು ನಿನ್ನ ಮುತ್ತಾತ. ಹಿಂದೆ ಬಂದವರು ನೀರಿನ ತಂಪು ಕಂಡು ಖುಷಿಯಾಗಿ ಅಲ್ಲಿಯೇ ಕುಳಿತಿದ್ದಾರೆ. ಒಂದು ಸಲ ಹಸ್ತಲಾಘವ ಕೊಟ್ಟುಬಿಡಿ’ ಎಂದವು. ಮುತ್ತಾತನ ಕೈಕುಲುಕುವ ಅವಸರದಲ್ಲಿ ಮುದಿ ನರಿ ದುಡುಮ್ಮನೆ ನೀರಿಗೆ ಬಿದ್ದಿತು. ಪಾಪ, ಈಜಲು ತಿಳಿಯದೆ ನೀರಿನಲ್ಲಿ ಮುಳುಗಿ ಸತ್ತೇಹೋಯಿತು. ಆಮೆ ಮೇಲೆ ಬಂದಿತು. ಮೊಲದ ಬಳಿಗೆ ಹೋಗಿ, ‘ಹೇಗಿತ್ತು ನರಿಗೆ ನಾನು ಕಲಿಸಿದ ಪಾಠ?’ ಎಂದು ಕೇಳಿತು.

‘ಗೆಳೆಯಾ, ನನ್ನ ಮಕ್ಕಳನ್ನು ನರಿಯ ಕೈಯಿಂದ ಪಾರು ಮಾಡಿದ ನಿನಗೆ ಧನ್ಯವಾದ’ ಎಂದಿತು ಮೊಲ. ಬಳಿಕ ಅದು ನಿಶ್ಚಿಂತೆಯಿಂದ ಜೀವನ ಸಾಗಿಸಿತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !