ಚಾಡಿಕೋರ ನರಿ ಮತ್ತು ಜಾಣ ಕರಡಿ

7
ಮಕ್ಕಳ ಕಥೆ

ಚಾಡಿಕೋರ ನರಿ ಮತ್ತು ಜಾಣ ಕರಡಿ

Published:
Updated:

ಕಾಡಿನಲ್ಲಿದ್ದ ಮೃಗರಾಜ ಸಿಂಹಕ್ಕೆ ಆರೋಗ್ಯ ತುಂಬಾ ಹದಗೆಟ್ಟಿತ್ತು. ಅದು ಬೇಟೆಯಾಡುವುದಿರಲಿ ತನ್ನ ಗುಹೆಯಿಂದ ಹೊರಗೆ ಕೂಡ ಬರಲಾರದಷ್ಟು ನಿತ್ರಾಣಗೊಂಡಿತ್ತು. ಹಾಗಾಗಿ ಅನಾರೋಗ್ಯ ಪೀಡಿತ ಮೃಗರಾಜ ಸಿಂಹಕ್ಕೆ ಆಹಾರ ಕೊಡುವುದರಿಂದ ಹಿಡಿದು ಅದರ ಬೇಕು-ಬೇಡಗಳನ್ನೆಲ್ಲಾ ನರಿಯೊಂದು ನೋಡಿಕೊಳ್ಳುತ್ತಿತ್ತು. ಮೃಗರಾಜನ ಅನಾರೋಗ್ಯದ ವಿಷಯ ಇಡೀ ಕಾಡಿಗೆ ಗೊತ್ತಾಗಿತ್ತು.

‘ನಮ್ಮ ರಾಜನಿಗೆ ಆರೋಗ್ಯ ಸರಿಯಿಲ್ಲವಂತೆ. ಬನ್ನಿ ಬನ್ನಿ ನಾವೆಲ್ಲಾ ನೋಡಿಕೊಂಡು ಬರೋಣ. ಏನಾಗಿದೆ ಎಂದು ವಿಚಾರಿಸೋಣ. ಸಾಧ್ಯವಾದರೆ ನಮ್ಮ ರಾಜನನ್ನು ಗುಣಪಡಿಸುವ ದಾರಿ ಹುಡುಕೋಣ’ ಎನ್ನುತ್ತಾ ಕಾಡಿನ ಇತರ ಪ್ರಾಣಿಗಳೆಲ್ಲಾ ಸಿಂಹದ ಗುಹೆಯತ್ತ ಧಾವಿಸಿ ಬರುತ್ತಿದ್ದವು. ಹೀಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಮೃಗರಾಜನನ್ನು ನೋಡಿಕೊಂಡು ಅದರ ಆರೋಗ್ಯ ವಿಚಾರಿಸಿ ಹೋಗುತ್ತಿದ್ದವು. ಕೆಲವು ಪ್ರಾಣಿಗಳು ತಮಗೆ ತಿಳಿದಮಟ್ಟಿಗೆ ಸಲಹೆ ನೀಡುತ್ತಿದ್ದವು.

ಸಿಂಹವನ್ನು ನೋಡಿಕೊಳ್ಳುತ್ತಿದ್ದ ನರಿಗೆ ಅದೇ ಕಾಡಿನಲ್ಲಿದ್ದ ಕರಡಿಯನ್ನು ಕಂಡರೆ ಆಗುತ್ತಿರಲಿಲ್ಲ. ಕರಡಿ ಬಗ್ಗೆ ಮೃಗರಾಜನಲ್ಲಿ ಚಾಡಿ ಹೇಳಲು ಒಳ್ಳೆಯ ಸಮಯಕ್ಕಾಗಿ ನರಿ ಕಾಯುತ್ತಿತ್ತು. ಅಂತಹ ಸಮಯ ಈಗ ನರಿಗೆ ತಾನೇ ತಾನಾಗಿ ಒದಗಿ ಬಂದಿತ್ತು. ಎಲ್ಲ ಪ್ರಾಣಿಗಳೂ ಮೃಗರಾಜನನ್ನು ನೋಡಿಕೊಂಡು ಹೋಗಲು ಗುಹೆಯ ಬಳಿ ಬಂದಿದ್ದವು. ಆದರೆ ಕರಡಿ ಮಾತ್ರ ಬಂದಿರಲಿಲ್ಲ. ನರಿಗೆ ಇದಿಷ್ಟು ಸಾಕಾಗಿತ್ತು ಕರಡಿ ಮೇಲೆ ಚಾಡಿ ಹೇಳಲು. ಕೂಡಲೇ ಅದು ಮೃಗರಾಜನ ಬಳಿ ಹೋಗಿ ಅದರ ಕಿವಿಯಲ್ಲಿ ತನ್ನ ಮೂತಿಯನ್ನಿಟ್ಟು ಹೇಳಿತು: ‘ನೋಡು ಮೃಗರಾಜ, ಕರಡಿಗೆ ರಾಜಭಕ್ತಿಯಿಲ್ಲ. ನಿಮ್ಮ ಬಗ್ಗೆ ಭಯವಂತೂ ಇಲ್ಲವೇ ಇಲ್ಲ. ಮೇಲಾಗಿ ಗೌರವವನ್ನಂತೂ ಕರಡಿಯಿಂದ ಬಯಸಲೇಬೇಡಿ. ಇದೆಲ್ಲಾ ಅದಕ್ಕೆ ಇದ್ದಿದ್ದರೆ ನಿಮ್ಮನ್ನು ನೋಡಲು ಬಂದೇ ಬರುತ್ತಿತ್ತು’ ಎಂದು ಒಂದೇ ಸಮನೆ ಕರಡಿಯ ಬಗ್ಗೆ ಚಾಡಿ ಹೇಳಿತು. ಜೊತೆಗೆ, ‘ಮೃಗರಾಜ ಸಿಂಹದ ಆರೋಗ್ಯ ಕೆಟ್ಟಿದ್ದು ಅದಕ್ಕೆ ವಯಸ್ಸೂ ಆಗಿದೆ. ಅದರ ಕೈನಲ್ಲಿ ಈಗ ಏನೂ ಆಗುವುದಿಲ್ಲ. ಆದ್ದರಿಂದ ಈ ಕಾಡಿನ ರಾಜನಾಗಿ ಎಲ್ಲರನ್ನೂ ರಕ್ಷಿಸಲು ತಾನೇ ಸೂಕ್ತ ಎಂದು ಕರಡಿಯು ಕಾಡಿನಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದೆ...’ ಎಂದು ಸಿಂಹಕ್ಕೆ ಕೋಪ ಬರುವ ರೀತಿಯಲ್ಲಿ ಇಲ್ಲ ಸಲ್ಲದ್ದನ್ನೆಲ್ಲಾ ಹೇಳಿತು ನರಿ.

ಮೃಗರಾಜ ಇತರರು ಹೇಳಿದ್ದನ್ನೆಲ್ಲ ನಂಬುವ ಪ್ರಾಣಿಯಾಗಿತ್ತು. ಹಾಗಾಗಿ, ನರಿಯ ಮಾತನ್ನೂ ತಕ್ಷಣಕ್ಕೆ ನಂಬಿತು. ಕೋಪೋದ್ರೇಕದಿಂದ ‘ಎಲೈ ಕೇಡಿ ಕರಡಿಯೇ, ರಾಜದ್ರೋಹಿಯಾದ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ’ ಎಂದು ಕುಂತಲ್ಲೇ ಗುಹೆ ನಡುಗುವಂತೆ ಘರ್ಜಿಸಿತು. ಅಷ್ಟರಲ್ಲಿ ಕರಡಿ ಅಲ್ಲಿಗೆ ಬಂದಿತ್ತು. ಹಾಗೆಯೇ ಮರೆಯಲ್ಲಿ ನಿಂತು ನರಿಯ ಮಾತುಗಳನ್ನು ಕೇಳಿಸಿಕೊಂಡಿತ್ತು. ತನ್ನ ಮೇಲೆ ಮೃಗರಾಜನಿಗೆ ಬಂದಿರುವ ಕೋಪವನ್ನೂ ಅದು ಗಮನಿಸಿತ್ತು. ಆದರೂ ಕರಡಿ ಯಾವ ಭಯವನ್ನೂ ತೋರಿಸದೆ ಮೃಗರಾಜನ ಹತ್ತಿರ ಹೋಗಿ ಆರೋಗ್ಯ ವಿಚಾರಿಸಿತು. ಜೊತೆಗೆ ಚಾಡಿಕೋರ ನರಿಯ ಮಾತು ಕೇಳಿ ತನ್ನ ಮೇಲೆ ಮುನಿಸಿಕೊಂಡಿರುವ ಮೃಗರಾಜನನ್ನು ಸಮಾಧಾನಪಡಿಸುತ್ತಾ ಕರಡಿ ಹೇಳಿತು; ‘ಮೃಗರಾಜ, ನಿಮ್ಮ ಬಗ್ಗೆ ನನಗಿರುವಷ್ಟು ರಾಜಭಕ್ತಿ ಮತ್ತು ಪ್ರೀತಿ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಇಲ್ಲ. ಬಹಳ ದೂರ ಹೋಗಿ ಕಾಡು-ಮೇಡು ಅಲೆದು ನಿಮ್ಮ ಅನಾರೋಗ್ಯಕ್ಕೆ ಸೂಕ್ತ ಮದ್ದನ್ನು ತಿಳಿದುಕೊಂಡು ಬಂದಿರುವೆ. ಇದರಿಂದಾಗಿ ನಿಮ್ಮ ಬಳಿಗೆ ನಾನು ಬರಲು ಇಷ್ಟು ತಡವಾಯಿತು’ ಎಂದಿತು.

ಕರಡಿ ಬಾಯಲ್ಲಿ ತನ್ನ ರೋಗ ನಿವಾರಣೆಗಾಗಿ ‘ಮದ್ದು’ ಎಂಬ ಮಾತು ಬಂದದ್ದೇ ತಡ ಮೃಗರಾಜನ ಕಿವಿಗಳು ನೆಟ್ಟಗಾದವು. ‘ಎಲೈ ಕರಡಿಯೇ, ಏನದು ಮದ್ದು? ಕೂಡಲೇ ತಿಳಿಸಿ ಹೇಳು’ ಎಂದು ಕರಡಿಯತ್ತ ದೃಷ್ಟಿಸಿ ಘರ್ಜಿಸಿತು. ಆಗ ಕರಡಿ ಚಾಡಿಕೋರ ನರಿಗೆ ಸರಿಯಾದ ಪಾಠವನ್ನು ಕಲಿಸಬೇಕೆಂದು ಮನಸ್ಸಿನಲ್ಲೇ ಅಂದುಕೊಂಡು, ಬಹಳ ಜಾಣತನದಿಂದ ಬಾಯಿಬಿಟ್ಟಿತು. ‘ಮೃಗರಾಜ ಸಿಂಹ ಪ್ರಭುವೇ, ನೀವು ನರಿಯ ರಕ್ತವನ್ನು ಹೊಟ್ಟೆ ತುಂಬಾ ಕುಡಿದರೆ ಅನಾರೋಗ್ಯದಿಂದ ಕೂಡಲೇ ಗುಣಮುಖರಾಗುತ್ತೀರಿ. ತಡಮಾಡದೆ ಈ ಮದ್ದು ತೆಗೆದುಕೊಳ್ಳಿ’ ಎಂದು ನರಿ ಅಲ್ಲಿ ಅಡಗಿ ಕುಳಿತಿರುವುದು ತನಗೆ ಗೊತ್ತೇ ಇಲ್ಲವೆಂಬಂತೆ ಹೇಳಿತು. ಕರಡಿ ಇಷ್ಟು ಹೇಳಿದ್ದೇ ತಡ ಮೃಗರಾಜ ಅಲ್ಲಿಯೇ ಅಡಗಿದ್ದ ನರಿಯ ಮೇಲೆರಗಿ ಅದರ ರಕ್ತ ಹೀರಿತು. ಒಂದೇ ಗಳಿಗೆಯಲ್ಲಿ ನರಿಯ ಕತೆ ಮುಗಿಯಿತು. ಚಾಡಿಕೋರ ನರಿಗೆ ತಕ್ಕ ಶಾಸ್ತಿಯಾಯಿತು. ಇನ್ನು ತಾನು ಅಲ್ಲಿರುವುದು ಸರಿಯಲ್ಲವೆಂದುಕೊಂಡು ಜಾಣ ಕರಡಿ ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿತು. ತನ್ನ ಪ್ರಾಣ ಉಳಿಯಿತೆಂದು ನಿಟ್ಟುಸಿರು ಬಿಡುತ್ತ ತನ್ನ ಬುದ್ಧಿವಂತಿಕೆಗೆ ಹೆಮ್ಮೆಪಟ್ಟಿತು.

ಬರಹ ಇಷ್ಟವಾಯಿತೆ?

 • 12

  Happy
 • 9

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !